ಪರಿಸರ ಸಮಸ್ಯೆಗಳಲ್ಲಿ ಕುಡಿಯುವ ನೀರಿನ ಮಾಲಿನ್ಯ ಹಾಗೂ ಕೊಳಚೆ ನೀರಿನ ಸಂಸ್ಕರಣೆ ಪ್ರಮುಖವಾದವು. ನದಿ, ಕೊಳ, ಕೆರೆ, ಸಾಗರಗಳಲ್ಲದೆ, ಅಂತರ್ಜಲಮೂಲಗಳೂ ಮಲಿನವಾಗಿವೆ. ಈ ಮಾಲಿನ್ಯಗಳಲ್ಲಿ ‘ಪರ್‌ಪ್ಲೂರೋಆಲ್ಕೈಲ್’ನ ಮಾಲಿನ್ಯವೂ ಒಂದು. ನಾವು ನಿತ್ಯವೂ ಬಳಸುವ ಹಲವಾರು ವಸ್ತುಗಳಿಂದ ಸೋರುವ ಈ ಬಗೆಯ ರಾಸಾಯನಿಕಗಳು ಬಡಪೆಟ್ಟಿಗೆ ನಾಶವಾಗುವುದಿಲ್ಲ. ಇಂತಹ ಶಾಶ್ವತ ಮಲಿನಕಗಳನ್ನೂ ನೀರಿನಿಂದ ಹೊರ ತೆಗೆದು ಶುಚಿಗೊಳಿಸುವ ಹೊಸ ವಿಧಾನವೊಂದನ್ನು ದಕ್ಷಿಣ ಕೊರಿಯಾದ ಕೊರಿಯಾ ಅಡ್ವಾನ್ಸಡ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್ ಅ್ಯಂಡ್ ಟೆಕ್ನಾಲಜಿ ಸಂಸ್ಥೆಯ ಸೋಟೆ ಕಾಂಗ್ ಮತ್ತು ಸಂಗಡಿಗರು ರೂಪಿಸಿದ್ದಾರಂತೆ. ನೀರು ಹಾಗೂ ಕೊಳಚೆನೀರಿನಲ್ಲಿ ಇರುವ ಪರ್‌ಫ್ಲೂರೋಆಲ್ಕೈಲ್ ಹಾಗೂ ಪಾಲಿಫ್ಲೂರೋಆಲ್ಕೈಲ್ ರಾಸಾಯನಿಕಗಳನ್ನು ಸಾವಿರ ಪಟ್ಟು ಹೆಚ್ಚು ಹಾಗೂ ನೂರು ಪಟ್ಟು ವೇಗವಾಗಿ ಈ ವಿಧಾನ ಶುಚಿಗೊಳಿಸಲಿದೆ.
‘ಪರ್‌ಫ್ಲೂರೋಆಲ್ಕೈಲ್’ ಹಾಗೂ ‘ಪಾಲಿಫ್ಲೂರೋಆಲ್ಕೈಲ್’ ಎನ್ನುವವು ವಿಶಿಷ್ಟ ರಾಸಾಯನಿಕಗಳು. ‘ಪಿಎಫ್‌ಎ’ ಎಂದು ಚುಟುಕಾಗಿ ಕರೆಯಿಸಿಕೊಳ್ಳುವ ಇವು ಫ್ಲೂರೀನಿನ ಜೊತೆಗೆ ಇಥಿಲೀನಿನಂತಹ ಅಣುಗಳು ಬೆಸೆದುಕೊಂಡು ರೂಪುಗೊಂಡ ರಾಸಾಯನಿಕಗಳ ವರ್ಗ. ಈ ವರ್ಗದಲ್ಲಿರುವ ರಾಸಾಯನಿಕಗಳು ನೀರಿನಂತಹ ದ್ರವಗಳಿಂದ, ಗಟ್ಟಿಯಾದ ಅಂಟುಗಳವರೆಗೂ ಹಲವು ರೀತಿಯಲ್ಲಿ ರೂಪುಗೊಳ್ಳಬಲ್ಲುವು. ನಾವು ನಿತ್ಯವೂ ಬಳಸುವ ಹಲವಾರು ವಸ್ತುಗಳಲ್ಲಿ ಇವು ಬೆರೆತಿರುತ್ತವೆ. ಉದಾಹರಣೆಗೆ, ಅಡುಗೆಮನೆಯಲ್ಲಿ ಬಳಸುವ ನಾನ್ ಸ್ಟಿಕ್ ಪಾತ್ರೆಗಳಿಗೆ ಹಚ್ಚಿರುವ ನಯವಾದ ಲೇಪಗಳಲ್ಲಿ, ಚಾಟ್ ಅಂಗಡಿಗಳಿಂದ ತರುವ ತಿನಿಸುಗಳನ್ನು ಪ್ಯಾಕ್ ಮಾಡಿದ ಪೇಪರು ಪ್ಯಾಕಿನ ಒಳಭಾಗದಲ್ಲಿನ ತೇವ ಅಂಟದ ನಯವಾದ ಲೇಪಗಳಲ್ಲಿ, ಕಲೆಗಳು ಹತ್ತದಂತಹ ನೆಲಹಾಸು ಕಂಬಳಿ, ಉಡುಪುಗಳಲ್ಲಿ, ನೀರಿನ ಕೊಳವೆಗಳನ್ನು ಅಂಟಿಸುವ ಗೋಂದುಗಳಲ್ಲಿ, ಬೆಂಕಿಯನ್ನು ಆರಿಸುವ ಪೋಮುಗಳಲ್ಲಿ, ಇಲೆಕ್ಟ್ರಾನಿಕ್ ಸಾಧನಗಳಲ್ಲಿ ಈ ವರ್ಗದ ರಾಸಾಯನಿಕಗಳು ಬಳಕೆಯಾಗುತ್ತವೆ.
