ADVERTISEMENT

ಸೋಷಿಯಲ್ ಮೀಡಿಯಾಗೊಂದು ವಿರೋಧಿ ಆ್ಯಪ್!

ಸೋಷಿಯಲ್ ಮೀಡಿಯಾವನ್ನು ಮತ್ತೇರಿದಂತೆ ಬಳಸಿ ಅದರ ವಿಷ ಉಂಡವರಿಗೆ ಈ ‘ಪಾಮ್‌ಸಿ’ ಒಂದು ಸಮಾಧಾನದ ಹಾಗೆ ಬಳಕೆಗೆ ಸಿಗಬಹುದು.

ಕೃಷ್ಣ ಭಟ್ಟ
Published 1 ಮೇ 2024, 0:30 IST
Last Updated 1 ಮೇ 2024, 0:30 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಕೃಷ್ಣ ಭಟ್

ಎಲ್ಲ ತಂತ್ರಜ್ಞಾನ ವಲಯದಲ್ಲಿರುವ ಕಂಪನಿಗಳಿಗೂ ಹೊಸ, ಮುಂದಿನ ಪೀಳಿಗೆಯನ್ನೇ ಆಕರ್ಷಿಸುವ ಪ್ಲಾಟ್‌ಫಾರಂ ಅನ್ನು ನಿರ್ಮಿಸುವುದು ಹೇಗೆ ಎಂಬುದೇ ಸಂಶೋಧನೆಯ ಪ್ರಮುಖ ಭಾಗವಾಗಿರುತ್ತದೆಯಷ್ಟೆ. ಆದರೆ ಇಲ್ಲೊಂದು ಕಂಪನಿ ಸೋಷಿಯಲ್ ಮೀಡಿಯಾಗೆ ತದ್ವಿರುದ್ಧ ಪ್ಲಾಟ್‌ಫಾರಂ ಒಂದನ್ನು ಸಿದ್ಧಪಡಿಸಿದೆ. ಸಾಮಾನ್ಯ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್‌ಗಳು, ಅದಕ್ಕೆ ಲೈಕ್‌ಗಳು, ಶೇರ್‌ – ಇವೆಲ್ಲ ಸಾಮಾನ್ಯ ಆಕರ್ಷಣೀಯ ಗುಣಗಳು. ಇವು ಹೆಚ್ಚಾದಷ್ಟೂ ಅದರಲ್ಲಿ ತೊಡಗಿಸಿಕೊಳ್ಳುವ ಜನರ ಸಂಖ್ಯೆಯೂ ಹೆಚ್ಚಾಗುತ್ತದೆ. ಏಕೆಂದರೆ, ಲೈಕ್‌ಗಳು ಹೆಚ್ಚಾದ ಹಾಗೆಯೇ ಪೋಸ್ಟ್‌ ಮಾಡಿದ ವ್ಯಕ್ತಿಗೆ ‘ಓಹ್... ನನ್ನ ಪೋಸ್ಟ್‌, ವಿಡಿಯೊ ಇಷ್ಟು ಜನರಿಗೆ ತಲುಪಿದೆ. ನನ್ನನ್ನು ಜನರು ಸ್ವೀಕರಿಸುತ್ತಿದ್ದಾರೆ’ ಎಂಬ ಭಾವ ಮೂಡುತ್ತದೆ. ಆ ಭಾವವನ್ನು ಉದ್ದೀಪಿಸುವುದಕ್ಕೆಂದೇ ಈ ಸೋಷಿಯಲ್ ಮೀಡಿಯಾಗಳು ಆಯ್ದ ಒಂದಷ್ಟು ಪೋಸ್ಟ್‌, ವಿಡಿಯೊಗಳನ್ನು ಬೂಸ್ಟ್ ಮಾಡುತ್ತವೆ.

ಆದರೆ, ಇದಕ್ಕೆ ತದ್ವಿರುದ್ಧವಾದ ಒಂದು ಮನೋಭಾವದ ಒಂದು ಆ್ಯಪ್ ಕಳೆದ ಕೆಲವು ದಿನದಿಂದದು ಸೋಷಿಯಲ್ ಮೀಡಿಯಾ ಪ್ರಿಯರ ಹುಬ್ಬೇರಿಸಿದೆ.

ಇದೇ ಪಾಮ್‌ಸಿ (Palmsy)

ಇದನ್ನು ‘ಆ್ಯಂಟಿ-ಸೋಷಿಯಲ್ ಮೀಡಿಯಾ’ ಎಂದು ಕರೆಯಲಾಗಿದೆ. ಇದು ಸೋಷಿಯಲ್ ಮೀಡಿಯಾ ವಿರೋಧಿ ಆ್ಯಪ್. ಆದರೆ, ಇದು ಕೆಲಸ ಮಾಡುವುದು ಥೇಟ್ ಸೋಷಿಯಲ್ ಮೀಡಿಯಾದ ಹಾಗೆ! ಅರೆ... ಸೋಷಿಯಲ್ ಮೀಡಿಯಾದ ಹಾಗೆಯೇ ಕೆಲಸ ಮಾಡುವ ಒಂದು ಆ್ಯಪ್‌, ಸೋಷಿಯಲ್ ಮೀಡಿಯಾ ವಿರೋಧಿ ಆಗುವುದು ಹೇಗೆ?

