ADVERTISEMENT

Chandrayaan-3: ವಿಕ್ರಮ್ ಲ್ಯಾಂಡರ್ ಚಿತ್ರ ಸೆರೆ ಹಿಡಿದ ನಾಸಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಸೆಪ್ಟೆಂಬರ್ 2023, 12:57 IST
Last Updated 6 ಸೆಪ್ಟೆಂಬರ್ 2023, 12:57 IST
<div class="paragraphs"><p>ಚಿತ್ರ ಕೃಪೆ: X/<a href="https://twitter.com/NASA_Marshall">@NASA_Marshall</a></p></div>

ಚಿತ್ರ ಕೃಪೆ: X/@NASA_Marshall

   

ಬೆಂಗಳೂರು: ಚಂದ್ರನ ಅಂಗಳದಲ್ಲಿ ಬೀಡು ಬಿಟ್ಟಿರುವ ಚಂದ್ರಯಾನ–3ರ ಲ್ಯಾಂಡರ್‌ ‘ವಿಕ್ರಮ್’ನ ಚಿತ್ರವನ್ನು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ‘ನಾಸಾ’ ಬಿಡುಗಡೆ ಮಾಡಿದೆ.

‘ನಮ್ಮ ಚಂದ್ರ ವೀಕ್ಷಣಾ ಕಕ್ಷೆಗಾಮಿ ನೌಕೆಯು (ಎಲ್‌ಆರ್‌ಒಸಿ) ‘ವಿಕ್ರಮ್‌‘ ಚಿತ್ರವನ್ನು ಸೆರೆ ಹಿಡಿದಿದೆ. ಲ್ಯಾಂಡರ್‌ ಇರುವ ಸುತ್ತ ದಟ್ಟ ನೆರಳು, ಅದರ ಸುತ್ತಲೂ ಪ್ರಕಾಶಮಾನ ಪ್ರಭಾವಲಯವೂ ಚಿತ್ರದಲ್ಲಿ ಕಾಣುತ್ತದೆ. ದಕ್ಷಿಣ ಧ್ರುವದಿಂದ 600 ಕಿ.ಮೀ ದೂರದಲ್ಲಿ ಲ್ಯಾಂಡರ್‌ ಇದೆ’ ಎಂದು ನಾಸಾ ‘ಎಕ್ಸ್‌’ನಲ್ಲಿ ಹೇಳಿದೆ.

ADVERTISEMENT

‘ಕಕ್ಷೆಗಾಮಿ ನೌಕೆಯು ಲ್ಯಾಂಡರ್‌ನ ಓರೆನೋಟವನ್ನು ಸೆರೆ ಹಿಡಿದಿದೆ. ‘ವಿಕ್ರಮ್’ ಲ್ಯಾಂಡಿಂಗ್ ಆದ ನಾಲ್ಕು ದಿನಗಳ ಬಳಿಕ ಈ ದೃಶ್ಯ ಸೆರೆ ಹಿಡಿಯಲಾಗಿದೆ. ಲ್ಯಾಂಡರ್‌ನ ಸುತ್ತ ಪ್ರಭಾವಲಯ ಗೋಚರಿಸಲು ಲ್ಯಾಂಡರ್‌ನ ರಾಕೆಟ್‌ ಉರಿದಾಗ ಹೊರಹೊಮ್ಮುವ ದಟ್ಟ ಬೆಳಕು ಮತ್ತು ಹೊಗೆಯಿಂದ ನೆಲದ ಮೇಲಿನ ಸಣ್ಣ ಧೂಳು ಮೇಲಕ್ಕೆಳುವುದು ಮುಖ್ಯ ಕಾರಣ’  ಎಂದು ತಿಳಿಸಿದೆ.

ತ್ರಿಡಿ ಚಿತ್ರ ಬಿಡುಗಡೆ:

ಅಲ್ಲದೇ, ರೋವರ್‌ ಪ್ರಜ್ಞಾನ್‌ನಲ್ಲಿರುವ ನಾವ್‌ಕ್ಯಾಮ್‌ ಸ್ಟಿರಿಯೊ ಇಮೇಜಸ್‌ ಉಪಕರಣದ ಮೂಲಕ ಲ್ಯಾಂಡರ್ ಮತ್ತು ಚಂದ್ರನ ನೆಲದ ಉಬ್ಬು–ತಗ್ಗುಗಳನ್ನು ತ್ರಿಡಿ ಚಿತ್ರವನ್ನು ಸೆರೆ ಹಿಡಿದಿದೆ. ಈ ಚಿತ್ರವನ್ನೂ ಇಸ್ರೊ ‘ಎಕ್ಸ್‌’ನಲ್ಲಿ ಹಂಚಿಕೊಂಡಿದೆ. ಎರಡು ಪ್ರತ್ಯೇಕ ಚಿತ್ರಗಳನ್ನು ಸೆರೆ ಹಿಡಿದು ಮೂರು ಚಾನೆಲ್‌ಗಳ ಮೂಲಕ ಚಿತ್ರಗಳನ್ನು ಜೋಡಿಸಲಾಗಿದೆ.

ಆದಿತ್ಯ ಎಲ್‌–1 ಕಕ್ಷೆ ಬದಲಾವಣೆ:

ಭೂಕಕ್ಷೆಯಲ್ಲಿರುವ ಸೂರ್ಯ ಅಧ್ಯಯನದ ಆದಿತ್ಯ ಎಲ್‌–1 ರ ಎರಡನೇ ಹಂತದ ಕಕ್ಷೆಯ ಬದಲಾವಣೆ ಮಂಗಳವಾರ ಯಶಸ್ವಿಯಾಗಿ ನಡೆದಿದೆ. ಈಗ 282 ಕಿ.ಮೀ x 40225 ಕಿ.ಮೀ ಕಕ್ಷೆಯಲ್ಲಿದೆ. ಮುಂದಿನ ಹಂತದ ಕಕ್ಷೆ ಬದಲಾವಣೆ ಸೆ.10 ಮಧ್ಯಾಹ್ನ 2.30 ಕ್ಕೆ ನಡೆಯಲಿದೆ ಎಂದು ಇಸ್ರೊ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.