ADVERTISEMENT

Action AI: ವಿವಾದದಲ್ಲಿ ಹುಟ್ಟಿದ ‘ಆ್ಯಕ್ಷನ್ ಎಐ’

ಕೃಷ್ಣ ಭಟ್ಟ
Published 10 ಫೆಬ್ರುವರಿ 2026, 23:31 IST
Last Updated 10 ಫೆಬ್ರುವರಿ 2026, 23:31 IST
<div class="paragraphs"><p>ಎ.ಐ</p></div>

ಎ.ಐ

   

– ಗೆಟ್ಟಿ ಚಿತ್ರ

ತಂತ್ರಜ್ಞಾನಲೋಕ 2026ರ ಆರಂಭದಲ್ಲಿ ಒಂದು ಅದ್ಭುತ ಆವಿಷ್ಕಾರಕ್ಕೆ ಸಾಕ್ಷಿಯಾಯಿತು. ಇದನ್ನು ಅನೇಕರು ‘ಹೊಸ ಕಾಲದ ಸಿರಿ’ ಎಂದೂ ಕರೆಯುತ್ತಿದ್ದಾರೆ. ಮೊದಲು ‘ಕ್ಲಾಡ್‌ಬಾಟ್’ (Clawdbot) ಎಂಬ ಹೆಸರಿನಲ್ಲಿ ಉದ್ಭವವಾದ ಒಂದು ಪ್ರಾಜೆಕ್ಟ್, ನಂತರ ‘ಮೋಲ್ಟ್‌ಬಾಟ್’ (Moltbot) ಆಗಿ ಬದಲಾಯಿತು. ಇದು ಈಗ ನಾವೆಲ್ಲ ಬಳಸುತ್ತಿರುವ ಬರಿ ಮಾತನಾಡಬಲ್ಲ ಚಾಟ್‌ಬಾಟ್ ಅಲ್ಲ; ನಾವು ಹೇಳಿದ ಕೆಲಸಗಳನ್ನು ಮಾಡುವ ‘ಏಜೆಂಟಿಕ್ ಎಐ’.

ADVERTISEMENT

ಕೈಕಾಲುಗಳಿರುವ ‘ಎಐ’

ಸಾಮಾನ್ಯ ಜನರಿಗೆ ಈ ಎಐ ಹೇಗಿದೆ ಎಂದು ಹೇಳುವುದಾದರೆ, ನಾವು ಈಗ ‘ಜಿಪಿಎಸ್’ ಬಳಸುತ್ತಿದ್ದೆವು, ಇದು ನಮಗೆ ‘ಸ್ವಯಂಚಾಲಿತ ಕಾರು’ ಕೊಟ್ಟಿದೆ. ಜಿಪಿಎಸ್ ನಿಮಗೆ ದಾರಿ ತೋರಿಸುತ್ತದೆ, ಆದರೆ ಸ್ವಯಂಚಾಲಿತ ಕಾರು ನಿಮ್ಮನ್ನು ಬೇಕಾದಲ್ಲಿಗೆ ಕರೆದೊಯ್ಯುತ್ತದೆ.

ಹಳೆಯ ಎಐಗಳಿಗೆ ನೀವು ‘ಕೆಲಸಗಳ ಪಟ್ಟಿ ಮಾಡಿಕೊಡಪ್ಪಾ’ ಎಂದು ಕೇಳುತ್ತಿದ್ದಿರಿ. ಆದರೆ, ಮೋಲ್ಟ್‌ಬಾಟ್ ನಿಮ್ಮ ಕೆಲಸದ ಪಟ್ಟಿ ನೋಡಿಕೊಂಡು ತಾನೇ ಕೆಲಸವನ್ನು ಮಾಡುತ್ತದೆ. ಇದು ನಿಮ್ಮ ಕಂಪ್ಯೂಟರ್‌ನ ಸ್ಕ್ರೀನ್ ನೋಡಬಲ್ಲದು, ಮೌಸ್ ಅನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ತೆಗೆದುಕೊಂಡು ಹೋಗಬಲ್ಲದು. ಟೈಪ್ ಕೂಡ ಮಾಡಬಲ್ಲದು.

