ADVERTISEMENT

 'ಔಡಿ ಎ3' ಕಾರುಗಳಿಗೆ ಬಳಸಿದ ಪ್ಲಾಸ್ಟಿಕ್‌ ಬಾಟಲಿಗಳಿಂದ ಸೀಟ್‌ ಕವರ್‌ ತಯಾರಿ

ಏಜೆನ್ಸೀಸ್
Published 27 ಫೆಬ್ರುವರಿ 2020, 13:50 IST
Last Updated 27 ಫೆಬ್ರುವರಿ 2020, 13:50 IST
 'ಔಡಿ ಎ3' ಕಾರುಗಳಿಗೆ ಬಳಸಿದ ಪ್ಲಾಸ್ಟಿಕ್‌ ಬಾಟಲಿಗಳಿಂದ ಸೀಟ್‌ ಕವರ್‌ ತಯಾರಿ
 'ಔಡಿ ಎ3' ಕಾರುಗಳಿಗೆ ಬಳಸಿದ ಪ್ಲಾಸ್ಟಿಕ್‌ ಬಾಟಲಿಗಳಿಂದ ಸೀಟ್‌ ಕವರ್‌ ತಯಾರಿ   

ಕುಡಿಯುವ ನೀರು, ತಂಪು ಪಾನೀಯಗಳ ಸಂಗ್ರಹ ಮತ್ತು ಪೂರೈಕೆಗಾಗಿ ಅತಿ ಹೆಚ್ಚು ಬಳಕೆಯಾಗುತ್ತಿರುವ ಪೆಟ್‌ (PET) ಬಾಟಲಿಗಳ ಮರುಬಳಕೆ ಸಾಧ್ಯ ಎಂಬುದು ಈಗಾಗಲೇ ತಿಳಿದಿರುವ ಹಾಗೂ ಅನುಸರಿಸುತ್ತಿರುವ ಪ್ರಕ್ರಿಯೆ.ಪೆಟ್‌ ಬಾಟಲಿಗಳಿಂದ ಐಷಾರಾಮಿ ಕಾರುಗಳಔಡಿ ಕಂಪನಿಸೀಟ್‌ಗಳಿಗೆ ಕವರ್‌ ಸಿದ್ಧಪಡಿಸುತ್ತಿದೆ.

ಬಟ್ಟೆಗಳು, ಬ್ಯಾಗ್‌, ಶೂ ಹಾಗೂ ಆಭರಣಗಳನ್ನೂ ಪೆಟ್‌ ಬಾಟಲಿಗಳಿಂದ ಸಿದ್ಧಪಡಿಸಿ ಮಾರಾಟ ಮಾಡಲಾಗುತ್ತಿದೆ. ಶೂ ಸಿದ್ಧಪಡಿಸುವ ಕಂಪನಿಗಳು ಸಾಗರ ತಳದಲ್ಲಿ ಸಿಲುಕಿರುವ ಪ್ಲಾಸ್ಟಿಕ್‌ಗಳನ್ನು ತೆಗೆದು ಸ್ಪೋರ್ಟ್ಸ್‌ ಶೂ ತಯಾರಿಸುತ್ತಿವೆ. ಇಂಥದ್ದೇ ಪ್ರಯತ್ನಗಳ ಸಾಲಿನಲ್ಲಿ ಔಡಿ ಸಹ ಸೇರ್ಪಡೆಯಾಗಿದೆ. ಔಡಿ ಹೊಸ 'ಎ3' ಮಾದರಿಯ ಕಾರುಗಳಲ್ಲಿ ಪ್ಲಾಸ್ಟಿಕ್‌ ಮರುಬಳಕೆಯ ವಸ್ತುಗಳಿಂದ ಸೀಟ್‌ ಕವರ್‌ ಸಿದ್ಧಪಡಿಸುತ್ತಿದೆ.

ಸೀಟ್‌ ಕವರ್‌ನಲ್ಲಿ ಬಳಸಲಾಗಿರುವ ಬಟ್ಟೆ ಶೇ 89ರಷ್ಟು ಪೆಟ್‌ ಬಾಟಲಿಗಳ ಮರುಬಳಕೆಯಿಂದ ಸಿದ್ಧಪಡಿಸಿದ ದಾರದಿಂದ ಆಗಿದೆ. ಸಾಮಾನ್ಯ ಬಳಸಲಾಗುವ ಬಟ್ಟೆಯಂತದ್ದೇ ಗುಣಮಟ್ಟ ಮತ್ತು ನೋಡಲು ಸಹ ಅದೇ ರೀತಿ ಕಾಣುತ್ತದೆ.

