ADVERTISEMENT

ಟ್ರಂಪ್‌ 'ಟ್ರೂತ್ ಸೋಷಿಯಲ್' ಆ್ಯಪ್‌ಗೆ ಟ್ವಿಟರ್‌ನಲ್ಲಿ ಇಲಾನ್‌ ಮಸ್ಕ್‌ ಬೆಂಬಲ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಏಪ್ರಿಲ್ 2022, 11:42 IST
Last Updated 27 ಏಪ್ರಿಲ್ 2022, 11:42 IST
ಇಲಾನ್‌ ಮಸ್ಕ್‌ ಮತ್ತು ಟ್ವಿಟರ್‌
ಇಲಾನ್‌ ಮಸ್ಕ್‌ ಮತ್ತು ಟ್ವಿಟರ್‌   

ಸ್ಯಾನ್‌ ಫ್ರ್ಯಾನ್ಸಿಸ್ಕೊ: ಜನಪ್ರಿಯ ಸಾಮಾಜಿಕ ಮಾಧ್ಯಮ ಟ್ವಿಟರ್‌ ಅನ್ನು ಖರೀದಿಸಿರುವ ಸಿರಿವಂತ ಉದ್ಯಮಿ ಇಲಾನ್‌ ಮಸ್ಕ್‌ ಈಗ ಡೊನಾಲ್ಡ್‌ ಟ್ರಂಪ್‌ ಅವರ 'ಟ್ರೂತ್‌ ಸೋಷಿಯಲ್‌' ಆ್ಯಪ್‌ ಕಡೆಗೆ ಮುಖ ಮಾಡಿದ್ದಾರೆ. ಆ ಆ್ಯಪ್‌ಗೆ ಬೆಂಬಲ ವ್ಯಕ್ತಪಡಿಸಿ ಬುಧವಾರ ಟ್ವೀಟ್‌ ಮಾಡಿದ್ದಾರೆ.

ಆ್ಯಪಲ್‌ನ ಆ್ಯಪ್‌ ಸ್ಟೋರ್‌ನಲ್ಲಿ ಮುಂಚೂಣಿ ಐದು ಸಾಮಾಜಿಕ ಮಾಧ್ಯಮ ಆ್ಯಪ್‌ಗಳ ಸ್ಕ್ರೀನ್‌ಶಾಟ್‌ ಅನ್ನು ಮಸ್ಕ್‌ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಟ್ರೂತ್‌ ಸೋಷಿಯಲ್‌ ಮೊದಲ ಸ್ಥಾನದಲ್ಲಿದೆ.

'ಪ್ರಸ್ತುತ ಟ್ರೂತ್‌ ಸೋಷಿಯಲ್‌ ಆ್ಯಪಲ್‌ ಸ್ಟೋರ್‌ನಲ್ಲಿ ಟ್ವಿಟರ್‌ ಮತ್ತು ಟಿಕ್‌ಟಾಕ್‌ ಅನ್ನು ಮೀರಿಸಿದೆ' ಎಂದು ಟೆಸ್ಲಾದ ಸಿಇಒ ಮಸ್ಕ್‌ ಪ್ರಕಟಿಸಿದ್ದಾರೆ.

ADVERTISEMENT

44 ಬಿಲಿಯನ್‌ ಡಾಲರ್‌ (ಸುಮಾರು ₹3.37 ಲಕ್ಷ ಕೋಟಿ) ಮೊತ್ತಕ್ಕೆ ಮಸ್ಕ್ ಟ್ವಿಟರ್‌ ಖರೀದಿಸಿರುವ ಬೆನ್ನಲ್ಲೇ 'ಅಭಿವ್ಯಕ್ತಿ ಸ್ವಾತಂತ್ರ್ಯ', ಟ್ವಿಟರ್‌ನಲ್ಲಿ ನಿಯಂತ್ರಣ ಮತ್ತು ನಿರ್ಬಂಧಗಳ ಬಗ್ಗೆ ಚರ್ಚೆ ನಡೆದಿದೆ. ಇದರೊಂದಿಗೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಟ್ವಿಟರ್ ಖಾತೆ ಮುಕ್ತಗೊಳ್ಳಲಿದೆ ಎಂದು ಕೆಲವು ಟ್ವೀಟಿಗರು ಊಹಿಸಿದ್ದಾರೆ.

ಟ್ವಿಟರ್‌ ಆಹ್ವಾನ ನೀಡಿದರೂ ಮತ್ತೆ ಮರಳುವುದಿಲ್ಲ ಎಂದು ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ. ಸೋಮವಾರ ಫಾಕ್ಸ್‌ ನ್ಯೂಸ್‌ಗೆ ನೀಡಿರುವ ಪ್ರತಿಕ್ರಿಯೆಯಲ್ಲಿ ಟ್ರಂಪ್‌, ಟ್ವಿಟರ್‌ನಲ್ಲಿ ಮತ್ತೆ ಸಕ್ರಿಯನಾಗುವ ಇಚ್ಛೆ ಇಲ್ಲ ಎಂದಿದ್ದಾರೆ. 'ಟ್ವಿಟರ್‌ ಈಗ ಬಹಳ ಬೇಜಾರಿನ ತಾಣವಾಗಿದೆ' ಎಂದಿರುವುದಾಗಿವರದಿಯಾಗಿದೆ.

ತಮ್ಮದೇ ಸ್ವಂತ ಸಾಮಾಜಿಕ ಮಾಧ್ಯಮ ವೇದಿಕೆಯಾಗಿರುವ 'ಟ್ರೂತ್‌ ಸೋಷಿಯಲ್‌' ಬಳಕೆ ಮಾಡುವುದಾಗಿ ಟ್ರಂಪ್‌ ಹೇಳಿದ್ದಾರೆ.

ಮಂಗಳವಾರ ಐಫೋನ್‌ ಆ್ಯಪ್‌ಗಳ ಪೈಕಿ ಟ್ರೂತ್‌ ಸೋಷಿಯಲ್‌ ಅತಿ ಹೆಚ್ಚು ಡೌನ್‌ಲೋಡ್‌ ಆಗಿರುವ ಅಪ್ಲಿಕೇಷನ್‌ ಆಗಿದೆ. ಆದರೆ, ತಾಂತ್ರಿಕ ಸಮಸ್ಯೆಗಳ ಕಾರಣದಿಂದ ಆ್ಯಪ್‌ ಇನ್ನೂ ಅಧಿಕೃತವಾಗಿ ಬಳಕೆಗೆ ತೆರೆದುಕೊಂಡಿಲ್ಲ. ಆ್ಯಪ್‌ನ ಆ್ಯಂಡ್ರಾಯ್ಡ್‌ ಆವೃತ್ತಿ ಸದ್ಯಕ್ಕೆ ಗೂಗಲ್‌ ಪ್ಲೇಸ್ಟೋರ್‌ನಲ್ಲಿ ಲಭ್ಯವಿಲ್ಲ.

ಅಮೆರಿಕದ ಕ್ಯಾಪಿಟಲ್‌ ಭವನದಲ್ಲಿ 2021ರ ಜನವರಿ 6ರಂದು ಹಿಂಸಾಚಾರ ಉಂಟಾದ ನಂತರದಲ್ಲಿ ಡೊನಾಲ್ಡ್‌ ಟ್ರಂಪ್‌ ಅವರ ಟ್ವಿಟರ್‌ ಖಾತೆಯನ್ನು ನಿರ್ಬಂಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.