ಈ ಹಾರುವ ಕಾರುಗಳು ಕಾರೂ ಅಲ್ಲ, ಹೆಲಿಕಾಪ್ಟರ್ ಕೂಡ ಅಲ್ಲ; ಇದು ರಸ್ತೆಯ ಮೇಲೂ ಚಲಿಸಬಲ್ಲದು, ಹೆಲಿಕಾಪ್ಟರ್ ತರಹವೇ ಹಾರುವ ಸಾಮರ್ಥ್ಯವನ್ನೂ ಹೊಂದಿದೆ. ಜತೆಗೆ ಎಲೆಕ್ಟ್ರಿಕ್ ಬ್ಯಾಟರಿಯಿಂದಲೂ ಓಡಿಸಬಹುದು. ಒಂದು ವರದಿಯ ಪ್ರಕಾರ 2035ರೊಳಗೆ ಜಗತ್ತಿನಲ್ಲಿ ಸುಮಾರು ಐದು ಲಕ್ಷ ಹಾರುವ ಕಾರುಗಳು ನಮ್ಮ ಸೂರಿನ ಮೇಲೆ ಹಾರಾಡುವ ಸಾಧ್ಯತೆಗಳಿವೆ
ಜಗತ್ತಿನ ಯಾವುದೇ ಪ್ರಮುಖ ನಗರವನ್ನು ತೆಗೆದುಕೊಳ್ಳಿ, ಟ್ರಾಫಿಕ್ ಜಾಮ್ ಅಲ್ಲಿಯ ಅತ್ಯಂತ ಪ್ರಮುಖ ಸಮಸ್ಯೆಗಳಲ್ಲೊಂದು. ‘ಟೋಮ್ ಟೋಮ್ ಟ್ರಾಫಿಕ್ ಇಂಡೆಕ್ಸ್’ ಪ್ರಕಾರ ಶೇ 76ರಷ್ಟು ನಗರಗಳಲ್ಲಿ ವರ್ಷದಿಂದ ವರ್ಷಕ್ಕೆ ಸಂಚಾರದ ವೇಗ ಕಡಿಮೆಯಾಗುತ್ತಿದೆ. ಒಂದು ವ್ಯಕ್ತಿಯ ಅತ್ಯಮೂಲ್ಯವಾದ 150 ತಾಸುಗಳು ಪ್ರತಿ ವರ್ಷ ಈ ಟ್ರಾಫಿಕ್ ದಟ್ಟಣೆಯಿಂದಾಗಿ ಪೋಲಾಗುತ್ತಿದೆಯೆಂದರೆ ನಂಬಲು ಸಾಧ್ಯವೆ? ಟ್ರಾಫಿಕ್ ಜಾಮ್‌ನಿಂದಾಗಿ ಜನರ ಸಮಯವು ಪೋಲಾಗುವುದು ಒಂದು ವಿಷಯವಾದರೆ, ಅಲ್ಲಿ ಸಿಕ್ಕಿಬಿದ್ದ ವಾಹನಗಳು ಹೊರಸೂಸುವ ವಿಷಕಾರಿ ಅನಿಲಗಳ ಮಟ್ಟದಲ್ಲಿ ಆಗುವ ಗಣನೀಯ ಹೆಚ್ಚಳವು (ಶೇ 20-30) ಇನ್ನೊಂದು ಗಮನಾರ್ಹ ಸಂಗತಿ. ನಮ್ಮ ರಾಜ್ಯದ ರಾಜಧಾನಿಯಂತೂ ಟ್ರಾಫಿಕ್ ಜಾಮ್‌ಗೆ ವಿಶ್ವದಲ್ಲೇ ಪ್ರಖ್ಯಾತ. ವಿಶ್ವದ ಅತಿ ಹೆಚ್ಚು ಟ್ರಾಫಿಕ್ ದಟ್ಟಣೆಯುಳ್ಳ ನಗರಗಳಲ್ಲಿ ಬೆಂಗಳೂರಿಗೆ ಮೇಲಿನ ಸ್ಥಾನವು ಪ್ರತಿಬಾರಿಯೂ ಸಿಗುತ್ತದೆ! ಈ ಸಮಸ್ಯೆಯನ್ನು ಕಡಿಮೆ ಮಾಡಲು ಬಗೆ ಬಗೆಯ ಪ್ರಯತ್ನಗಳು ನಡೆದಿದ್ದರೂ, ದಿನದಿಂದ ದಿನಕ್ಕೆ ಕ್ಯಾನ್ಸರ್‌ನಂತೆಯೇ ಇದೂ ಉಲ್ಬಣಗೊಳ್ಳುತ್ತಿದೆ. ಈ ಸಮಸ್ಯೆಗೆ ದೀರ್ಘಕಾಲದಲ್ಲಿ ಸಿಗಬಹುದಾದ ಒಂದು ಅತ್ಯುತ್ತಮ ಪರಿಹಾರವೆಂದರೆ ಹಾರುವ ಕಾರುಗಳು!
