ADVERTISEMENT

ಪಾಕಿಸ್ತಾನದ 16 ಯೂಟ್ಯೂಬ್‌ ಚಾನೆಲ್‌ಗಳಿಗೆ ಭಾರತದಲ್ಲಿ ನಿರ್ಬಂಧ

ಪಿಟಿಐ
Published 28 ಏಪ್ರಿಲ್ 2025, 14:49 IST
Last Updated 28 ಏಪ್ರಿಲ್ 2025, 14:49 IST
<div class="paragraphs"><p>ಯೂಟ್ಯೂಬ್‌ </p></div>

ಯೂಟ್ಯೂಬ್‌

   

ನವದೆಹಲಿ: ಭಾರತದ ಬಗ್ಗೆ ‘ಸುಳ್ಳು, ಪ್ರಚೋದನಕಾರಿ ಮತ್ತು ಕೋಮು ಭಾವನೆ ಕೆರಳಿಸುವ’ ಸುದ್ದಿಗಳನ್ನು ಪ್ರಸಾರ ಮಾಡಿದ ಆರೋಪದ ಮೇಲೆ ಪಾಕಿಸ್ತಾನದ 16 ಯೂಟ್ಯೂಬ್ ಚಾನೆಲ್‌ಗಳ ಮೇಲೆ ಕೇಂದ್ರ ಸರ್ಕಾರ ಸೋಮವಾರ ನಿರ್ಬಂಧ ಹೇರಿದೆ.

ಗೃಹ ಸಚಿವಾಲಯದ ಶಿಫಾರಸಿನಂತೆ ಸರ್ಕಾರ ಈ ಕ್ರಮ ಕೈಗೊಂಡಿದೆ. ಡಾನ್‌ ನ್ಯೂಸ್‌ ಮತ್ತು ಜಿಯೊ ನ್ಯೂಸ್‌ ಸೇರಿದಂತೆ ಈಚಾನೆಲ್‌ಗಳು ಒಟ್ಟು 6.3 ಕೋಟಿ ಚಂದಾದಾರರನ್ನು ಹೊಂದಿವೆ. ‘ಭಾರತದ ಬಗ್ಗೆ, ಭಾರತೀಯ ಸೇನೆ ಮತ್ತುಭದ್ರತಾ ಏಜೆನ್ಸಿಗಳ ಕುರಿತು ಸುಳ್ಳು ಹಾಗೂ ಕಪೋಲಕಲ್ಪಿತ ಮಾಹಿತಿ ಪ್ರಸಾರ ಮಾಡಿರುವುದಕ್ಕೆ ಪಾಕಿಸ್ತಾನದ ಕೆಲವು ಯೂಟ್ಯೂಬ್‌ ಚಾನೆಲ್‌ಗಳನ್ನು ನಿಷೇಧಿಸುವಂತೆ ಗೃಹ ಸಚಿವಾಲಯ ಶಿಫಾರಸು ಮಾಡಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಪಹಲ್ಗಾಮ್‌ನಲ್ಲಿ ದಾಳಿ ನಡೆಸಿದ ಉಗ್ರರ ಪತ್ತೆಗೆ ನಡೆಯುತ್ತಿರುವ ಸೇನಾ ಕಾರ್ಯಾಚರಣೆಯ ನೇರ ಪ್ರಸಾರ ಮಾಡಬಾರದು ಮತ್ತು ‘ಮೂಲಗಳನ್ನು ಉಲ್ಲೇಖಿಸಿ’ ವರದಿಗಳನ್ನು ಪ್ರಕಟಿಸದಂತೆ ಮಾಧ್ಯಮ ಗಳಿಗೆ ಕೇಂದ್ರ ಸರ್ಕಾರ ಶನಿವಾರ ಸೂಚಿಸಿತ್ತು.

ಕೆಲವು ಮಾಧ್ಯಮ ಸಂಸ್ಥೆಗಳು ಸೇನೆಗೆ ಸಂಬಂಧಿಸಿದ ನಿರ್ದಿಷ್ಟ ವಿಷಯಗಳ ಮೇಲೆ ಸಂವಾದ ಕಾರ್ಯಕ್ರಮ ನಡೆಸಿವೆ ಎಂದು ಸೇನೆಯ ಮೂಲಗಳು ಕಳವಳ ವ್ಯಕ್ತಪಡಿಸಿವೆ.

