
ತಂತ್ರಜ್ಞಾನ: ಸೈಬರ್ ಜೀವಿಗಳಿಗೆ ಒಲಿದ ಕೃತಕ ಕಣ್ಣು!
ಕವಿ ಲಕ್ಷ್ಮಣರಾಯರು ‘ಸುಬ್ಬಾಭಟ್ಟರೆ’ ಕವನದಲ್ಲಿ ರಾತ್ರಿಯಾಕಾಶವನ್ನು ಚಿಕ್ಕೆ ಮೂಗುತಿ, ಚಂದ್ರಪದಕ, ನೀಹಾರಿಕೆಯ ಹಾರ ಇರುವ ಜಿಗಿ, ಜಿಗಿ ಒಡವೆ ದುಕಾನು ಎಂದೆಲ್ಲ ವರ್ಣಿಸಿದ್ದಾರೆ. ವೇಲೆಂಟೈನ್ ದಿನದಲ್ಲಿ ನಮಗೆ, ನಿಮಗೆಲ್ಲ ಆಕಾಶ ಹಾಗೆಯೇ ತೋರಿರಬಹುದು. ಆದರೆ ಎಷ್ಟೇ ಪ್ರಬಲ ಕೃತಕ ಬುದ್ಧಿಮತ್ತೆ ಇರುವ ರೋಬಾಟಿಗೂ ರಾತ್ರಿಯಾಕಾಶ ಕೇವಲ ಕಪ್ಪು, ಕಪ್ಪು! ಇದಕ್ಕೆ ಕಾರಣ ಅದರ ಕ್ಯಾಮೆರಾ–ಕಣ್ಣು. ರೋಬಾಟುಗಳ ಕಣ್ಣು ನಮ್ಮದರಂತೆ ಕಡಿಮೆ ಅಥವಾ ಹೆಚ್ಚು ಬೆಳಕಿಗೆ ಸರಾಗವಾಗಿ ಒಗ್ಗಿಕೊಳ್ಳುವುದಿಲ್ಲ. ರಾತ್ರಿಯ ಚಿಕ್ಕೆಗಳು ಅವಕ್ಕೆ ತೋರಲು ಬಹಳ ಹೊತ್ತು ಬೇಕು. ಬೆಳಗಿನ ಪ್ರಖರ ಬೆಳಕಿನಲ್ಲಿಯೂ ಸ್ಪಷ್ಟವಾಗಿ ಎಲ್ಲವೂ ಗೋಚರಿಸುವುದಿಲ್ಲ. ಇನ್ನು ಮುಂದೆ ರೋಬಾಟುಗಳೂ ಸುಬ್ಬಾಭಟ್ಟರ ಕವನದ ಸೌಂದರ್ಯವನ್ನು ಸವಿಯುವಂತೆ ಮಾಡುವ ಸಾಧನವೊಂದು ಸಿದ್ಧವಾಗುತ್ತಿದೆಯಂತೆ. ನಮ್ಮ ಕಣ್ಣುಗಳಂತೆಯೇ ಬೆಳಕಿನ ಪ್ರಖರತೆಗೆ ತಕ್ಕಂತೆ ಹೊಂದಿಕೊಳ್ಳಬಲ್ಲ ಕ್ಯಾಮೆರಾದ ಇಲೆಕ್ಟ್ರಾನಿಕ್ ಪಟಲಗಳನ್ನು ಅಮೆರಿಕದ ನಾರ್ತ್ ಕೆರೊಲಿನಾ ವಿವಿಯ ಇಲೆಕ್ಟ್ರಾನಿಕ್ ತಂತ್ರಜ್ಞ ವುಬಿನ್ ಬಾಯ್ ಮತ್ತು ಸಂಗಡಿಗರು ಸಿದ್ಧಪಡಿಸಿದ್ದಾರೆ.
