ADVERTISEMENT

ಇಂದು ಇಸ್ರೊದಿಂದ ಐರೋಪ್ಯ ಬಾಹ್ಯಾಕಾಶ ಸಂಸ್ಥೆಯ ಭಾಗವಾದ 'ಪ್ರೋಬಾ –3' ಉಡ್ಡಯನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಡಿಸೆಂಬರ್ 2024, 2:02 IST
Last Updated 5 ಡಿಸೆಂಬರ್ 2024, 2:02 IST
<div class="paragraphs"><p>ಪ್ರೋಬಾ –3</p></div>

ಪ್ರೋಬಾ –3

   

(ಚಿತ್ರ ಕೃಪೆ: X/@isro)

ಶ್ರೀಹರಿಕೋಟಾ: ಇಸ್ರೊದ ವಾಣಿಜ್ಯ ಕಾರ್ಯಾಚರಣೆಯಡಿ, ಐರೋಪ್ಯ ಬಾಹ್ಯಾಕಾಶ ಸಂಸ್ಥೆಯ (ಇಎಸ್‌ಎ) ಭಾಗವಾದ ‘ಪ್ರೋಬಾ-3’ ಯೋಜನೆಯ ಎರಡು ಬಾಹ್ಯಾಕಾಶ ನೌಕೆಗಳ ಉಡಾವಣೆ ಇಂದು (ಗುರುವಾರ) ಸಂಜೆ ನಡೆಯಲಿದೆ.

ADVERTISEMENT

ಈ ಕುರಿತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ನೀಡಿದೆ.

ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಂದು ಸಂಜೆ 4.4ಕ್ಕೆ ಉಪಗ್ರಹಗಳನ್ನು ಇಸ್ರೊದ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್‌ನಿಂದ (ಪಿಎಸ್‌ಎಲ್‌ವಿ) ಉಡ್ಡಯನ ಮಾಡಲಾಗುವುದು. ಇದೊಂದು ಸಾರ್ವತ್ರಿಕ ಸಾಧನೆ ಎಂದು ಬಣ್ಣಿಸಲಾಗಿದೆ.

ಬಾಹ್ಯಾಕಾಶ ನೌಕೆಗಳ ಉಡಾವಣೆಗೆ ಪೂರ್ವ ಸಿದ್ಧತೆ ಆರಂಭಗೊಂಡಿದೆ. ಈ ಮೊದಲು ಬುಧವಾರ ನಿಗದಿಯಾಗಿದ್ದ ಉಡ್ಡಯನ ಗುರುವಾರಕ್ಕೆ ಮುಂದೂಡಲಾಗಿತ್ತು.

ಸಮಸ್ಯೆ ಕಂಡುಬಂದಿದ್ದರಿಂದ ಐರೋಪ್ಯ ಬಾಹ್ಯಾಕಾಶ ಸಂಸ್ಥೆಯ ಮನವಿಯಂತೆ ಉಡ್ಡಯನ ಮರುನಿಗದಿಪಡಿಸಲಾಯಿತು ಎಂದು ಇಸ್ರೊ ತಿಳಿಸಿದೆ.

ಯೋಜನೆಯ ಉದ್ದೇಶ...

ಪ್ರಪಂಚದ ಮೊದಲ ಉಪಕ್ರಮವೆಂದು ಹೆಸರಿಸಲಾದ ‘ಪ್ರೋಬಾ-3’ ಮಿಷನ್‌ನಲ್ಲಿ ‘ಕರೋನಾಗ್ರಾಫ್’ (310 ಕೆ.ಜಿ) ಮತ್ತು ‘ಆಕಲ್ಟರ್’ (240 ಕೆ.ಜಿ. ತೂಕ) ಎಂಬ ಎರಡು ಬಾಹ್ಯಾಕಾಶ ನೌಕೆಗಳನ್ನು ಒಟ್ಟಿಗೆ ಉಡಾವಣೆ ಮಾಡಲಾಗುತ್ತಿದೆ. ಇವು ಆರಂಭಿಕ ಕಕ್ಷೆಯನ್ನು ತಲುಪಿದ ನಂತರ, ಎರಡೂ ಉಪಗ್ರಹಗಳು 150 ಮೀಟರ್ ಅಂತರದಲ್ಲಿ (ಒಂದು ದೊಡ್ಡ ಉಪಗ್ರಹ ರಚನೆಯಾಗಿ) ಒಟ್ಟಿಗೆ ಹಾರುತ್ತವೆ.

ಈ ಉಪಗ್ರಹಗಳ ಸಹಾಯದಿಂದ ಕೃತಕ ಸೂರ್ಯಗ್ರಹಣ ಸೃಷ್ಟಿಸಿ, ಸೂರ್ಯನ ಕರೋನಾ ಅಧ್ಯಯನ ಮಾಡಲು ಬಾಹ್ಯಾಕಾಶ ವಿಜ್ಞಾನಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಬಾಹ್ಯಾಕಾಶ ನೌಕೆಗಳ ನಿಖರ ಚಲನೆ ಮತ್ತು ಸೂರ್ಯನ ಹೊರಗಿನ ವಾತಾವರಣ ಅಧ್ಯಯನ ಮಾಡುವುದು ಈ ಕಾರ್ಯಾಚರಣೆಯ ಪ್ರಮುಖ ಉದ್ದೇಶವಾಗಿದೆ ಎಂದು ಇಎಸ್‌ಎ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.