ಸುನಿತಾ ಮತ್ತು ಬುಚ್ ಬಂದಿಳಿದ ಕ್ಷಣ
ರಾಯಿಟರ್ಸ್
ಫ್ಲೋರಿಡಾ: ನಾಸಾ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್, ಬುಚ್ ವಿಲ್ಮೋರ್ ಸೇರಿದಂತೆ ನಾಲ್ವರು ಗಗನಯಾತ್ರಿಗಳು ಸುರಕ್ಷಿತವಾಗಿ ಇಂದು ಮುಂಜಾನೆ 3.37ರ ಸುಮಾರಿಗೆ ಫ್ಲೋರಿಡಾದ ಕರಾವಳಿಗೆ ಬಂದಿಳಿದ್ದಾರೆ.
ಕಳೆದ ವರ್ಷ ಜೂನ್ 5ರಂದು ಬೋಯಿಂಗ್‌ನ ಸ್ಟಾರ್‌ಲಿಂಕ್ ಗಗನನೌಕೆಯಲ್ಲಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ(ಐಎಸ್‌ಎಸ್) ತೆರಳಿದ್ದ ಕ್ರೂ–9 ಮಿಷನ್‌ನ ಸಿಬ್ಬಂದಿಗಳಾದ ಸುನಿತಾ ಮತ್ತು ಬುಚ್, ಗಗನನೌಕೆಯಲ್ಲಿ ತಲೆದೋರಿದ ತಾಂತ್ರಿಕ ದೋಷದಿಂದಾಗಿ 9 ತಿಂಗಳಿಗೂ ಹೆಚ್ಚು ಕಾಲ ಬಾಹ್ಯಾಕಾಶ ನಿಲ್ದಾಣದಲ್ಲಿಯೇ ಉಳಿದುಕೊಳ್ಳಬೇಕಾಯಿತು.
ಸುನಿತಾ ಮತ್ತು ಬುಚ್ ಅವರನ್ನು ಭುವಿಗೆ ತರಲು ಜಂಟಿಯಾಗಿ ಯೋಜನೆ ರೂಪಿಸಿದ್ದ ನಾಸಾ ಮತ್ತು ಸ್ಪೇಸ್‌ಎಕ್ಸ್, ಭಾನುವಾರ ನಾಲ್ವರು ಗಗನಯಾತ್ರಿಗಳನ್ನೊಗಳಗೊಂಡ ಕ್ರೂ–10 ಮಿಷನ್‌ನ ‘ಡ್ರ್ಯಾಗನ್’ ಗಗನನೌಕೆಯನ್ನು ಐಎಸ್‌ಎಸ್‌ಗೆ ಕಳುಹಿಸಿತ್ತು. ಇದೀಗ ‘ಡ್ರ್ಯಾಗನ್’ ಸುನಿತಾ–ಬುಚ್ ಅವರನ್ನು ಭೂಮಿಗೆ ಮರಳಿ ಕರೆತರುವಲ್ಲಿ ಯಶಸ್ವಿಯಾಗಿದೆ.
ಮುಂಜಾನೆ 3.27ಕ್ಕೆ ಫ್ಲಾರಿಡಾದ ಸಮುದ್ರಕ್ಕೆ ‘ಡ್ರ್ಯಾಗನ್’ ಗಗನನೌಕೆ ಇಳಿದಿದೆ. ನಾಲ್ವರು ಗಗನಯಾತ್ರಿಗಳಾದ ನಿಕ್ ಹೇಗ್, ಸುನಿತಾ ವಿಲಿಯಮ್ಸ್, ಬುಚ್ ವಿಲ್ಮೋರ್ ಮತ್ತು ಅಲೆಕ್ಸಾಂಡರ್ ಗೊರ್ಬುನೊವ್ ಅವರನ್ನು ಸುರಕ್ಷಿತವಾಗಿ ನೌಕೆಯಿಂದ ಇಳಿಸಲಾಗಿದೆ.
ಆರೋಗ್ಯ ತಪಾಸಣೆ ಸೇರಿದಂತೆ ಮುಂದಿನ ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ನಾಸಾ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.