ಪ್ರಾತಿನಿಧಿಕ ಚಿತ್ರ
ಬೆಂಗಳೂರು: ಸಂಗಾತಿ ಗರ್ಭ ಧರಿಸದಂತೆ ಸುರಕ್ಷಿತ ಲೈಂಗಿಕತೆ ನಡೆಸಲು ಕಾಂಡೋಮ್ ಮತ್ತು ಸಂತಾನ ಹರಣ ಶಸ್ತ್ರಚಿಕಿತ್ಸೆಗಳಿಗಷ್ಟೇ ಮೊರೆ ಹೋಗಬೇಕಾಗಿದ್ದ ಪುರುಷರಿಗೆ ಅಡ್ಡ ಪರಿಣಾಮಗಳಿಲ್ಲದ ಮಾತ್ರೆಗಳು ಲಭ್ಯವಾಗಲಿವೆ. ಇದರ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿದೆ ಎಂದು ವರದಿಯಾಗಿದೆ.
ಪುರುಷರಿಗೆ ಈಗಿರುವ ಪದ್ಧತಿಗಳಿಗಿಂತ ಈ ಮಾತ್ರೆಯು ಸುರಕ್ಷಿತ ಹಾಗೂ ಹಾರ್ಮೋನುಗಳನ್ನು ಬದಲಿಸದಂತೆ ಕೆಲಸ ಮಾಡುವ ಪರ್ಯಾಯ ಮಾರ್ಗವಾಗಿದೆ. ಮನುಷ್ಯರ ಮೇಲೆ ನಡೆಸಲಾದ ಈ ಮಾತ್ರೆಯ ಮೊದಲ ಹಂತದ ಕ್ಲಿನಿಕಲ್ ಟ್ರಯಲ್ಸ್ ಕಳೆದ ವಾರ ಯಶಸ್ವಿಯಾಗಿದೆ ಎಂದು ವಿವಿಧ ವಿಜ್ಞಾನ ಸಂಬಂಧಿತ ನಿಯತಕಾಲಿಕೆಗಳಲ್ಲಿ ಕಮ್ಯುನಿಕೇಷನ್ಸ್ ಮೆಡಿಸಿನ್ ಲೇಖನ ಪ್ರಕಟಿಸಿದೆ.
YCT-529 ಎಂದು ಕರೆಯಲಾಗುವ ಈ ಮಾತ್ರೆಯು ದೇಹದಲ್ಲಿನ ವಿಟಮಿನ್ ಎ ಮೆಟಬೊಲೈಟ್ ಅನ್ನು ವೃಷಣಗಳಲ್ಲೇ ತಡೆ ಹಿಡಿಯುತ್ತದೆ. ಇದು ಹಾರ್ಮೋನುಗಳ ಮಟ್ಟವನ್ನು ಬದಲಿಸದೇ ವೀರ್ಯ ಉತ್ಪಾದನೆಯನ್ನು ತಡೆಯುತ್ತದೆ ಎಂದು ಈ ಅಧ್ಯಯನ ಹೇಳಿದೆ.
ಮೊದಲ ಹಂತದ ಕ್ಲಿನಿಕಲ್ ಟ್ರಯಲ್‌ನಲ್ಲಿ 16 ಆರೋಗ್ಯವಂತ ಪುರುಷರ ಮೇಲೆ ಪ್ರಯೋಗಿಸಲಾಯಿತು. ಇವರೆಲ್ಲರೂ ಸಂತಾನ ಹರಣ ಶಸ್ತ್ರಚಿಕಿತ್ಸೆಗೆ ಒಳಗಾದವರಾಗಿದ್ದರು. ಈ ಗರ್ಭನಿರೋಧಕ ಗುಳಿಗೆ ಸೇವನೆಯ ನಂತರ ಇವರ ದೇಹದಲ್ಲಿ ಗಂಭೀರ ಸ್ವರೂಪದ ಅಡ್ಡ ಪರಿಣಾಮಗಳು ಗೋಚರಿಸಿಲ್ಲ ಎಂದು ತಜ್ಞರು ಹೇಳಿದ್ದಾರೆ.
ಪರೀಕ್ಷಾ ಹಂತದಲ್ಲಿ ಪ್ರತಿಯೊಬ್ಬರಿಗೂ 180 ಮಿ.ಗ್ರಾಂ.ನಷ್ಟು YCT-529 ನೀಡಲಾಗಿತ್ತು. ಇದರಲ್ಲಿ 28 ಹಾಗೂ 90 ದಿನಗಳ ಎರಡು ಅವಧಿಗೆ ನೀಡಲಾಯಿತು. ಮುಂದಿನ ಹಂತದಲ್ಲಿ ನಿಖರವಾದ ಡೋಸನ್ನು ನಿರ್ಧರಿಸಲಾಗುತ್ತದೆ. ಆದರೆ ಪರೀಕ್ಷೆಯಲ್ಲಿ ಎಷ್ಟು ಪ್ರಮಾಣದಲ್ಲಿ ವೀರ್ಯವನ್ನು ಇದು ತಡೆಯುತ್ತದೆ ಹಾಗೂ ಗರ್ಭಧಾರಣೆ ತಡೆಯುವಲ್ಲಿ ಸಂಪೂರ್ಣ ಯಶಸ್ವಿಯೇ ಎಂಬುದರ ಕುರಿತು ಪರೀಕ್ಷೆ ನಡೆಸಲಾಗಿಲ್ಲ ಎಂದು ಪರೀಕ್ಷಾರ್ಥ ಪ್ರಯೋಗ ನಡೆಸುತ್ತಿರುವ ‘ಯುವರ್ ಚಾಯ್ಸ್ ಥೆರಪಿಟಿಕ್’ ಸಂಸ್ಥೆ ಹೇಳಿದೆ.
