ಪ್ರತಿ ಹೊಸ ಅನ್ವೇಷಣೆಯಲ್ಲೂ ಏನಾದರೊಂದು ಹೊಸದಾದ ಕಥೆಯಿದ್ದೇ ಇರುತ್ತದೆ. ಆದರೆ, ಎಲ್ಲ ಅನ್ವೇಷಣೆಯ ಹಿಂದೆಯೂ ಸುಲಭವಾಗಿ ತಣಿಯದ ಕುತೂಹಲ, ಹಿಡಿದ ಕೆಲಸ ಮುಗಿಯುವವರೆಗೂ ಬಿಡದ ಛಲ, ಸಮಸ್ಯೆಗಿಂತಲೂ ಅದಕ್ಕೆ ಇರಬಹುದಾದ ಪರಿಹಾರದ ಮೇಲೆ ಗಮನವಿಡುವ ಮನಃಸ್ಥಿತಿ ಇದ್ದೇ ಇರುತ್ತದೆ. ಪ್ರತಿ ಬಾರಿ ನೊಬೆಲ್ ಬಹುಮಾನದ ಘೋಷಣೆಯಾದಾಗಲೂ, ಇಂತಹ ಕೆಲವು ವಿಜ್ಞಾನಿಗಳ ಹಲವು ಆಸಕ್ತಿಕರ, ಸ್ಫೂರ್ತಿದಾಯಕ ಕಥೆಗಳು ಹೊರಬರುತ್ತವೆ; ಸಾಮಾನ್ಯ ಜನರೂ ವಿಜ್ಞಾನಲೋಕದೆಡೆಗೆ ಮತ್ತೊಮ್ಮೆ, ಮಗದೊಮ್ಮೆ ಅಚ್ಚರಿಯಿಂದ ಕಣ್ಣರಳಿಸುವಂತೆ ಮಾಡುತ್ತವೆ.
2025ನೇ ಸಾಲಿನ ರಸಾಯನವಿಜ್ಞಾನದ ನೊಬೆಲ್ ಲಭಿಸಿದ್ದು ಸುಸುಮು ಕಿಟಗವ, ರಿಚರ್ಡ್ ರಾಬ್ಸನ್ ಮತ್ತು ಓಮರ್ ಯಾಘಿ ಅವರಿಗೆ; ಬೇರೆ ಬೇರೆ ಹಿನ್ನೆಲೆಯ ಈ ಮೂವರು ರಸಾಯನವಿಜ್ಞಾನಿಗಳನ್ನು ಒಂದೆಡೆ ಸೇರಿಸಿದ್ದು ಲೋಹ-ಸಾವಯವ ಚೌಕಟ್ಟುಗಳು!
‘ಲೋಹ-ಸಾವಯವ ಚೌಕಟ್ಟು’ಗಳು ಎಂಬ ಈ ಅಪರಿಮಿತ ಅನ್ವಯಿಕೆಗಳನ್ನುಳ್ಳ ರಚನೆ ತಯಾರಾಗಲು ನಾಂದಿಹಾಡಿದ್ದು ರಾಬ್ಸನ್. ಇಂಗ್ಲೆಂಡ್‌ನಲ್ಲಿ 1937ರ ಜೂನ್ 4ರಂದು ಜನಿಸಿದ ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಇಂಗ್ಲೆಂಡಿನಲ್ಲೇ ಮುಗಿಸಿ, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣವನ್ನು ಮುಂದುವರೆಸಿದರು; ಕ್ಯಾಲ್ ಟೆಕ್ ಮತ್ತು ಸ್ಟಾನ್ಫರ್ಡ್ ವಿಶ್ವವಿದ್ಯಾಲಯಗಳಲ್ಲಿ ತಮ್ಮ ಪೋಸ್ಟ್ ಡಾಕ್ಟರಲ್ ಸಂಶೋಧನೆಗಳನ್ನು ನಡೆಸಿ, ನಂತರ ಮೆಲ್ಬೋರ್ನ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ವೃತ್ತಿಯನ್ನು ಪ್ರಾರಂಭಿಸಿ, ಅಲ್ಲಿಯೇ, ತಮ್ಮ ನಿವೃತ್ತಿಯವರೆಗೂ ಕಾರ್ಯನಿರ್ವಹಿಸಿದರು.
