
ಪೊಲೀಸರಿಂದ ತಪ್ಪಿಸಿಕೊಳ್ಳಲು ಸತ್ತ ಹಾವು ಹಿಡಿದು ಬೆದರಿಸಿದ ಆಟೊ ಚಾಲಕ
ಹೈದರಾಬಾದ್: ಕುಡಿದು ವಾಹನ ಚಲಾಯಿಸಿ ಸಿಕ್ಕಿಬಿದ್ದ ಆಟೊ ಚಾಲಕನೊಬ್ಬ ಪೊಲೀಸರಿಂದ ತಪ್ಪಿಸಿಕೊಳ್ಳಲು ಸತ್ತ ಹಾವು ತೋರಿಸಿ ಬೆದರಿಸಿದ್ದಾನೆ.
ಹೈದರಾಬಾದ್‌ನ ಚಂದ್ರವನಗುಟ್ಟ ಟ್ರಾಫಿಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭಾನುವಾರ ಈ ಘಟನೆ ನಡೆದಿದೆ.
ಸಂಚಾರಿ ಪೊಲೀಸರು ವಾಹನ ತಪಾಸಣೆ ಮಾಡುತ್ತಿದ್ದ ವೇಳೆ ಆಟೊ ಚಾಲಕ ಪಾನಮತ್ತನಾಗಿರುವುದು ಗೊತ್ತಾಗಿದೆ. ಆಟೊವನ್ನು ವಶಕ್ಕೆ ಪಡೆದು, ನಂತರ ಅದರಲ್ಲಿರುವ ವಸ್ತುಗಳನ್ನು ಹೊರಕ್ಕೆ ತೆಗೆಯುವಂತೆ ಸೂಚಿಸಿದ್ದಾರೆ. ಈ ವೇಳೆ ಚಾಲಕ ಸತ್ತ ಹಾವನ್ನು ಕೈಯಲ್ಲಿ ಹಿಡಿದು ಪ್ರಕರಣ ದಾಖಲಿಸದಂತೆ ಪೊಲೀಸ್ ಸಿಬ್ಬಂದಿಗೆ ಬೆದರಿಕೆ ಹಾಕಿದ್ದಾನೆ. ನಂತರ ಸ್ಥಳದಿಂದ ಪರಾರಿಯಾಗಿದ್ದಾನೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಹರಿದಾಡುತ್ತಿದೆ. ವಿಡಿಯೊದಲ್ಲಿ ‘ಕೈಯಲ್ಲಿ ಹಾವನ್ನು ಸುತ್ತಿಕೊಂಡು ಓಡಾಡುತ್ತ, ಇದನ್ನು ತೆಗೆದುಕೊಳ್ಳಿ, ನನ್ನ ವಾಹನವನ್ನು ವಾಪಸ್ ನೀಡಿ’ ಎಂದು ಚಾಲಕ ಹೇಳುತ್ತಿರುವ ದೃಶ್ಯವಿದೆ.
ಸದ್ಯ ಆತನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.