ಅದರಲ್ಲೇ ಇದೆ ಹಕೀಕತ್ತು! ಸಾಮಾನ್ಯವಾಗಿ ನಮಗೆ ಸೋಷಿಯಲ್ ಮೀಡಿಯಾದಲ್ಲಿ ಖುಷಿ ಕೊಡುವುದು ಲೈಕುಗಳು, ಶೇರ್‌ಗಳು ಹಾಗೂ ವ್ಯೂಸ್‌ಗಳೇ ಅಲ್ಲವೇ? ಆದರೆ, ಇದರಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಕಾಣಸಿಗುವ ಎಲ್ಲ ಲೈಕ್‌, ಶೇರ್ ಮತ್ತು ವ್ಯೂಸ್‌ಗಳೂ ಇರುತ್ತವೆ. ಆದರೆ, ಇವು ಯಾವುವೂ ಅಸಲಿ ಆಗಿರುವುದಿಲ್ಲ. ಅಷ್ಟೇ ಅಲ್ಲ, ನಾವು ಮಾಡುವ ಪೋಸ್ಟ್ ಕೂಡ ನಮ್ಮ ಮೊಬೈಲ್ ಬಿಟ್ಟು ಅದಕ್ಕೂ ಮುಂದೆ ಹೋಗುವುದೂ ಇಲ್ಲ.

ಅಂದರೆ, ಈ ‘ಪಾಮ್‌ಸಿ’ ಆ್ಯಪ್‌ನಲ್ಲಿ ಒಂದು ಫೋಟೋ ಪೋಸ್ಟ್‌ ಮಾಡಿದರೆ, ಅದು ಬೇರೆ ಸೋಷಿಯಲ್ ಮೀಡಿಯಾದ ಹಾಗೆ ಬೇರೆಯವರ ವಾಲ್‌ನಲ್ಲಿ ಕಾಣಿಸುವುದಿಲ್ಲ. ನಮ್ಮ ವಾಲ್‌ನಲ್ಲಿ ನಮ್ಮದೇ ಫೊಟೋಗಳಿರುತ್ತವೆ. ಅದಕ್ಕೆ ಲೈಕ್‌ಗಳೂ ಇರುತ್ತವೆ. ನಮ್ಮ ಸ್ನೇಹಿತರೇ ಅದನ್ನು ಲೈಕ್ ಮಾಡಿದಂತೆಯೂ ಕಾಣಿಸುತ್ತದೆ. ಆದರೆ, ಅಸಲಿ ವಿಷಯ ಏನೆಂದರೆ, ಇದು ಆ ನಮ್ಮ ಸ್ನೇಹಿತರು ಮಾಡಿದ ಲೈಕ್ ಆಗಿರುವುದಿಲ್ಲ. ಬದಲಿಗೆ ಆಪ್‌ ಸ್ವತಃ ನಮಗೆ ಕೊಡಿಸಿದ ಲೈಕ್ ಆಗಿರುತ್ತದೆ. ಅದು ನಮ್ಮ ಸ್ನೇಹಿತರಿಗೆ ಗೊತ್ತೂ ಆಗಿರುವುದಿಲ್ಲ. ಅವರಿಗೆ ನಮ್ಮ ಫೋಟೋ ಕಾಣಿಸುವುದಿಲ್ಲ ಎಂದಾದ ಮೇಲೆ ಅವರಿಗೆ ಅದು ಗೊತ್ತಾಗುವುದಾದರೂ ಹೇಗೆ, ಅಲ್ಲವೇ?