ಈ ಹಾರುವ ಕಾರುಗಳು ನರಸಿಂಹ ಅವತಾರದ ಹಾಗೆ; ಆ ಕಡೆ ಕಾರೂ ಅಲ್ಲ, ಹೆಲಿಕಾಪ್ಟರ್ ಕೂಡ ಅಲ್ಲ. ರಸ್ತೆಯ ಮೇಲೂ ಚಲಿಸಬಲ್ಲದು, ಹೆಲಿಕಾಪ್ಟರ್ ತರಹವೇ ಹಾರುವ ಸಾಮರ್ಥ್ಯವನ್ನೂ ಹೊಂದಿದೆ. ಎಲೆಕ್ಟ್ರಿಕ್ ಬ್ಯಾಟರಿಯ ಮೇಲೆಯೂ ಓಡಿಸಬಹುದು; ಕೆಲವೊಂದು ಫ್ಲೈಯಿಂಗ್ ಕಾರುಗಳಲ್ಲಿ ಪಾರಂಪರಿಕವಾದ ಎಂಜಿನನ್ನು ಅಳವಡಿಸಲಾಗಿರುತ್ತದೆ. ನಿಲುಗಡೆಗೆ ಕಾರುಗಳಷ್ಟು ಸಣ್ಣ ಜಾಗ ಸಾಕಾಗದು; ಹೆಲಿಕಾಪ್ಟರ್‌ನಷ್ಟು ವಿಶಾಲವಾದ ಬಯಲೂ ಬೇಡ. ಕಾರಿಗಿಂತ ದುಬಾರಿ, ಹೆಲಿಕಾಪ್ಟರ್‌ಗಿಂತ ಬಹಳ ಸೋವಿ. ಹಾರುವ ಕಾರುಗಳಲ್ಲಿ ಮುಖ್ಯವಾಗಿ ಮೂರು ಬಗೆಗಳಿವೆ.
VTOL: ‘VTOL’ ಎಂದರೆ ‘ವರ್ಟಿಕಲ್ ಟೇಕ್ ಆಫ್ ಆ್ಯಂಡ್ ಲ್ಯಾಂಡಿಂಗ್’. ಇದಕ್ಕೆ ರನ್‌ವೇ ಬೇಡ; ಹೆಲಿಕಾಪ್ಟರ್ ತರಹವೇ ನಿಂತಲ್ಲಿಂದಲ್ಲೇ ಹಾರಬಲ್ಲದು. ಜೊಬಿ ಏವಿಯೇಷನ್ ಕಂಪನಿಯ ಎಸ್-4 ಮಾದರಿಯು ಎಲೆಕ್ಟ್ರಿಕ್ ವಾಹನಗಳ ತಂತ್ರಜ್ಞಾನವನ್ನು ಒಳಗೊಂಡಿದ್ದು ಒಂದೇ ಒಂದು ಚಾರ್ಜ್‌ನಲ್ಲಿ ಸುಮಾರು 240 ಕಿ.ಮೀ. ಕ್ರಮಿಸಬಲ್ಲದು. ಸದ್ದಿಲ್ಲದ, ವಿಷಪೂರಿತ ಅನಿಲಗಳ ಸೂಸುವಿಕೆಯಿಲ್ಲದ
ಈ ಹಾರುವ ಕಾರಿಗೆ ಈಗಾಗಲೇ ದುಬೈ ನಗರವು ಲೀಲಾಜಾಲವಾಗಿ ಹಾರಾಡಲು ಒಪ್ಪಿಗೆ ನೀಡಿದೆ. ಲಿಲಿಯಮ್ ಜೆಟ್ ಎನ್ನುವುದು ಇನ್ನೊಂದು ಉದಾಹರಣೆ. ಈ ಹಾರುವ ಕಾರನ್ನು ಕೇವಲ 45 ನಿಮಿಷಗಳಲ್ಲಿ ಚಾರ್ಜ್ ಮಾಡಬಹುದು.