ಕೆಲವು ಉದಾಹರಣೆಗಳು

ಇಮೇಲ್ ಡಿಲೀಟ್‌ ಮಾಡುವುದು: ಒಬ್ಬ ಬಳಕೆದಾರ ತನ್ನ 75,000 ಹಳೆಯ ಇಮೇಲ್‌ಗಳನ್ನು ಡಿಲೀಟ್ ಮಾಡು ಎಂದು ಹೇಳಿದ. ಈ ಬಾಟ್ ಕೇವಲ ಐದೇ ನಿಮಿಷದಲ್ಲಿ ಆ ಎಲ್ಲಾ ಇಮೇಲ್‌ಗಳನ್ನು ಆರಿಸಿ ಡಿಲೀಟ್ ಮಾಡಿತು.

ಚೌಕಾಶಿ ಮಾಡುವ ಸಹಾಯಕ: ಕಾರು ಖರೀದಿಸುವಾಗ ಒಬ್ಬ ಗ್ರಾಹಕನಿಗೆ ಈ ಬಾಟ್ ಸಹಾಯ ಮಾಡಿತು ಎಂದಾದರೆ, ಬೇರೆ ಬೇರೆ ಡೀಲರ್‌ಗಳಿಗೆ ಇಮೇಲ್ ಕಳುಹಿಸಿ, ಅವರ ಜೊತೆಗೆ ದರದ ಬಗ್ಗೆ ಚರ್ಚೆ ಮಾಡಿ, ಮಾಲೀಕನಿಗೆ ಲಕ್ಷಗಟ್ಟಲೆ ಹಣ ಉಳಿಸಿಕೊಡಬಲ್ಲದು!

ಅಡುಗೆಯ ಆರ್ಡರ್: ನೀವು ನಿದ್ರೆಯಿಂದ ಎದ್ದ ತಕ್ಷಣವೇ ನಿಮ್ಮ ನಿದ್ದೆಯ ಡೇಟಾವನ್ನು ಗಮನಿಸಿ, ನಿಮಗೆ ಬೇಕಾದ ಕಾಫಿ ಅಥವಾ ತಿಂಡಿಯನ್ನು ಆರ್ಡರ್ ಮಾಡುವ ಸಾಮರ್ಥ್ಯ ಇದಕ್ಕಿದೆ!

‘ಕ್ಲಾಡ್‌ಬಾಟ್ ಸಮಸ್ಯೆ’: ಹ್ಯಾಕರ್‌ಗಳಿಗೆ ದಾರಿ ಮಾಡಿಕೊಟ್ಟ ಹೆಸರು ಬದಲಾವಣೆ

ಈ ಆವಿಷ್ಕಾರವೇನೋ ಅದ್ಭುತವೇ! ಆದರೆ, ಇದರಿಂದ ಏನು ಆಗಬಹುದು ಎಂದು ಜನರು ಹೆದರಿದ್ದರೋ ಆ ಸಮಸ್ಯೆ ಸ್ವತಃ ಇದಕ್ಕೆ ಮತ್ತು ಇದರ ಮಾಲೀಕರಿಗೇ ಎದುರಾಯಿತು! ಒಂದು ಕಾನೂನು ಸಮಸ್ಯೆಯಿಂದಾಗಿ ಇದರ ಹೆಸರು ಬದಲಾಯಿಸಬೇಕಾಗಿ ಬಂತು. ‘ಕ್ಲಾಡ್‌ಬಾಟ್’ ಎನ್ನುವ ಹೆಸರು ‘ಆಂಥ್ರೋಪಿಕ್’ ಕಂಪನಿಯ ‘ಕ್ಲಾಡ್’ (Claude) ಹೆಸರಿಗೆ ಹೋಲುತ್ತಿತ್ತು. ಹಾಗಾಗಿ, ಕ್ಲಾಡ್ ಕಂಪನಿ ಆಕ್ಷೇಪ ಎತ್ತಿತು. ಹೀಗಾಗಿ ಇದಕ್ಕೆ ‘ಮೋಲ್ಟ್‌ಬಾಟ್’ ಎಂದು ಮರುನಾಮಕರಣ ಮಾಡಲಾಯಿತು.

