ADVERTISEMENT

ಕ್ಯಾನ್ಸರ್ ಚಿಕಿತ್ಸೆಗೆ ಹೊಸ ತಂತ್ರ!

​ಪ್ರಜಾವಾಣಿ ವಾರ್ತೆ
Published 28 ಜನವರಿ 2026, 0:30 IST
Last Updated 28 ಜನವರಿ 2026, 0:30 IST
   

ಶರೀರಕ್ಕೆ ಯಾವುದೇ ಸೋಂಕು ತಗುಲಿದರೆ ಅದನ್ನು ನಿವಾರಿಸಿಕೊಳ್ಳುವ ಸಾಮರ್ಥ್ಯ ಪ್ರತಿಯೊಬ್ಬ ವ್ಯಕ್ತಿಗೂ ಜೀವಿಗೂ ಇರುತ್ತದೆ. ಶರೀರದಲ್ಲಿಯೇ ಇರುವ ಪ್ರತಿರಕ್ಷಣಾ ವ್ಯವಸ್ಥೆಯು ಸೋಂಕನ್ನು ನಿವಾರಿಸುತ್ತದೆ. ಇದು ಜೀವಿಗಳಿಗೆ ನಿಸರ್ಗ ನೀಡಿದ ವರದಾನ. ಯಾವುದೇ ಸೋಂಕು, ಶರೀರವನ್ನು ಪ್ರವೇಶಿಸಿದಾಗ ಶರೀರದಲ್ಲಿರುವ ಕೆಲವು ರಕ್ಷಣಾತ್ಮಕ ಜೀವಕೋಶಗಳು ಪ್ರತಿಕಾಯಗಳನ್ನು ಸಂಶ್ಲೇಷಿಸುತ್ತವೆ. ಈ ಪ್ರತಿಕಾಯಗಳು ಸೋಂಕನ್ನು ಬಂಧಿಸಿ ಅವನ್ನು ಕ್ರಿಯಾಹೀನಗೊಳಿಸುತ್ತವೆ. ಸೋಂಕು ಅಧಿಕವಾದರೆ ಸೂಕ್ತ ಔಷಧವನ್ನು ಸೇವಿಸುವುದರ ಮೂಲಕ ಪರಿಹರಿಸಿಕೊಳ್ಳಬಹುದು.

ಕ್ಯಾನ್ಸರನ್ನು ರೋಗವೆಂದು ಹೇಳುತ್ತೇವಾದರೂ ಅದು ಯಾವುದೇ ಸೋಂಕಿನಿಂದ ಉಂಟಾಗುವುದಿಲ್ಲ. ಅದೊಂದು ವಿಶಿಷ್ಟವಾದ ಆಂಗಿಕ ಸ್ಥಿತಿ. ಬೆಳವಣಿಗೆಯ ಹಂತವನ್ನು ಪೂರೈಸಿ, ನಿಶ್ಚಿತ ಅಂಗಗಳಲ್ಲಿ ನಿಶ್ಚಿತ ಕಾರ್ಯಗಳನ್ನು ಮಾಡುತ್ತಿರುವ ಜೀವಕೋಶಗಳು ಇದ್ದಕ್ಕಿದ್ದಂತೆ ತಮ್ಮ ಕೆಲಸವನ್ನು ನಿಲ್ಲಿಸಿ ಬೆಳವಣಿಗೆಯ ಹಂತದಲ್ಲಿರುವ ಜೀವಕೋಶಗಳಂತೆ ವಿಭಜನೆಗೊಳ್ಳತೊಡಗುತ್ತವೆ. ಕೋಶಗಳ ಗುಂಪನ್ನೊಳಗೊಂಡ ಗೆಡ್ಡೆ ಅಥವಾ ಕ್ಯಾನ್ಸರ್ ಪೀಡಿತ ಅಂಗ ಬೆಳೆಯುತ್ತದೆ. ಮುಂದೆ ಕ್ಯಾನ್ಸರ್ ಕೋಶಗಳು ಗಡ್ಡೆಗಳನ್ನು ಬಿಟ್ಟು ಶರೀರವನ್ನೆಲ್ಲ ಆಕ್ರಮಿಸಿ ಎಲ್ಲ ಕಡೆ ವೃದ್ಧಿಗೊಂಡು ಅಂತಿಮವಾಗಿ ವ್ಯಕ್ತಿಯ ಸಾವಿನಲ್ಲಿ ಕೊನೆಗೊಳ್ಳುತ್ತದೆ. ಕ್ಯಾನ್ಸರ್ ಬೆಳವಣಿಗೆ ಯಾವ ಹಂತದಲ್ಲಿದೆ ಎಂಬುದನ್ನು ಅವಲಂಬಿಸಿ ಅದನ್ನು ಪ್ರಾಥಮಿಕ, ದ್ವಿತೀಯ ಹಾಗೂ ಅಂತಿಮ ಹಂತಗಳೆಂದು ಗುರುತಿಸಲಾಗುತ್ತದೆ.

