ADVERTISEMENT

‘ಕ್ವಾಂಟಮ್ ಸುಪ್ರಿಮಸಿ’ಯನ್ನು ಮೆರೆಸಿದ ವಿಜ್ಞಾನಿ: ಪ್ರೊ. ಜಾನ್ ಎಂ. ಮಾರ್ಟಿನಿಸ್

ಎಚ್.ಎಸ್.ಸುಧೀರ
Published 18 ನವೆಂಬರ್ 2025, 23:44 IST
Last Updated 18 ನವೆಂಬರ್ 2025, 23:44 IST
   

ಕ್ವಾಂಟಮ್ ಜಗತ್ತಿನ ಮತ್ತೊಬ್ಬ ವಾಸ್ತುಶಿಲ್ಪಿ ನೊಬೆಲ್ ಪ್ರಶಸ್ತಿ ವಿಜೇತ ಪ್ರೊ. ಜಾನ್ ಎಂ. ಮಾರ್ಟಿನಿಸ್;
2025ರ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಈ ಬಾರಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ, ಬರ್ಕ್ಲಿಯ ಪ್ರೊಫೆಸರ್ ಜಾನ್ ಕ್ಲಾರ್ಕ್, ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ, ಸಾಂಟಾ ಬಾರ್ಬರಾ ಮತ್ತು ಯೇಲ್ ವಿಶ್ವವಿದ್ಯಾಲಯದ ಪ್ರೊಫೆಸರ್ ಮೈಕೆಲ್ ಹೆಚ್. ಡೆವೊರೆಟ್ ಹಾಗು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ, ಸಾಂಟಾ ಬಾರ್ಬರಾದ ಪ್ರೊ. ಜಾನ್ ಎಂ. ಮಾರ್ಟಿನಿಸ್ ಅವರು ಹಂಚಿಕೊಂಡಿದ್ದಾರೆ. ‘ವಿದ್ಯುತ್ ಸರ್ಕ್ಯೂಟ್‌ನಲ್ಲಿ ಮ್ಯಾಕ್ರೋಸ್ಕೋಪಿಕ್ ಕ್ವಾಂಟಮ್ ಮೆಕ್ಯಾನಿಕಲ್ ಟನೆಲಿಂಗ್ ಮತ್ತು ಶಕ್ತಿಯ ಕ್ವಾಂಟೈಸೇಶನ್ ವಿದ್ಯಮಾನಗಳನ್ನು ಕಂಡುಹಿಡಿದಿದ್ದಕ್ಕಾಗಿ’ ಅವರಿಗೆ ಈ ಗೌರವ ಸಂದಿದೆ.

