ADVERTISEMENT

ದೀರ್ಘಕಾಲದ ಸಿದ್ಧಾಂತಕ್ಕೆ ಸವಾಲು: ಮರೆವಿನ ಕಾಯಿಲೆಗೆ ಪರಿಹಾರ!

ಅಮೃತೇಶ್ವರಿ ಬಿ.
Published 30 ಡಿಸೆಂಬರ್ 2025, 23:30 IST
Last Updated 30 ಡಿಸೆಂಬರ್ 2025, 23:30 IST
   

ಮನುಷ್ಯರಾದ ನಮಗೆ ಬುದ್ಧಿಶಕ್ತಿ ಮತ್ತು ನೆನಪಿನ ಶಕ್ತಿಗಳೇ ವರದಾನ. ಈ ಪ್ರಕೃತಿಯಲ್ಲಿ ನಾವು ಉನ್ನತರಾಗಿ ಬದುಕುತ್ತಿರಲು ಹಾಗೂ ಇತರ ಎಲ್ಲ ಜೀವಸಂಕುಲಗಳ ಮೇಲೆ ಮೇಲುಗೈಯನ್ನು ಸಾಧಿಸುವಂತಾಗಿರುವುದು ಕಾರಣ ನಮ್ಮೀ ಮಿದುಳಿಗಿರುವ ವಿಶೇಷ ಸಾಮರ್ಥ್ಯ. ಮಾತನಾಡುವುದು, ಪ್ರಜ್ಞಾಪೂರ್ವಕ ಯೋಚನೆ, ಯೋಜನೆಗಳನ್ನು ರೂಪಿಸುವುದು, ಹಾಗೂ ನಿರ್ಧಾರ ಗಳನ್ನು ತೆಗೆದುಕೊಳ್ಳುವುದು ಇವೆಲ್ಲವನ್ನೂ ನಾವು ಮಾತ್ರವೇ ಮಾಡಲಾಗುವುದು. ಮಾನವನ ಮಿದುಳು ಅಷ್ಟು ಸಂಕೀರ್ಣ; ಅದೊಂದು ಅತ್ಯದ್ಭುತ ಅಂಗ ಎನ್ನಿ. ನಮ್ಮ ಮಿದುಳು ನೀರು, ಕೊಬ್ಬಿನಾಂಶ, ಪ್ರೋಟೀನ್‌, ಕಾರ್ಬೋಹೈಡ್ರೇಟ್‌, ಅಯಾನ್‌ಗಳು ಹಾಗೂ ನ್ಯೂರೋಟ್ರಾನ್ಸ್ಮಿಟರ್‌ಗಳಿಂದ ಮಾಡಲ್ಪಟ್ಟಿದೆ. ಇವೆಲ್ಲವೂ ಆರೋಗ್ಯಕರವಾಗಿ ಸರಿಯಾದ ಪ್ರಮಾಣದಲ್ಲಿದ್ದರೆ ನಮ್ಮ ಮಿದುಳು ಚೆನ್ನಾಗಿ ಕೆಲಸ ಮಾಡುತ್ತದೆ; ನಾವೂ ಆರೋಗ್ಯವಂತ ರಾಗಿರುತ್ತೇವೆ. ಇಲ್ಲದಿದ್ದರೆ ಮರೆಗುಳಿತನ, ಯೋಚನಾಶಕ್ತಿ ಕುಂದುವುದು ಇಂತಹ ಸಮಸ್ಯೆಗಳು ನಮ್ಮನ್ನು ಕಾಡಬಹುದು.