ಇಷ್ಟೊಂದು ಉಪಯುಕ್ತವಾಗಿರುವ ಈ ರಾಸಾಯನಿಕಗಳಲ್ಲೊಂದು ದೋಷವಿದೆ. ಇವು ಒಮ್ಮೆ ನೀರು–ಮಣ್ಣುಗಳನ್ನು ಸೇರಿದರೆ ಹಾಗೆಯೇ ಉಳಿದುಬಿಡುತ್ತವೆ. ಬೇರೆ ವಸ್ತುಗಳು ಬಿಸಿಲು, ನೀರು, ಆಕ್ಸಿಜನಿನಿಂದಾಗಿ ಶಿಥಿಲವಾಗಬಹುದು. ಆದರೆ ಪರ್‌ಫ್ಲೂರೋಆಲ್ಕೈಗಳು ಹಾಗಲ್ಲ. ಇವು ಸುಲಭವಾಗಿ ಬೇರೆ ರಾಸಾಯನಿಗಳ ಜೊತೆಗೆ ಪ್ರತಿಕ್ರಯಿಸುವುದಿಲ್ಲ, ಕೊಳೆಯುವುದಿಲ್ಲ, ಸುಟ್ಟರೆ ಬೂದಿಯೂ ಆಗುವುದಿಲ್ಲ. ಹೀಗಾಗಿ ನಿತ್ಯ ಬಳಸುವ ಎಲ್ಲ ವಸ್ತುಗಳಿಂದಲೂ ಸ್ವಲ್ಪ, ಸ್ವಲ್ಪವೇ ಸೋರಿ ಎಲ್ಲ ಜಲಮೂಲಗಳಲ್ಲೂ, ಆಹಾರಮೂಲಗಳಲ್ಲಿಯೂ ಬೆರೆತಿರುತ್ತವೆ.
ಮಾಲಿನ್ಯವೊಂದೇ ಸಮಸ್ಯೆ ಅಲ್ಲ. ಈ ರಾಸಾಯನಿಕಗಳು ದೇಹದ ಮೇಲೆ ದುಷ್ಪರಿಣಾಮವನ್ನೂ ಬೀರುತ್ತವೆ ಎನ್ನುವುದು ಆತಂಕದ ವಿಷಯ. ಪರ್‌ಫ್ಳೂರೋಆಲ್ಕೈಲುಗಳ ಸೇವನೆಯಿಂದಾಗಿ ಲೀವರಿನ ಚಟುವಟಿಕೆಗಳಲ್ಲಿ ವ್ಯತ್ಯಾಸ ಉಂಟಾಗಬಹುದು. ದೇಹದ ರೋಗನಿರೋಧಕ ಶಕ್ತಿ ಕುಗ್ಗಬಹುದು. ಕೆಲವು ಕ್ಯಾನ್ಸರ್‌ಗಳು ಕೂಡ ಉಂಟಾಗುತ್ತವೆಂದು ಸುಳಿವುಗಳು ತಿಳಿಸಿವೆ. ಅಮೆರಿಕದಲ್ಲಿ ಹತ್ತು ವರ್ಷಗಳ ಹಿಂದೆ ನಡೆದ ಅಧ್ಯಯನವೊಂದು, ಒಂದು ಬಗೆಯ ಲ್ಯೂಕೀಮಿಯ ಹಾಗೂ ವಿಲ್ಮ್ಸ್ ಟ್ಯೂಮರ್ ಎನ್ನುವ ಕ್ಯಾನ್ಸರಿಗೆ ತುತ್ತಾಗಿದ್ದ ಎಳೆಯರ ತಾಯಂದಿರು ಬಸುರಾಗಿದ್ದಾಗ ಪರ್‌ಫ್ಲೂರೋಆಕ್ಟೇನ್ ಸಲ್ಫೂನಿಕ್ ಆಮ್ಲ ಹಾಗೂ ಪರ್‌ಫ್ಲೂರೋಆಕ್ಟನಾಯಿಕ್ ಆಮ್ಲಗಳ ಪ್ರಮಾಣ ಹೆಚ್ಚಿದ್ದ ನೀರನ್ನು ಸೇವಿಸಿದ್ದರು ಎಂದು ತಿಳಿಸಿದೆ.
