ವಿಮಾನದಲ್ಲಿ ದೀಪಿಕಾ ಟಿ.ಸಿ ಅವರು ತನ್ನ ತಾಯಿಯೊಂದಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿರುವುದು.
ಚಿತ್ರ ಕೃಪೆ: Deepika T C
ವಿಮಾನ ಪ್ರಯಾಣ ಕೆಲವರಿಗೆ ಕೇವಲ ಪ್ರಯಾಣವಾಗಿರುತ್ತದೆ. ಆದರೆ ಭಾರತದ ಅದೆಷ್ಟೋ ಕುಟುಂಬಗಳ ಬಹು ದೊಡ್ಡ ಕನಸಾಗಿರುತ್ತದೆ. 2025ರಲ್ಲಿ ಕೊಲಂಬೊದಲ್ಲಿ ನಡೆದ ಅಂಧರ ಟಿ20 ವಿಶ್ವಕಪ್ ಗೆದ್ದ ಭಾರತ ತಂಡದ ನಾಯಕಿ ಟಿ.ಸಿ ದೀಪಿಕಾ ಅವರು ತಮ್ಮ ತಾಯಿಯನ್ನು ಮೊದಲ ಬಾರಿಗೆ ವಿಮಾನದಲ್ಲಿ ಕರೆದುಕೊಂಡು ಹೋಗಿರುವ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ದೀಪಿಕಾ ಅವರು ವಿಮಾನದ ಒಳಗೆ ತಮ್ಮ ತಾಯಿಯೊಂದಿಗೆ ಕುಳಿತಿರುವ ಫೋಟೊವನ್ನು ಹಂಚಿಕೊಂಡಿದ್ದಾರೆ. ‘ಅವಳು ನನಗೆ ಜೀವನಕ್ಕೆ ರೆಕ್ಕೆಗಳನ್ನು ಕೊಟ್ಟಳು, ಇಂದು ನಾನು ಅವಳಿಗೆ ಆಕಾಶದಲ್ಲಿ ರೆಕ್ಕೆಗಳನ್ನು ಕೊಟ್ಟೆ’ ಎಂಬ ಅಡಿಬರಹವನ್ನು ಫೋಟೊಗೆ ಹಾಕಿದ್ದಾರೆ. ಇದಕ್ಕೆ ಕ್ರೆಕೆಟ್ ಪ್ರೇಮಿಗಳು ಹಾಗೂ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಚಿಕ್ಕತಿಮ್ಮನಹಳ್ಳಿ ಎಂಬ ಪುಟ್ಟ ಗ್ರಾಮದ ಬಡಕುಟುಂಬವೊಂದರಲ್ಲಿ ದೀಪಿಕಾ ಟಿ.ಸಿ ಜನಿಸಿದರು. ತಂದೆ– ತಾಯಿ ಕೂಲಿ ಕಾರ್ಮಿಕರಾಗಿದ್ದರು. ಆದ್ದರಿಂದ ಇವರ ಬಾಲ್ಯದ ಬದುಕು ಅಷ್ಟೇನೂ ಐಷಾರಾಮಿಯಾಗಿರಲಿಲ್ಲ.
ದೀಪಿಕಾ ಅವರ ಬದುಕಿನ ಪಯಣದ ಹಿಂದೆ ಅಸಾಧಾರಣ ಕ್ರೀಡಾ ಸ್ಫೂರ್ತಿ ಇದೆ. ಆಂಧ್ರ ಹಾಗೂ ಕರ್ನಾಟಕ ಗಡಿಭಾಗದ ಒಂದು ಪುಟ್ಟ ಹಳ್ಳಿಯಲ್ಲಿ ಜನಿಸಿದ ದೀಪಿಕಾ ಅವರು ತಮ್ಮ ದೃಷ್ಟಿಹೀನತೆಯನ್ನು ಸಾಧನೆಯ ಹಾದಿಯನ್ನಾಗಿ ಮಾಡಿಕೊಂಡರು. ನಂತರ ಅವರು ಬ್ಲೈಂಡ್ ಕ್ರಿಕೆಟ್‌ನಲ್ಲಿ ತಮ್ಮ ವೃತ್ತಿಜೀವನವನ್ನು ಕಂಡುಕೊಂಡರು. ಕೆಲವೇ ವರ್ಷಗಳಲ್ಲಿ ಹಲವು ವೃತ್ತಿ ಪರ ಕ್ರೆಕೆಟ್ ಪಂದ್ಯಗಳನ್ನಾಡಿದರು. ವಿಶ್ವಾಸಾರ್ಹ ಬ್ಯಾಟ್ಸ್‌ಮನ್ ಮತ್ತು ಚಿಂತನಶೀಲ ನಾಯಕಿಯಾಗಿ ಖ್ಯಾತಿಯನ್ನು ಗಳಿಸಿದರು.
2025ರಲ್ಲಿ ನಡೆದ ಅಂಧರ ಮಹಿಳಾ ಟಿ20 ವಿಶ್ವಕಪ್ ಉದ್ಘಾಟನಾ ಪಂದ್ಯದ ತಂಡವನ್ನು ಮುನ್ನಡೆಸಿದರು. ಅವರ ನಾಯಕತ್ವದಲ್ಲಿ ಉತ್ತಮ ಪ್ರದರ್ಶನ ನೀಡಿದ ತಂಡ, ಚೊಚ್ಚಲ ಅಂಧರ ಮಹಿಳಾ ಟಿ20 ವಿಶ್ವಕಪ್ ಗೆದ್ದಿತು. ಭಾರತದ ಪ್ರಧಾನ ಮಂತ್ರಿ ಸೇರಿದಂತೆ ಇತರರು ಅಭಿನಂದನೆಯನ್ನು ಸಲ್ಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.