ನಿದ್ರೆಯಲ್ಲಿದ್ದ ವಿಜ್ಞಾನಿಗೆ ನೊಬೆಲ್ ಸಿಹಿ ಸುದ್ದಿ

ನೊಬೆಲ್ ಪ್ರಶಸ್ತಿಯನ್ನು ನಿರೀಕ್ಷಿಸುವ ಕೆಲವು ವಿಜ್ಞಾನಿಗಳು ನೊಬೆಲ್ ಪ್ರಶಸ್ತಿ ಘೋಷಿಸುವ ವಾರವಂತೂ ಅಕ್ಷರಶಃ ರಾತ್ರಿಯೆಲ್ಲ ಎಚ್ಚರವಾಗಿರುತ್ತಾರೆ; ಅಥವಾ ಕನಿಷ್ಠಪಕ್ಷ ನೊಬೆಲ್ ಸಮಿತಿಯಿಂದ ಬರುವ ಕರೆಗಾಗಿ ಕಾತರದಿಂದ ಕಾಯುತ್ತಿರುತ್ತಾರೆ. ಆದರೆ, ಪ್ರೊ. ಜಾನ್ ಎಂ. ಮಾರ್ಟಿನಿಸ್ ಅವರ ವಿಷಯದಲ್ಲಿ ಇದು ಬೇರೆಯೇ ಆಗಿತ್ತು. ಎಂದಿನಂತೆ ಪ್ರೊ. ಮಾರ್ಟಿನಿಸ್ ಮಾತ್ರ ರಾತ್ರಿ ನೆಮ್ಮದಿಯಾಗಿ ನಿದ್ದೆ ಮಾಡುತ್ತಿದ್ದರೆ, ಕಾಕತಾಳೀಯವಾಗಿ ಅವರ ಪತ್ನಿ ಮಾತ್ರ ಬೆಳಗಿನ ಜಾವ ಮೂರು ಗಂಟೆಯವರೆಗೂ ಪಕ್ಕದ ರೂಮಿನಲ್ಲಿ ಪುಸ್ತಕವನ್ನು ಓದುತ್ತಾ ಎಚ್ಚರವಾಗಿದ್ದರು. ಆಗ ಆ ಹೊತ್ತಿನಲ್ಲಿ ಅವರ ಪತಿಯ ಫೋನ್ ರಿಂಗಾಗಲು ಶುರುವಾಯಿತು. ‘ಏನೋ ವಿಶೇಷವಿದೆ’ ಎಂದು ತಿಳಿದು, ಅವರು ಫೋನನ್ನು ಪರಿಶೀಲಿಸಿದಾಗ, ಅದು ನೊಬೆಲ್ ಪ್ರಶಸ್ತಿ ಸಮಿತಿಯಿಂದ ಬಂದ ಕರೆ ಎಂದು ತಿಳಿದುಬಂದಿತು. ಆದರೆ ಅವರು ತಮ್ಮ ಪತಿಯನ್ನು ನಿದ್ದೆಯಿಂದ ಎಬ್ಬಿಸಲು ಹೋಗಲಿಲ್ಲ. ಪ್ರೊ. ಮಾರ್ಟಿನಿಸ್ ಅವರಿಗೆ ಬೆಳಿಗ್ಗೆ ಐದೂವರೆಗೆ ಎದ್ದ ನಂತರವಷ್ಟೇ ಈ ಸಿಹಿ ಸುದ್ದಿ ತಿಳಿದದ್ದು. ಪ್ರೊ. ಮಾರ್ಟಿನಿಸ್ ಅವರು ಈ ಸಂಗತಿಯನ್ನು ನೊಬೆಲ್ ಪ್ರಶಸ್ತಿಯ ತಂಡದೊಂದಿಗೆ ತಮ್ಮ ಪತ್ನಿಯ ಕೊಡುಗೆಯನ್ನು ನೆನೆಯುತ್ತ ಕೃತಜ್ಞರಾಗಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ.

ಪಯಣ

ಪ್ರೊ. ಮಾರ್ಟಿನಿಸ್ ಅವರು 1958ರಲ್ಲಿ ಅಮೆರಿಕಾದಲ್ಲಿ ಜನಿಸಿದರು. ಅವರ ತಾಯಿ ಅಮೆರಿಕಾಮೂಲದವರು, ತಂದೆ ಕ್ರೊಯೇಷಿಯಾ ಮೂಲದವರು. ಮಾರ್ಟಿನಿಸ್ ಅವರು 1980ರಲ್ಲಿ ಭೌತಶಾಸ್ತ್ರದಲ್ಲಿ ವಿಜ್ಞಾನ ಪದವಿಯನ್ನು ಮತ್ತು 1987ರಲ್ಲಿ ಭೌತಶಾಸ್ತ್ರದಲ್ಲಿ ಪಿಎಚ್.ಡಿ.ಯನ್ನು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ, ಬರ್ಕ್ಲಿಯಿಂದ ಪಡೆದರು. ಪಿಎಚ್.ಡಿ. ನಂತರ, ಅವರು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಸ್ಟ್ಯಾಂಡರ್ಡ್ಸ್ ಅ್ಯಂಡ್ ಟೆಕ್ನಾಲಜಿ(NIST)ಯಲ್ಲಿ ಸೇವೆ ಸಲ್ಲಿಸಿದರು. ನಂತರ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ, ಸಾಂಟಾ ಬಾರ್ಬರಾದಲ್ಲಿ ಭೌತಶಾಸ್ತ್ರದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ, ಕ್ವಾಂಟಮ್ ಕಂಪ್ಯೂಟಿಂಗ್ ಕ್ಷೇತ್ರದಲ್ಲಿ ಪ್ರಮುಖ ಸಂಶೋಧನೆಯನ್ನು ಮುಂದುವರೆಸಿದರು. ಅವರು ಪ್ರಸ್ತುತ ಗೂಗಲ್ ಕ್ವಾಂಟಮ್ ಎಐನಲ್ಲಿ ಮುಖ್ಯ ವಿಜ್ಞಾನಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರು ಪಿಎಚ್.ಡಿ. ಮಾಡುವಾಗ ಅವರ ಸಹದ್ಯೋಗಿಗಳೊಡನೆ ನಡೆಸಿದ ಸಂಶೋಧನೆಗೆ ಈಗ ನೊಬೆಲ್ ಪ್ರಶಸ್ತಿ ದೊರಕಿದೆ.

