
ಕೆಲವು ತಿಂಗಳ ಹಿಂದೆ ಆಂಧ್ರಪ್ರದೇಶದ ಕರ್ನೂಲ್‌ನಲ್ಲಿ ನಡೆದ ಬಸ್ ದುರಂತದಲ್ಲಿ 19 ಮಂದಿ ಅಸುನೀಗಿದ್ದರು. ಬೆಂಕಿಯ ಕೆನ್ನಾಲೆಗೆಗೆ ಸಿಕ್ಕಿ ಸುಟ್ಟು ಕರಕಲಾಗಿದ್ದ ಎಲ್ಲ ಮೃತದೇಹಗಳನ್ನು ಗುರುತಿಸಲು ಸಹಾಯಕವಾಗಿದ್ದು ಡಿಎನ್ಎ ಬೆರಳಚ್ಚು ತಂತ್ರಜ್ಞಾನ. ಹಾಗೆಯೇ ಅಹಮದಬಾದ್‌ನಲ್ಲಿ
ಸಂಭವಿಸಿದ ಏರ್ ಇಂಡಿಯಾ ವಿಮಾನದ ಅಪಘಾತದಲ್ಲಿ ಸತ್ತ 260 ವ್ಯಕ್ತಿಗಳ ಗುರುತು ಪತ್ತೆ ಹಚ್ಚುವಲ್ಲಿಯೂ ನೆರವಾಗಿದ್ದು ಡಿಎನ್ಎ ಬೆರಳಚ್ಚು ಪರೀಕ್ಷೆ. ಆಧುನಿಕ ವಿಧಿವಿಜ್ಞಾನದ ಪುರಾವೆಗಳ ಪ್ರಮುಖ ಸಾಧನ ಎಂದರೆ ಡಿಎನ್ಎ ಬೆರಳಚ್ಚು ತಂತ್ರಜ್ಞಾನ ಬಳಕೆ.
‘ಡಿಆಕ್ಸಿ–ರೈಬೋ ನ್ಯೂಕ್ಲಿಕ್ ಆ್ಯಸಿಡ್ ’ ಎಂಬುದರ ಸಂಕ್ಷಿಪ್ತ ರೂಪವೇ ಡಿಎನ್ಎ. ವಂಶವಾಹಿಯ ಮುಖ್ಯ ಭಾಗವಾಗಿರುವ ಡಿಎನ್ಎಯು ಏಣಿಯ ರೂಪದಲ್ಲಿರುತ್ತದೆ; ಜೀವಕೋಶದ ಕೇಂದ್ರಭಾಗವಾದ ನ್ಯೂಕ್ಲಿಯಸ್‌ನ ವರ್ಣತಂತು ಗಳಲ್ಲಿ ಇರುತ್ತದೆ. ವ್ಯಕ್ತಿ ಅಥವಾ ಜೀವಿಗಳ ವಂಶಾವಳಿಯ ಮಾಹಿತಿಗಳನ್ನು ಇದು ತಲೆಮಾರಿನಿಂದ ತಲೆಮಾರಿಗೆ ಕೊಂಡೊಯ್ಯುತ್ತದೆ.
‘ಡಿಎನ್ಎ ಬೆರಳಚ್ಚು’ ಅಥವಾ ‘ಡಿಎನ್ಎ ಫಿಂಗರ್ ಪ್ರಿಂಟಿಂಗ್’ ಎಂಬುದು ವ್ಯಕ್ತಿಯ ಡಿಎನ್ಎಯ ವಿಶಿಷ್ಟ ಮಾದರಿಯನ್ನು ಗುರುತಿಸುವ ತಂತ್ರಜ್ಞಾನ. ಇದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುವ ಡಿಎನ್ಎ ಭಾಗಗಳನ್ನು ವಿಶ್ಲೇಷಿಸುತ್ತದೆ. ಪ್ರತಿಯೊಬ್ಬರ ಡಿಎನ್ಎ ಒಳಗೆ ಜೀನ್‌ಗಳ ನಡುವೆ ಪುನರಾವರ್ತಿತ ಸರಣಿಗಳು ಇರುತ್ತವೆ. ಇದನ್ನು ‘ತಾಂಡೆಂ ಪುನರಾವರ್ತನೆಗಳು’ (Tandem repeats) ಎನ್ನುತ್ತಾರೆ.