ಅತ್ಯಲ್ಪ ಪ್ರಮಾಣದಲ್ಲಿಯೂ ಇಂತಹ ರಾಸಾಯನಿಕಗಳ ಸೇವನೆ ಅಪಾಯಕಾರಿಯಾಗಿದ್ದರಿಂದ ಕುಡಿಯುವ ನೀರಿನಲ್ಲಿ ಅವುಗಳ ಪ್ರಮಾಣವನ್ನು ಮಿತಿಗೊಳಿಸಲಾಗಿದೆ. ಪಿಎಫ್‌ಎ ಇರುವಂತಹ ನೀರನ್ನು ಶುಚಿಗೊಳಿಸಿ ಸರಬರಾಜು ಮಾಡಬೇಕೆನ್ನುವ ನಿಯಮವೂ ಇದೆ. ಈ ರಾಸಾಯನಿಕಗಳು ನೀರಿನ ಮೂಲಕ ಹಸುವಿನ ಹಾಲು, ತಾಯಿಯ ಹಾಲಿನಲ್ಲಿಯೂ ಸೇರಿಕೊಳ್ಳುತ್ತವೆ. ಮಕ್ಕಳು ಹಾಗೂ ದೊಡ್ಡವರ ರಕ್ತದಲ್ಲಿಯೂ ಇವುಗಳನ್ನು ಪತ್ತೆ ಮಾಡಲಾಗಿದೆ.
ಕುಡಿಯುವ ನೀರನ್ನು ಈ ವಿಷವಸ್ತುಗಳಿಂದ ಮುಕ್ತಗೊಳಿಸಲು ಹಲವು ವಿಧಾನಗಳನ್ನು ಬಳಸಲಾಗುತ್ತಿದೆ. ಪ್ರಮುಖವಾಗಿ ಆಕ್ಟಿವೇಟೆಡ್ ಕಾರ್ಬನ್ ಅಥವಾ ಅತಿ ಕ್ರಿಯಾಶೀಲವಾದ ಇದ್ದಿಲಿನಿಂದ ಅವನ್ನು ಪ್ರತ್ಯೇಕಿಸಬಹುದು. ಅಥವಾ ರಿವರ್ಸ್ ಆಸ್ಮಾಸಿಸ್ ತಂತ್ರದ ಮೂಲಕ, ಅತಿ ಸೂಕ್ಷ್ಮವಾದ ಕೃತಕ ಪೊರೆಗಳನ್ನು ಬಳಸಿ ನೀರನ್ನು ಶುಚಿಗೊಳಿಸಬಹುದು. ಆದರೆ ಇವು ಅಲ್ಪ ಪ್ರಮಾಣದಲ್ಲಿ ಆಗಬಹುದೇ ಹೊರತು, ಕೊಳಚೆ ನೀರಿನಲ್ಲಿರುವಷ್ಟು ಪ್ರಮಾಣದ ಪಿಎಫ್‌ಎಗಳನ್ನು ಈ ವಿಧಾನಗಳಿಂದ ಶುಚಿಗೊಳಿಸುವುದು ಕಷ್ಟ. ಈ ನಿಟ್ಟಿನಲ್ಲಿ ಹೊಸದೊಂದು ವಿಧಾನದ ಅಗತ್ಯವಿತ್ತು. ಕಾಂಗ್ ಮತ್ತು ಸಂಗಡಿಗರು ಅದನ್ನು ಈಗ ಒದಗಿಸಿದ್ದಾರೆ.