ADVERTISEMENT

1.5 ಲೀಟರ್‌ ಸಂಗ್ರಹ ಸಾಮರ್ಥ್ಯದ 45 ಪೆಟ್‌ ಬಾಟಲಿಗಳಿಂದ ಒಂದು ಸೀಟ್‌ನ ಕವರ್‌ ಸಿದ್ಧಪಡಿಸಲಾಗುತ್ತಿದೆ. ಹಾಗೂ ಔಡಿ ಎ3 ಕಾರಿನ ಕಾರ್ಪೆಟ್‌ಗಾಗಿ 62 ಪೆಟ್‌ ಬಾಟಲಿ ಬಳಸಲಾಗುತ್ತಿದೆ. ಲಗೇಜ್‌ ಕಂಪಾರ್ಟ್‌ಮೆಂಟ್‌ ಸೇರಿದಂತೆ ಹಲವು ಭಾಗಗಳನ್ನು ಮರುಬಳಕೆ ವಸ್ತುಗಳಿಂದಲೇ ಸಿದ್ಧಪಡಿಸುವ ಪ್ರಯತ್ನ ನಡೆಸಲಾಗುತ್ತಿದೆ. ಕಪ್ಪು, ಹಳದಿ ಹಾಗೂ ಕಂದು ಬಣ್ಣಗಳ ಸೀಟ್‌ ಕವರ್‌ಗಳು ಸಿದ್ಧಗೊಳ್ಳುತ್ತಿವೆ. ಆದರೆ, ಪೂರ್ಣ ಮರುಬಳಕೆಯ ಪ್ಲಾಸ್ಟಿಕ್‌ನಿಂದಲೇ ಸೀಟ್‌ ಕವರ್‌ ತಯಾರಿಸುವ ಗುರಿಯನ್ನು ಔಡಿ ಹೊಂದಿದೆ. ಇತರೆ ವಸ್ತುಗಳ ಬೆರಕೆ ಇಲ್ಲದೇ ಸೀಟ್ ಕವರ್‌ ಸಿದ್ಧಪಡಿಸಿದರೆ, ಮುಂದೆ ಅದನ್ನು ಮತ್ತೆ ಮರುಬಳಕೆ ಮಾಡಬಹುದಾಗುತ್ತದೆ.

ಸುಸ್ಥಿರ ಪರಿಸರಕ್ಕಾಗಿ ಈ ಪ್ರಯತ್ನ ಎಂದು ಕಂಪನಿ ಹೇಳಿಕೊಂಡಿದೆ.

ಪ್ಲಾಸ್ಟಿಕ್‌ನಿಂದ ದಾರ

ಬಳಸಿದ ಬಾಟಲಿಗಳನ್ನು ರಿವರ್ಸ್‌ ವೆಂಡಿಂಗ್‌ ಮೆಶಿನ್‌ ಒಳಗೆ ಹಾಕುವ ವ್ಯವಸ್ಥೆ ಜರ್ಮನಿಯ ಹಲವು ಕಡೆ ಸ್ಥಾಪಿಸಲಾಗಿದೆ. ಮೆಶಿನ್‌ ಒಳಗೆ ಪೆಟ್‌ ಬಾಟಲಿ ಹಾಕಿದರೆ, 0.25 ಯೂರೋ (ಸುಮಾರು ₹20) ಗ್ರಾಹಕನಿಗೆ ಸಿಗುತ್ತದೆ. ಸಂಗ್ರಹಗೊಂಡ ಬಾಟಲಿಗಳನ್ನು ಕ್ರಷ್‌ ಮಾಡಿ, ಕುಗ್ಗಿಸಿ ಸಾಗಣೆಗೆ ಅನುಕೂಲವಾಗುವಂತೆ ಮಾಡಲಾಗುತ್ತದೆ. ಟ್ರಕ್‌ಗಳ ಮೂಲಕ ಮರುಬಳಕೆ ಪ್ರಕ್ರಿಯೆಗೆ ಒಳಪಡಿಸುವ ಘಟಕಗಳಿಗೆ ತರಲಾಗುತ್ತದೆ. ಅಲ್ಲಿ ಬಣ್ಣ, ಗಾತ್ರ ಮತ್ತು ಗುಣಮಟ್ಟಕ್ಕೆ ತಕ್ಕಂತೆ ಬೇರ್ಪಡಿಸಲಾಗುತ್ತದೆ. ಬಾಟಲಿ ಮುಚ್ಚಲಗಳನ್ನು ತೆಗೆಯಲಾಗುತ್ತದೆ.

ಬೇರ್ಪಟ್ಟ ಬಾಟಲಿಗಳನ್ನು ಯಂತ್ರಗಳು ಚಿಕ್ಕ ಬಿಲ್ಲೆಗಳಂತೆ ಮಾಡುತ್ತವೆ. ಅದನ್ನು ತೊಳೆದು, ಒಣಗಿಸಿ ಕರಗಿಸಲಾಗುತ್ತದೆ. ಕರಗಿದ ಪ್ಲಾಸ್ಟಿಕ್‌ ಉದ್ದನೆಯ ಎಳೆಯಾಗಿ ಮೆಶಿನ್‌ ತೂತುಗಳಿಂದ ಹೊರಬರುತ್ತದೆ. ಅದು ಒಣಗುತ್ತಿದ್ದಂತೆ ಹರಳಿನ ರೀತಿ ಸಣ್ಣದಾಗಿ ತುಂಡರಿಸಲಾಗುತ್ತದೆ. ರೀಸೈಕ್ಲೇಟ್‌ ಎಂದು ಕರೆಯುವ ಪ್ಲಾಸ್ಟಿಕ್‌ ಕಾಳುಗಳನ್ನು ದಾರವಾಗಿಸುವ ಪ್ರಕ್ರಿಯೆಗೆ ಒಳಪಡಿಸಲಾಗುತ್ತದೆ. ಪ್ಲಾಸ್ಟಿಕ್‌ ಕಾಳುಗಳನ್ನು ಮೆಶಿನ್‌ ಒಳಗೆ ಹಾಕಿ, ದಾರದ ಎಳೆಗಳನ್ನು ಸುತ್ತಲಾಗುತ್ತದೆ. ಇದೇ ದಾರದ ಉಂಡೆಗಳನ್ನು ಬಟ್ಟೆ ತಯಾರಿಕೆಗೆ ಬಳಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.