ಚಿತ್ರ ಕೃಪೆ: @KommawarSwapnil
ಇತ್ತೀಚೆಗೆ ರಷ್ಯಾ ಕುಟುಂಬವೊಂದು ಭಾರತದಲ್ಲಿಯೇ ನೆಲೆಸುವುದಾಗಿ ಹೇಳಿಕೊಂಡಿದ್ದು, ಸಿಕ್ಕಾಪಟ್ಟೆ ಸುದ್ದಿಯಾಗಿತ್ತು. ಇದೀಗ ಅಮೆರಿಕದ ಪ್ರವಾಸಿಗರೊಬ್ಬರು ‘ಮೋದಿ ಜೀ ನನಗೂ ಆಧಾರ್ ಕಾರ್ಡ್ ಬೇಕು’ ಎಂದು ವಿಡಿಯೋ ಮೂಲಕ ಭಾವುಕರಾಗಿದ್ದಾರೆ.
ಅಮೆರಿಕದ ಗಭ್ರೂಜಿ ಎಂಬ ಪ್ರವಾಸಿಗರೊಬ್ಬರು ಭಾರತಕ್ಕೆ ಭೇಟಿ ನೀಡಿದ್ದರು. ಅವರು ಕೆಲ ದಿನಗಳ ತಮ್ಮ ಪ್ರವಾಸ ಮುಗಿಸಿ ಸ್ವದೇಶಕ್ಕೆ ತೆರಳುವ ಮುನ್ನ ಸಾಮಾಜಿಕ ಮಾಧ್ಯಮದಲ್ಲಿ ಭಾರತದಲ್ಲಿನ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಗಭ್ರೂಜಿ ಅವರು ಭಾರತದ ಕುರಿತು, ‘ನನ್ನ ಹೆಸರು ಗಭ್ರೂಜಿ, ನರೇಂದ್ರ ಮೋದಿ ಜಿ, ನನಗೆ ಭಾರತದ ಆಧಾರ್ ಕಾರ್ಡ್ ಬೇಕು. ನಾನು ಭಾರತದಿಂದ ಅಮೆರಿಕಕ್ಕೆ ಮರಳಲು ಕೇವಲ 8 ಗಂಟೆಗಳು ಮಾತ್ರ ಉಳಿದಿವೆ. ಕೊನೆದಾಗಿ ನಾನು ವಿಡಿಯೋ ಮಾಡಿದಾಗಲೂ ಇಲ್ಲಿಂದ ತೆರಳಲು ಇಷ್ಟವಿಲ್ಲದೆ ನನ್ನ ಕಣ್ಣುಗಳಲ್ಲಿ ನೀರು ಬಂದಿದೆ’ ಎಂದು ಅವರು ಹೇಳಿಕೊಂಡಿದ್ದಾರೆ.
’ಈ ದೇಶದಲ್ಲಿರುವವರಿಂದ ನಾನು ತುಂಬಾ ಪ್ರಭಾವಿತನಾಗಿದ್ದೇನೆ. ನಾವು ಬಿಳಿಯರಾಗಿರುವುದರಿಂದ ನಮ್ಮಲ್ಲಿ ಎಲ್ಲವೂ ಇದೆ ಎಂದು ನೀವು ಭಾವಿಸುತ್ತೀರಿ. ಆದರೆ ನನಗೆ ಅನಿಸುತ್ತೆ, ನಿಮ್ಮಲ್ಲಿ ಎಲ್ಲವೂ ಇದೆ ಎಂದು. ಈ ದೇಶವು ಎಲ್ಲವನ್ನೂ ಹೊಂದಿದೆ’ ಎಂದು ಅವರು ಹೇಳಿದ್ದಾರೆ.
‘ಭಾರತ ನಮ್ಮ ಮನೆ ಎಂಬ ಭಾವನೆಯನ್ನು ನೀಡಿದೆ. ಇಲ್ಲಿನ ರುಚಿಕರವಾದ ಬೀದಿ ಬದಿ ಆಹಾರ, ಅಪರಿಚಿತರ ಸಹಾಯ, ಸರಳತೆ ಹಾಗೂ ದಯೆ ನಿಜಕ್ಕೂ ಇಷ್ಟವಾಗಿದೆ’ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.