ಕ್ಯಾನ್ಸರಿಗೆ ಮದ್ದನ್ನು ಕಂಡುಹಿಡಿಯುವ ಪ್ರಯತ್ನ ಒಂದು ಶತಮಾನಕ್ಕಿಂತ ಹಿಂದೆಯೇ ಆರಂಭವಾಯಿತು. ಕೀಮೊಥೆರಪಿ, ರೇಡಿಯೋಥೆರಪಿ – ಹೀಗೆ ಹಲವು ವಿಧಾನಗಳನ್ನು ಬಳಕೆಗೆ ತರಲಾಯಿತಾದರೂ ಅವು ಯಾವುದರಿಂದಲೂ ಖಚಿತವಾದ ನಿರ್ಣಾಯಕ ಫಲಿತಾಂಶಗಳು ದೊರೆಯಲಿಲ್ಲ. ಮೊದಲ ಹಂತಗಳಲ್ಲಿರುವ ಕ್ಯಾನ್ಸರನ್ನು ಸ್ವಲ್ಪ ಮಟ್ಟಿಗೆ ನಿಯಂತ್ರಿಸಬಹುದಾದರೂ ಎರಡನೆಯ ಹಂತವನ್ನು ದಾಟಿ ಅಂತಿಮ ಹಂತ ತಲುಪಿದ ನಂತರ ಅದರ ಚಿಕಿತ್ಸೆ ಸಾಧ್ಯವಿಲ್ಲ. ಆದ್ದರಿಂದಲೇ ಇಂದಿಗೂ ಕ್ಯಾನ್ಸರ್‌ನಿಂದ ಉಂಟಾಗುವ ಸಾವಿನ ಪ್ರಮಾಣ ಇಳಿಮುಖವಾಗಿಲ್ಲ. ವಿಜ್ಞಾನ ಮತ್ತು ವೈದ್ಯಕೀಯ ಕ್ಷೇತ್ರ ಎಷ್ಟೆಲ್ಲ ಬೆಳವಣಿಗೆಯಾಗಿದ್ದರೂ ಇನ್ನೂ ಕೆಲವು ಕ್ಯಾನ್ಸರ್‌ಗಳಿಗೆ ಚಿಕಿತ್ಸೆಯನ್ನು ಅಭಿವೃದ್ಧಿಪಡಿಸಲಾಗಿಲ್ಲ.