ಕಣ್ಣಿನ ಪಟಲದ ಬಗ್ಗೆ ನಿಮಗೆ ಗೊತ್ತಿರಬೇಕು; ನಮ್ಮ ಕಣ್ಣಿಗೆ ಬಣ್ಣ ಕೊಡುವುದೇ ಅದು. ನೀಲಿಯೋ ಕಪ್ಪೋ ಕಂದೋ, ಕಣ್ಣಿನ ಸೌಂದರ್ಯಕ್ಕೆ ಹೊರಗೆ ಇರುವ ರೆಪ್ಪೆ ಹಾಗೂ ಹುಬ್ಬುಗಳಂತೆಯೇ ಒಳಗೆ ಗುಡ್ಡೆಯಲ್ಲಿರುವ ಈ ಬಣ್ಣದ ಪರದೆಯೂ ಕಾರಣ. ಕಣ್ಣಿನ ಕ್ಷಮತೆಗೂ ಅದು ಸಾಕಷ್ಟು ಕೊಡುಗೆಯನ್ನು ನೀಡುತ್ತದೆ. ಕಣ್ಣಿನೊಳಗೆ ಹರಿಯುವ ಬೆಳಕನ ಪ್ರವಾಹವನ್ನು ನಿಯಂತ್ರಿಸುವ ವಾಲ್ವು ಅದು. ಹೊರಗೆ ಪ್ರಖರವಾದ ಬೆಳಕಿದ್ದಾಗ ಕಿರಿದಾಗಿ, ಬೇಕಿದ್ದಷ್ಟೆ ಬೆಳಕನ್ನು ಒಳಗೆ ಬಿಡುತ್ತದೆ. ಹೊರಗಡೆ ಕಾರ್ಗತ್ತಲು ಕವಿದಿದ್ದಾಗ, ದೊಡ್ಡದಾಗಿ ಅರಳಿಕೊಂಡು ಹೆಚ್ಚು ಬೆಳಕು ಒಳನುಸುಳುವಂತೆ ನೆರವಾಗುತ್ತದೆ. ಈ ವಾಲ್ವು ಇರುವುದರಿಂದಲೆ ಪ್ರಖರ ಬೆಳಕಿನಲ್ಲಿಯೂ ನಮ್ಮ ಕಣ್ಣಿನೊಳಗಿನ ಅಕ್ಷಿಪಟಲ ಸುಟ್ಟು ಹೋಗುವುದಿಲ್ಲ. ಅಥವಾ ಕಗ್ಗತ್ತಿಲಿನಲ್ಲಿ ನಾವು ಸಂಪೂರ್ಣ ಅಂಧರೂ ಆಗುವುದಿಲ್ಲ. ಕತ್ತಲಿನಿಂದ ಇದ್ದಕ್ಕಿದ್ದ ಹಾಗೆ ಬೆಳಕಿಗೆ ಬಂದಿರೆನ್ನಿ, ತಟಕ್ಕನೆ ಈ ಪಟಲ ಮುದುರಿಕೊಂಡು, ಬೆಳಕು ಕಣ್ಣನ್ನು ಕೋರೈಸದಂತೆ ತಡೆಯುತ್ತದೆ. ಇದ್ದಕ್ಕಿದ್ದ ಹಾಗೆ ದೀಪ ಆರಿದಾಗ, ಕ್ಷಣ ಹೊತ್ತಿನಲ್ಲಿಯೇ ಅಗಲಿಸಿಕೊಂಡು, ಹೆಚ್ಚು ಬೆಳಕನ್ನು ಒಳಬಿಡುತ್ತದೆ. ಸುತ್ತಲಿನ ಪರಿಸರ ಮಸುಕಾಗಿಯಾದರೂ ಗೋಚರಿಸುವಂತೆ ಮಾಡುತ್ತದೆ.
