ADVERTISEMENT

ಆಕ್ಷೇಪಾರ್ಹ ಹೇಳಿಕೆ: ರಣವೀರ್‌ ಭಾಗಿಯಾಗಿದ್ದ ಸಂಚಿಕೆ ಪ್ರಸಾರಕ್ಕೆ ನಿರ್ಬಂಧ

ಪಿಟಿಐ
Published 11 ಫೆಬ್ರುವರಿ 2025, 10:03 IST
Last Updated 11 ಫೆಬ್ರುವರಿ 2025, 10:03 IST
<div class="paragraphs"><p>ರಣವೀರ್ ಇಲಾಹಾಬಾದಿಯಾ</p></div>

ರಣವೀರ್ ಇಲಾಹಾಬಾದಿಯಾ

   

ಚಿತ್ರ ಕೃಪೆ: ಎಕ್ಸ್‌

ನವದೆಹಲಿ: ಸರ್ಕಾರದ ಆದೇಶದಂತೆ ಯುಟ್ಯೂಬರ್‌ ರಣವೀರ್ ಇಲಾಹಾಬಾದಿಯಾ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ‘ಇಂಡಿಯಾ ಗಾಟ್‌ ಲೆಟೆಂಟ್’ ಕಾರ್ಯಕ್ರಮದ ಸಂಚಿಕೆಯ ಪ್ರಸಾರವನ್ನು ಯುಟ್ಯೂಬ್‌ನಲ್ಲಿ ನಿರ್ಬಂಧಿಸಲಾಗಿದೆ.

ADVERTISEMENT

ಈ ಕುರಿತು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಹಿರಿಯ ಸಲಹೆಗಾರ ಕಾಂಚನ್ ಗುಪ್ತಾ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದು, ‘ಇಂಡಿಯಾ ಗಾಟ್‌ ಲೆಟೆಂಟ್‌ ಕಾರ್ಯಕ್ರಮದಲ್ಲಿ ರಣವೀರ್‌ ಇಲಾಹಾಬಾದಿಯಾ ಅವರ ಆಕ್ಷೇಪಾರ್ಹ ಹೇಳಿಕೆ ಇರುವ ಸಂಚಿಕೆಯ ಪ್ರಸಾರವನ್ನು ನಿರ್ಬಂಧಿಸಲಾಗಿದೆ’ ಎಂದು ಬರೆದುಕೊಂಡಿದ್ದಾರೆ. 

ಕಳೆದ ವಾರ ರಣವೀರ್‌ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾಗ, ಸ್ಪರ್ಧಿಯೊಬ್ಬರ ಬಳಿ ಪೋಷಕರು ಮತ್ತು ಲೈಂಗಿಕತೆಯ ಬಗ್ಗೆ ಮಾತನಾಡಿದ್ದರು. ಇದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಸಾರ್ವಜನಿಕರಿಂದ ತೀವ್ರ ಟೀಕೆಗೆ ವ್ಯಕ್ತವಾಗಿತ್ತು. ಜತೆಗೆ ಜನರು ರಣವೀರ್‌ ಅವರ ಪಾಡ್‌ಕಾಸ್ಟ್ ಕಾರ್ಯಕ್ರಮಕ್ಕೆ ನಿಷೇಧ ಹೇರಬೇಕು ಎಂದು ಆಗ್ರಹಿಸಿದ್ದರು. ತಮ್ಮ ಹೇಳಿಕೆ ವಿವಾದಕ್ಕೆ ಕಾರಣವಾಗುತ್ತಿದ್ದಂತೆ ವಿಡಿಯೊ ಮಾಡಿ ರಣವೀರ್‌ ಕ್ಷಮೆಯಾಚಿಸಿದ್ದರು.

ಈ ವಿಚಾರದ ಗಂಭೀರತೆ ಅರಿತ ಮಹಾರಾಷ್ಟ್ರ ಸರ್ಕಾರ ಕೂಡ ಕ್ರಮ ಕೈಗೊಳ್ಳುವುದಾಗಿ ಹೇಳಿತ್ತು. ಈಗ ಗುವಾಹಟಿ ನಿವಾಸಿಯೊಬ್ಬರು ನೀಡಿದ ದೂರನ್ನು ಆಧರಿಸಿ ಗವಾಹಟಿ ಪೊಲೀಸರು ರಣವೀರ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ರಣವೀರ್ ಮಾತ್ರವಲ್ಲದೆ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಸಮಯ್ ರೈನಾ, ಆಶಿಶ್ ಚಂಚಲಾನಿ, ಜಸ್‌ಪ್ರೀತ್ ಸಿಂಗ್ ಮತ್ತು ಅಪೂರ್ವ ಮಖಿಜಾ ವಿರುದ್ಧವೂ ಪ್ರಕರಣ ದಾಖಲಾಗಿದೆ.

ರಣವೀರ್‌ ಅವರ ಪಾಡ್‌ಕಾಸ್ಟ್‌ನಲ್ಲಿ ಭಾಗವಹಿಸಬೇಕಿತ್ತು. ಆದರೆ ಈಗ ಅದನ್ನು ರದ್ದು ಪಡಿಸಲಾಗಿದೆ. ಅವರ ಆಲೋಚನೆಯು ಎಷ್ಟು ಕೆಟ್ಟದಾಗಿದೆ
ಬಿ. ಪ್ರಾಕ್‌ ಗಾಯಕ

30 ಅತಿಥಿಗಳಿಗೆ ಸಮನ್ಸ್‌

‘ಇಂಡಿಯಾಸ್‌ ಗಾಟ್‌ ಲ್ಯಾಟೆಂಟ್’ ಕಾರ್ಯಕ್ರಮದ ವಿರುದ್ಧ ಮಹಾರಾಷ್ಟ್ರ ಸೈಬರ್‌ ವಿಭಾಗವು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದೆ. ಮೊದಲ ಎಪಿಸೋಡ್‌ನಿಂದ ಇಲ್ಲಿಯವರೆಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸುಮಾರು 30 ಅತಿಥಿಗಳಿಗೆ ಸಮನ್ಸ್‌ ನೀಡಲಾಗಿದೆ. ‘ಈ ಕಾರ್ಯಕ್ರಮದ ಎಲ್ಲ 18 ಎಪಿಸೋಡ್‌ಗಳನ್ನು ತೆಗೆದು ಹಾಕುವ ಬಗ್ಗೆ ಸೈಬರ್‌ ವಿಭಾಗವು ಚಿಂತನೆ ನಡೆಸಿದೆ. ಕಾರ್ಯಕ್ರಮದಲ್ಲಿ ಭಾಗವಹಿಸುವವರು ಅತಿಥಿಗಳು ತೀರ್ಪುಗಾರರು ಎಲ್ಲರೂ ಅಶ್ಲೀಲ ಭಾಷೆ ಬಳಸುತ್ತಿದ್ದಾರೆ. ಹೀಗೆ ಅಶ್ಲೀಲವಾಗಿ ