ADVERTISEMENT

Humanoid Robot | ಹ್ಯೂಮನಾಯ್ಡ್‌ಗಳ ಬೆಲೆಯ ಜಗಳ!

ಕೃಷ್ಣ ಭಟ್ಟ
Published 30 ಜುಲೈ 2025, 0:30 IST
Last Updated 30 ಜುಲೈ 2025, 0:30 IST
   
ಮನುಷ್ಯ ತುಂಬಾ ಸುಲಭವಾಗಿ ಮಾಡಬಹುದಾದ ಕೆಲಸವೊಂದನ್ನು ಹ್ಯೂಮನಾಯ್ಡ್‌ಗಳಿಂದ ಮಾಡಿಸ ಬೇಕಾದರೆ ಅವಕ್ಕೆ ಅಪಾರ ಪ್ರಮಾಣದಲ್ಲಿ ಸೂಚನೆಗಳನ್ನು ಕಲಿಸಿಕೊಡ ಬೇಕಾಗುತ್ತದೆ. ಆದರೆ ಇವು ಫ್ಯಾಕ್ಟರಿಗಳಲ್ಲಿ ಮಾಡುವ ಸಣ್ಣ ಸಣ್ಣ ಪುನರಾವರ್ತಿತ ಕೆಲಸಗಳನ್ನು ಮಾಡಲು ಅತ್ಯಂತ ಶಕ್ತವಾಗಿವೆ.

ನೂರಿನ್ನೂರು ವರ್ಷಗಳ ಹಿಂದೆ ದೇಶಗಳು ಪರಕೀಯರ ಆಳ್ವಿಕೆಯಲ್ಲಿದ್ದಾಗ ಕೂಲಿಯಾಳುಗಳ ಮಾರುಕಟ್ಟೆ ಭಾರಿ ಪ್ರಚಲಿತದಲ್ಲಿತ್ತು.  ಹೆಚ್ಚು ದಕ್ಷ ಮತ್ತು ಕಡಿಮೆ ದರದ ಮಾನವ ಕೂಲಿಗಳನ್ನು ಹೊಂದಿರುವ ದೇಶವನ್ನು ವಶಪಡಿಸಿಕೊಳ್ಳಲು ಇಂಗ್ಲಿಷರು, ಪೋರ್ಚುಗೀಸರು ಮುಂತಾದವರಲ್ಲಿ ಪೈಪೋಟಿ ನಡೆಯುತ್ತಿತ್ತು. ಆದರೆ, ಈಗ ಸನ್ನಿವೇಶ ಸ್ವಲ್ಪ ಭಿನ್ನವಾಗಿದೆ.

ಮಾನವರಂತೆ ಕೆಲಸ ಮಾಡುವ, ಕಡಿಮೆ ದರದ ಹಾಗೂ ಹೆಚ್ಚು ದಕ್ಷವಾದ ಹ್ಯೂಮನಾಯ್ಡ್‌ಗಳನ್ನು ಎಷ್ಟು ಬೇಗ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತವೆಯೋ ಆ ದೇಶಗಳು ಮಾರುಕಟ್ಟೆಯನ್ನು ಆಳುತ್ತವೆ! ಈ ಸಮರ ಅದಾಗಲೇ ಶುರುವಾಗಿವೆ.

ಕೆಲವೇ ದಿನಗಳ ಹಿಂದೆ ಬರಿ ಆರು ಸಾವಿರ ಡಾಲರ್‌ ಅಂದರೆ, ಸುಮಾರು ₹ 5.5 ಲಕ್ಷಗೆ ಚೀನಾದ ‘ಯನಿಟ್ರೀ ರೋಬೊಟಿಕ್ಸ್‌’ ಒಂದು ಅತ್ಯಂತ ಸಶಕ್ತ ಹ್ಯೂಮನಾಯ್ಡ್ ಅನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಇದು ಇಡೀ ಹ್ಯೂಮನಾಯ್ಡ್ ಮಾರುಕಟ್ಟೆಯಲ್ಲಿ ಸಂಚಲನವನ್ನೇ ಸೃಷ್ಟಿಸಿದೆ. ಏಳು ವರ್ಷದ ಒಂದು ಮಗುವಿನಷ್ಟು ಎತ್ತರವಿರುವ ಈ ಹ್ಯೂಮನಾಯ್ಡ್ ಯುರೋಪಿಯನ್ ಹಾಗೂ ಅಮೆರಿಕದ ಸಂಸ್ಥೆಗಳು ತಯಾರಿಕೆ ಮಾಡುತ್ತಿರುವ ಹ್ಯೂಮನಾಯ್ಡ್‌ಗಳ ದರಕ್ಕೆ ಹೋಲಿಸಿದರೆ ಅತಿ ಕಡಿಮೆ ದರದಲ್ಲಿ ಸಿಗುತ್ತವೆ.