ಚಾನೆಲ್‌ ಯಾವುವು?: ಡಾನ್‌ ನ್ಯೂಸ್, ಇರ್ಶಾದ್‌ ಭಟ್ಟಿ, ಸಮಾ ಟಿ.ವಿ., ಎಆರ್‌ವೈ ನ್ಯೂಸ್, ಬೋಲ್‌ ನ್ಯೂಸ್, ರಫ್ತಾರ್, ದಿ ಪಾಕಿಸ್ತಾನ್ ರೆಫರೆನ್ಸ್, ಜಿಯೊ ನ್ಯೂಸ್, ಸಮಾ ಸ್ಪೋರ್ಟ್ಸ್‌, ಜಿಎನ್‌ಎನ್‌, ಉಜೈರ್‌ ಕ್ರಿಕೆಟ್, ಉಮರ್‌ ಚೀಮಾ ಎಕ್ಸ್‌ಕ್ಲೂಸಿವ್, ಅಸ್ಮಾ ಶಿರಾಝಿ, ಮುನೀಬ್‌ ಫರೂಕಿ, ಸುನೊ ನ್ಯೂಸ್ ಮತ್ತು ರಾಝಿ ನಾಮ ಚಾನೆಲ್‌ಗಳ ಪ್ರಸಾರಕ್ಕೆ ನಿರ್ಬಂಧ ಹೇರಲಾಗಿದೆ.

ಬಿಬಿಸಿ ವರದಿಗಾರಿಕೆಗೆ ಆಕ್ಷೇಪ

ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ಬಿಬಿಸಿಯ ವರದಿಗಾರಿಕೆ ಬಗ್ಗೆ ಭಾರತ ತೀವ್ರ ಆಕ್ಷೇಪ ಸಲ್ಲಿಸಿದೆ. ಬಿಬಿಸಿ ಇಂಡಿಯಾ ಮುಖ್ಯಸ್ಥ ಜಾಕಿ ಮಾರ್ಟಿನ್‌ ಅವರಿಗೆ ಪತ್ರ ಬರೆದು ತನ್ನ ಅಸಮಾಧಾನ ಹೊರಹಾಕಿದೆ. 

‘ದಾಳಿ ನಡೆಸಿದವರನ್ನು ಭಯೋತ್ಪಾದಕರು ಎನ್ನುವ ಬದಲು ಬಂಡುಕೋರರು ಎಂದಿರುವ ಬಿಬಿಸಿ ವರದಿಗಾರಿಕೆಗೆ ಆಕ್ಷೇಪ ವ್ಯಕ್ತಪಡಿಸಿ, ಆ ಮಾಧ್ಯಮ ಸಂಸ್ಥೆಗೆ ಪತ್ರ ಬರೆಯಲಾಗಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಚಾರ ವಿಭಾಗವು ಬಿಬಿಸಿ ವರದಿಗಾರಿಕೆಯ ಮೇಲೆ ಕಣ್ಣಿಡಲಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ. 

ಕೆಲವು ವಿದೇಶಿ ಮಾಧ್ಯಮಗಳು ಪಹಲ್ಗಾಮ್‌ ದಾಳಿಯನ್ನು ಭಯೋತ್ಪಾದಕ ದಾಳಿ ಎನ್ನುವ ಬದಲು, ‘ಬಂದೂಕುಧಾರಿಗಳು ನಡೆಸಿದ ದಾಳಿ’ ಎಂದು ವರದಿ ಮಾಡಿವೆ.

‘ಆ ಮಕ್ಕಳಿಗೆ ಏನು ಉತ್ತರಿಸಲಿ?’

ಶ್ರೀನಗರ: ‘ಒಬ್ಬ ಮುಖ್ಯಮಂತ್ರಿಯಾಗಿ, ಪ್ರವಾಸೋದ್ಯಮ ಸಚಿವನಾಗಿ ಪ್ರವಾಸಿಗರನ್ನು ಇಲ್ಲಿಗೆ ಸ್ವಾಗತಿಸಿದ್ದೇನೆ. ಆದ್ದರಿಂದ ಅವರು ಸುರಕ್ಷಿತ‌ವಾಗಿ ಮರಳುವುದನ್ನು ಖಾತರಿ ಪಡಿಸುವುದು ನನ್ನ ಜವಾಬ್ದಾರಿಯಾಗಿತ್ತು. ನನಗೆ ಅದು ಸಾಧ್ಯವಾಗಲಿಲ್ಲ’ ಎಂದು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ಭಾವುಕರಾಗಿ ಹೇಳಿದರು.

ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಸೋಮವಾರ ಮಾತನಾಡಿದ ಅವರು, ‘ರಕ್ತದ ಮಡುವಿನಲ್ಲಿ ಬಿದ್ದಿದ್ದ ತಂದೆಯನ್ನು ನೋಡಿದ ಆ ಮಕ್ಕಳಿಗೆ, ಕೆಲವೇ ದಿನಗಳ ಹಿಂದೆ ಮದುವೆಯಾದ ನೌಕಾಪಡೆ ಅಧಿಕಾರಿಯ ಪತ್ನಿ ಈಗ ವಿಧವೆಯಾಗಿದ್ದು, ಅವರಿಗೆ ನಾನು ಏನು ಹೇಳಲಿ? ನಾವು ಮಾಡಿದ ತಪ್ಪು ಏನು ಎಂದು ಅವರು ಪ್ರಶ್ನಿಸಿದರು. ನನ್ನ ಬಳಿ ಉತ್ತರವಿರಲಿಲ್ಲ’ ಎಂದು ಗದ್ಗದಿತರಾದರು.

‘ರಾಜ್ಯದ ಸ್ಥಾನಮಾನಕ್ಕೆ ಈಗ ಒತ್ತಾಯಿಸುವುದಿಲ್ಲ’

‘ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತೆ ಒದಗಿಸುವುದು ಇಲ್ಲಿನ ಚುನಾಯಿತ ಸರ್ಕಾರದ ಜವಾಬ್ದಾರಿಯಲ್ಲ, ಆದರೆ ನಾನು ಈ ಅವಕಾಶವನ್ನು (ಪಹಲ್ಗಾಮ್‌ ದಾಳಿ) ರಾಜ್ಯದ ಸ್ಥಾನಮಾನ ಕೇಳಲು ಬಳಸುವುದಿಲ್ಲ. ಈ ಘಟನೆಯನ್ನು ಮುಂದಿಟ್ಟುಕೊಂಡು ರಾಜ್ಯದ ಸ್ಥಾನಮಾನ ಕೊಡಿ ಎಂದು ಒತ್ತಾಯಿಸುವುದು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದರು. 

ರಾಜ್ಯದಲ್ಲಿ ಇದ್ದ ನಾಲ್ವರು ಪಾಕ್‌ ಪ್ರಜೆಗಳ ಗಡಿಪಾರು

ಬೆಂಗಳೂರು: ಕರ್ನಾಟಕದಲ್ಲಿ ಅಕ್ರಮವಾಗಿ ನೆಲಸಿದ್ದ ಪಾಕಿಸ್ತಾನದ ನಾಲ್ವರು ಪ್ರಜೆಗಳನ್ನು ಗಡಿಪಾರು ಮಾಡಲಾಗಿದೆ.

‘ಕೇಂದ್ರ ಸರ್ಕಾರದ ಸೂಚನೆಯಂತೆ ಅನಧಿಕೃತವಾಗಿ ವಾಸವಾಗಿರುವ ಪಾಕಿಸ್ತಾನದ ಪ್ರಜೆಗಳ ಪತ್ತೆ ಕಾರ್ಯವನ್ನು ಗುಪ್ತಚರ ವಿಭಾಗದ ಅಧಿಕಾರಿಗಳು ನಡೆಸಿದ್ದರು. ಕಾರ್ಯಾಚರಣೆ ವೇಳೆ ಬ್ಯುಸಿನೆಸ್ ವೀಸಾ, ಎಜುಕೇಷನ್‌ ವೀಸಾದ ಮೇಲೆ ಬಂದಿದ್ದ ನಾಲ್ವರು, ವೀಸಾದ ಅವಧಿ ಮುಕ್ತಾಯವಾದ ಮೇಲೂ ಅನಧಿಕೃತವಾಗಿ ರಾಜ್ಯದಲ್ಲೇ ನೆಲಸಿದ್ದು ಪತ್ತೆಯಾಗಿತ್ತು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.