ಈ ಆ್ಯಪ್‌ನ ಇನ್ನೊಂದು ಅನುಕೂಲವೆಂದರೆ, ಇದು ಸಂಪೂರ್ಣವಾಗಿ ಗೌಪ್ಯ! ಇದು ಕೇಳುವುದು ನಮ್ಮ ಕಾಂಟ್ಯಾಕ್ಟ್‌ ಲಿಸ್ಟ್‌ಗಳನ್ನು ಹಂಚಿಕೊಳ್ಳುವ ಅನುಮತಿ ಮಾತ್ರ. ಇದು ಕೂಡ ಲೈಕುಗಳು ಅಸಲಿಯೆಂಬಂತೆ ಕಾಣಿಸಲಿ ಎಂಬ ಕಾರಣಕ್ಕೆ ನಮ್ಮ ಸ್ನೇಹಿತರ ಪಟ್ಟಿಯಲ್ಲಿರುವವರ ಹೆಸರನ್ನು ಬಳಸಿಕೊಳ್ಳುವುದಕ್ಕೆ ಈ ಪರ್ಮಿಶನ್ ಕೊಡಬೇಕಿರುತ್ತದೆ. ಅದನ್ನು ಹೊರತುಪಡಿಸಿ, ನಮ್ಮ ಫೋಡೊ, ವಿಡಿಯೊಗಳೆಲ್ಲವೂ ಸಂಪೂರ್ಣ ಖಾಸಗಿ ಆಗಿರುತ್ತವೆ. ನಾವು ಹಂಚಿಕೊಳ್ಳುವ ಎಲ್ಲ ಮಾಹಿತಿಯೂ ನಮ್ಮ ಸ್ಮಾರ್ಟ್‌ಫೋನ್ ಬಿಟ್ಟು ಅದರಿಂದಾಚೆಗೆ ಹೋಗುವುದಿಲ್ಲ.

ಆರಂಭದಲ್ಲಿ ಇಂಥದ್ದೊಂದು ಆ್ಯಪ್ ಏಕಾದರೂ ಬೇಕು? ಹೀಗೆ ಅನ್ನಿಸುವುದು ಸುಳ್ಳಲ್ಲ. ಇದರ ಅಗತ್ಯವಾದರೂ ಏನು? ನಾವು ಪೋಸ್ಟ್ ಮಾಡುವುದು ನಾಲ್ಕು ಜನ ನೋಡಲಿ ಎಂದೇ ಹೊರತು ಯಾರೂ ನೋಡದಿರಲಿ ಎಂದಲ್ಲವಲ್ಲ...? ನಿಜ. ಇದು ಮೂಲಭೂತ ಸಮಸ್ಯೆ. ಹಾಗೆಂದ ಮಾತ್ರಕ್ಕೆ ಇದು ನಿರುಪಯುಕ್ತವೂ ಎಂದಲ್ಲ. ಏಕೆಂದರೆ, ಸೋಷಿಯಲ್ ಮೀಡಿಯಾದ ವಿಷವರ್ತುಲ ಇದರಲ್ಲಿಲ್ಲ. ಆದರೆ, ಆ ಖುಷಿ, ಅಂದರೆ ನಮ್ಮ ಪೋಸ್ಟ್‌ಗಳಿಗೆ ಬರುವ ಲೈಕಿನ ಖುಷಿ ಸಿಗುತ್ತದೆ! ಈ ಲೈಕ್‌ಗಳು ನಕಲಿ ಎಂದು ಗೊತ್ತಿದ್ದೂ ನಾವು ಖುಷಿ ಪಡಬಹುದು!

ಇನ್ನೂ ಸೋಷಿಯಲ್ ಮೀಡಿಯಾ ಬಳಸದೇ ಇರುವವರಿಗೆ ಇದು ಖುಷಿ ಕೊಡದೇ ಇರಬಹುದು. ಆದರೆ, ಸೋಷಿಯಲ್ ಮೀಡಿಯಾವನ್ನು ಮತ್ತೇರಿದಂತೆ ಬಳಸಿ ಅದರ ವಿಷ ಉಂಡವರಿಗೆ ಈ ‘ಪಾಮ್‌ಸಿ’ ಒಂದು ಸಮಾಧಾನದ ಹಾಗೆ ಬಳಕೆಗೆ ಸಿಗಬಹುದು. ಒಂದ ಗುಕ್ಕಿಗೆ ಸೋಷಿಯಲ್ ಮೀಡಿಯಾವನ್ನು ತೊರೆಯಲು ಸಾಧ್ಯವಾಗದಿದ್ದಾಗ ಇದೊಂದು ಪರ್ಯಾಯ ವಿಧಾನವಾಗಬಹುದು. ಹೀಗೆಂದು ಇದೇನೂ ಈಗಿರುವ ಸೋಷಿಯಲ್ ಮೀಡಿಯಾದ ಹಾಗೆ ಜನಪ್ರಿಯವಾಗುತ್ತದೆ ಎನ್ನಲಾಗದು. ಏಕೆಂದರೆ, ‘ಜನಪ್ರಿಯ’ ಆಗದೇ ಇರುವುದೇ ಇದರ ಮೂಲಮಂತ್ರವಾಗಿದ್ದರಿಂದ, ಇದು ಸೋಷಿಯಲ್ ಮೀಡಿಯಾ ಆಗುವುದರಲ್ಲಿನ ವೈಫಲ್ಯವೇ ಇದರ ಯಶಸ್ಸು! ಸೋಷಿಯಲ್ ಮೀಡಿಯಾ ವಿರೋಧಿಯಾಗುವುದರಲ್ಲಿನ ಯಶಸ್ಸೇ ಇದರ ಯಶಸ್ಸೂ ಹೌದು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.