STOL: ‘STOL’ ಎಂದರೆ ಶಾರ್ಟ್ ಟೇಕ್ ಆಫ್ ಲ್ಯಾಂಡಿಂಗ್ ವಾಹನ. ಇದನ್ನು ‘ಆಕಾಶದ ಬಸ್ಸು’ ಅಥವಾ ‘ಸ್ಕೈ ಬಸ್’ ಎಂದೂ ಕರೆಯಲಾಗುತ್ತದೆ. ‘LAT ’ ಎನ್ನುವುದು ಭಾರತದ ಸ್ಟಾರ್ಟ್ ಅಪ್. ನಮ್ಮ ಬೆಂಗಳೂರಿನಲ್ಲಿಯೇ ಇದೆ. ಸಾಮಾನ್ಯ ವಾಹನವೊಂದರ ನಿಲುಗಡೆಗೆ ಬೇಕಾಗುವ ಜಾಗಕ್ಕಿಂತಲೂ ತುಸು ದೊಡ್ಡ ಜಾಗವಿದ್ದರೆ ಇದನ್ನು ಇಳಿಸಿ, ಮತ್ತೆ ಹಾರಿಸಬಹುದು. ದೂರ ದೂರದ ನಗರಕ್ಕೆ ಹೋಗಲು ವಿಮಾನವಾದರೆ, ಹತ್ತಿರವೇ ಇರುವ ಪಟ್ಟಣಗಳಿಗೆ ಈ STOL ಮೂಲಕ ಪ್ರಯಾಣ ಮಾಡಬಹುದು.
ಫಿಕ್ಸಡ್ ವಿಂಗ್ ಏರ್‌ಕ್ರಾಫ್ಟ್ ವಿದ್ ರೋಡ್ ಕ್ಯಾಪಾಬಿಲಿಟಿ: ಈ ಬಗೆಯಲ್ಲಿ ಹಾರುವ ಕಾರಿಗೆ ನಿರ್ದಿಷ್ಟವಾದ ಅಳತೆಯ ಪಂಕವಿದ್ದು, ಇದು ರಸ್ತೆಯ ಮೇಲೂ ಚಲಿಸಬಲ್ಲದು. ರಸ್ತೆಯ ಮೇಲೆ ಓಡುವಾಗ ಇದರ ರೆಕ್ಕೆಗಳು ಒಳಗೆ ಸೇರಿಕೊಳ್ಳುತ್ತವೆ. ಎಮ್‌ಐಟಿಯು ವಿನ್ಯಾಸಗೊಳಿಸಿರುವ ‘ಟೆರ್ರಾಫೆಂಗಿಯಾ ಟ್ರಾನ್ಷಿಷನ್’ ಎನ್ನುವ ವಾಹನದಲ್ಲಿನ ರೆಕ್ಕೆಗಳು ಕೇವಲ ಮೂವತ್ತು ಸೆಕೆಂಡ್‌ಗಳಲ್ಲಿ ಮುಚ್ಚಿಕೊಳ್ಳಬಹುದು, ಇಲ್ಲವೇ ತೆರೆದುಕೊಳ್ಳಬಹುದು. ಈ ಬಗೆಯ ಹಾರುವ ಕಾರುಗಳಲ್ಲಿ ಪಾರಂಪರಿಕವಾದ ಎಂಜಿನ್ ಅಳವಡಿಸಲಾಗಿರುತ್ತದೆ. ಉದಾಹರಣೆಗೆ, ಕ್ಲೇನ್ ವಿಷನ್ ಏರ್‌ಕಾರ್. ಇದರಲ್ಲಿ ಬಿಎಮ್‌ಡ್ಬ್ಯುವಿನ ಪೆಟ್ರೋಲ್ ಎಂಜಿನ್ ಇದೆ; ಇದು ಪ್ರತಿ ಗಂಟೆಗೆ 250 ಕಿ.ಮೀ. ವೇಗದಲ್ಲಿ ಸುಮಾರು ಒಂದು ಸಾವಿರ ಕಿ.ಮೀ. ದೂರವನ್ನು ಕ್ರಮಿಸಬಲ್ಲದು. ಬಹುಶಃ 2026ರಲ್ಲಿ ಇದು ಮಾರುಕಟ್ಟೆಗೆ ಬರಲಿದೆ. ಇದರ ಬೆಲೆ ಏನಿಲ್ಲವೆಂದರೂ ಹತ್ತು ಕೋಟಿಗಿಂತ ಕಡಿಮೆ ಇರಲಾರದು!