ADVERTISEMENT

ಬೇರೆ ಸೋಂಕುಗಳಿಗೆ ಪ್ರತಿಕಾಯಗಳು ಸಂಶ್ಲೇಷಣೆಯಾಗುವಂತೆ ಕ್ಯಾನ್ಸರ್‌ಗೆ ಏಕೆ ಪ್ರತಿಕಾಯಗಳು ಸಂಶ್ಲೇಷಣೆಯಾಗುವುದಿಲ್ಲ ಎಂಬ ಪ್ರಶ್ನೆ ಸ್ವಾಭಾವಿಕ. ಶರೀರವನ್ನು ಪರಕೀಯ ಸೋಂಕುಗಳು ಅಥವಾ ವಸ್ತುಗಳು ಪ್ರವೇಶಿಸಿದಾಗ ಶರೀರದಲ್ಲಿಯೇ ಇರುವ ಬಿಳಿ ರಕ್ತಕಣಗಳ ಪೈಕಿ ಟಿ-ಜೀವಕೋಶಗಳು ಸೋಂಕಿಗೆ ಕಾರಣವಾದ ಪ್ರತಿಜನಕಗಳನ್ನು ಗುರುತಿಸಿ ಪ್ರತಿಕಾಯಗಳನ್ನು ಉತ್ಪತ್ತಿ ಮಾಡುತ್ತವೆ. ಒಂದೊಂದು ಸೋಂಕಿಗೂ ಪ್ರತ್ಯೇಕವಾದ ಪ್ರತಿಕಾಯಗಳೇ ಉತ್ಪನ್ನವಾಗಬೇಕು. ಟಿ-ಜೀವಕೋಶಗಳಿಗೆ ಯಾವುದೇ ವಸ್ತುವನ್ನು ಸ್ವಂತ ಅಥವಾ ಪರಕೀಯ ಎಂದು ಗುರುತಿಸುವ ಹಾಗೂ ಪರಕೀಯ ವಸ್ತುವಿಗೆ ಪ್ರತಿಯಾಗಿ ಪ್ರತಿಕಾಯಗಳನ್ನು ಸಂಶ್ಲೇಷಿಸಿ ಅವನ್ನು ನಿಷ್ಕ್ರಿಯಗೊಳಿಸುವ ಸಾಮರ್ಥ್ಯವಿದೆ. ಟಿ-ಕೋಶಗಳು ಶರೀರದಲ್ಲಿಯೇ ಉತ್ಪತ್ತಿಯಾಗುವ ವಸ್ತುಗಳನ್ನು ಅಥವಾ ಜೀವಕೋಶಗಳನ್ನು ಸ್ವಯಂ ಎಂದು ಗುರುತಿಸಿ ಅವುಗಳ ಮೇಲೆ ಪರಿಣಾಮ ಬೀರುವುದಿಲ್ಲ. ಕ್ಯಾನ್ಸರ್ ಕೋಶಗಳು ಶರೀರದಲ್ಲಿಯೇ ಉತ್ಪನ್ನವಾಗುವುದರಿಂದ ಅವುಗಳ ವಿರುದ್ಧ ಪ್ರತಿಕಾಯಗಳು ಸೃಷ್ಟಿಯಾಗುವುದಿಲ್ಲ. ಟಿ-ಕೋಶಗಳು ಕ್ಯಾನ್ಸರ್ ಕೋಶಗಳನ್ನು ಪರಕೀಯ ಎಂದು ಗುರುತಿಸುವಂತಾದರೆ ಅವು ಪ್ರತಿಕಾಯಗಳನ್ನು ಸಂಶ್ಲೇಷಿಸಬಲ್ಲವು.

1990ರ ದಶಕದ ನಂತರ ಕ್ಯಾನ್ಸರ್ ಕೋಶಗಳ ಹೊರಮೈಯಲ್ಲಿರುವ ಕೆಲವು ವಿಶಿಷ್ಟ ಪ್ರೊಟೀನ್‍ಗಳನ್ನು ಗುರುತಿಸಿ ಕ್ಯಾನ್ಸರ್ ಕೋಶಗಳನ್ನು ಪರಕೀಯ ವಸ್ತುಗಳೆಂದು ಪರಿಗಣಿಸಿ ವಿವಿಧ ಬಗೆಯ ಟಿ-ಜೀವಕೋಶಗಳು ತಯಾರಾಗುವಂತೆ ಪ್ರಚೋದಿಸುವತ್ತ ಸಂಶೋಧನೆಗಳು ನಡೆದವು. ಪ್ರಪಂಚದಾದ್ಯಂತ ಹಲವು ಪ್ರಯೋಗಾಲಯಗಳು ಈ ಪ್ರಯತ್ನ ನಡೆಸಿದವು. ಈ ಪ್ರಯತ್ನದಲ್ಲಿ ಕೆಲವು ಬಗೆಯ ಕ್ಯಾನ್ಸರ್‌ಗಳನ್ನು ಗುರುತಿಸಿ ಚಿಕಿತ್ಸೆ ನೀಡಲು ಸಾಧ್ಯವಾಯಿತೇ ಹೊರತು ಎಲ್ಲ ಬಗೆಯ ಕ್ಯಾನ್ಸರ್‌ಗೆ ಚಿಕಿತ್ಸೆ ಸಾಧ್ಯವಾಗಲಿಲ್ಲ. ಈಗಲೂ ಇಂಥ ಪ್ರಯತ್ನಗಳು ನಡೆಯುತ್ತಲೇ ಇವೆ. ಅದರಿಂದಲೇ ಅಗೊಮ್ಮೆ ಈಗೊಮ್ಮೆ ಯಾವುದೋ ಬಗೆಯ ಕ್ಯಾನ್ಸರ್‌ಗೆ ಮದ್ದನ್ನು ಕಂಡು ಹಿಡಿಯಲಾಗಿದೆ ಎಂದು ವರದಿಗಳು ಬರುತ್ತಲೇ ಇವೆ; ಕ್ಯಾನ್ಸರ್ ಮಾತ್ರ ಪೂರ್ತಿ ನಿರ್ನಾಮವಾಗಲೇ ಇಲ್ಲ.