ADVERTISEMENT

ಈ ಯುನಿಟ್ರೀ ಸಂಸ್ಥೆ ಸ್ಥಾಪನೆಯಾಗಿದ್ದೇ ಒಂಬತ್ತು ವರ್ಷಗಳ ಹಿಂದೆ 2016ರಲ್ಲಿ. 2021ರಲ್ಲಿ ಮೊದಲ ಬಾರಿಗೆ ನಾಲ್ಕು ಕಾಲಿನ ರೋಬೊ ಅನ್ನು ಬಿಡುಗಡೆ ಮಾಡಿತ್ತು. ಅದು ಆಗಿನ ಟ್ರೆಂಡ್. ಆಗ ಅದಕ್ಕೆ ಮೂರು ಸಾವಿರ ಡಾಲರ್ ದರ ನಿಗದಿ ಮಾಡಿತ್ತು. ಆಗಲೂ ಇದೇ ರೀತಿಯ ನಾಲ್ಕು ಕಾಲಿನ ರೋಬೊಗಳನ್ನು ತಯಾರಿಸುತ್ತಿದ್ದ ಬೋಸ್ಟನ್ ಡೈನಾಮಿಕ್ಸ್‌ ಬಿಡುಗಡೆ ಮಾಡಿದ್ದ ರೋಬೊಗಳಿಗೆ ಹೋಲಿಸಿದರೆ ದರ ಅತಿ ಕಡಿಮೆ ಇತ್ತು. ನಂತರ ಯುನಿಟ್ರೀ ಸಂಸ್ಥೆ ಹ್ಯೂಮನಾಯ್ಡ್‌ಗಳ ಟ್ರೆಂಡ್‌ಗೆ ಹೊರಳಿಕೊಂಡಿತು.

ಇದಕ್ಕೆ ಪೂರಕವಾಗಿ ಚೀನಾ ಸರ್ಕಾರ ರೋಬೊಟಿಕ್ಸ್‌ನಲ್ಲಿ ಹೊಸ ನೀತಿ ತಂದು, 2025ರಲ್ಲಿ ನಾವು ದೊಡ್ಡ ಮಟ್ಟದಲ್ಲಿ ಹ್ಯೂಮನಾಯ್ಡ್‌ಗಳನ್ನು ಉತ್ಪಾದಿಸುವಂತಾಗಬೇಕು ಮತ್ತು 2027ರಲ್ಲಿ ನಾವು ಮಾರುಕಟ್ಟೆಯಲ್ಲಿ ಮುಂಚೂಣಿ ಸ್ಥಾನದಲ್ಲಿರಬೇಕು ಎಂದು ತಾಕೀತು ಮಾಡಿತು. ಅದೇ ಹೊತ್ತಿಗೆ ಯುನಿಟ್ರೀ ಸಂಸ್ಥೆ ‘ಎಚ್‌1’ ಎಂಬ ಹ್ಯೂಮನಾಯ್ಡ್‌ ಬಿಡುಗಡೆ ಮಾಡಿತು. ಆದರೆ, ಅದರ ಬೆಲೆ 90 ಸಾವಿರ ಡಾಲರ್ ಇತ್ತು. ಇದು ಸಾಮಾನ್ಯ ಜನರ ಕೈಗೆ ನಿಲುಕದಂತಾಯಿತು. ಇನ್ನೊಂದೇ ವರ್ಷದಲ್ಲಿ ಅಂದರೆ 2024ರಲ್ಲಿ ಅದೇ ಸಂಸ್ಥೆ ‘ಜಿ1’ ಎಂಬ ಇನ್ನಷ್ಟು ಸುಧಾರಿತ ಹ್ಯೂಮನಾಯ್ಡ್ ಬಿಡುಗಡೆ ಮಾಡಿತು. ಇದರ ಬೆಲೆ 16 ಸಾವಿರ ಡಾಲರ್ ಎಂದು ನಿಗದಿಯಾಯಿತು. ಕಳೆದ ವರ್ಷ ಇಡೀ ಹ್ಯೂಮನಾಯ್ಡ್ ಮಾರುಕಟ್ಟೆಯನ್ನೇ ಇದು ಅಲ್ಲಾಡಿಸಿತು. ಇಷ್ಟು ಕಡಿಮೆ ದರಕ್ಕೆ ಇಷ್ಟು ದಕ್ಷವಾದ ಹ್ಯೂಮನಾಯ್ಡ್ ತಯಾರಿಕೆ ಸಾಧ್ಯವಾಗಿದ್ದು, ಯುರೋಪಿಯನ್ ದೇಶಗಳು ಹಾಗೂ ಅಮೆರಿಕದ ರೋಬೊಟಿಕ್ಸ್ ಕಂಪನಿಗಳನ್ನು ಬೆಚ್ಚಿಬೀಳಿಸಿತು. ಬೆಲೆಯ ವಿಷಯದಲ್ಲಿ ಚೀನಾವನ್ನು ಹೊರತುಪಡಿಸಿ ಇತರ ದೇಶಗಳ ಕಂಪನಿಗಳು ಇನ್ನೂ ತುಂಬಾ ಹಿಂದಿವೆ.