ADVERTISEMENT

ಕ್ವಾಂಟಮ್ ಜಗತ್ತಿಗೆ ಕೊಡುಗೆಗಳು

ಪ್ರೊ. ಮಾರ್ಟಿನಿಸ್ ಅವರು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ, ಬರ್ಕ್ಲಿಯಲ್ಲಿ ಪಿಎಚ್.ಡಿ. ವಿದ್ಯಾರ್ಥಿಯಾಗಿದ್ದಾಗ, ಪ್ರೊ. ಜಾನ್ ಕ್ಲಾರ್ಕ್ ಅವರ ಮಾರ್ಗದರ್ಶನದಲ್ಲಿ ಮತ್ತು ಮೈಕೆಲ್ ಡೆವೊರೆಟ್ ಅವರೊಂದಿಗೆ ಮಹತ್ವದ ಸಂಶೋಧನೆಯನ್ನು ಕೈಗೊಂಡರು. ಈ ಮೂವರು ಸೇರಿ 1980ರ ದಶಕದ ಆರಂಭದಲ್ಲಿ ಸೂಪರ್‌ಕಂಡಕ್ಟಿಂಗ್ ವಿದ್ಯುತ್ ಸರ್ಕ್ಯೂಟ್‌ಗಳಲ್ಲಿ ‘ಮ್ಯಾಕ್ರೋಸ್ಕೋಪಿಕ್ ಕ್ವಾಂಟಮ್ ಮೆಕ್ಯಾನಿಕಲ್ ಟನೆಲಿಂಗ್’ ಅನ್ನು ಯಶಸ್ವಿಯಾಗಿ ಪ್ರದರ್ಶಿಸಿದರು. ಎಂದರೆ, ಕ್ವಾಂಟಮ್ ಪರಿಣಾಮಗಳು ಅತಿಸೂಕ್ಷ್ಮ ಕಣಗಳಲ್ಲಿ ಮಾತ್ರವಲ್ಲದೆ, ಕಣ್ಣಿಗೆ ಕಾಣುವಂತಹ ದೊಡ್ಡ ವಿದ್ಯುತ್ ಸರ್ಕ್ಯೂಟ್‌ಗಳಲ್ಲೂ ಅನ್ವಯವಾಗುತ್ತವೆ ಎಂಬುದನ್ನು ಅವರು ಸಾಬೀತುಪಡಿಸಿದರು. ಇದು ಕ್ವಾಂಟಮ್ ಕಂಪ್ಯೂಟರ್‌ಗಳ ಮೂಲಭೂತ ಅಂಶವಾದ ‘ಸೂಪರ್‌ಕಂಡಕ್ಟಿಂಗ್ ಕ್ಯೂಬಿಟ್‌ಗಳ’ (superconducting qubits) ಅಭಿವೃದ್ಧಿಗೆ ಅಡಿಪಾಯ ಹಾಕಿತು. ಪ್ರೊ. ಮಾರ್ಟಿನಿಸ್ ಅವರು ಸೂಪರ್‌ಕಂಡಕ್ಟಿಂಗ್ ಸಾಧನಗಳು ಮತ್ತು ಜೋಸೆಫ್‌ಸನ್ ಜಂಕ್ಷನ್‌ಗಳನ್ನು ನಿಖರವಾಗಿ ತಯಾರಿಸುವಲ್ಲಿ ಪರಿಣತಿ ಹೊಂದಿದ್ದರು; ಇದು ಅವರ ಪ್ರಯೋಗಗಳ ಯಶಸ್ಸಿಗೆ ಕಾರಣವಾಯಿತು.

