ವೇದಾ
ಮುಂಬೈ: ಈಜುವುದೂ ಒಂದು ಕಲೆ. ಬಹುತೇಕ ಮನೆಗಳಲ್ಲಿ ಚಿಕ್ಕ ಮಕ್ಕಳಿಗೆ ನೀರಿನಿಂದ ಅಪಾಯ ಉಂಟಾಗಬಹುದೆಂಬ ಭಯದಿಂದ ದೂರವಿರುವಂತೆ ಹೇಳುತ್ತಾರೆ. ಆದರೆ ಮಹಾರಾಷ್ಟ್ರದ ಪುಟ್ಟ ಮಗುವೊಂದು ಈ ಮಾತನ್ನು ಹುಸಿ ಮಾಡಿದೆ.
ಮಹಾರಾಷ್ಟ್ರದ ರತ್ನಗಿರಿಯ ವೇದಾ ಪರೇಶ್ ಸರ್ಫೆರ್ ಎಂಬ 1 ವರ್ಷ 9 ತಿಂಗಳ ಮಗು ಯಶಸ್ವಿಯಾಗಿ ಈಜುವ ಮೂಲಕ ‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ ನಲ್ಲಿ ತನ್ನ ಹೆಸರನ್ನು ದಾಖಲಿಸಿದೆ.
ವೇದಾ 10 ನಿಮಿಷ 8 ಸೆಕೆಂಡುಗಳಲ್ಲಿ 100 ಮೀಟರ್ ದೂರವನ್ನು ಈಜುವ ಮೂಲಕ ‘ಭಾರತದ ಅತ್ಯಂತ ಕಿರಿಯ ಈಜುಗಾರ್ತಿ’ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ನವೆಂಬರ್ 25 ರಂದು ‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ ಮಗುವಿನ ಸಾಧನೆಯನ್ನು ದೃಢಪಡಿಸಿದೆ.
2024ರ ಜನವರಿ 22ರಂದು ಜನಿಸಿದ ವೇದಾ ಪರೇಶ್ ಸರ್ಫೆರ್ ಪುರಸಭೆಯಲ್ಲಿದ್ದ 25 X 22 ಮೀಟರ್ ಅಳತೆಯ ಈಜುಕೊಳದಲ್ಲಿ (4 ಸುತ್ತುಗಳು) ಈಜುವ ಮೂಲಕ ದಾಖಲೆ ಬರೆದಿದ್ದಾರೆ. ವೇದಾ 9 ತಿಂಗಳ ಮಗುವಾಗಿದ್ದಾಗಿನಿಂದ ಈಜು ಪಯಣ ಆರಂಭಿಸಿದ್ದರು.
ತರಬೇತುದಾರರಾದ ಮಹೇಶ್ ಮಿಲ್ಕೆ ಮತ್ತು ಅವರ ಪತ್ನಿ ಗೌರಿ ಮಗುವಿನ ಸುರಕ್ಷತೆಯ ಮೇಲೆ ಹೆಚ್ಚು ಗಮನವಿಟ್ಟು 11 ತಿಂಗಳುಗಳ ಕಾಲ ತರಬೇತಿ ನೀಡಿದ್ದಾರೆ. ಆರಂಭದಲ್ಲಿ ಹೆಚ್ಚು ಆಳವಿಲ್ಲದ ಜಾಗದಲ್ಲಿ ತರಬೇತಿ ನೀಡಿದ್ದರು. ನಂತರ ಆಳದ ಜಾಗದಲ್ಲಿ ಈಜುವುದನ್ನು ಕಲಿಸಿದ್ದಾರೆ.
’ಕಠಿಣ ಪರಿಶ್ರಮ ಮತ್ತು ಉತ್ತಮ ತರಬೇತಿಯೊಂದಿಗೆ 21 ತಿಂಗಳ ವೇದಾ ರಾಷ್ಟ್ರೀಯ ಮಟ್ಟದಲ್ಲಿ ಕಿರಿಯ ಈಜುಗಾರ್ತಿ ಎಂಬ ದಾಖಲೆಯನ್ನು ಬರೆದಿದ್ದಾರೆ. ಅವರ ಈ ಸಾಧನೆ ರತ್ನಗಿರಿಯ ಹೆಮ್ಮೆಯ ಮೈಲಿಗಲ್ಲು’ ಎಂದು ಪೋಷಕರು ಖುಷಿ ಹಂಚಿಕೊಂಡಿದ್ದಾರೆ.
ಈ ಮಗುವಿನ ಈಜುವ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದ್ದು, ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.