ADVERTISEMENT

ಬೇಡವೆಂದರೂ ಲೊಕೇಶನ್ ಗಮನಿಸುತ್ತೆ ಫೇಸ್‌ಬುಕ್‌; ಗುಟ್ಟಲ್ಲ ನಿಮ್ಮ ಜಾಗ ಗೊತ್ತು!

ಏಜೆನ್ಸೀಸ್
Published 18 ಡಿಸೆಂಬರ್ 2019, 9:54 IST
Last Updated 18 ಡಿಸೆಂಬರ್ 2019, 9:54 IST
ಫೇಸ್‌ಬುಕ್‌
ಫೇಸ್‌ಬುಕ್‌    

ಸ್ಯಾನ್‌ ಫ್ರಾನ್ಸಿಸ್ಕೊ:ಸ್ಥಳದ ಮಾಹಿತಿ ಟ್ರ್ಯಾಕ್‌ ಮಾಡುವ ಆಯ್ಕೆ ನೀಡದಿದ್ದರೂ ಬಳಕೆದಾರ ಇರುವ ಸ್ಥಳವನ್ನು ಗುರುತಿಸಬಹುದು ಎಂದು ಫೇಸ್‌ಬುಕ್‌ ಅಮೆರಿಕದ ಜನಪ್ರತಿನಿಧಿಗಳಿಗೆ ಕಳುಹಿಸಿರುವ ಪತ್ರದಲ್ಲಿ ಬಹಿರಂಗ ಪಡಿಸಿದೆ.

ಇಬ್ಬರು ಜನಪ್ರತಿನಿಧಿಗಳ ಮನವಿಗೆ ಪ್ರತಿಕ್ರಿಯಿಸಿರುವ ಸಾಮಾಜಿಕ ಸಂಪರ್ಕ ಮಾಧ್ಯಮ ಫೇಸ್‌ಬುಕ್‌, ಬಳಕೆದಾರ ಇರುವ ಸ್ಥಳದ ಮಾಹಿತಿ ಗೊತ್ತು ಮಾಡಿಕೊಳ್ಳುವ ಮೂಲಕ ಸಮೀಪದ ಮಳಿಗೆಗಳ ಕುರಿತು ಜಾಹೀರಾತು ನೀಡುವುದು ಹಾಗೂ ತಪ್ಪು ಮಾಹಿತಿಗಳನ್ನು ತಡೆಯುವುದು, ಹ್ಯಾಕರ್‌ಗಳಿಂದ ರಕ್ಷಿಸುವುದು ಸಾಧ್ಯವಾಗುತ್ತದೆ ಎಂದಿದೆ.ಫೇಸ್‌ಬುಕ್‌ ಬಳಕೆದಾರ ತಾನು ಇರುವ ಸ್ಥಳದ ನಿಖರ ಮಾಹಿತಿಯನ್ನು ಕಂಪನಿಗೆ ಹಂಚಿಕೊಳ್ಳದಿದ್ದರೂ, ಅವರ ಜಾಗವನ್ನು ಫೇಸ್‌ಬುಕ್‌ ಗುರುತಿಸುತ್ತದೆ.

'ಹೊರಗುಳಿಯುವ ಆಯ್ಕೆಯೇ ಇಲ್ಲಿಲ್ಲ. ನಿಮ್ಮ ಖಾಸಗಿ ಮಾಹಿತಿಯ ಮೇಲೆ ನಿಮಗೆ ನಿಯಂತ್ರಣ ಇರುವುದಿಲ್ಲ' ಎಂದು ರಿಪಬ್ಲಿಕನ್‌ ಸೆನೆಟರ್‌ ಜೋಶ್‌ ಹಾವ್ಲೆ ಟ್ವೀಟಿಸಿದ್ದಾರೆ.

ADVERTISEMENT

ಫೇಸ್‌ಬುಕ್‌ ಬಳಕೆದಾರರು ಫೋಟೊ ಪ್ರಕಟಿಸಿಕೊಳ್ಳುವಾಗ ಅದರೊಂದಿಗೆ ಸ್ಥಳದ ಮಾಹಿತಿ ಟ್ಯಾಗ್‌ ಮಾಡಿದ್ದರೆ, ಭೇಟಿ ನೀಡಿದ್ದ ರೆಸ್ಟೊರೆಂಟ್‌ ಹೆಸರು ಉಲ್ಲೇಖಿಸಿದ್ದರೆ ಅವುಗಳಿಂದ ಸ್ಥಳದ ಮಾಹಿತಿ ಗ್ರಹಿಸಲು ಫೇಸ್‌ಬುಕ್‌ ಸುಳಿವು ಪಡೆಯುತ್ತದೆ.