ಇದು ದೊಡ್ಡ ಸಮಸ್ಯೆಯೇನಲ್ಲ. ಆದರೆ ಕೆಲವೊಮ್ಮೆ ಮಿದುಳಿ ನಲ್ಲಿರುವ ‘ಅಮೈಲಾಯಿಡ್‌’ ಎನ್ನುವ ಪ್ರೋಟೀನ್‌ ಎಳೆಗಳು ವಿಚಿತ್ರವಾಗಿ ಬೆಳೆದು ಗಂಟುಗಳಾಗಿಬಿಡಬಹುದು. ಆಗ ಮಿದುಳಿನ ನರಗಳು ನಶಿಸುತ್ತಾ ಬುದ್ಧಿಮಾಂದ್ಯತೆ, ನೆನಪಿನ ಶಕ್ತಿ ಶಾಶ್ವತವಾಗಿ ಕುಂದುವುದು ಹಾಗೂ ಅರಿವಿನ ಸಾಮರ್ಥ್ಯ ಅಳಿಸಿ ಹೋಗುವಂತಹ ಒಂದು ರೋಗಗಳು ಬಂದೆರಗುತ್ತವೆ; ಮಿದುಳಿನ ಗಾತ್ರವೂ ಚಿಕ್ಕದಾಗಿಬಿಡುತ್ತದೆ. ಇದನ್ನೇ ‘ಅಲ್ಝೀಮರ್‌ ರೋಗ’ ಎನ್ನುವುದು. ಒಮ್ಮೆ ಈ ಕಾಯಿಲೆ ಬಂತೆಂದರೆ ಮೊದಲಿನ ಸ್ಥಿತಿಗೆ ಮಿದುಳಿಗೆ ಮರಳಲಾದು. ಅರ್ಥಾತ್‌, ಮಿದುಳು ತನ್ನ ಶಕ್ತಿಯನ್ನು ಮರಳಿ ಪಡೆಯದು.

ನೂರಾರು ವರ್ಷಗಳಿಂದ ಎಷ್ಟೇ ಹಣ ಹಾಗೂ ಸಮಯವನ್ನು ಹೂಡಿದರೂ ಈ ಕಾಯಿಲೆಯನ್ನು ವಾಸಿ ಮಾಡಿ ಮಿದುಳಿನ ಶಕ್ತಿಯನ್ನು ಮರಳಿಸುವ ಯಾವುದೇ ಔಷಧವನ್ನು ವೈದ್ಯಕೀಯ ರಂಗದಿಂದ ತಯಾರಿಸಲು ಸಾಧ್ಯವಾಗಲಿಲ್ಲ. ಹಾಗಾಗಿ, ಸಂಶೋಧಕರು ಈ ಕಾಯಿಲೆಗೆ ಔಷಧವನ್ನು ಹುಡುಕುವ ಬದಲಿಗೆ ಕಾಯಿಲೆಯೇ ಬಾರದಂತೆ ತಡೆಯುವುದರತ್ತ ಅಥವಾ ಲಕ್ಷಣಗಳು ಕಾಣಿಸಿಕೊಳ್ಳುವುದನ್ನು ನಿಧಾನವಾಗಿಸುವತ್ತ ಸಂಶೋಧನೆಯನ್ನು ಕೈಗೊಂಡುಬಿಟ್ಟಿದ್ದರು. ಆದರೆ ಈಗ ಅಮೆರಿಕದ ಯೂನಿವರ್ಸಿಟಿ ಹಾಸ್ಪಿಟಲ್ಸ್‌ ಕ್ಲೀವ್ಲೆಂಡ್‌ ಮೆಡಿಕಲ್‌ ಸೆಂಟರ್‌ ಸಂಸ್ಥೆಯು ಈ ದೀರ್ಘಕಾಲದ ಸಿದ್ಧಾಂತಕ್ಕೆ ಸವಾಲೆಸೆದು ಪರಿಹಾರವನ್ನು ಪತ್ತೆಮಾಡಿದ್ದಾರೆ.  ಅಲ್ಝೀಮರ್‌ ಕಾಯಿಲೆಯಿಂದ ಗಂಭೀರವಾಗಿ ನರಳುತ್ತಿರುವ ಮಿದುಳನ್ನೂ ಪುನಃಶ್ಚೇತನಗೊಳಿಸಬಹುದೇ ಎಂದು ಕಲ್ಯಾಣಿ ಚೌಬೆ ಮತ್ತು ಸಂಗಡಿಗರು ಪರೀಕ್ಷಿಸಿದ್ದಾರೆ. 

