
ಶ್ರೀಹರಿಕೋಟಾ/ಆಂಧ್ರಪ್ರದೇಶ: ಹೊಸ ತಲೆಮಾರಿನ, ಸ್ವದೇಶಿ ನಿರ್ಮಿತ ‘ಬಾಹುಬಲಿ’ ರಾಕೆಟ್ ಮೂಲಕ ಅತ್ಯಂತ ಭಾರವಾದ ಉಪಗ್ರಹವನ್ನು ಕಕ್ಷೆಗೆ ಸೇರಿಸುವ ಮೂಲಕ ಇಸ್ರೊ ಚಾರಿತ್ರಿಕ ಸಾಧನೆ ಮಾಡಿದೆ.
ಶ್ರೀಹರಿಕೋಟಾದ ಬಾಹ್ಯಾಕಾಶ ಕೇಂದ್ರದಿಂದ ಭಾನುವಾರ ಸಂಜೆ 5.26ಕ್ಕೆ 4,410 ಕೆ.ಜಿ ತೂಕದ ಸಂವಹನ ಉಪಗ್ರಹವನ್ನು (ಸಿಎಂಎಸ್–03) ಹೊತ್ತು ನಭಕ್ಕೆ ಚಿಮ್ಮಿದ ಲಾಂಚ್ ವೆಹಿಕಲ್ ಮಾರ್ಕ್–3 (ಎಲ್‌ವಿಎಂ3-ಎಂ5) ‘ಬಾಹುಬಲಿ’ಯು ಆತ್ಮನಿರ್ಭರ ಭಾರತದ ಅಭಿಮಾನದ ಕ್ಷಣಗಳಿಗೆ ಸಾಕ್ಷಿಯಾಯಿತು.
ದೇಶದ ಬಾಹ್ಯಾಕಾಶ ಕೇಂದ್ರದಿಂದ ಮೊದಲ ಬಾರಿಗೆ ಉಡ್ಡಯನ ಮಾಡಲಾಗುತ್ತಿರುವ ಭಾರಿ ತೂಕದ ಉಪಗ್ರಹ ಎಂಬ ಹೆಗ್ಗಳಿಕೆಗೆ ‘ಸಿಎಂಎಸ್–03’ ಪಾತ್ರವಾಯಿತು. ಇದರ ಉಡ್ಡಯನಕ್ಕೆ ಬಳಸಿದ ಭಾರಿ ಗಾತ್ರದ ರಾಕೆಟ್ (ಎಲ್‌ವಿಎಂ3-ಎಂ5) ಕೂಡ ತನ್ನ ಹೆಸರಿನ (ಬಾಹುಬಲಿ) ಹಿರಿಮೆಯನ್ನು ಹೆಚ್ಚಿಸಿತು.
ಉಪಗ್ರಹವನ್ನು ಭೂಹೊಂದಾಣಿಕೆ ವರ್ಗಾವಣೆ ಕಕ್ಷೆಗೆ (ಜಿಟಿಒ) ಸೇರಿಸಲಾಗಿದ್ದು, ಇದು 2013ರಲ್ಲಿ ಉಡಾವಣೆ ಮಾಡಿದ ‘ಜಿಎಸ್‌ಎಟಿ–7’ ಸರಣಿಯ ಉಪಗ್ರಹಕ್ಕೆ ಬದಲಿಯಾಗಿ, ಮುಂದಿನ 15 ವರ್ಷಗಳವರೆಗೆ ಕಾರ್ಯನಿರ್ವಹಿಸಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಹೇಳಿದೆ.
ಸಾಗರಯಾನಕ್ಕೆ ಹಾಗೂ ಭೂಮೇಲ್ಮೈನಲ್ಲಿ ನಡೆಯುವ ಚಟುವಟಿಕೆಗಳಿಗೆ ಅಗತ್ಯವಿರುವ ಸಂವಹನ ಸೇವೆಯನ್ನು ಈ ಉಪಗ್ರಹದ ಮೂಲಕ ನೀಡಲಾಗುತ್ತದೆ.
ಬಹುಬ್ಯಾಂಡ್ ಸಂವಹನ ‘ಸಿಎಂಎಸ್–03’ನಿಂದ ಸಾಧ್ಯವಾಗಲಿದೆ. ಎಲ್‌ವಿಎಂ–3 ಮೂಲಕ ನಡೆದಿರುವ ಉಡಾವಣೆಗಳು ಶೇ 100ರಷ್ಟು ಯಶಸ್ಸಿನ ದರ ಹೊಂದಿವೆ. ಚಂದ್ರಯಾನ– 3ರ (3,841.4 ಕೆ.ಜಿ) ಉಡಾವಣೆ ನಂತರ ಈ ರಾಕೆಟ್, ಮತ್ತೊಂದು ಮೈಲಿಗಲ್ಲು ನಿರ್ಮಿಸಿದೆ ಎಂದು ಇಸ್ರೊ ಅಧ್ಯಕ್ಷ ವಿ. ನಾರಾಯಣನ್ ಹೇಳಿದ್ದಾರೆ.
4,410 ಕೆ.ಜಿ
ಉಪಗ್ರಹದ ತೂಕ
43.5 ಮೀಟರ್
ಉಡ್ಡಯನಕ್ಕೆ ಬಳಸಿದ ರಾಕೆಟ್‌ನ ಎತ್ತರ
15 ವರ್ಷ
ಕಾರ್ಯನಿರ್ವಹಣೆಯ ಅವಧಿ
ಸಂವಹನ ಉಪಗ್ರಹವನ್ನು ‘ಬಾಹುಬಲಿ’ ನಿಖರವಾಗಿ ಕಕ್ಷೆಗೆ ಸೇರಿಸಿದೆ. ಇದು ಆತ್ಮನಿರ್ಭರ ಭಾರತಕ್ಕೆ ಮತ್ತೊಂದು ಹೆಮ್ಮೆಯ ಗರಿ.–ವಿ. ನಾರಾಯಣನ್ ಇಸ್ರೊ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.