ವಸ್ತುಗಳನ್ನು ಖರೀದಿಸಿದ ಸ್ಥಳ, ಪ್ರಕಟಿಸಲಾಗಿರುವ ಪೋಸ್ಟ್‌ನೊಂದಿಗೆ ಹಂಚಿಕೊಳ್ಳಲಾಗಿರುವ ಜಾಗದ ಮಾಹಿತಿ, ಫೇಸ್‌ಬುಕ್‌ ಬಳಕೆಗೆ ಸಂಪರ್ಕಗೊಂಡಿರುವ ಇಂಟರ್ನೆಟ್‌ ಹೊಂದಿರುವ ಐಪಿ ಅಡ್ರೆಸ್‌ ಮೂಲಕ ಬಳಕೆದಾರ ಇರುವ ಸ್ಥಳವನ್ನು ಗಮನಿಸುವುದು ಫೇಸ್‌ಬುಕ್‌ಗೆ ಸಾಧ್ಯವಾಗುತ್ತಿದೆ.

ಹ್ಯಾಕಿಂಗ್‌ ತಡೆಗೆ ಲೊಕೇಶ್‌ ಬಳಕೆ

ದೂರಸಂಪರ್ಕ ಸೇವೆಗಳ ಸಂಪರ್ಕ ಹೊಂದಿರುವ ಮೊಬೈಲ್‌ ಸಾಧನಗಳ ಮೂಲಕ ಇರುವ ಊರು ಅಥವಾ ನಗರದ ಮಾಹಿತಿ ಮಾತ್ರ ಲಭ್ಯವಾಗುತ್ತದೆ. ಬಳಕೆದಾರ ಇರುವ ಊರಿನ ಮಾಹಿತಿ ಗೊತ್ತು ಪಡಿಸಿಕೊಳ್ಳುವ ಮೂಲಕ ಖಾತೆಗೆ ಬೇರೆ ಸ್ಥಳಗಳಿಂದ ಹ್ಯಾಕಿಂಗ್‌ ಮಾಡಲು ಯತ್ನಿಸುವುದನ್ನು ತಡೆಯಬಹುದು ಎಂದು ಫೇಸ್‌ಬುಕ್‌ ಹೇಳಿದೆ.

ಉದಾಹರಣೆಗೆ, ಬಳಕೆದಾರರೊಬ್ಬರು ಯುರೋಪ್‌ನಲ್ಲಿ ವಾಸಿಸುತ್ತಿದ್ದು ಅವರ ಫೇಸ್‌ಬುಕ್‌ ಖಾತೆಗೆ ದಕ್ಷಿಣ ಅಮೆರಿಕದಲ್ಲಿ ಲಾಗಿನ್‌ ಆಗಲು ಪ್ರಯತ್ನಿಸುತ್ತಿರುವುದು ಕಂಡು ಬಂದರೆ, ಅನುಮಾನಾಸ್ಪದ ಲಾಗಿನ್‌ ಪ್ರಯತ್ನವೆಂದು ಕಂಪನಿ ಅದನ್ನು ಗುರುತಿಸುತ್ತದೆ.

ಕ್ಯಾಲಿಫೋರ್ನಿಯಾ ಗ್ರಾಹಕರ ಖಾಸಗಿತನ ಕಾಯ್ದೆ (CCPA)ಗೆ ಒಳಪಡಲು ಫೇಸ್‌ಬುಕ್‌ ಇತ್ತೀಚೆಗೆ ಸಮ್ಮತಿಸಿದೆ. ತಂತ್ರಜ್ಞಾನ ಕಂಪನಿಗಳು ಸಂಗ್ರಹಿಸಿಕೊಳ್ಳುತ್ತಿರುವ ಮಾಹಿತಿ ಹಾಗೂ ಅದನ್ನು ಯಾರೊಂದಿಗೆ ಹಂಚಿಕೊಳ್ಳುತ್ತಿದ್ದಾರೆ ಎಂಬುದನ್ನು ಇಂಟರ್ನೆಟ್‌ ಬಳಕೆದಾರರು ತಿಳಿದುಕೊಳ್ಳುವ ಹಕ್ಕನ್ನು ಈ ಕಾಯ್ದೆ ನೀಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.