ಆದರೆ ಈ ಹೆಸರು ಬದಲಾಗುವ ಸಮಯದಲ್ಲಿ ಒಂದು ದೊಡ್ಡ ಅಪಾಯ ಮೈತಳೆಯಿತು. ಹಳೆಯ ಹೆಸರನ್ನು ಬಿಟ್ಟು ಹೊಸ ಹೆಸರಿಗೆ ಬದಲಾಗುವ ಆ ಕೆಲವು ಗಂಟೆಗಳಲ್ಲಿ, ಹ್ಯಾಕರ್‌ಗಳು ‘ಕ್ಲಾಡ್‌ಬಾಟ್’ ಹೆಸರಿನ ನಕಲಿ ವೆಬ್‌ಸೈಟ್‌ಗಳನ್ನು ಸೃಷ್ಟಿಸಿದರು. ಹೆಸರು ಬದಲಾದ ಮಾಹಿತಿ ತಿಳಿಯದ ಬಳಕೆದಾರರು ಈ ನಕಲಿ ಬಾಟ್ ಅನ್ನೇ ಡೌನ್‌ಲೋಡ್ ಮಾಡಿಕೊಂಡರು. ಇದು ಜನರ ಪಾಸ್‌ವರ್ಡ್ ಮತ್ತು ಬ್ಯಾಂಕ್ ವಿವರಗಳನ್ನು ಕದಿಯುವ ‘ಡಿಜಿಟಲ್ ಕಳ್ಳ’ ಆಗಿತ್ತು.

ಇದು ನಮಗೆ ಏಕೆ ಮುಖ್ಯ?

ಮೋಲ್ಟ್‌ಬಾಟ್ ನಮ್ಮ ತಂತ್ರಜ್ಞಾನದ ಬಳಕೆಯನ್ನೇ ಬದಲಿಸಲಿದೆ. ಇದು ನಮ್ಮ ವಾಟ್ಸ್‌ಆ್ಯಪ್‌ ಅಥವಾ ಟೆಲಿಗ್ರಾಮ್ ಮೂಲಕವೂ ಕೆಲಸ ಮಾಡಬಲ್ಲದು. ನೀವು ಕಚೇರಿಯಲ್ಲಿದ್ದಾಗ ಮನೆಗೆ ಮೆಸೇಜ್ ಕಳುಹಿಸಿ, ‘ಮೋಲ್ಟ್‌ಬಾಟ್, ನಾನು ಮನೆಯ ಓವನ್ ಆಫ್ ಮಾಡಿದ್ದೇನೆಯೇ ಎಂದು ನೋಡು’, ಅಥವಾ ‘ನನಗೆ ಬಂದಿರುವ ಉದ್ದದ ಇಮೇಲ್ ಸಾರಾಂಶ ಹೇಳು’ ಎಂದು ಆದೇಶಿಸಬಹುದು.

ಆದರೆ ಈ ‘ಮೋಲ್ಟ್‌ಬಾಟ್ ಸಮಸ್ಯೆ’ ನಮಗೆ ಒಂದು ಪಾಠವನ್ನೂ ಕಲಿಸಿದೆ. ‘ಅಧಿಕಾರದ ಜೊತೆಗೆ ಎಚ್ಚರಿಕೆಯೂ ಬೇಕು’ ಎಂಬ ಪಾಠವನ್ನು ತನ್ನದೇ ಉದಾಹರಣೆಯ ಜೊತೆಗೆ ಕೊಟ್ಟಿದೆ. ನಿಮ್ಮ ಕಂಪ್ಯೂಟರ್‌ನ ಸಂಪೂರ್ಣ ನಿಯಂತ್ರಣವನ್ನು ಒಂದು ಎಐಗೆ ನೀಡುವಾಗ, ಅದು ಅಧಿಕೃತವದದ್ದೇ ಎಂದು ಖಚಿತಪಡಿಸಿಕೊಳ್ಳುವುದು ಮುಖ್ಯ.