ಪಾಪ! ರೋಬಾಟುಗಳ ಕಣ್ಣುಗಳಿಗೆ, ಅರ್ಥಾತ್, ಕ್ಯಾಮೆರಾಗಳಿಗೆ ಇಂತಹ ಪಟಲದ ಸೌಕರ್ಯ ಇರಲಿಲ್ಲ. ಇದೀಗ ವುಬಿನ್ ಬಾಯ್ ತಂಡ ಮನುಷ್ಯರ ಕಣ್ಣನ್ನೇ ಮಾದರಿಯನ್ನಾಗಿಟ್ಟುಕೊಂಡು ವಿಶಿಷ್ಟ ವಸ್ತುವೊಂದನ್ನು ರೂಪಿಸಿದೆ. ಮೆತ್ತನೆಯ ದ್ರವ, ವಿದ್ಯುತ್ ಹರಿಯುವ ಲೋಹದ ತಂತುಗಳು, ಪಾಲಿಮರಿನ ಪೊರೆಯನ್ನೇ ಬಳಸಿಕೊಂಡು ಮನುಷ್ಯರ ಕಣ್ಣಿನಂತೆಯೇ ಹಿಗ್ಗಿ, ಕುಗ್ಗಬಲ್ಲ ಇಲೆಕ್ಟ್ರಾನಿಕ್ ಪಟಲವನ್ನು ರೂಪಿಸಿದೆ. ರೋಬಾಟುಗಳ ಕಣ್ಣು, ಸ್ಮಾರ್ಟ್ ಫೋನು, ಇಲೆಕ್ಟ್ರಾನಿಕ್ ಕ್ಯಾಮೆರಾಗಳ ಲೆನ್ಸುಗಳು ನಮ್ಮ ಕಣ್ಣುಗಳಂತೆಯೇ ಬೆಳಕಿನ ಪ್ರಖರತೆಗೆ ಹೊಂದಿಕೊಳ್ಳುವಂತೆ ಇದು ಮಾಡಬಲ್ಲುದಂತೆ.
ಕ್ಯಾಮೆರಾವನ್ನು ಕಣ್ಣಿಗೋ, ಕಣ್ಣನ್ನು ಕ್ಯಾಮೆರಾಗೋ ಹೋಲಿಸುವುದು ಅಭ್ಯಾಸ. ಬೆಳಕಿನಿಂದ ಬಿಂಬ ಮೂಡಿಸುವ ಲೆನ್ಸು, ಹಾಗೂ ಬಿಂಬವನ್ನು ವಿದ್ಯುತ್ ಅನ್ನಾಗಿಸುವ ಬಿಂಬಗ್ರಾಹಿ ವ್ಯವಸ್ಥೆ – ಎರಡೇ ಇವೆರಡರಲ್ಲೂ ಇರುವ ಹೋಲಿಕೆ. ಕ್ಯಾಮೆರಾವಿನ ಬಿಂಬಗ್ರಾಹಿ ಹಿಂದೆ ಬೆಳಕು ಬಿದ್ದಾಗ ರಾಸಾಯನಿಕವಾಗಿ ಬದಲಾಗುವ ಫಿಲ್ಮುಗಳಾಗಿದ್ದುವು. ಈಗ ಇಲೆಕ್ಟ್ರಾನಿಕ್ ಪರದೆಗಳಾಗಿವೆ. ಕಣ್ಣಿನಲ್ಲಿ ಇದು ನರಕೋಶಗಳ ಪರದೆ. ಕಣ್ಣಿನ ಲೆನ್ಸು ಪ್ರೊಟೀನಿನದ್ದು. ಕ್ಯಾಮೆರಾದಲ್ಲಿ ಗಾಜಿನದ್ದು. ಇವೆರಡರ ನಡುವೆ ಇದ್ದ ಪ್ರಮುಖ ವ್ಯತ್ಯಾಸ ಎಂದರೆ ಪಾಪೆ. ಲೆನ್ಸಿನ ಮುಂದೆ ಇರುವ ನಡುವೆ ರಂಧ್ರವಿರುವ ಪರದೆ. ಪಾಪೆ ಹಿಗ್ಗಿ ಕುಗ್ಗಿದಾಗ ಈ ರಂಧ್ರದ ಗಾತ್ರ ಬದಲಾಗುವುದರಿಂದ ಕಣ್ಣಿನೊಳಗೆ ನುಸುಳುವ ಬೆಳಕುವ ಪ್ರಮಾಣ ಬದಲಾಗುತ್ತದೆ.