ಕಳೆದ ವರ್ಷ ಯುನಿಟ್ರೀ ಜಿ1 ಬಿಡುಗಡೆ ಮಾಡಿದ ಮೇಲೆ ಚೀನಾದ್ದೇ ಇತರ ಕಂಪನಿಗಳೂ ಪೈಪೋಟಿಗೆ ಬಿದ್ದವು. ಎಂಜಿನ್ ಎಐ, ನಿಯೋಟಿಕ್ಸ್‌ ಮತ್ತು ಅಜಿಬೋಟ್‌ ಎಂಬ ಸಂಸ್ಥೆಗಳೆಲ್ಲ ಸ್ಫರ್ಧಾತ್ಮಕ ದರದಲ್ಲಿ ಮಾರುಕಟ್ಟೆಗೆ ಲಗ್ಗೆಯಿಟ್ಟವು. ಇದರ ಜೊತೆಗೆ, ಸಿಲಿಕಾನ್ ವ್ಯಾಲಿಯ ಕೆ-ಸ್ಕೇಲ್ ಲ್ಯಾಬ್ಸ್ ಕೂಡ ಸ್ವಲ್ಪ ಸ್ಫರ್ಧೆಗಿಳಿಯುವ ಸಾಹಸ ಮಾಡಿದೆ. ಆದರೆ, ಚೀನಾ ಕಂಪನಿಗಳ ಹ್ಯೂಮನಾಯ್ಡ್ ಹೋರಾಟದಲ್ಲಿ ಇತರ ದೇಶದ ಕಂಪನಿಗಳು ಆಘಾತ
ಕ್ಕೊಳಗಾಗಿ ನಿಂತಿವೆ.

