ಎಸ್. ಸೋಮನಾಥ್
ಬೆಂಗಳೂರು: ‘ಬಾಹ್ಯಾಕಾಶ ವಿಜ್ಞಾನ ಎನ್ನುವುದು ಗಗನಯಾನಿಗಳಾಗುವ ಕೌತುಕವಷ್ಟೇ ಅಲ್ಲ, ಹಲವು ಜಟಿಲತೆ ಒಳಗೊಂಡ, ಸಾಕಷ್ಟು ಸಮಯ ಬೇಡುವ ವಿಜ್ಞಾನವೂ ಹೌದು. ಹೀಗಾಗಿ ಹಲವು ವರ್ಷಗಳ ನಿರಂತರ ಅಧ್ಯಯನದಿಂದ ಮಾತ್ರ ಈ ಕ್ಷೇತ್ರದಲ್ಲಿ ಅನುಭವಿ ಹೊರಹೊಮ್ಮಲು ಸಾಧ್ಯ’ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಅಧ್ಯಕ್ಷ ಎಸ್. ಸೋಮನಾಥ್ ಗುರುವಾರ ಹೇಳಿದರು.
ಇಸ್ರೊ ಆಯೋಜಿಸಿರುವ ವಿಜ್ಞಾನ ಮತ್ತು ತಂತ್ರಜ್ಞಾನ ಕುರಿತು ಜಾಗೃತಿ ಮೂಡಿಸುವ ತರಬೇತಿಯ ಮೂರನೇ ಆವೃತ್ತಿಗೆ ವರ್ಚುವಲ್ ವೇದಿಕೆ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
‘ಈ ವರ್ಷ ಈ ತರಬೇತಿ ಕಾರ್ಯಕ್ರಮ STARಗೆ 560 ಸಂಸ್ಥೆಗಳ ಮೂಲಕ 20 ಸಾವಿರ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಇದು ಜ. 9ರಿಂದ 29ರವರೆಗೆ ನಡೆಯಲಿದೆ. ಜಗತ್ತು ಎಂದರೇನೇ ಎಲ್ಲರ ಗಮನ ಸೆಳೆಯುವ ವಿಷಯ. ಬಾಹ್ಯಾಕಾಶ ಯೋಜನೆಗಳ ಕುರಿತು ಕುತೂಹಲಕರ ಮಾತುಗಳನ್ನು ನಾವಾಡುತ್ತೇವೆ. ಆದರೆ ಬಾಹ್ಯಾಕಾಶ ವಿಜ್ಞಾನ ಎಂಬುದು ಸಂಖ್ಯೆ ಹಾಗೂ ಸೂತ್ರಗಳ ಬಿಡಿಸುವ ತಂತ್ರದ ಜತೆಗೆ, ರಾಕೇಟ್, ಉಪಗ್ರಹ ಹಾಗೂ ಸೆನ್ಸರ್‌ಗಳ ಅಭಿವೃದ್ಧಿಯೂ ಹೌದು. ರಾಕೇಟ್‌ಗಳು ಹೇಗೆ ನಿರ್ಮಾಣಗೊಳ್ಳುತ್ತವೆ, ಕಕ್ಷೆ ಎಂದರೇನು? ನಿರ್ದಿಷ್ಟ ಕಕ್ಷೆಯಲ್ಲಿ ಉಪಗ್ರಹ ಸೇರಿಸುವ ಕ್ರಮ ಎಲ್ಲವನ್ನೂ ತಿಳಿಸಲಾಗುವುದು’ ಎಂದರು.