ಈ ಪುನರಾವರ್ತನೆಯ ಅನುಕ್ರಮವು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಡಿಎನ್ಎ ಬೆರಳಚ್ಚು ತಂತ್ರಜ್ಞಾನವನ್ನು ಬಳಸಿಕೊಂಡು ಪ್ರತಿ ವ್ಯಕ್ತಿಗೆ ಸಂಬಂಧಿಸಿದ ಒಂದು ಅನನ್ಯ ಪುನರಾವರ್ತನೆಯ ಮಾದರಿಯನ್ನು ನಾವು ಕಂಡುಕೊಳ್ಳಬಹುದು. ಇದು ರಕ್ತಸಂಬಂಧಿಕರ ನಡುವಿನ ಡಿಎನ್ಎ ಅನುಕ್ರಮಗಳ ಜೊತೆ ಹೆಚ್ಚಿನ ಪ್ರಮಾಣದಲ್ಲಿ ಹೋಲುತ್ತವೆ. ಈ ಪರೀಕ್ಷೆ ಹಲವಾರು ಪ್ರಕರಣಗಳಲ್ಲಿ ವ್ಯಕ್ತಿಯ ಗುರುತನ್ನು ಖಚಿತಪಡಿಸಲು ಮತ್ತು ರಕ್ತಸಂಬಂಧಗಳನ್ನು ಸ್ಥಾಪಿಸಲು ಸಹಾಯ ಮಾಡುತ್ತದೆ.
ಡಿಎನ್ಎ ಬೆರಳಚ್ಚು ವಿಧಾನದಲ್ಲಿ ಅಪರಾಧ ನಡೆದ ಸ್ಥಳದಲ್ಲಿ ದೊರಕುವ ಸಾಕ್ಷ್ಯಾಧಾರ ಮತ್ತು ಮಾದರಿಗಳಾದ ರಕ್ತ, ಕೂದಲು, ಬೆವರಿನ ಜೀವಕೋಶಗಳು, ಚರ್ಮ, ಮಾಂಸ, ಜೊಲ್ಲು, ಮೂತ್ರ, ವೀರ್ಯಾಣು, ಮೂಳೆ ಇತ್ಯಾದಿಗಳ ಡಿಎನ್ಎ ಮಾದರಿಯನ್ನು ವಿಶ್ಲೇಷಿಸಿ, ಅವುಗಳನ್ನು ಆಪಾದಿತರ ಡಿಎನ್‌ಎಯೊಂದಿಗೆ ಹೋಲಿಕೆ ಮಾಡುವ ಮೂಲಕ ನಿಜವಾದ ಅಪರಾಧಿಗಳನ್ನು ಬಹಳ ಸುಲಭವಾಗಿ ಹಾಗೂ ಶೀಘ್ರವಾಗಿ ಪತ್ತೆಹಚ್ಚಬಹುದಾಗಿದೆ.
ಯಾವ ಯಾವ ಪ್ರಕರಣಗಳಲ್ಲಿವ್ಯಕ್ತಿಯ ಗುರುತನ್ನು ಪತ್ತೆಹಚ್ಚಲು ಡಿಎನ್ಎ ಬೆರಳಚ್ಚು ಪರೀಕ್ಷೆಯು ಸಹಾಯ ಮಾಡುವುದಲ್ಲದೆ, ಆಸ್ಪತ್ರೆಯಲ್ಲಿ ಮಕ್ಕಳನ್ನು ಬದಲಾಯಿಸಿರುವುದನ್ನು ಕಂಡುಹಿಡಿಯಲು, ಪಿತೃತ್ವ/ಮಾತೃತ್ವ ಪರೀಕ್ಷೆಗೆ ಕೂಡ ಈ ವಿಧಾನವನ್ನು ಬಳಸಲಾಗುತ್ತದೆ. ಅತ್ಯಾಚಾರ, ಅಪಹರಣ, ಕೊಲೆ, ದರೋಡೆ, ಮಕ್ಕಳ ಮೇಲಿನ ಲೈಂಗಿಕ ಕಿರುಕುಳದಂತಹ ಅಪರಾಧ ಪ್ರಕರಣಗಳಲ್ಲಿ ಅಪರಾಧಿಗಳನ್ನು ಕಂಡುಹಿಡಿಯಲು, ಸುಟ್ಟ ಅಥವಾ ಅರೆಬೆಂದ ಮನುಷ್ಯನ ಗುರುತಿಸುವಿಕೆ ಕಾರ್ಯದಲ್ಲಿ, ಪ್ರವಾಹ, ಭೂಕಂಪದಂತ ಪ್ರಕೃತಿ ವಿಕೋಪಗಳು ಘಟಿಸಿದ ಸಂದರ್ಭದಲ್ಲಿ, ಇಷ್ಟೇ ಅಲ್ಲದೆ, ವಾಹನ ಅಪಘಾತ, ರೈಲು ದುರಂತ, ಕಟ್ಟಡ ಕುಸಿತ ಮತ್ತು ಭಾರಿ ಅಗ್ನಿ ಅವಘಡದ ಸಂದರ್ಭದಲ್ಲಿ ಮಡಿದವರ ಶೀಘ್ರ ಗುರುತಿನ ಪತ್ತೆಗೆ ಈ ತಂತ್ರಜ್ಞಾನವು ಅತ್ಯಾವಶ್ಯಕವಾಗಿದೆ. ಪ್ರಾಣಿಗಳ ಬೇಟೆ ಮತ್ತು ಕಳ್ಳಸಾಗಣೆಯನ್ನು ಪತ್ತೆ ಹಚ್ಚುವ ಕಾರ್ಯದಲ್ಲೂ ನೊಂದ ಅಥವಾ ಸತ್ತ ಪ್ರಾಣಿಯ ಗುರುತನ್ನು ಹಿಡಿಯಲು ಈ ಪರೀಕ್ಷಾ ವಿಧಾನದಿಂದ ಸಾಧ್ಯವಾಗುತ್ತದೆ.
ಡಿಎನ್ಎ ಬೆರಳಚ್ಚು ವಿಧಾನದಲ್ಲಿ ವ್ಯಕ್ತಿಯ ರಕ್ತ, ಕೂದಲು, ಲಾಲರಸ, ಮಾಂಸ ಹಾಗೂ ಮೂಳೆಗಳ ಮಾದರಿಗಳನ್ನು ಮೊದಲು ಸಂಗ್ರಹಿಸಲಾಗುತ್ತದೆ. ನಂತರ ಈ ಮಾದರಿಗಳಿಂದ ‘ಡಿಎನ್ಎ’ಯನ್ನು ಹೊರತೆಗೆಯಲಾಗುತ್ತದೆ. ಹೀಗೆ ಹೊರ ತೆಗೆದ ಡಿಎನ್ಎಯನ್ನು ನಿರ್ದಿಷ್ಟ ಕಿಣ್ವಗಳನ್ನು ಬಳಸಿ ಸಣ್ಣ ತುಣುಕುಗಳಾಗಿ ವಿಭಜಿಸಲಾಗುತ್ತದೆ. ಈ ತುಣುಕುಗಳನ್ನು ‘ಜೆಲ್ ಎಲೆಕ್ಟ್ರೋಪೋರೋಸಿಸ್’ ಎಂಬ ತಂತ್ರವನ್ನು ಬಳಸಿ ಗಾತ್ರದ ಆಧಾರದ ಮೇಲೆ ಪ್ರತ್ಯೇಕಿಸಲಾಗುತ್ತದೆ. ಪ್ರತ್ಯೇಕಗೊಂಡ ಡಿಎನ್ಎ ತುಣುಕುಗಳನ್ನು ‘ಪಾಲಿಮರೇಶ್ ಚೈನ್ ರಿಯಾಕ್ಷನ್’ (ಪಿಸಿಆರ್) ತಂತ್ರಜ್ಞಾನವನ್ನು ಬಳಸಿ ವರ್ಧಿಸಲಾಗುತ್ತದೆ. ಇದರಿಂದಾಗಿ ಹೆಚ್ಚು ಡಿಎನ್ಎ ಸಿಗುತ್ತದೆ. ಮಾದರಿಗಳನ್ನು ಎಕ್ಸರೇ ಫಿಲಂ ಅಥವಾ ಇತರ ವಿಧಾನಗಳನ್ನು ಬಳಸಿ ದೃಶ್ಯೀಕರಿಸಲಾಗುತ್ತದೆ. ಈ ಮೂಲಕ ಡಿಎನ್‌ಎಯ ವಿಶಿಷ್ಟ ಮಾದರಿಯನ್ನು ಪಡೆಯಲಾಗುತ್ತದೆ. ಪಡೆದ ಮಾದರಿಯನ್ನು ರಕ್ತಸಂಬಂಧಿಕರ ಡಿಎನ್ಎ ಮಾದರಿಗಳ ಜೊತೆ ಹೋಲಿಸಿ ನೋಡಿ ವ್ಯಕ್ತಿಯ ಗುರುತನ್ನು ಸುಲಭವಾಗಿ ಪತ್ತೆ ಹಚ್ಚಬಹುದು. ಇಡೀ ಪ್ರಕ್ರಿಯೆಗೆ ಕೇವಲ ಕೆಲವೇ ದಿನಗಳು ಸಾಕಾಗುತ್ತವೆ.
ಇತ್ತೀಚಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆಯು (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್)ಸಹ ಡಿಎನ್ಎ ಬೆರಳಚ್ಚು ತಂತ್ರಜ್ಞಾನವನ್ನು ಪ್ರವೇಶಿಸಿ ಅಪರಾಧ ತನಿಖೆ ನಡೆಸುವಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ. ಇದು ಕ್ಲಿಷ್ಟಕರ ಪ್ರಕರಣಗಳನ್ನು ಭೇದಿಸಲು ತನಿಖಾಧಿಕಾರಿಗಳಿಗೆ ಸಾಕಷ್ಟು ನೆರವಾಗುತ್ತಿದೆ. ವಿಧಿವಿಜ್ಞಾನ ತಳಿಶಾಸ್ತ್ರದ ಡಿಎನ್ಎ ಬೆರಳಚ್ಚು ತಂತ್ರಜ್ಞಾನದಲ್ಲಿ ಕೃತಕ ಬುದ್ಧಿಮತ್ತೆಯು ಜೀನ್‌ಗಳ ನಡುವಿನ ತಾಂಡಂ ಪುನರಾವರ್ತನೆ ಗಳನ್ನು ಅತ್ಯಂತ ನಿಖರವಾಗಿ, ವೇಗವಾಗಿ ಹಾಗೂ ಸಂಕ್ಷಿಪ್ತವಾಗಿ ವಿಶ್ಲೇಷಿಸಿ ಸರಿಯಾದ ದಿಕ್ಕಿನಲ್ಲಿ ತನಿಖೆ ನಡೆಸಲು ಸಹಾಯ ಮಾಡುತ್ತಿದೆ ಎಂಬುದು ಗಮನಾರ್ಹ ಅಂಶ.
ಜ್ಞಾನಭಾರತಿ ಸಾಮೂಹಿಕ ಅತ್ಯಾಚಾರ ಪ್ರಕರಣ, ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ, ಮೈಸೂರಿನ ಸಾಮೂಹಿಕ ಅತ್ಯಾಚಾರ ಪ್ರಕರಣ ಸೇರಿದಂತೆ ಹಲವು ಅತಿ ಸೂಕ್ಷ್ಮ ಪ್ರಕರಣಗಳಲ್ಲಿ ಅಪರಾಧಿ
ಗಳನ್ನು ಕಂಡುಹಿಡಿಯುವಲ್ಲಿ ಡಿಎನ್ಎ ಬೆರಳಚ್ಚು ಪರೀಕ್ಷೆಯು ಪೊಲೀಸ್ ಮತ್ತು ನ್ಯಾಯಾಂಗ ಇಲಾಖೆಗಳಿಗೆ ಸಹಾಯ ಮಾಡಿದೆ. ರಾಜೀವ್ ಗಾಂಧಿ ಕೊಲೆ ಪ್ರಕರಣ, ಮಧುಮಿತ ಮತ್ತು ಬೀನ್ ಪ್ರಕರಣಗಳಲ್ಲೂ ಈ ತಂತ್ರಜ್ಞಾನದಿಂದಲೇ ಅಪರಾಧಿಗಳನ್ನು ಪತ್ತೆಹಚ್ಚಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.