ನವದೆಹಲಿ: ಕಳೆದ ತಿಂಗಳಿನಿಂದ ಇಲ್ಲಿಯವರೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚು ಚರ್ಚಿತವಾದುದು ಕೊರೊನಾವೈರಸ್. ಈ ಜಾಗತಿಕ ಪಿಡುಗಿನ ನಡುವೆಯೇ ಬಾಲಕಿಯರ ಬಗ್ಗೆ ಆಕ್ಷೇಪಾರ್ಹ ಟ್ವೀಟ್ ಮತ್ತು ಇನ್‌ಸ್ಟಾಗ್ರಾಂ ಪೋಸ್ಟ್‌ಗಳು ಸೋಮವಾರ ರಾತ್ರಿ ಹರಿದಾಡಿದ್ದು, ಈ ಪ್ರಕರಣವನ್ನು ದೆಹಲಿ ಪೊಲೀಸರು ಭೇದಿಸಿದ್ದಾರೆ.
Bois Locker Room ಎಂಬ ಚಾಟ್ ಗ್ರೂಪ್ ಬಾಲಕಿಯರ ಆಕ್ಷೇಪಾರ್ಹ ಫೋಟೊಗಳನ್ನು ಶೇರ್ ಮಾಡಿ, ಅತ್ಯಾಚಾರ ಸೇರಿದಂತೆ ಅಕ್ರಮ ಕೃತ್ಯಗಳ ಬಗ್ಗೆ ಚರ್ಚೆ ನಡೆಸುವ ಬಗ್ಗೆ ಇಲ್ಲಿ ಚರ್ಚೆಯಾಗಿದೆಎಂದು ದೆಹಲಿ ಮಹಿಳಾ ಆಯೋಗ ಹೇಳಿದೆ.
ಏನಿದು ಪ್ರಕರಣ?
ಹುಡುಗರ ಗುಂಪೊಂದುಇನ್‌ಸ್ಟಾಗ್ರಾಂನಲ್ಲಿ ಗ್ರೂಪ್ ಆರಂಭಿಸಿದ್ದು ಆ ಗ್ರೂಪ್‌ನ ಹೆಸರೇ Bois Locker Room. ಇದರಲ್ಲಿ ಸರಿ ಸುಮಾರು 100 ಸದಸ್ಯರಿದ್ದಾರೆ.ಇಲ್ಲಿರುವ ಹುಡುಗರು ಅಪ್ರಾಪ್ತರಾಗಿದ್ದು, ದಕ್ಷಿಣ ದೆಹಲಿಯವರಾಗಿದ್ದಾರೆ. ಅಪ್ರಾಪ್ತ ಬಾಲಕಿಯರ ಆಕ್ಷೇಪಾರ್ಹ ಫೋಟೊಗಳನ್ನು ಕಳುಹಿಸಲು, ಆ ಫೋಟೊಗಳನ್ನು ತಿರುಚಿ ಅವರ ಬಗ್ಗೆ ಕೆಟ್ಟದಾಗಿ ಬೈದು ನಿಂದಿಸಲು ಗ್ರೂಪ್ ಬಳಕೆಯಾಗುತ್ತದೆ. ಅಷ್ಟೇ ಅಲ್ಲ ಹುಡುಗಿಯರನ್ನು ಸಾಮೂಹಿಕ ಅತ್ಯಾಚಾರ ಮಾಡುವ ಬಗ್ಗೆಯೂ ಇಲ್ಲಿ ಮಾತುಕತೆ ನಡೆಯುತ್ತದೆ.
ಇನ್‌ಸ್ಟಾಗ್ರಾಂ ಬಳಕೆದಾರರೊಬ್ಬರಿಗೆ ಆ ಗ್ರೂಪ್‌ನಲ್ಲಿರುವ ವ್ಯಕ್ತಿಯೊಬ್ಬರು ಅಲ್ಲಿನ ಚಾಟ್ ಬಗ್ಗೆ ಸ್ಕ್ರೀನ್‌ಶಾಟ್ ಕಳಿಸಿದ್ದಾರೆ. ಈ ಸ್ಕ್ರೀನ್‌ಶಾಟ್‌ನಿಂದಾಗಿಯೇ ಮೇ 2ರಂದು ಪ್ರಕರಣ ಬೆಳಕಿಗೆ ಬಂದಿದೆ.
ಹುಡುಗರ ಚಾಟ್ ಸ್ಕ್ರೀನ್‌ಶಾಟ್ ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಆಗಿದ್ದು, ಪ್ರಕರಣ ದಾಖಲಾಗಿದೆ. ಆಕೆಯನ್ನು ನಾನು ಸುಲಭವಾಗಿ ಅತ್ಯಾಚಾರ ಮಾಡಬಲ್ಲೆ ಎಂಬ ಮಾತು ಜತೆಗೆ ಇದನ್ನು ಬಹಿರಂಗ ಪಡಿಸಿದರೆ ಹೆಣ್ಮಕ್ಕಳ ನಗ್ನ ಫೋಟೊ ಬಹಿರಂಗಪಡಿಸುವ ಬೆದರಿಕೆಯೂ ಇಲ್ಲಿದೆ.
ದಕ್ಷಿಣ ದೆಹಲಿಯ ನಾಲ್ಕು ಖಾಸಗಿ ಶಾಲೆ ಮತ್ತು ನೋಯ್ಡಾದಲ್ಲಿರುವ ಶಾಲೆಯೊಂದರ ವಿದ್ಯಾರ್ಥಿಗಳು ಈ ಗ್ರೂಪ್‌ನಲ್ಲಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಈ ಪ್ರಕರಣದ ಬಗ್ಗೆ ಎಫ್‌ಐಆರ್ ದಾಖಲಾದ ಕೂಡಲೇ ದೆಹಲಿ ಮಹಿಳಾಆಯೋಗವು ಗ್ರೂಪ್ ವಿರುದ್ಧ ಸ್ವಯಂಪ್ರೇರಿತ ದೂರು ಸಲ್ಲಿಸಿದೆ.ಈ ಬಗ್ಗೆ ಇನ್‌ಸ್ಟಾಗ್ರಾಂ ಮತ್ತು ದೆಹಲಿ ಪೊಲೀಸರಿಗೆ ಮಹಿಳಾ ಆಯೋಗ ನೋಟಿಸ್ ನೀಡಿದೆ ಎಂದು ದೆಹಲಿ ಮಹಿಳಾ ಆಯೋಗ (ಡಿಸಿಡಬ್ಲ್ಯು) ಅಧ್ಯಕ್ಷೆ ಸ್ವಾತಿ ಮಲಿವಾಲ್ ಇನ್‌ಸ್ಟಾಗ್ರಾಂನಲ್ಲಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.