ಹಾರುವ ಕಾರುಗಳು ಕೈಗೆಟುಕುವ ದರದಲ್ಲಿ ಸಿಕ್ಕರೆ, ಹೆಚ್ಚು ಜನರು ಕೊಳ್ಳುವಂತಾದರೆ ಆಗ ನಗರಗಳಲ್ಲಿ ಟ್ರಾಫಿಕ್ ಜಾಮ್ ಕಡಿಮೆಯಾಗುವುದು. ಅಂದಾಜಿನ ಪ್ರಕಾರ ಶೇ 50-80ರಷ್ಟು ಸಮಯವನ್ನೂ ಉಳಿಸಬಹುದು.
ಈ ತಂತ್ರಜ್ಞಾನ ಹೊಸ ಆರ್ಥಿಕತೆಗೆ ಅವಕಾಶವನ್ನು ಕಲ್ಪಿಸಿಕೊಡಲಿದೆ.
ಎಲ್ಲದಕ್ಕೂ ಮಿಗಿಲಾಗಿ ಕಾರ್ಬನ್ ಡೈ–ಆಕ್ಸೈಡ್ ಹಾಗೂ ಇನ್ನಿತರ ವಿಷಪೂರಿತ ಅನಿಲಗಳ ಹೊರಸೂಸುವಿಕೆಯು ಶೇ 35-50ರಷ್ಟು ಕಡಿಮೆಯಾಗಲಿದೆ.
ಹಾರುವ ಕಾರುಗಳು ನಮ್ಮ ಮನುಕುಲಕ್ಕೆ ಹೊಸ ಬಗೆಯ ಜೀವನಶೈಲಿಯನ್ನು ಕಲಿಸಿಕೊಡಲಿದೆ.
ಆದರೆ ಹಾರುವ ಕಾರು ನಾವು ಅಂದುಕೊಂಡಷ್ಟು ಸುಲಭವಾಗಿ ಸಿಗಬಲ್ಲ ವರವಲ್ಲ. ಅದನ್ನು ತಂತ್ರಜ್ಞಾನದ ಸಂಕೀರ್ಣತೆಯ ಆಗಸದಿಂದ ಸುಲಭವಾದ ಬಳಕೆಯ ಧರೆಗೆ ತರಲು ಹಲವಾರು ಅಡತಡೆಗಳು ಎದುರಾಗಲಿವೆ:
ಇದು ದುಬಾರಿ ಉತ್ಪನ್ನ. ಅತಿ ಶ್ರೀಮಂತರೇ ಇದರ ಮೊದಲ ಬಳಕೆದಾರರಾಗಬಲ್ಲರು. ನಿರ್ವಹಣೆಯ ವೆಚ್ಚ ಸ್ವಯಂಚಾಲಿತ ಟ್ಯಾಕ್ಸಿ, ಹೆಲಿಕಾಪ್ಟರ್‌ಗಳಿಗಿಂತಲೂ ಕಡಿಮೆಯಾದರೂ, ಆರಂಭಿಕ ವೆಚ್ಚವು ಅಧಿಕವಾಗಿರುತ್ತದೆ.
ಕಾನೂನು, ನಿಯಂತ್ರಕ ಮಂಡಳಿಗಳ ಒಪ್ಪಿಗೆ, ಸರ್ಕಾರದ ಪರವಾನಿಗೆ ಇವೆಲ್ಲವೂ ಸಿಗಲು ಕೆಲವು ಕಾಲವೇ ಬೇಕಾದೀತು.
ನಮ್ಮಲ್ಲಿಯ ಅರ್ಧದಷ್ಟು ಜನರಿಗೆ ಈ ತಂತ್ರಜ್ಞಾನವು ಕಾರ್ಯರೂಪದಲ್ಲಿ ಯಶಸ್ವಿಯಾಗಬಲ್ಲದು ಎಂಬ ನಂಬಿಕೆಯೇ ಇಲ್ಲ.
ಜನರು ಸಂಶಯಾಸ್ಪದವಾಗಿ ನೋಡಿದಾಗಲೇ ತಂತ್ರಜ್ಞಾನವನ್ನು ಇನ್ನಷ್ಟು ಪ್ರಬುದ್ಧಗೊಳಿಸಲು ಸಾಧ್ಯ. ಒಂದು ವರದಿಯ ಪ್ರಕಾರ 2035ರೊಳಗೆ ಜಗತ್ತಿನಲ್ಲಿ ಐದು ಲಕ್ಷ ಹಾರುವ ಕಾರುಗಳು ನಮ್ಮ ಸೂರಿನ ಮೇಲೆ ಹಾರಾಡುವ ಸಾಧ್ಯತೆಗಳಿವೆ. ನೀವು ಹಾರಲು ತಯಾರಾಗಿದ್ದೀರಾ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.