ನಿಸಾರ್
(ಚಿತ್ರ ಕೃಪೆ: X/@isro)
ಚೆನ್ನೈ: ಇಸ್ರೊ ಮತ್ತು ನಾಸಾ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಭೂಮಿ ಸಮೀಕ್ಷೆಯ ಸಿಂಥೆಟಿಕ್ ಅಪರ್ಚರ್ ರೇಡಾರ್ (ನಿಸಾರ್) ಉಪಗ್ರಹವನ್ನು ಜುಲೈ 30ರಂದು ಉಡ್ಡಯನ ಮಾಡಲಾಗುವುದು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಅಧ್ಯಕ್ಷ ವಿ. ನಾರಾಯಣನ್ ತಿಳಿಸಿದ್ದಾರೆ.
ನಾಸಾ-ಇಸ್ರೊ ಸಹಯೋಗದಲ್ಲಿ ಸಿಂಥೆಟಿಕ್ ಅಪರ್ಚರ್ ರೇಡಾರ್ (NISAR) ಎಂಬ ವಿಶಿಷ್ಟ ಭೂ ವೀಕ್ಷಣಾ ಉಪಗ್ರಹವನ್ನು ಜುಲೈ 30 ರಂದು ಶ್ರೀಹರಿಕೋಟದಿಂದ GSLV-F16 ರಾಕೆಟ್ ಮೂಲಕ ಉಡ್ಡಯನ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
'ಈ ಉಪಗ್ರಹ ಉಡ್ಡಯನದಿಂದ ಭಾರತ, ಅಮೆರಿಕ ಸೇರಿದಂತೆ ಇಡೀ ಜಗತ್ತಿಗೆ ನೆರವಾಗಲಿದೆ. ನೈಸರ್ಗಿಕ ಸಂಪನ್ಮೂಲಗಳ ನಿಗಾ ವಹಿಸಲು ಅತ್ಯಂತ ನಿರ್ಣಾಯಕವಾಗಿದೆ. ದಿನದ 24 ತಾಸು ಭೂಮಿಯ ಚಿತ್ರವನ್ನು ತೆಗೆಯಲು, ಭೂಕುಸಿತ ಪತ್ತೆ, ಹವಾಮಾನ ಬದಲಾವಣೆ, ವಿಪತ್ತು ನಿರ್ವಹಣೆಗೆ ಸಹಾಯ ಮಾಡಲು ನೆರವಾಗಲಿದೆ' ಎಂದು ನಾರಾಯಣನ್ ತಿಳಿಸಿದ್ದಾರೆ.
ಈ ಉಪಗ್ರಹವನ್ನು ಭೂಮಿಯಿಂದ 743 ಕಿ.ಮೀ ಎತ್ತರದಲ್ಲಿ ಸೂರ್ಯನ ಸಮಕಾಲೀನ ಕಕ್ಷೆಯಲ್ಲಿ ನೆಲೆಗೊಳಿಸಲಾಗುವುದು. ಇದರಿಂದ ನಿರಂತರವಾಗಿ ಭೂವೀಕ್ಷಣೆಗೆ ಸೂರ್ಯನ ಬೆಳಕು ಲಭ್ಯವಾಗುತ್ತದೆ. 'ನಿಸಾರ್' ಉಪಗ್ರಹದ ತೂಕ 2392 ಕೆ.ಜಿ ಆಗಿದೆ. ಅವಳಿ ತರಂಗಾಂತರಗಳನ್ನು( ಫ್ರಿಕ್ವೆನ್ಸಿ) ಒಳಗೊಂಡ ಮೊದಲ ಸಿಂಥೆಟಿಕ್ ಅಪರ್ಚರ್ ರೇಡಾರ್ ಇದಾಗಿದೆ.
ಇದರಲ್ಲಿ ನಾಸಾದ ಎಲ್ ಬ್ಯಾಂಡ್ ಮತ್ತು ಇಸ್ರೊದ ಎಸ್ ಬ್ಯಾಂಡ್ ಇವೆ. ಎರಡೂ ತರಂಗಾಂತರಗಳಿಗೆ 12 ಮೀಟರ್‌ನ ಅಗಲದ ಬಿಡಿಸಲಾಗದ ಮೆಷ್ ಅಳವಡಿಸಿದ ಪ್ರತಿಫಲಕ ಆಂಟೆನಾ ಅಳವಡಿಸಲಾಗಿರುತ್ತದೆ.
ಈ ಉಪಗ್ರಹವು ಇಡೀ ಭೂಮಿಯನ್ನು ಎಲ್ಲ ಋತುಮಾನಗಳು, ಹಗಲು–ರಾತ್ರಿ ವೀಕ್ಷಣೆ ನಡೆಸುತ್ತದೆ. ಭೂಮಿಯ ಮೇಲೆ ಆಗುವ ಸಣ್ಣ ಪುಟ್ಟ ಬದಲಾವಣೆಗಳ ಮಾಹಿತಿ ನೀಡುವ, ನೆಲದ ವಿರೂಪ, ಮಂಜುಗಡ್ಡೆಯ ಪದರದ ಚಲನೆ, ಹಡಗುಗಳ ಪತ್ತೆ, ಮಣ್ಣಿನ ತೇವಾಂಶದಲ್ಲಿನ ಬದಲಾವಣೆ, ಕಡಲಿನ ಮೇಲೆ ಕಣ್ಗಾವಲು, ಮೇಲ್ಮೈ ನೀರಿನ ಸಂಗ್ರಹದ ಮೇಲೆ ನಿಗಾ, ನೈಸರ್ಗಿಕ ವಿಕೋಪದ ಸೇರಿದಂತೆ ಹಲವು ಮಾಹಿತಿಗಳನ್ನು ಸಂಗ್ರಹಿಸಲಿದೆ ಎಂದು ಇಸ್ರೊ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.