ವುಬಿನ್ ಬಾಯ್ ತಂಡ ಇದೀಗೆ ಇಂತಹ ಪಾಪೆ ಇರುವ ಕೃತಕ–ಕಣ್ಣನ್ನು ಸೃಷ್ಟಿಸಿದೆ. ಈ ಕಣ್ಣಿನ ಬಿಂಬಗ್ರಾಹಿ ಪರದೆಯೂ ನಮ್ಮ ಕಣ್ಣಿನಂತೆಯೇ ಅರೆಗೋಲ. ಕ್ಯಾಮೆರಾದಲ್ಲಿ ಅದು ಸಪಾಟಾಗಿರುವುದರಿಂದ ಚಿತ್ರಗಳ ಅಂಚು ಮಸುಕಾಗಿರುತ್ತದೆ. ನ್ಯಾನೊಕಾರ್ಬನ್ನುಗಳ ಜೊತೆಗೆ ಯಿಟ್ರಿಯಂ ಲೋಹ ಮತ್ತು ಇಂಡಿಯಂ ಆಕ್ಸೈಡುಗಳಿಂದ ಮಾಡಿದ ಈ ಪದರ ಬೆಳಕು ಬಿದ್ದ ಕೂಡಲೇ ಇಲೆಕ್ಟ್ರಾನುಗಳನ್ನು ಸುರಿಸುತ್ತದೆ; ಬಿಂಬಗ್ರಾಹಿಯಾಗುತ್ತದೆ. ವಿಶೇಷ ಎಂದರೆ ನಮಗೆ ಕಾಣದ ಅಲ್ಟ್ರಾವಯಲೆಟ್ ಬೆಳಕನ್ನೂ ಇದು ಗ್ರಹಿಸಬಲ್ಲುದು. ಇದನ್ನು ಗ್ಯಾಲಿಯಂ ಇಂಡಿಯಂ ಲೋಹದ ತಂತುಗಳೊಂದಿಗೆ ಬೆಸೆದಿದ್ದಾರೆ. ಈ ತಂತುಗಳು ಇಲೆಕ್ಟ್ರಾನುಗಳನ್ನು ಕಣ್ಣಿನಲ್ಲಿರುವ ನರಕೋಶಗಳಂತೆ ಕೊಂಡೊಯ್ಯುತ್ತವೆ. ಬೆಳಕು ಹೆಚ್ಚಿದೆಯೋ ಕಡಿಮೆಯೋ ಎನ್ನುವುದನ್ನು ಇವು ಪಾಪೆಗೆ ಹೊಂದಿಸಿರುವ ಇಲೆಕ್ಟ್ರಾನಿಕ್ ಸರ್ಕೀಟಿಗೆ ತಿಳಿಸುತ್ತವೆ. ಅದು ಈ ಮಾಹಿತಿಯನ್ನು ಬಳಸಿಕೊಂಡು ಥೇಟ್ ಕಣ್ಣಿನಲ್ಲಿ ಆಗುವಂತೆಯೇ ಪಾಪೆಯನ್ನು ಹಿಗ್ಗಿಸಿ, ಕುಗ್ಗಿಸಿ ಬೆಳಕಿನ ಪ್ರವಾಹವನ್ನು ನಿಯಂತ್ರಿಸುತ್ತದೆಯಂತೆ.
ವುಬಿನ್ ಬಾಯ್ ತಂಡ ಈ ಪಾಪೆಯನ್ನು ದ್ರವಲೋಹ ಎಂದು ಕರೆದಿದೆ. ಗ್ಯಾಲಿಯಂ ಮತ್ತು ಇಂಡಿಯಂ ಲೋಹಗಳ ಮಿಶ್ರಲೋಹದ ಸೂಕ್ಷ್ಮ ತಂತಿಗಳು ಹಾಗೂ ರಬ್ಬರಿನಂತಹ ಪಾಲಿಡೈಮೀಥೈಲ್ ಸಿಲೋಕ್ಸೇನ್ ವಸ್ತುಗಳು ಈ ಪಾಪೆಯಲ್ಲಿವೆ. ಸಿಲೋಕ್ಸೇನಿನಿಂದ ಮಾಡಿದ ತೆಳುವಾದ ಪೊರೆಯೊಳಗೆ ತಂತಿಗಳನ್ನು ನಿರ್ದಿಷ್ಟ ವಿನ್ಯಾಸದಲ್ಲಿ ಅಳವಡಿಸಲಾಗಿದೆ. ಈ ತಂತಿಗಳು ವಿದ್ಯುತ್ ಹರಿದಾಗ ಕುಗ್ಗಿಯೂ, ಇಲ್ಲದಾಗ ಸ್ವಸ್ಥಿತಿಯಲ್ಲಿಯೂ ಇರಬಲ್ಲವು. ಈ ಪಾಪೆಯ ಮಧ್ಯೆ ಬೆಳಕು ಹೋಗುವಂತೆ ಲೆನ್ಸನ್ನು ಇಟ್ಟಿದ್ದಾರೆ. ತಂತಿಗಳನ್ನು ಲಾಜಿಕ್ ಸರ್ಕೀಟಿಗೆ ಹೊಂದಿಸಲಾಗಿದೆ. ಹೀಗೆ ಬಿಂಬಗ್ರಾಹಿಯಿಂದ ಬರುವ ಬೆಳಕಿನ ಮಾಹಿತಿ ಪಾಪೆಯ ಉದ್ದಗಲಗಳನ್ನು ನಿಯಂತ್ರಿಸುತ್ತದೆ. ತನ್ಮೂಲಕ ಬೆಳಕಿನ ಪ್ರಮಾಣವನ್ನೂ ನಿಯಂತ್ತಿಸುತ್ತದೆ.