ಇತ್ತೀಚೆಗೆ ‘ಕಾರ್ಟ್-ಟಿ’ ಎಂಬ ಹೊಸ ಚಿಕಿತ್ಸೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಕಳೆದ ವರ್ಷ ಅಮೆರಿಕದ ಸೊಸೈಟಿ ಆಫ್ ಹೆಮಟಾಲಜಿಯ ವಾರ್ಷಿಕ ಸಭೆಯಲ್ಲಿ ಹೂಸ್ಟನ್ ಮೆಥೊಡಿಸ್ಟ್ ಸಂಶೋಧನಾ ಸಂಸ್ಥೆಯ ಕ್ಯಾನ್ಸರ್ ಜೀವಶಾಸ್ತ್ರಜ್ಞ ಬಿನ್ ಹಿ ಎಂಬುವವರು ಈ ಚಿಕಿತ್ಸೆಯ ಬಗ್ಗೆ ಮೊದಲು ವರದಿ ಮಾಡಿದರು. ಈ ತಂತ್ರ ನಿಧಾನವಾಗಿದ್ದು, ಎಲ್ಲ ಕ್ಯಾನ್ಸರ್ ಕೋಶಗಳನ್ನು ನಿರ್ನಾಮ ಮಾಡುವಷ್ಟು ಪ್ರತಿಕಾಯಗಳ ಸಂಶ್ಲೇಷಣೆಯಾಗಲಿಲ್ಲ. ಈ ವಿಧಾನ ಅಸಮರ್ಥವಾದುದರಿಂದ ಕ್ಯಾನ್ಸರ್ ಕೋಶಗಳನ್ನೇ ರಕ್ಷಣಾಕೋಶಗಳನ್ನಾಗಿ ಮಾರ್ಪಡಿಸಿ ಪ್ರತಿರಕ್ಷಣಾ ವ್ಯವಸ್ಥೆಗೆ ಒಡ್ಡಿದರೆ ಹೇಗೆ ಎಂದು ಚಿಂತಿಸಿ ಅದಕ್ಕೆ ತಕ್ಕದಾದ ಪ್ರಾಯೋಗಿಕ ತಂತ್ರಗಳನ್ನು ಅಭಿವೃದ್ಧಿ ಪಡಿಸಲು ಪ್ರಯತ್ನಿಸಲಾಯಿತು.

ಈ ತಂತ್ರವನ್ನು ಎರಡು ರೀತಿಯಲ್ಲಿ ನಿರ್ವಹಿಸಬಹುದು. ಮೊದಲನೆಯದು ಸಾಂಪ್ರದಾಯಿಕವಾಗಿ, ವೈದ್ಯರು ಮಿಶ್ರ ಪ್ರತಿಜನಕ ಗ್ರಾಹಕಗಳನ್ನು (‘ಕೈಮೆರಿಕ್ ಆಂಟಿಜನ್ ರಿಸೆಪ್ಟಾರ್’ ಅಥವಾ ಸಂಕ್ಷಿಪ್ತವಾಗಿ ಹೇಳುವುದಾದರೆ ‘ಸಿಎಆರ್-ಟಿ’; ಇದೊಂದು ಪ್ರೊಟೀನ್) ಶರೀರದಲ್ಲಿ ಇರುವ ಟಿ–ಜೀವಕೋಶಗಳನ್ನು ಹೊರತೆಗೆದು, ಅವುಗಳಿಗೆ ಗ್ರಾಹಕಗಳನ್ನು ಸೇರಿಸುವುದು. ಈ ಗ್ರಾಹಕಗಳು ಟಿ-ಜೀವಕೋಶಗಳಿಗೆ ಕ್ಯಾನ್ಸರ್ ಜೀವಕೋಶಗಳನ್ನು ಗುರುತಿಸುವ ಹಾಗೂ ನಾಶಪಡಿಸುವ ಸಾಮರ್ಥ್ಯವನ್ನು ನೀಡುತ್ತವೆ. ಆದರೆ ಈ ವಿಧಾನದಲ್ಲಿ ಕೆಲವು ತೊಂದರೆಗಳು ಎದುರಾದವು. ಟಿ-ಕೋಶಗಳನ್ನು ಕ್ಯಾನ್ಸರ್‌ಪೀಡಿತ ವ್ಯಕ್ತಿಯಿಂದ ಹೊರತೆಗೆದು ಅವನ್ನು ಪ್ರಯೋಗಾಲಯಗಳಲ್ಲಿ ಕೃತಕವಾಗಿ ಬೆಳೆಸಿ, ಮಾರ್ಪಡಿಸಬೇಕು. ಅನಂತರ ಅವುಗಳನ್ನು ವ್ಯಕ್ತಿಗೆ ಅಳವಡಿಸಬೇಕು. ಇದಕ್ಕೆ ಸಾಕಷ್ಟು ಸಮಯ ಹಿಡಿಯುತ್ತದೆ. ಈ ಚಿಕಿತ್ಸೆಯ ವೆಚ್ಚವೂ ಅಧಿಕ; ಸಾಮಾನ್ಯರಿಗೆ ಅದನ್ನು ಭರಿಸಲಾಗುವುದಿಲ್ಲ.