‘ಕ್ವಾಂಟಮ್ ಸುಪ್ರಿಮಸಿ’

ಪ್ರೊ. ಮಾರ್ಟಿನಿಸ್ ಅವರು ಗೂಗಲ್‌ನ ಕ್ವಾಂಟಮ್ ಎಐ ತಂಡದ ಮುಖ್ಯ ವಿಜ್ಞಾನಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಅವರ ನಾಯಕತ್ವದಲ್ಲಿ, ಗೂಗಲ್ 2019ರಲ್ಲಿ ‘ಸಿಕ್ಮೋರ್’ (Sycamore) ಎಂಬ ಕ್ವಾಂಟಮ್ ಪ್ರೊಸೆಸರ್ ಅನ್ನು ಬಳಸಿಕೊಂಡು ‘ಕ್ವಾಂಟಮ್ ಸುಪ್ರಿಮಸಿ’(Quantum Supremacy)ಯನ್ನು ಸಾಧಿಸಿ ಇತಿಹಾಸ ನಿರ್ಮಿಸಿದರು. ಅಂದರೆ ಸಾಂಪ್ರದಾಯಿಕ ಕಂಪ್ಯೂಟರ್‌ಗಳಿಗೆ ಸಾವಿರಾರು ವರ್ಷಗಳನ್ನು ತೆಗೆದುಕೊಳ್ಳುವ ಒಂದು ಗಣನೆಯನ್ನು ಕ್ವಾಂಟಮ್ ಕಂಪ್ಯೂಟರ್ ಕೆಲವೇ ನಿಮಿಷಗಳಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿತು. ಈ ಮಹತ್ವದ ಮೈಲಿಗಲ್ಲು ಕ್ವಾಂಟಮ್ ಕಂಪ್ಯೂಟಿಂಗ್‌ನ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿ, ಭವಿಷ್ಯದ ತಂತ್ರಜ್ಞಾನಕ್ಕೆ ದಾರಿ ತೆರೆಯಿತು.

ಪ್ರಶಸ್ತಿ–ಗೌರವಗಳು

ನೊಬೆಲ್ ಪ್ರಶಸ್ತಿಯ ಹೊರತಾಗಿ, ಪ್ರೊಫೆಸರ್ ಮಾರ್ಟಿನಿಸ್ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳು ಮತ್ತು ಗೌರವಗಳನ್ನು ಪಡೆದಿದ್ದಾರೆ. 1997ರಲ್ಲಿ ಫ್ರಿಟ್ಜ್ ಲಂಡನ್ ಮೆಮೋರಿಯಲ್ ಪ್ರಶಸ್ತಿ, 2007ರಲ್ಲಿ ಅಮೆರಿಕನ್ ಅಕಾಡೆಮಿ ಆಫ್ ಆರ್ಟ್ಸ್ ಅಂಡ್ ಸೈನ್ಸಸ್‌ನ ಸದಸ್ಯರಾಗಿ ಆಯ್ಕೆ, 2014ರಲ್ಲಿ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್‌ನ ಸದಸ್ಯರಾಗಿ ಆಯ್ಕೆ, ಹಾಗೂ 2021ರಲ್ಲಿ ಮಿಸಿಯಸ್ ಕ್ವಾಂಟಮ್ ಪ್ರಶಸ್ತಿ (Micius Quantum Prize), ಇವರಿಗೆ ಸಂದಿದೆ.

ಪ್ರೊ. ಜಾನ್ ಎಂ. ಮಾರ್ಟಿನಿಸ್ ಅವರ ದಶಕಗಳ ಶ್ರಮ ಮತ್ತು ದೂರದೃಷ್ಟಿಯ ಸಂಶೋಧನೆಯು ಕ್ವಾಂಟಮ್ ವಿಜ್ಞಾನಕ್ಕೆ ಹೊಸ ಆಯಾಮವನ್ನು ನೀಡಿದೆ. ಅವರ ಈ ನೊಬೆಲ್ ಪ್ರಶಸ್ತಿ ಕ್ವಾಂಟಮ್ ಕಂಪ್ಯೂಟಿಂಗ್‌ನ ಭವಿಷ್ಯವನ್ನು ರೂಪಿಸುವಲ್ಲಿ ಅವರ ನಿರ್ಣಾಯಕ ಪಾತ್ರಕ್ಕೆ ಸಿಕ್ಕಿದ ಅರ್ಹ ಮನ್ನಣೆಯಾಗಿದೆ.