ಭವಿಷ್ಯ: 2026ರ ಹೊಸ ಯುಗ

ಇಂದು ಈ ಬಾಟ್‌ಗಳು ತಮ್ಮದೇ ಸಾಮಾಜಿಕ ಜಾಲತಾಣವನ್ನು ಹೊಂದಿವೆ. ಅಲ್ಲಿ ಒಂದು ಎಐ ಇನ್ನೊಂದು ಎಐ ಜೊತೆಗೆ ಮಾತುಕತೆ ನಡೆಸಿ ಸಮಸ್ಯೆಗಳನ್ನು ಪರಿಹರಿಸುತ್ತವೆ. ಇದು ವಿಜ್ಞಾನದ ಕಟ್ಟುಕತೆಯಂತೆ ಕಂಡರೂ, ಇಂದಿನ ವಾಸ್ತವ.

ಮಾರುಕಟ್ಟೆಯ ಮೇಲೆ ಪ್ರಭಾವ

ಈ ಆವಿಷ್ಕಾರವು ಕೇವಲ ವ್ಯಕ್ತಿಗಳಿಗೆ ಮಾತ್ರವಲ್ಲದೆ, ಸಣ್ಣ ಉದ್ಯಮಗಳಿಗೂ ವರದಾನವಾಗಿದೆ. ಉದಾಹರಣೆಗೆ, ಒಬ್ಬ ಸಾಮಾನ್ಯ ವ್ಯಾಪಾರಿ ತನ್ನ ಅಕೌಂಟಿಂಗ್ ಕೆಲಸಗಳನ್ನು ಮಾಡಲು ಅಥವಾ ಕಂಪನಿಗಳು ತಮ್ಮ ಗ್ರಾಹಕರ ಆರ್ಡರ್ ಮತ್ತು ಇನ್ವೆಂಟರಿಯನ್ನು ನಿರ್ವಹಿಸಲು ಈ ಬಾಟ್ ಅನ್ನು ಬಳಸಬಹುದು. ಇದು ಮನುಷ್ಯರ ಕೆಲಸವನ್ನು ಕಿತ್ತುಕೊಳ್ಳುವ ಬದಲು, ಒಂದೇ ಕೆಲಸವನ್ನು ಮತ್ತೆ ಮಾಡುವಂಥ ಮತ್ತು ಬೇಸರದ ಕೆಲಸಗಳನ್ನು ತಾನು ಮಾಡಿ, ಹೊಸದಾಗಿ ಯೋಚನೆ ಮಾಡಲು ನಮಗೆ ಸಮಯ ನೀಡುತ್ತದೆ. 2026ರ ಕೊನೆಯ ಹೊತ್ತಿಗೆ, ಎಐ ಪ್ರಾಂಪ್ಟ್ ಎಂಜಿನಿಯರಿಂಗ್’ಗಿಂತಲೂ ‘ಎಐ ಏಜೆಂಟ್ ಮ್ಯಾನೇಜ್‌ಮೆಂಟ್’ ಕೌಶಲಕ್ಕೆ ಹೆಚ್ಚಿನ ಬೆಲೆ ಸಿಗುತ್ತಿದೆ. ಒಟ್ಟಿನಲ್ಲಿ, ಕೇವಲ ಮಾತನಾಡುವ ಎಐನ ಯುಗ ಮುಗಿದು, ಕೆಲಸ ಮಾಡುವ ಎಐ ಯುಗ ಆರಂಭವಾಗಿದೆ. ⇒v

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.