ADVERTISEMENT

‘NAD+’ ಅಥವಾ ‘ನಿಕೋಟಿನಮೈಡ್‌ ಅಡಿನೈನ್‌ ಡೈನ್ಯೂಕ್ಲಿಯೋಟೈಡ್‌’ ನಮ್ಮ ದೇಹದ ಜೀವಕೋಶಗಳಲ್ಲಿರುವ ಒಂದು ಕೋಎಂಜೈಮ್‌. ಜೀವಕೋಶಗಳ ಶಕ್ತಿ. ಇದು ನಮ್ಮ ದೇಹದ ಚಯಾಪಚಯ ಕ್ರಿಯೆ, ಡಿಎನ್‌ಎ ಅನ್ನು ದುರಸ್ತಿಗೊಳಿ ಸುವುದು. ರೋಗನಿರೋಧಕ ಶಕ್ತಿಯನ್ನು ನಿಯಂತ್ರಿಸುವುದು ಹಾಗೂ ಆಯುಷ್ಯವನ್ನು ಕಾಪಾಡುವುದು ಮೊದಲಾದ ಕಾರ್ಯಗಳನ್ನೂ ನಿರ್ವಹಿಸುತ್ತದೆ. ಈ ಎಂಜೈಮಿನ ಪ್ರಮಾಣದ ನಿಯಂತ್ರಣ ತಪ್ಪಿದರೆ, ವೇಗವಾಗಿ ದೇಹಕ್ಕೆ ವಯಸ್ಸಾಗುವುದು, ನರಕೋಶಗಳು ಕ್ಷೀಣಿಸುವುದು ಮತ್ತು ಕ್ಯಾನ್ಸರ್‌ನಂತಹ ಕಾಯಿಲೆಗಳು ತಲೆದೋರುತ್ತವೆ. ಅಲ್ಝೀಮರ್ ಕಾಯಿಲೆಗೂ ಮುಖ್ಯ ಕಾರಣವೇ ಈ ‘NAD+’ನ ಅಸಮತೋಲನ. ಹಾಗಾಗಿ ಇದನ್ನು ಸರಿದೂಗಿಸಿದರೆ ಈ ಕಾಯಿಲೆಯನ್ನು ವಾಸಿ ಮಾಡಬಹುದು ಮತ್ತು ಕಾಯಿಲೆಗೆ ತುತ್ತಾಗದಂತೆಯೂ ತಡೆಯಬಹುದು ಎಂದು ಕಲ್ಯಾಣಿ ಮತ್ತು ಸಂಗಡಿಗರು ತೋರಿಸಿದ್ದಾರೆ.

ಮಿದುಳು ಹಾಗೂ ದೇಹದ ತುಂಬೆಲ್ಲ ಇರುವ NAD+ನ ಮಟ್ಟವು ವಯಸ್ಸಿನೊಂದಿಗೆ ಕಡಿಮೆಯಾಗುತ್ತಿರುತ್ತದೆ. ಅಲ್ಝೀಮರ್‌ ರೋಗಿಗಳ ಮಿದುಳಿನಲ್ಲಿಯಂತೂ ಇದು ಕ್ಷೀಣಿಸುವ ವೇಗ ಇನ್ನೂ ತೀವ್ರ. ಈ ಕಾಯಿಲೆ ಮನುಷ್ಯರಲ್ಲಿ ಮಾತ್ರ ಕಾಣಿಸಿಕೊಳ್ಳುತ್ತದೆ. ಆದರೆ ಸಂಶೋಧಕರು ಸದ್ಯಕ್ಕೆ ಇದನ್ನು ಇಲಿಗಳಲ್ಲಿ ಪರೀಕ್ಷೆ ಮಾಡಲಾಗಿದ್ದು, ಮನುಷ್ಯರಲ್ಲಿ ಈ ಕಾಯಿಲೆಯನ್ನು ಉಂಟುಮಾಡುವ ಆನುವಂಶಿಕ ಪರಿವರ್ತನೆ(Genetic Mutation)ಯನ್ನು ವ್ಯಕ್ತಪಡಿಸುವಂತೆ ಇಲಿಗಳನ್ನು ವಿನ್ಯಾಸ ಮಾಡಿಸಿ, ಪರೀಕ್ಷೆಗೆ ತೆಗೆದುಕೊಂಡಿದ್ದರಂತೆ.