ಈ ಕುರಿತು ಸೈಂಟಿಫಿಕ್ ಅಮೆರಿಕನ್ ನಿಯತಕಾಲಿಕೆಗೆ ಪ್ರತಿಕ್ರಿಯಿಸಿರುವ ವಾಷಿಂಗ್ಟನ್ ಸ್ಕೂಲ್ ಆಫ್ ಮೆಡಿಸಿನ್ ವಿಶ್ವವಿದ್ಯಾಲಯದ ಎಂಡೊಕ್ರೊನಾಲಜಿಸ್ಟ್ ಡಾ. ಸ್ಟೀಫನ್ ಪೇಜ್, ‘ಈ ಪ್ರಯೋಗದಲ್ಲಿ ಸುರಕ್ಷತೆಯೇ ಮಾನದಂಡ. ಪುರುಷರಿಗೆ ಪರಿಣಾಮಕಾರಿಯಾದ ಗರ್ಭ ನಿರೋಧಕ ಪದ್ಧತಿಗಳು ಅತ್ಯಂತ ಅಗತ್ಯವಾಗಿದೆ’ ಎಂದಿದ್ದಾರೆ.
ಗುಳಿಗೆ ಸೇವನೆ ನಿಲ್ಲಿಸಿದ 4ರಿಂದ 6 ವಾರಗಳ ನಂತರ ಇಲಿಗಳಲ್ಲಿ ಹಾಗೂ ಮನುಷ್ಯರಲ್ಲದ ಸಸ್ತನಿಗಳಲ್ಲಿ 10ರಿಂದ 15 ವಾರಗಳಲ್ಲಿ ಸಂತಾನ ಶಕ್ತಿ ಮರುಸ್ಥಾಪನೆಯಾಗಿದೆ ಎಂದು ಪ್ರಯೋಗದಲ್ಲಿ ದಾಖಲಾಗಿದೆ.
ಈ ಗುಳಿಗೆಯ ಮೂಲ ವಸ್ತು ಅಭಿವೃದ್ಧಿಪಡಿಸಿದ ಮಿನ್ನೆಸೊಟಾ ಔಷಧ ವಿಜ್ಞಾನ ಕಾಲೇಜಿನ ಪ್ರಾಧ್ಯಾಪಕ ಗುಂಡ ಜಾರ್ಜ್ ಅವರು ಪ್ರತಿಕ್ರಿಯಿಸಿ, ‘ಗರ್ಭ ನಿರೋಧ ವಿಷಯದಲ್ಲಿ ಪುರುಷರಿಗಾಗಿ ಸಿದ್ಧಪಡಿಸಿರುವ ಮಾತ್ರೆಯು ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿದ್ದು, ಮತ್ತೊಂದು ಆಯ್ಕೆಯನ್ನು ಅವರಿಗೆ ನೀಡಿದೆ. ಇದರಿಂದ ಸಂತಾನ ಹೊಂದುವ ಆಯ್ಕೆಯಲ್ಲಿ ಪುರುಷರಿಗೆ ಹೆಚ್ಚಿನ ಸ್ವಾಯತ್ತತೆ ಸಿಗಲಿದೆ’ ಎಂದಿದ್ದಾರೆ.
ಸದ್ಯ 2ನೇ ಹಂತದ ಕ್ಲಿನಿಕಲ್ ಟ್ರಯಲ್ಸ್‌ನಲ್ಲಿರುವ ಈ ಗುಳಿಗೆಯ ಪ್ರಯೋಗವು ಬಳಕೆಗೆ ಸಿಗಲು ಇನ್ನೂ ಕೆಲ ವರ್ಷಗಳ ಅಗತ್ಯವಿದೆ. ಗುಳಿಗೆಯೊಂದಿಗೆ NES/T, ಹಾರ್ಮೋನ್ ಜೆಲ್ ಮತ್ತು ಎಡಿಎಎಂ, ಹೈಡ್ರೊಜೆಲ್ ಇಂಪ್ಲಾಂಟ್‌ಗಳ ಅಭಿವೃದ್ಧಿಯೂ ಆಗುತ್ತಿದೆ. ಇವೆಲ್ಲವೂ ಪುರುಷರ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಪರ್ಯಾಯವಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.