ರಸಾಯನವಿಜ್ಞಾನದ ವಿದ್ಯಾರ್ಥಿಗಳಿಗೆ ‘ಬಾಲ್ ಅಂಡ್ ಸ್ಟಿಕ್ ಮಾಡೆಲ್’ ಗೊತ್ತೇ ಇರುತ್ತದೆ; ರಾಸಾಯನಿಕ ಸಂಯುಕ್ತ ಪದಾರ್ಥಗಳ 3-ಆಯಾಮದ ರಚನೆಯನ್ನು ಅರ್ಥೈಸಿಕೊಳ್ಳಲು ಪುಟಾಣಿ ಚೆಂಡುಗಳು ಮತ್ತು ಕಡ್ಡಿಗಳನ್ನು ಬಳಸಿ ಮಾದರಿಗಳನ್ನು ತಯಾರಿಸಬಹುದು. ರಾಸಾಯನಿಕ ಬಂಧವನ್ನು, ಅಣುವಿನ ಜೋಡಣೆಯನ್ನು ಸರಳವಾಗಿ ತಿಳಿದುಕೊಳ್ಳುವುದಕ್ಕೆ ಈ ಮಾದರಿ ಅತ್ಯಂತ ಸಹಾಯಕ. ಮೊದಲ ಬಾರಿಗೆ 1883ರಲ್ಲಿ ಆಗಸ್ಟ್ ಹಾಫ್ಮನ್ ಎಂಬ ಜರ್ಮನ್ ವಿಜ್ಞಾನಿ ಉಲನ್ ಉಂಡೆಗಳು ಮತ್ತು ಕ್ರೋಷಕಡ್ಡಿಗಳನ್ನು ಬಳಸಿ ಆಣ್ವಿಕ ರಚನೆಯನ್ನು ಸರಳವಾಗಿ ಎಲ್ಲರಿಗೂ ಅರ್ಥಮಾಡಿಸಲು ಮೊದಲ ‘ಬಾಲ್ ಅಂಡ್ ಸ್ಟಿಕ್ ಮಾಡೆಲ್’ ತಯಾರಿಸಿದರು. ಮುಂದಿನ ದಿನಗಳಲ್ಲಿ, ಮರದಲ್ಲಿ ಕೆತ್ತಿ, ಕೊರೆದು ತಯಾರಿಸುತ್ತಿದ್ದರು.
ರಿಚರ್ಡ್ ರಾಬ್ಸನ್ ಅವರು ತಮ್ಮ ರಸಾಯನವಿಜ್ಞಾನದ ಸಂಶೋಧಕರಿಗೊಂದು ಕಾರ್ಯಾಗಾರ ನಡೆಸುತ್ತಿದರು. ಅಲ್ಲಿ ಅವರೆಲ್ಲ ಮರದಲ್ಲಿ ಕೊರೆದು ತಯಾರಿಸುತ್ತಿದ್ದ ಗುಂಡುಗಳು ಮತ್ತು ಕಡ್ಡಿಗಳಿಗೆ ನಿರ್ದಿಷ್ಟವಾದ ರೂಪ, ಆಕಾರವಿರಬೇಕಾಗುತ್ತಿತ್ತು. ಆ ಗುಂಡುಗಳಲ್ಲಿ ಎಷ್ಟು ರಂಧ್ರಗಳಿರಬೇಕು ಎಂಬುದು ಅದು ಯಾವ ಅಣುವಿನ ಪ್ರತಿರೂಪ ಎಂಬುದರ ಮೇಲೆ ಆಧಾರಿತ. ಉದಾಹರಣೆಗೆ, ಅದು ಇಂಗಾಲವಾದರೆ ನಾಲ್ಕು ರಂಧ್ರ, ಆಮ್ಲಜನಕವಾದರೆ ಎರಡು ರಂಧ್ರ - ಹೀಗೆ! ಅಷ್ಟೇ ಅಲ್ಲದೆ, ಆ ರಂಧ್ರಗಳು ಯಾವ ಕೋನದಲ್ಲಿರಬೇಕು ಎಂಬುದು ಕೂಡ, ಆ ಪರಮಾಣುವು ಎಂತಹ ರಾಸಾಯನಿಕ ಬಂಧದಲ್ಲಿ ಪಾಲ್ಗೊಳ್ಳುತ್ತದೆ ಎಂಬುದರ ಮೇಲೆ ನಿರ್ಭರವಾಗುತ್ತದೆ. ಇಂತಹ ವಿವರಗಳನ್ನು ಗಮನಿಸುತ್ತಾ, ರಾಬ್ಸನ್ ಅವರಿಗೆ ಈ 3–ಡಿ ರಚನೆಗಳಲ್ಲಿರುವ ನಿಗಧಿತ ಅಂತರಗಳು ಗಮನ ಸೆಳೆದವು; ಒಂದಕ್ಕೊಂದು ಸೇರುತ್ತಾ ಈ ಲೋಹದ ಮತ್ತು ಇಂಗಾಲದ ಅಣುಗಳು ಉಂಟುಮಾಡುವ ಚೌಕಟ್ಟುಗಳಲ್ಲಿ, ನಿರ್ದಿಷ್ಟವಾಗಿಯೇ ಇರುವ ಕೋನ, ರಂಧ್ರ, ಜೋಡಣೆಯಂತಹ ವಿಷಯಗಳು ಅವರಲ್ಲಿ ಹೊಸ ಹೊಳಹನ್ನು ಹುಟ್ಟಿಸಿತ್ತು.
ಸುಮಾರು ಹತ್ತು ವರ್ಷಗಳು ಅದೇ ಯೋಚನೆಯಲ್ಲಿದ್ದ ರಾಬ್ಸನ್ ಅವರು, ಪ್ರತಿ ವರ್ಷದ ಕಾರ್ಯಾಗಾರದಲ್ಲೂ ಅದೇ ನಿಟ್ಟಿನಲ್ಲಿ ಯೋಚಿಸುತ್ತಿದ್ದರು. ಇಂತಹ ಚೌಕಟ್ಟುಗಳಲ್ಲಿ ಹೇಗೆ ಅನಿಲಗಳನ್ನು ಸೆರೆಹಿಡಿಯಬಹುದು, ವೇಗವರ್ಧಕಗಳನ್ನು ಹಿಡಿದಿಡಬಹುದು ಎಂಬಂತಹ ಯೋಚನೆಗಳು ಯೋಜನೆಗಳಾಗಿ ಬದಲಾದವು. ತಾಮ್ರದ ಅಣುಗಳೊಂದಿಗೆ ಸಾವಯವ ಆಣ್ವಿಕ ಗುಂಪುಗಳಾದ ‘ನೈಟ್ರೈಲ್’ಗಳನ್ನು ಸೇರಿಸಿದಾಗ, 3–ಆಯಾಮದ ರಚನೆ ಹೇಗಿರುತ್ತದೆಂಬ ಸಿದ್ಧಾಂತವನ್ನು ರಾಬ್ಸನ್ ಸೃಜಿಸಿದರು. ಈ ಲೋಹ-ಸಾವಯವ ಉತ್ಪನ್ನದ ಭೌತಿಕ ರಚನೆಯ ಮಾದರಿಯನ್ನು ತಯಾರಿಸಿದಾಗ, ವಜ್ರವು ಇಂಗಾಲದ ಅಣುಗಳ ಜೋಡಣೆಯಿಂದ ಹೇಗೆ ರಚನೆಯಾಗಿರುತ್ತದೋ, ಅಂತಹದ್ದೇ ಸ್ಫಟಿಕದ ರೂಪ ತಯಾರಾಗುತ್ತದೆ ಎಂದು ಪ್ರತಿಪಾದಿಸಿದರು. ಆ ರಚನೆಯಲ್ಲಿ, ಅಣುಗಳು ಮತ್ತು ಬಂಧಗಳ ನಡುವೆ ಇರುವ ನಿರ್ದಿಷ್ಟ ರೂಪದ, ಆಕಾರದ, ಗಾತ್ರದ ಅಂತರಗಳಲ್ಲಿ ನಿರ್ದಿಷ್ಟ ಪರಮಾಣುಗಳನ್ನು, ಅಯಾನುಗಳನ್ನು, ಅಣುಗಳನ್ನು ಕೂರಿಸಬಹುದು ಎಂಬುದನ್ನು ವಿವರಿಸಿದರು. ಇದನ್ನು ಅವರು ಅನೇಕ ಕೋಣೆಗಳಿರುವ ಹೋಟೆಲ್ ಮಳಿಗೆಗೆ ಹೋಲಿಸಿದರು; ತಮಗೆ ಹೊಂದುವ ಕೋಣೆಗೆ ಸೂಕ್ತ ಅತಿಥಿ ಬಂದು ಹೋಗುವ ಹಾಗೆ, ವಿವಿಧ ಅಣುಗಳಿಗೆ ತಕ್ಕ ಹಾಗೆ ಚೌಕಟ್ಟಿನೊಳಗಿನ ಅಂತರಗಳನ್ನು ರಚಿಸಬಹುದು ಎಂಬುದನ್ನು ರಾಬ್ಸನ್ ಅವರ ಮಾದರಿಯು ವಿವರಿಸಿತು. ಈ ಮೂಲಭೂತ ಕಲ್ಪನೆಯ ಮೇಲೆ ಮತ್ತಿಬ್ಬರು ರಸಾಯನ ವಿಜ್ಞಾನಿಗಳಾದ ಸುಸುಮು ಕಿಟಗವ ಮತ್ತು ಓಮರ್ ಯಾಗಿ ತಮ್ಮ ಪರಿಶ್ರಮ ಮತ್ತು ಪರಿಣಿತಿಯನ್ನು ಧಾರೆಯೆರೆದು, ರಾಬ್ಸನ್ ಅವರೊಂದಿಗೆ ನೊಬೆಲ್ ಪ್ರಶಸ್ತಿಗೆ ಭಾಜನರಾದರು.
ರಾಬ್ಸನ್ ಅವರು ನೊಬೆಲ್ ಪಡೆದ ಸುದ್ದಿ ತಿಳಿದ ನಂತರ, ಫೋನಿನಲ್ಲಿ ನೀಡಿದ ಸಂದರ್ಶನದಲ್ಲಿ ತಮ್ಮ ಸಂಶೋಧನೆಯ ಬಗ್ಗೆ ಹಂಚಿಕೊಳ್ಳುತ್ತಾ, ‘ತಾನೇನೂ ವಿಶೇಷವಾಗಿ ಮಾಡಿಲ್ಲ; ಯಾವುದೋ ಅಣುಗಳನ್ನು ಮಿಕ್ಸ್ ಮಾಡಿ, ಏನೋ ಒಂದನ್ನು ತಯಾರಿಸಿದೆ ಅಷ್ಟೇ’ ಎಂದು ವಿನಮ್ರರಾಗಿ ಹೇಳಿ ನಗೆಯಾಡಿದರು. ‘ಆದರೆ, ಎಲ್ಲಾ ಜವಾಬ್ದಾರಿಗಳನ್ನೂ ಮರೆತು ವಿಜ್ಞಾನದ ಬಗ್ಗೆ, ಸಂಶೋಧನೆಯ ಬಗ್ಗೆ ಒಂದು ಬಗೆಯ ಗೀಳಿದ್ದರೆ ಮಾತ್ರ ಇಂತಹದ್ದೇನಾದರೂ ಸಾಧ್ಯವಾಗುತ್ತದೆಯಷ್ಟೇ! ಹತ್ತು ವರ್ಷದಿಂದಲೂ ಗುಂಗು ಹಿಡಿಸಿದ್ದ ಆಣ್ವಿಕ ರಚನೆಯ ನಡುವಿನ ಅಂತರಗಳು, ಹೀಗೆ ಮುಂದೆ ಅನೇಕ ಅದ್ಭುತ ಬೆಳವಣಿಗೆಗಳಿಗೆ ಕಾರಣವಾಗುತ್ತದೆ ಎಂಬ ಅಚಲ ನಂಬಿಕೆಯಿತ್ತು’ ಎಂದು ತಮ್ಮ ಮನದ ಮಾತನ್ನು ಹಂಚಿಕೊಂಡರು. ಮಾಡುವ ಕೆಲಸದಲ್ಲಿ ಸಂಪೂರ್ಣ ತೊಡಗಿಸಿಕೊಳ್ಳುವಿಕೆ ಮತ್ತು ಅಪರಿಮಿತ ಶ್ರದ್ಧೆ, ಅನನ್ಯ ಫಲಿತಾಂಶಗಳನ್ನು ನೀಡುತ್ತದೆ ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.