ಎರಡನೆಯದು ‘ಇನ್-ವಿವೊ’, ಎಂದರೆ ರೋಗಿಯ ಶರೀರದಲ್ಲಿಯೇ ಟಿ-ಜೀವಕೋಶಗಳಿಗೆ ಗ್ರಾಹಕಗಳನ್ನು ನೇರವಾಗಿ ಅಳವಡಿಸುವ ಪ್ರಯತ್ನ. ಈ ವಿಧಾನದಲ್ಲಿ ಗ್ರಾಹಕ ಪ್ರೊಟೀನನ್ನು ಸಂಶ್ಲೇಷಿಸುವ ಜೀನ್‍ ಅನ್ನೇ ಸ್ಧಳೀಯವಾಗ ಮಾರ್ಪಡಿಸಿದ ನಿರುಪದ್ರವಿ ವೈರಸ್ ಒಂದರ ಮೂಲಕ ಟಿ-ಜೀವಕೋಶಗಳೊಳಗೆ ಸೇರಿಸುವುದು. ಈ ಜೀನ್ ಟಿ-ಜೀವಕೋಶವನ್ನು ಸೇರಿದ ಕೂಡಲೇ ಗ್ರಾಹಕ ಪ್ರೊಟೀನ್ ಸಂಶ್ಲೇಷಣೆಯಲ್ಲಿ ತೊಡಗಿ, ಟಿ-ಕೋಶಗಳು ಕ್ಯಾನ್ಸರ್ ಕೋಶಗಳನ್ನು ತಮ್ಮೆಡೆಗೆ ಸೆಳೆದು ಅವುಗಳನ್ನು ನಾಶಪಡಿಸುತ್ತವೆ.

ಈ ವಿಧಾನವು ಸಾಂಪ್ರದಾಯಿಕ ವಿಧಾನಕ್ಕಿಂತ ವೇಗವಾಗಿದ್ದು ಅದಕ್ಕಿಂತ ಅಗ್ಗವಾಗಿದೆ. ಕಳೆದ ವರ್ಷ ಈ ತಂತ್ರದ ಪರಿಣಾಮಗಳನ್ನು ಅಧ್ಯಯನ ಮಾಡಲು ಆರಂಭಿಸಲಾಗಿದೆ. ಮೊದಲು ನಾಲ್ವರು ರಕ್ತಕ್ಯಾನ್ಸರ್ ಪೀಡಿತರಿಗೆ ಈ ವಿಧಾನವನ್ನು ಅಳವಡಿಸಲಾಯಿತು. ರಕ್ತಕಣಗಳನ್ನು ಉತ್ಪಾದಿಸುವ ಮೂಳೆಗಳ ಮಜ್ಜೆಯಲ್ಲಿ ಮೊದಲು ಕ್ಯಾನ್ಸರ್ ಕೋಶಗಳು ಕಣ್ಮರೆಯಾದವು. ಸ್ವಲ್ಪ ದಿನದಲ್ಲಿಯೇ ಮೂಳೆಮಜ್ಜೆಯ ಹೊರಗಿನ ಗಡ್ಡೆಗಳೂ ನಾಶವಾದವು. ಈ ಫಲಿತಾಂಶಗಳು ಕಾರ್ಟ್-ಟಿ ಚಿಕಿತ್ಸೆಯು ಕ್ಯಾನ್ಸರ್ ತಡೆಗಟ್ಟಲು ಪರಿಣಾಮಕಾರಿಯಾಗಬಹುದು ಎಂದು ಊಹಿಸಲು ಅವಕಾಶ ಮಾಡಿಕೊಟ್ಟಿದೆ. ಪ್ರಯೋಗದ ಹಂತದಲ್ಲಿರುವ ಇನ್-ವಿವೊ ಕಾರ್ಟ್ ತಂತ್ರ ಮುಂದೆ ಕ್ಯಾನ್ಸರ್ ತಡೆಗಟ್ಟುವುದರಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ ಎಂದು ಊಹಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.