'OpenAI' ಸಿಇಒ ಸ್ಯಾಮ್ ಆಲ್ಟ್‌ಮನ್ (ಒಳಚಿತ್ರದಲ್ಲಿ ಮೆಟಾ ಲೋಗೊ)
ರಾಯಿಟರ್ಸ್ ಚಿತ್ರ
ತನ್ನ ಕೃತಕ ಬುದ್ಧಿಮತ್ತೆ ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಟೆಕ್ ದೈತ್ಯ 'ಮೆಟಾ' ಕಂಪನಿಯು, 'OpenAI' ನೌಕರರನ್ನು ತನ್ನತ್ತ ಸೆಳೆಯಲು ಅಂದಾಜು ₹ 860 ಕೋಟಿಗೂ ಅಧಿಕ (100 ಮಿಲಿಯನ್ ಡಾಲರ್) ಬೋನಸ್ ಘೋಷಿಸಿದೆ ಎಂಬುದಾಗಿ 'OpenAI' ಸಿಇಒ ಸ್ಯಾಮ್ ಆಲ್ಟ್‌ಮನ್ ಆರೋಪಿಸಿದ್ದಾರೆ.
ಫೇಸ್‌ಬುಕ್ ಮಾತೃಸಂಸ್ಥೆಯಾಗಿರುವ ಮೆಟಾ, ತನ್ನ ಪ್ರತಿಸ್ಪರ್ಧಿಗಳಿಗೆ ಸಮರ್ಥ ಪೈಪೋಟಿ ನಡೆಸಲು ಸೂಪರ್‌ಇಂಟಲಿಜೆನ್ಸ್ ಘಟಕವನ್ನು ನಿರ್ಮಿಸಲು ಮುಂದಾಗಿದೆ. ಈ ಹೊತ್ತಿನಲ್ಲೇ, ಎಐ ಮಾದರಿ ಅಭಿವೃದ್ಧಿಗೆ ಅತ್ಯುತ್ತಮ ಸಿಬ್ಬಂದಿಯನ್ನು ನೇಮಿಸಿಕೊಳ್ಳುವ ಸಲುವಾಗಿ ಮೆಟಾ ಕಂಪನಿಯು OpenAI ಸಿಬ್ಬಂದಿಗೆ ಆಮಿಷ ಒಡ್ಡಿದೆ ಎಂಬ ಆರೋಪ ಕೇಳಿಬಂದಿದೆ.
ಮಂಗಳವಾರ ಪ್ರಸಾರವಾದ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿರುವ ಆಲ್ಟ್‌ಮನ್, 'ನಮ್ಮ ತಂಡದ ಬಹಳಷ್ಟು ಮಂದಿಗೆ ಮೆಟಾ ಭಾರಿ ಕೊಡುಗೆಗಳನ್ನು ಘೋಷಿಸಲಾರಂಭಿಸಿದೆ. ನಿಮಗೆ ಗೊತ್ತಾ, 100 ಮಿಲಿಯನ್ ಡಾಲರ್ ಘೋಷಣೆಯಾಗಿದೆ. ಮುಂದೆ ಅದು ಮತ್ತಷ್ಟು ಹೆಚ್ಚಾಗಬಹುದು' ಎಂದಿದ್ದಾರೆ.
'ಮೆಟಾ ನಮ್ಮನ್ನು ದೊಡ್ಡ ಪ್ರತಿಸ್ಪರ್ಧಿ ಎಂದು ಭಾವಿಸಿದೆ ಎಂಬುದಾಗಿ ಕೇಳಿದ್ದೇನೆ' ಎಂದಿರುವ ಆಲ್ಟ್‌ಮನ್, 'ನಮ್ಮಲ್ಲಿನ ಅತ್ಯುತ್ತಮ ನೌಕರರಲ್ಲಿ ಕನಿಷ್ಠ ಒಬ್ಬರೂ ಈವರೆಗೆ ಮೆಟಾದ ಆಫರ್ ಸ್ವೀಕರಿಸಿಲ್ಲ' ಎಂದು ಹೇಳಿದ್ದಾರೆ.
ಈ ಕುರಿತು ಮೆಟಾದಿಂದ ಸದ್ಯಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
Scale AIನಲ್ಲಿ ಇತ್ತೀಚೆಗೆ ಅಂದಾಜು ₹ 1.23 ಲಕ್ಷ ಕೋಟಿ (14.3 ಬಿಲಿಯನ್ ಡಾಲರ್) ಹೂಡಿಕೆ ಮಾಡಿರುವ ಮೆಟಾ, ತನ್ನದೇ ಹೊಸ ಸೂಪರ್‌ಇಂಟಲಿಜೆನ್ಸ್ ಘಟಕ ರಚಿಸುವ ಪ್ರಯತ್ನದಲ್ಲಿದೆ. ಅದರ ಹೊಣೆಯನ್ನು ಅಲೆಕ್ಸಾಂಡರ್ ವಾಂಗ್ ಅವರಿಗೆ ವಹಿಸಿದೆ. ಈ ವೇಳೆಯೇ ಆಲ್ಟ್‌ಮನ್ ಹೇಳಿಕೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.