ಒಂದು ವರ್ಷದಲ್ಲಿ 16 ಸಾವಿರ ಡಾಲರ್ ಇದ್ದ ಹ್ಯೂಮನಾಯ್ಡ್‌ಗಳ ದರ ಈಗ ಆರು ಸಾವಿರ ಡಾಲರ್‌ಗೆ ಕುಸಿದಿದೆ. ಯುನಿಟ್ರೀಯ ಈ ಹೊಸ ಮಾಡೆಲ್‌ ಆರ್‌1 ಬರಿ 25 ಕಿಲೋ ತೂಕದ್ದು ಮತ್ತು ಹಳೆಯ ಮಾದರಿಗೆ ಹೋಲಿಸಿದರೆ 10 ಕಿಲೋ ಕಡಿಮೆ ತೂಕ ಹೊಂದಿದೆ. ಏಳು ವರ್ಷದ ಮಗುವಿನಷ್ಟು ಎತ್ತರ ಮತ್ತು ತೂಕ ಇದೆ. ಸಂಸ್ಥೆ ಹೇಳಿಕೊಂಡ ಪ್ರಕಾರ ಮಲ್ಟಿಮೋಡಲ್‌ ಲಾರ್ಜ್ ಲ್ಯಾಂಗ್ವೇಜ್ ಮಾಡೆಲ್ ಅನ್ನು ಬಳಸಿಕೊಂಡು ಇದು ಜನರು ಏನು ಹೇಳುತ್ತಾರೆ ತನಗೆ ಏನು ಕಾಣಿಸುತ್ತದೆ ಎಂಬುದನ್ನು ಇದು ಅರ್ಥ ಮಾಡಿಕೊಳ್ಳುತ್ತದೆ. ಇದರಲ್ಲಿ ಬೈನಾಕ್ಯುಲರ್ ಕ್ಯಾಮೆರಾ ಸಿಸ್ಟಮ್ ಹಾಗೂ ಅಲ್ಟ್ರಾ ವೈಡ್ ಕೋನದಲ್ಲಿ ನೋಡಬಹುದಾದ ಸಾಮರ್ಥ್ಯವನ್ನು ಹೊಂದಿದೆ. ದೇಹದ ನಾಲ್ಕು ಕಡೆಗಳಲ್ಲಿ ಕ್ಯಾಮೆರಾ ಇದೆ. ಬೇರೆ ಬೇರೆ ದಿಕ್ಕಿನಿಂದ ಬರುವ ಧ್ವನಿಯನ್ನು ಸ್ಪಷ್ಟವಾಗಿ ಗುರುತಿಸಬಹುದು. ಇದು ಮಾತನಾಡುತ್ತದೆ. ಡ್ಯೂಯೆಲ್ ಸ್ಪೀಕರ್‌ಗಳ ಮೂಲಕ ಧ್ವನಿಯನ್ನು ಪ್ಲೇ ಮಾಡುತ್ತದೆ. ಇದರಲ್ಲಿ ಪ್ರತಿ ಕಾಲಿನಲ್ಲೂ ಆರು ಜಾಯಿಂಟ್‌ಗಳು ಮತ್ತು ಕೈಗಳಲ್ಲಿ ಐದು ಜಾಯಿಂಟ್‌ ಗಳಿರುವುದರಿಂದ ನಡೆಯುವುದು ಮತ್ತು ಕೈಗಳನ್ನು ಬಳಸಿ ಕೆಲಸ ಮಾಡುವುದಕ್ಕೆ ಸುಲಭವಾಗುತ್ತದೆ.

ಸಂಸ್ಥೆ ಹೇಳಿಕೊಂಡ ಪ್ರಕಾರ, ಒಂದು ಬಾರಿ ಚಾರ್ಜ್ ಮಾಡಿದರೆ ಏಳು ಗಂಟೆಗಳವರೆಗೆ ಇವು ಕೆಲಸ ಮಾಡುತ್ತವೆ. ರಿಮೋಟ್ ಕಂಟ್ರೋಲ್ ಹಾಗೂ ವಾಯ್ಸ್ ಕಮಾಂಡ್‌ಗಳನ್ನು ಬಳಸಿ ಈ ಹ್ಯೂಮನಾಯ್ಡ್‌ಗಳನ್ನು ನಿರ್ವಹಿಸಬಹುದು. ಆದರೆ, ಇವೆಲ್ಲ ನೋಡುವುದಕ್ಕೆ ಆಕರ್ಷಕವಾಗಿ ಕಂಡರೂ ಈ ಹ್ಯೂಮನಾಯ್ಡ್‌ಗಳಿಗೆ ಬಹಳ ಮಿತಿಗಳಿವೆ ಎಂದು ಎನ್‌ವಿಡಿಯಾ ಸಂಸ್ಥೆ ರೋಬೊಟಿಕ್ಸ್‌ ನಿರ್ದೇಶಕ ಜಿಮ್ ಫ್ಯಾನ್ ಹೇಳುತ್ತಾರೆ. ಸಂಸ್ಥೆಗಳು ಬಿಡುಗಡೆ ಮಾಡುವ ವಿಡಿಯೊಗಳಲ್ಲಿ ತಲೆಕೆಳಗಾಗಿ ನಿಲ್ಲುವುದು ಹಾಗೂ ನೆಗೆಯುವುದೆಲ್ಲ ಆಕರ್ಷಕವಾಗಿ ಕಂಡರೂ, ತಮ್ಮ ಸುತ್ತಲಿನ ಪರಿಸರವನ್ನು ಅರ್ಥ ಮಾಡಿಕೊಳ್ಳುವಲ್ಲಿ ಇವು ವಿಫಲವಾಗುತ್ತವೆ. ಇದನ್ನು ಸಾಮಾನ್ಯವಾಗಿ ‘ಮೊರಾವೆಕ್ಸ್ ಪ್ಯಾರಾಡಾಕ್ಸ್’ ಎಂದು ಕರೆಯಲಾಗುತ್ತದೆ. ಅಂದರೆ, ಸಾಮಾನ್ಯವಾಗಿ ಮನುಷ್ಯ ತುಂಬಾ ಸುಲಭವಾಗಿ ಮಾಡಬಹುದಾದ ಕೆಲಸವೊಂದನ್ನು ಹ್ಯೂಮನಾಯ್ಡ್ ಅಥವಾ ಎ.ಐ. ಬಳಿ ಮಾಡಿಸಬೇಕು ಎಂದರೆ ನಾವು ಅದಕ್ಕೆ ಅಪಾರ ಪ್ರಮಾಣದಲ್ಲಿ ಸೂಚನೆಗಳು ಮತ್ತು ಲೆಕ್ಕಾಚಾರಗಳನ್ನು ಕಲಿಸಿಕೊಡಬೇಕಿರುತ್ತದೆ.