ಕಾಂಗ್ ತಂಡವು ತಾಮ್ರ ಹಾಗೂ ಅಲ್ಯುಮಿನಿಯಂ ಲೋಹಗಳ ನೈಟ್ರೇಟ್‌ಗಳು ಹೈಡ್ರಾಕ್ಸೈಡ್‌ಗಳ ಜೊತೆಗೆ ಬೆಸೆದುಕೊಂಡು, ಪದರ, ಪದರವಾಗಿ ಇರುವಂತಹ ವಿಶೇಷ ರಾಸಾಯನಿಕವನ್ನು ತಯಾರಿಸಿದ್ದಾರೆ. ಈ ವರ್ಷ ಕೆಮಿಸ್ಟ್ರಿ ನೊಬೆಲ್ ಪಾರಿತೋಷಕವನ್ನು ಗಳಿಸಿದ ಸಂಶೋಧನೆಗಳ ಫಲ ಇದು ಎನ್ನಬಹುದು. ಈ ಲೋಹ ಹಾಗೂ ಸಾವಯವ ಬೆರೆತ ರಾಸಾಯನಿಕಗಳಲ್ಲಿ ಆಕ್ಟಿವೇಟೆಡ್ ಕಾರ್ಬನ್ನಿನಲ್ಲಿ ಇರುವುದಕ್ಕಿಂತಲೂ ಹೆಚ್ಚು ರಂಧ್ರಗಳೂ, ಪಿಎಫ್‌ಎ ಅಣುಗಳು ಕೂಡಲು ಅವಕಾಶಗಳೂ ಇರುತ್ತವೆ. ಪ್ರತಿ ಗ್ರಾಂ ವಸ್ತುವೂ ಗರಿಷ್ಠ ಸುಮಾರು 1.72 ಗ್ರಾಂನಷ್ಟು ಪಿಎಫ್‌ಎಯನ್ನು ಅಂಟಿಸಿಕೊಳ್ಳಬಹುದು. ಅದುವೂ ಇದನ್ನು ಬಿಸಿ ಮಾಡಬೇಕಿಲ್ಲ. ನೀರಿನ ಆಮ್ಲೀಯತೆಯಲ್ಲಿಯೇ ಇಷ್ಟು ಪಿಎಫ್‌ಎಯನ್ನು ಅದು ಹೀರಿಕೊಳ್ಳುತ್ತದೆ. ಅಂಟಿಕೊಂಡ ಪಿಎಫ್‌ಎಯನ್ನು ಕಾಯಿಸಿ ಬೇರ್ಪಡಿಸಿ, ಅದರಲ್ಲಿರುವ ಫ್ಲೂರೀನನ್ನು ಕಿತ್ತೊಗೆದು, ಸುರಕ್ಷಿತ ರಾಸಾಯನಿಕವನ್ನಾಗಿಸಬಹುದು. ಹೀಗೆ ಕೇವಲ ನೀರನ್ನು ಶುಚಿಗೊಳಿಸುವುದಷ್ಟೆ ಅಲ್ಲ, ಪಿಎಫ್‌ಎಯನ್ನೂ ನಾಶಗೊಳಿಸುವ ವಿಧಾನ ಇದು ಎನ್ನುತ್ತಾರೆ, ಕಾಂಗ್.
ಪಿಎಫ್‌ಎಯನ್ನು ಕಿತ್ತೊಗೆದ ನಂತರ ಅದು ಮತ್ತೆ ಮೊದಲಿನಂತೆಯೇ ಆಗುತ್ತದೆ. ಇನ್ನಷ್ಟು ಪಿಎಫ್‌ಎ ಅಂಟಿಸಿಕೊಳ್ಳಲು ಸಿದ್ಧವಾಗುತ್ತದೆ. ಹೀಗೆ ಆರೇಳು ಬಾರಿ ಈ ವಸ್ತುವನ್ನು ಬಳಸಿ ನೀರನ್ನು ಶುಚಿಗೊಳಿಸಬಹುದು. ತಾವೇ ನಿರ್ದಿಷ್ಟ ಪ್ರಮಾಣದ ಪಿಎಫ್‌ಎ ಬೆರೆಸಿ ಮಲಿನಗೊಳಿಸಿದ ನೀರನ್ನು ಈ ವಸ್ತುವಿನ ಮೂಲಕ ಸೋಸಿ, ಎಷ್ಟು ಶುಚಿಗೊಳ್ಳುತ್ತದೆ ಎಂದು ಗಮನಿಸಿದ್ದಾರೆ. ಒಂದು ನಿಮಿಷದಲ್ಲಿ ಅರ್ಧ ಲೀಟರ್ ನೀರಿನಿಂದ ಏಳುನೂರು ಮಿಲಿಗ್ರಾಮಿನಷ್ಟು ಪಿಎಫ್‌ಎಯನ್ನು ಈ ವಸ್ತು ಶುಚಿಗೊಳಿಸುತ್ತದೆ. ಹೀಗೆ ಸೋಸುವ ಹಾಗೂ ಅನಂತರ ಬಿಸಿ ಮಾಡಿ ಪಿಎಫ್‌ಎ ಬೇರ್ಪಡಿಸುವ ಮೂಲಕ, ನಿರಂತರವಾಗಿ ನೀರನ್ನು ಶುಚಿಗೊಳಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.