ಗ್ರಹಗಳ ಸಾಲುಗೂಡುವಿಕೆ: ಚಿತ್ರ ಕೃಪೆ: ಸ್ಟಾರ್ ವಾಕ್ ( ಎಕ್ಸ್ ಪೋಸ್ಟ್)
ಬೆಂಗಳೂರು: ಇಂದು (ಶುಕ್ರವಾರ ಫೆ.28) ಗ್ರಹಗಳ ಸಾಲುಗೂಡುವಿಕೆಯ ಅಪರೂಪದ ಖಗೋಳ ವಿದ್ಯಮಾನಕ್ಕೆ ಈ ಜಗತ್ತು ಸಾಕ್ಷಿಯಾಗಲಿದೆ.
ಬುಧ, ಶುಕ್ರ, ಮಂಗಳ, ಗುರು, ಶನಿ, ಯುರೇನಸ್ ಮತ್ತು ನೆಪ್ಚೂನ್ ಗ್ರಹಗಳು ಒಟ್ಟಾಗಿ ಕಾಣಿಸಿಕೊಳ್ಳಲಿವೆ. ಈ ಏಳು ಗ್ರಹಗಳು ಇಂದು ರಾತ್ರಿ ಸೌರ ಮಂಡಲದಲ್ಲಿ ‘ಪಥಸಂಚಲನ’ ನಡೆಸಲಿವೆ.
ಗ್ರಹಗಳು ಕಾಣುವುದೆಲ್ಲಿ?
ಭೂಮಿ ಸೇರಿದಂತೆ ಎಲ್ಲ ಗ್ರಹಗಳು ಇದೇ ಸಮತಲದಲ್ಲಿ ಸೂರ್ಯನ ಸುತ್ತ ತಿರುಗುವುದರಿಂದ ಎಲ್ಲ ಗ್ರಹಗಳು ರಾತ್ರಿ ಆಕಾಶದಲ್ಲಿ ಕಾಣಲಿವೆ. ಏಕಕಾಲದಲ್ಲಿ ಸೂರ್ಯನಿಗೆ ಹತ್ತಿರವಾಗಿ ಒಂದು ಬದಿಗೆ ಬಂದಾಗ ಗ್ರಹಗಳ ಸಾಲು ಕಾಣುತ್ತದೆ. ಈ ಗ್ರಹಗಳು ಸರಳ ರೇಖೆಯಲ್ಲಿ ಇರುವುದಿಲ್ಲ. ವೈಜ್ಞಾನಿಕವಾಗಿ ‘ಇಕ್ಲಿಪ್ಟಿಕ್’ ಎಂದು ಕರೆಯಲಾಗುವ ಕಲ್ಪನಾ ಪಥ ಅಥವಾ ಕಕ್ಷೆಯಲ್ಲಿ ಕಾಣಿಸಿಕೊಳ್ಳುತ್ತವೆ.
ಯಾವಾಗ ವೀಕ್ಷಿಸಬಹುದು?
l ಶುಕ್ರವಾರ ಸಂಜೆ ಸೂರ್ಯಾಸ್ತ ಆದ ನಂತರ ಈ ಅಪರೂಪದ ವಿದ್ಯಮಾನವನ್ನು ವೀಕ್ಷಿಸಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ. ಭಾರತದಲ್ಲೂ ಎಲ್ಲ ಕಡೆಗಳಲ್ಲಿ ಈ ಖಗೋಳ ಕೌತುಕವನ್ನು ವೀಕ್ಷಿಸಬಹುದು. ಆಕಾಶ ಶುಭ್ರವಾಗಿರಬೇಕಷ್ಟೆ
l ಬುಧ, ಶುಕ್ರ, ಮಂಗಳ, ಗುರು, ಶನಿ ಗ್ರಹಗಳು ಬರಿ ಕಣ್ಣಿಗೆ ಗೋಚರಿಸಲಿವೆ ಯುರೇನಸ್ ಮತ್ತು ನೆಪ್ಚೂನ್ ಗ್ರಹಗಳನ್ನು ವೀಕ್ಷಿಸಲು ಬೈನಾಕ್ಯುಲರ್ ಅಥವಾ ದೂರದರ್ಶಕದ ಸಹಾಯ ಬೇಕು
l ಶುಕ್ರ ಮತ್ತು ಗುರು ಗ್ರಹವು ಹೆಚ್ಚು ಪ್ರಕಾಶಮಾನವಾಗಿರುವುದರಿಂದ ಗುರುತಿಸುವುದು ಸುಲಭ. ಮಂಗಳ ಗ್ರಹ ಕೊಂಚ ನಸುಗೆಂಪು ಬಣ್ಣದಲ್ಲಿ ಕಾಣಲಿದೆ
l ಬುಧ ಮತ್ತು ಶನಿ ಗ್ರಹಗಳು ಸೂರ್ಯಾಸ್ತ ಆದ ಸ್ವಲ್ಪ ಹೊತ್ತಿನಲ್ಲೇ ದಿಗಂತದಿಂದ ಕೆಳಗೆ ಜಾರುವುದರಿಂದ ಇವುಗಳ ವೀಕ್ಷಣೆಗೆಗೆ ಕೆಲವು ನಿಮಿಷಗಳ ಅವಕಾಶವಷ್ಟೇ ಸಿಗಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಎಲ್ಲಿಯವರೆಗೂ ಈ ಖಗೋಳ ಅಚ್ಚರಿ ಕಾಣಲಿದೆ?
ಮಾರ್ಚ್ 1ರಿಂದ ಶನಿ ಗ್ರಹವು ಈ ಗ್ರಹಗಳ ಸಾಲಿನಿಂದ ಮರೆಯಾಗಲಿದೆ. ಇದರೊಂದಿಗೆ ಏಳು ಗ್ರಹಗಳ ಅಪರೂಪದ ಪಥಸಂಚಲನಕ್ಕೆ ತೆರೆ ಬೀಳಲಿದೆ.
ಮತ್ತೆ ಈ ವಿದ್ಯಮಾನ ಯಾವಾಗ ಕಾಣಲಿದೆ?
ಮತ್ತೊಮ್ಮೆ ಇಂತಹ ಅಪರೂಪದ ವಿದ್ಯಮಾನಕ್ಕೆ ನಾವು ಸಾಕ್ಷಿಯಾಗಲು ಕನಿಷ್ಠ 15 ವರ್ಷ ಕಾಯಬೇಕು. 2040ನೇ ವರ್ಷದಲ್ಲಿ ಈ ವಿದ್ಯಮಾನ ಗೋಚರಿಸಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.