ವುಬಿನ್ ಬಾಯ್ ತಂಡ ಈ ಪಟಲವಿರುವ ಕೃತಕ ನೇತ್ರವನ್ನು ಪರೀಕ್ಷೆಗೊಡ್ಡಿತ್ತು. ವಿವಿಧ ಅಕ್ಷರಗಳನ್ನು ಅದರ ಮುಂದಿಟ್ಟು, ಚಿತ್ರ ತೆಗೆದಿತ್ತು. ವಿವಿಧ ಬೆಳಕಿನ ತರಂಗಾಂತರ ಹಾಗೂ ಪ್ರಖರತೆಯಲ್ಲಿ ಈ ಪರೀಕ್ಷೆಗಳು ನಡೆದಿದ್ದುವು. ಕೀಟಗಳ ಕಣ್ಣಿನಂತೆ ಇದು ಯುವಿ ಬೆಳಕಿಗೂ ಸ್ಪಂದಿಸುತ್ತದೆ; ಹಾಗೆಯೇ ನಮ್ಮಂತೆ ಕಾಮನಬಿಲ್ಲನ್ನೂ ಕಾಣುತ್ತದೆಯಂತೆ. ಅಷ್ಟೇ ಅಲ್ಲ, ಗ್ಯಾಲಿಯಂ-ಇಂಡಿಯಂ ಮಿಶ್ರಲೋಹದ ತಂತುಗಳನ್ನು ವಿವಿಧ ವಿನ್ಯಾಸದಲ್ಲಿ ಜೋಡಿಸಿ, ಬೆಕ್ಕು, ಕಪ್ಪೆ, ಮೇಕೆ, ಹದ್ದುಗಳ ಕಣ್ಣುಗಳ ಪಾಪೆಗಳನ್ನೂ ಇವರು ರಚಿಸಿದ್ದಾರೆ. ಎಂದರೆ ಇಷ್ಟೆ, ಇನ್ನು ಮುಂದೆ ರೋಬಾಟು ಮನುಷ್ಯನ ಕಣ್ಣೇ ಬೇರೆ, ರೋಬಾಟು ಬೆಕ್ಕಿನದ್ದೇ ಬೇರೆ. ಇದೀಗ ಇವೆಲ್ಲದರದ್ದೂ ದುಂಡಗೆ ಒಂದೇ ತೆರನಾದ ಕ್ಯಾಮೆರಾ ಆಗಿರುತ್ತಿತ್ತು.
ಈ ಕಣ್ಣುಗಳು ಕಾರ್ಖಾನೆಗಳಲ್ಲಿ ಉತ್ಪನ್ನಗಳ ಪರೀಕ್ಷೆಗೆ, ಆಸ್ಪತ್ರೆಗಳಲ್ಲಿ ಅಂಗಗಳ ಪರೀಕ್ಷೆಗೆ, ಮತ್ತು ಸೈಬರ್‌ಜೀವಿ, ಅರ್ಥಾತ್, ಯಂತ್ರಜೀವಿಗಳ ಕಣ್ಣುಗಳಲ್ಲಿ ಬಳಕೆಗೆ ಉಪಯುಕ್ತ ಎಂದು ಬಾಯ್ ತಂಡ ಆಶಿಸಿದೆ. ಇವರ ಆಶಯ ನಿಜವಾದಲ್ಲಿ ಸೈಬರ್‌ಜೀವಿಗಳೂ ರಾತ್ರಿಯ ಒಡವೆ ದುಕಾನನ್ನು ಕಂಡು ಖುಷಿ ಪಡಬಹುದು.
***