ಈ ಹ್ಯೂಮನಾಯ್ಡ್‌ಗಳನ್ನು ನಮ್ಮ ಮನೆಯಲ್ಲಿ ತಂದಿಟ್ಟುಕೊಂಡು, ‘ಟೇಬಲ್ ಮೇಲೆ ಇಟ್ಟಿರುವ ಬಟ್ಟೆಯನ್ನು ಮಡಚಿಕೊಡು’ ಎಂದರೆ ಅಥವಾ ಮನೆಯಲ್ಲಿರುವ ‘ಡೈನಿಂಗ್ ಟೇಬಲ್‌ ಮತ್ತು ಕುರ್ಚಿಗಳನ್ನು ನೀಟಾಗಿ ಇರಿಸು’ ಎಂದು ಸೂಚನೆ ನೀಡಿದರೆ ಇವುಗಳಿಗೆ ತಲೆಬುಡ ಅರ್ಥವಾಗುವುದಿಲ್ಲ. ಯಾಕೆಂದರೆ, ಪ್ರತಿ ಬಟ್ಟೆಯನ್ನೂ ಮಡಚುವುದು ಹೇಗೆ ಎಂದು ನಾವು ಅದಕ್ಕೆ ಕಲಿಸಿಕೊಡಬೇಕು. ಒಂದು ಟವೆಲ್ ಅನ್ನು ಮಡಚುವ ರೀತಿಗೂ, ಪ್ಯಾಂಟನ್ನು ಮಡಚುವ ರೀತಿಗೂ, ಸೀರೆಯನ್ನು ಮಡಚುವ ರೀತಿಗೂ ವ್ಯತ್ಯಾಸವಿದೆ. ಈ ಪ್ರತಿಯೊಂದನ್ನೂ ಅವುಗಳಿಗೆ ಕಲಿಸಿಕೊಟ್ಟರೆ ಮಾತ್ರ ಅವು ಕೆಲಸ ಮಾಡುತ್ತವೆಯಷ್ಟೆ!

ಆದರೆ ಇವು ಫ್ಯಾಕ್ಟರಿಗಳಲ್ಲಿ ಮಾಡುವ ಸಣ್ಣ ಸಣ್ಣ ಪುನರಾವರ್ತಿತ ಕೆಲಸಗಳನ್ನು ಮಾಡಲು ಅತ್ಯಂತ ಶಕ್ತವಾಗಿವೆ. ಉದಾಹರಣೆಗೆ, ಪಿಸಿಬಿಗಳನ್ನು ಸೋಲ್ಡರ್ ಮಾಡುವುದರಂಥ ಕೆಲಸಗಳನ್ನು ಮನುಷ್ಯನಿಗಿಂತ ದಕ್ಷತೆಯಿಂದ ಮಾಡಬಲ್ಲವು.

ಬಹುಶಃ ಇನ್ನು ಒಂದೆರಡು ವರ್ಷಗಳಲ್ಲಿ ಈ ಹ್ಯೂಮನಾಯ್ಡ್‌ಗಳ ಬೆಲೆ ಇನ್ನೂ ಇಳಿದು ಮುನಷ್ಯನ ಒಂದು ವರ್ಷ ಮಾಸಿಕ ಸಂಬಳದ ದರಕ್ಕೆ ಸಿಗುವಂತಾದರೆ, ಕಂಪನಿಗಳಲ್ಲಿ ಇವುಗಳೇ ಬಳಕೆಯಲ್ಲಿರಬಹುದು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.