ಸ್ಟಾರ್‌ಲಿಂಕ್
ರಾಯಿಟರ್ಸ್ ಚಿತ್ರ
ನವದೆಹಲಿ: ಅಮೆರಿಕದ ಬಹುಕೋಟಿ ಒಡೆತನದ ಉದ್ಯಮಿ ಇಲಾನ್ ಮಸ್ಕ್ ಅವರ ಸ್ಟಾರ್‌ಲಿಂಕ್‌ಗೆ ಉಪಗ್ರಹ ಆಧಾರಿತ ಅಂತರ್ಜಾಲ ಸೇವೆ ಪೂರೈಕೆಗೆ ಪರವಾನಗಿ ಲಭಿಸಿದೆ.
ದೂರಸಂಪರ್ಕ ಇಲಾಖೆಯಿಂದ ಪರವಾನಗಿ ಪಡೆದ ಮೂರನೇ ಕಂಪನಿ ಇದಾಗಿದೆ ಎಂದು ಮೂಲಗಳು ತಿಳಿಸಿವೆ. ಯುಟೆಲ್‌ಸ್ಯಾಟ್‌ನ ಒನ್‌ವೆಬ್ ಮತ್ತು ರಿಲಯನ್ಸ್‌ನ ಜಿಯೊ ಪರವಾನಗಿ ಪಡೆದ ಇತರ ಕಂಪನಿಗಳಾಗಿವೆ.
ಪ್ರಾಯೋಗಿಕ ತರಂಗಾಂತರವನ್ನು ಅರ್ಜಿ ಸಲ್ಲಿಸಿದ 15ರಿಂದ 20 ದಿನಗಳ ಒಳಗಾಗಿ ಹಂಚಿಕೆ ಮಾಡಲಾಗುವುದು ಎಂದು ಇಲಾಖೆ ಹೇಳಿದೆ.
ಆದರೆ ಪರವಾನಗಿ ಹಂಚಿಕೆ ಕುರಿತು ಸ್ಟಾರ್‌ಲಿಂಕ್ ಮತ್ತು ದೂರಸಂಪರ್ಕ ಇಲಾಖೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಪಿಟಿಐ ವರದಿ ಮಾಡಿದೆ.
ಸ್ಟಾರ್‌ಲಿಂಕ್ ಕಂಪನಿಯು ಭಾರತದಲ್ಲಿ ವಾಣಿಜ್ಯ ಕ್ಷೇತ್ರಕ್ಕೆ ಪದಾರ್ಪಣೆ ಮಾಡಲು 2022ರಿಂದ ಪ್ರಯತ್ನ ನಡೆಸಿತ್ತು. ಆದರೆ ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಸರ್ಕಾರ ತನ್ನ ನಿರ್ಧಾರವನ್ನು ಮುಂದೂಡುತ್ತಲೇ ಬಂದಿತ್ತು. ಅಮೆಜಾನ್‌ನ ಕ್ಯೂಪೆರ್ ಈಗಲೂ ಪರವಾನಗಿಗಾಗಿ ಕಾದಿದೆ.
ಉಪಗ್ರಹ ಆಧಾರಿತ ಅಂತರ್ಜಾಲ ಸಂಪರ್ಕ ಪೂರೈಕೆಯ ಪರವಾನಗಿ ಹಂಚಿಕೆ ಕುರಿತು ಜಿಯೊ ಮತ್ತು ಸ್ಟಾರ್‌ಲಿಂಕ್ ನಡುವೆ ಸಂಘರ್ಷ ನಡೆದಿತ್ತು. ತರಂಗಾಂತರವನ್ನು ಹಂಚಿಕೆ ಮಾಡಲಾಗುವುದೇ ಹೊರತು ಹರಾಜು ಮಾಡುವುದಿಲ್ಲ ಎಂದು ಭಾರತ ಸ್ಪಷ್ಟಪಡಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.