ADVERTISEMENT

ಐವಿಎಫ್‌ ಮೂಲಕ ಇದೇ ಮೊದಲ ಬಾರಿಗೆ ಚೀತಾ ಮರಿಗಳ ಜನನ

ಏಜೆನ್ಸೀಸ್
Published 25 ಫೆಬ್ರುವರಿ 2020, 8:51 IST
Last Updated 25 ಫೆಬ್ರುವರಿ 2020, 8:51 IST
ಕೊಲಂಬಸ್‌ ಮೃಗಾಲಯದಲ್ಲಿರುವ ಜನಿಸಿರುವ ಚಿರತೆ ಮರಿಗಳು
ಕೊಲಂಬಸ್‌ ಮೃಗಾಲಯದಲ್ಲಿರುವ ಜನಿಸಿರುವ ಚಿರತೆ ಮರಿಗಳು    
""
""

ಪೊವೆಲ್‌: ಕೃತಕ ಗರ್ಭಧಾರಣೆ (ಐವಿಎಫ್‌) ಮತ್ತುಭ್ರೂಣ ವರ್ಗಾವಣೆ ಚಿಕಿತ್ಸೆಯ ಫಲವಾಗಿ ಇದೇ ಮೊದಲ ಬಾರಿಗೆ ಎರಡು ಚೀತಾ ಮರಿಗಳು ಜನ್ಮ ಪಡೆದಿವೆ. ಓಹಿಯೊ ಮೃಗಾಲಯದ ಅಧಿಕಾರಿ ಈ ಕುರಿತು ಸೋಮವಾರ ಪ್ರಕಟಿಸಿದ್ದಾರೆ.

ಕೊಲಂಬಸ್‌ ಮೃಗಾಲಯದಲ್ಲಿರುವ 'ಇಜ್ಜಿ' ಹೆಸರಿನ 3 ವರ್ಷದ ಚೀತಾಗೆಕಳೆದ ಬುಧುವಾರ ಒಂದು ಹೆಣ್ಣು ಮತ್ತು ಒಂದು ಗಂಡು ಮರಿ ಹುಟ್ಟಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.

ರಿಮೋಟ್‌ ಕ್ಯಾಮೆರಾ ಬಳಸಿ ಇಜ್ಜಿ ಮರಿಗಳಿಗೆ ಜನ್ಮ ನೀಡುವುದನ್ನು ಗಮನಿಸಲಾಗಿದೆ ಹಾಗೂ ಅವುಗಳ ಮೇಲೆ ನಿಗಾ ಮುಂದುವರಿಸಲಾಗಿದೆ. ಭ್ರೂಣ ವರ್ಗಾವಣೆ ಮೂಲಕಇಜ್ಜಿ ಗರ್ಭ ಧರಿಸಿತ್ತು.

ADVERTISEMENT

(ವಿಡಿಯೊ)

ಪುಟ್ಟ ಮರಿಗಳಿಗೆ 6 ವರ್ಷ ವಯಸ್ಸಿನ 'ಕಿಬಿಬಿ' ಜೈವಿಕ ತಾಯಿ. ವಯೋಸಹಜ ಕಾರಣಗಳಿಂದ ಕಿಬಿಬಿಗೆ ಸಹಜವಾಗಿ ಗರ್ಭ ಧರಿಸುವುದು ಸಾಧ್ಯವಾಗಿರಲಿಲ್ಲ ಹಾಗೂ ಈ ವರೆಗೂ ಗರ್ಭ ಧರಿಸಿರಲಿಲ್ಲ. ಕಿಬಿಬಿಯಿಂದ ಅಂಡಾಣು ಸಂಗ್ರಹಿಸಿಕೊಂಡು ಕೊಲಂಬಸ್‌ ಮೃಗಾಲಯದ ಪ್ರಯೋಗಾಲಯದಲ್ಲಿ 2019ರ ನವೆಂಬರ್‌ 19ರಂದು ಫಲಿತಗೊಳಿಸಲಾಗಿತ್ತು.

ನವೆಂಬರ್‌ 21ರಂದು ಭ್ರೂಣದ ಆರಂಭಿಕ ಹಂತದಲ್ಲಿ ಇಜ್ಜಿ ಚೀತಾಗರ್ಭಕ್ಕೆ ಸೇರಿಸಲಾಗಿತ್ತು. ಅದಾಗಿ ತಿಂಗಳ ನಂತರ ಅಲ್ಟ್ರಾಸೌಂಡ್‌ ಮೂಲಕ ಇಜ್ಜಿ ಅವಳಿ ಗರ್ಭ ಧರಿಸಿರುವುದು ದೃಢಪಟ್ಟಿತ್ತು. ಮೃಗಾಲಯದ ಅಧಿಕಾರಿಗಳ ಪ್ರಕಾರ, ವಿಜ್ಞಾನಿಗಳು ಐವಿಎಫ್‌ ಪದ್ಧತಿಯನ್ನು ಮೂರು ಬಾರಿ ಪ್ರಯೋಗಿಸಿದ್ದರು. ಇದೇ ಮೊದಲ ಬಾರಿಗೆ ಪ್ರಯೋಗ ಯಶಸ್ವಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.