ಈ ಇಲಿಗಳಲ್ಲಿಯೂ ಫಲಿತಾಂಶ ಇದೇ ಆಗಿತ್ತಂತೆ. ಅರ್ಥಾತ್‌, NAD+ನ ಮಟ್ಟ ಸಾಮಾನ್ಯಕ್ಕಿಂತ ಕಡಿಮೆಯಿತ್ತು! ಇಲ್ಲಿ ಎರಡು ಇಲಿಗಳನ್ನು ಅಧ್ಯಯನಕ್ಕೆ ತೆಗೆದುಕೊಂಡಿದ್ದರು. ಈ ಕಾಯಿಲೆಯಲ್ಲಿ ಪರಿಣಾಮ ಬೀರುವುದು ‘ಅಮೈಲಾಯಿಡ್‌’ ಮತ್ತು ‘ಟೌ’ ಎನ್ನುವ ಎರಡು ಬಗೆಯ ಪ್ರೋಟೀನುಗಳು. ಹಾಗಾಗಿ ಒಂದು ಇಲಿಯಲ್ಲಿ ಅಮೈಲಾಯಿಡ್‌ ಪ್ರೋಟೀನ್‌ನ ಪರಿವರ್ತನೆಯನ್ನೂ, ಮತ್ತೊಂದರಲ್ಲಿ ಟೌ ಪ್ರೋಟೀನ್‌ನ ಪರಿವರ್ತನೆಯನ್ನು ಅಧ್ಯಯನ ಮಾಡಿದ್ದಾರೆ. ಎರಡೂ ಇಲಿಗಳಲ್ಲಿ ಅಲ್ಝೀಮರ್‌ ರೋಗಿಗಳಲ್ಲಿ ಕಾಣುವ ಹಾಗೆಯೇ ಅರಿವಿನ ದೌರ್ಬಲ್ಯ ಕಂಡಿತ್ತಂತೆ. ಹಾಗಾಗಿ, ಕಾಯಿಲೆಗೂ ಮುನ್ನ NAD+ನ ಮಟ್ಟವನ್ನು ಸರಿಯಾಗಿ ನಿರ್ವಹಿಸುವುದರಿಂದ ಕಾಯಿಲೆಯನ್ನು ತಡೆಯಬಹುದೇ ಅಥವಾ ಕಾಯಿಲೆ ಬಂದ ಮೇಲೆ ಅದನ್ನು ಸರಿದೂಗಿಸುವುದರಿಂದ ವಾಸಿ ಮಾಡಬಹುದೇ ಎಂದು ಪರೀಕ್ಷಿಸಿದ್ದಾರೆ.

NAD+ನ ಮಟ್ಟವನ್ನು ಪುನಃಸ್ಥಾಪಿಸಲು ಬಳಸಿಕೊಂಡಿರುವ ಔಷಧವೇ ‘P7C3-A20’. ಫಲಿತಾಂಶ ಅಚ್ಚರಿಯೆಂಬಂತೆ, ಎರಡೂ ಇಲಿಗಳಲ್ಲಿ ಅರಿವಿನ ಪ್ರಜ್ಞೆ ಸಂಪೂರ್ಣವಾಗಿ ಸಕ್ರಿಯವಾಗಿ, ಅವು ಕಾಯಿಲೆಯಿಂದ ಗುಣಮುಖವಾಗಿದ್ದವಂತೆ! ಅಲ್ಲದೇ, ಈ ಔಷಧವು ಆನುವಂಶಿಕ ಪರಿವರ್ತನೆಗಳಿಂದ ತಲೆದೋರಬಹುದಾದ ಇತರೆ ಕಾಯಿಲೆಗಳನ್ನೂ ತನ್ನಂತಾನೇ ತಡೆಯುವ ಶಕ್ತಿಯನ್ನು ಮಿದುಳಿಗೆ ನೀಡಿತ್ತಂತೆ! ಅಂತೂ ಈ ಔಷಧ ಎರಡೂ ರೀತಿಯ ಆನುವಂಶಿಕ ಪರಿವರ್ತನೆ ಗಳಿಂದ ತಗುಲುವ ಅಲ್ಝೀಮರ್‌ ಕಾಯಿಲೆಯನ್ನು ಇಲಿಗಳಲ್ಲಿ ವಾಸಿಮಾಡಿದೆ.

ಅಂತೂ ಮಿದುಳಿನ NAD+ನ ಮಟ್ಟವನ್ನು ಸರಿದೂಗಿಸಿದರೆ ಗಂಭೀರ ರೋಗಲಕ್ಷಣಗಳನ್ನು ಕೂಡ ಗುಣಪಡಿಸಿ, ಮಿದುಳಿನ ಕಾರ್ಯಚಟುವಟಿಕೆಯನ್ನೂ ಸಕ್ರಿಯಗೊಳಿಸುವುದರಲ್ಲಿ ಸಂಶೋಧಕರು ಯಶಸ್ವಿಯಾಗಿದ್ದಾರೆ. ಈ ಫಲಿತಾಂಶದ ಮೂಲಕ ಅಲ್ಝೀಮರ್‌ ರೋಗಿಗಳ ಮಿದುಳಿನಲ್ಲಿಯೂ ಕಾಯಿಲೆಯನ್ನು ವಾಸಿಮಾಡಲು ಕೆಲಸ ಮಾಡಬೇಕಾದ ಪ್ರೋಟೀನನ್ನು ಪತ್ತೆ ಮಾಡಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.