‘ಬಾಹ್ಯಾಕಾಶ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳ ಬಯಸುವ ವಿದ್ಯಾರ್ಥಿಗಳಲ್ಲಿ ಸ್ವಂತ ಸಾಮರ್ಥ್ಯದ ಮೇಲೆ ನಂಬಿಕೆ ಇರಬೇಕು. ಉತ್ತಮ ಸಂಸ್ಥೆಗಳಲ್ಲಿ ಅಧ್ಯಯನ ನಡೆಸುವ ಗುರಿ ಹೊಂದಿರಬೇಕು. ಜತೆಗೆ ಬಾಹ್ಯಾಕಾಶ ತಂತ್ರಜ್ಞಾನ ಕುರಿತ ಅಪರಿಮಿತ ಗುರಿಯೊಂದಿಗೆ ವ್ಯಾಸಂಗ ಮಾಡಬೇಕು. ಹೀಗಾದಲ್ಲಿ ಮಾತ್ರ ಒಬ್ಬ ಉತ್ತಮ ಬಾಹ್ಯಾಕಾಶ ವಿಜ್ಞಾನಿ ಅಥವಾ ಎಂಜಿನಿಯರ್ ಆಗಲು ಸಾಧ್ಯ’ ಎಂದು ಸಲಹೆ ನೀಡಿದರು.
‘ಬಾಹ್ಯಾಕಾಶ ಎಂಬುದು ಸಂಕೀರ್ಣ. ಅದನ್ನು ನೋಡಿ ಗೊಂದಲಕ್ಕೀಡಾಗುವ ಬದಲು, ಏನನ್ನು ಕಲಿಸಲಾಗುತ್ತಿದೆಯೋ ಅದನ್ನು ಗಮನವಿಟ್ಟು ಕಲಿಯಿರಿ. ಕೃತಕ ಬುದ್ಧಿಮತ್ತೆ ಹಾಗೂ ಮಷಿನ್ ಲರ್ನಿಂಗ್ ಮೂಲಕ ಬಾಹ್ಯಾಕಾಶ ವಿಜ್ಞಾನದ ಎಲ್ಲಾ ಆಯಾಮಗಳನ್ನೂ ತಲುಪಲು ಇಂದು ಸಾಧ್ಯವಿದೆ. ಈ ಎಲ್ಲಾ ಆಧುನಿಕ ತಂತ್ರಜ್ಞಾನದಿಂದಾಗಿ ಭವಿಷ್ಯ ತುಂಬಾ ಭಿನ್ನವಾಗಿರಲಿದೆ’ ಎಂದು ಸೋಮನಾಥ್ ಭವಿಷ್ಯ ನುಡಿದರು.
‘ನಾವು ಈಗ ಈ ಕ್ಷೇತ್ರದಲ್ಲಿ ಏನು ಮಾಡುತ್ತಿದ್ದೇವೋ, ಭವಿಷ್ಯದಲ್ಲಿ ನೀವು ಇನ್ನೂ ಭಿನ್ನವಾಗಿ ಮಾಡುತ್ತೀರಿ. ಭವಿಷ್ಯದಲ್ಲಿ ಬಾಹ್ಯಾಕಾಶ ವಿಜ್ಞಾನ ಕ್ಷೇತ್ರವು ಇನ್ನಷ್ಟು ವಿಸ್ತಾರಗೊಳ್ಳಲಿದೆ. ಕೃತಕ ಬುದ್ಧಿಮತ್ತೆ ಸಾಧನಗಳನ್ನು ಬಳಸಿ ರಾಕೇಟ್ ಅಭಿವೃದ್ಧಿಪಡಿಸಬಹುದು ಅಥವಾ ‘ನನಗೊಂದು ರಾಕೇಟ್ ವಿನ್ಯಾಸ ಮಾಡಿಕೊಡು’ ಎಂಬ ನಿರ್ದೇಶನವನ್ನು ಅಭಿವೃದ್ಧಿಪಡಿಸುವ ಮೂಲಕ ಸಿದ್ಧ ರಾಕೇಟ್ ಅನ್ನೇ ಪಡೆಯಬಹುದು. ಈ ಎಲ್ಲಾ ಸಾಧ್ಯತೆಗಳನ್ನು ನೀವು ನಿಜವಾಗಿಸಿ ಎಂಬುದಷ್ಟೇ ನನ್ನ ಇಚ್ಛೆ’ ಎಂದಿದ್ದಾರೆ.
ಇಸ್ರೊದ ಮಾಜಿ ಅಧ್ಯಕ್ಷ ಎ.ಎಸ್. ಕಿರಣ್ ಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.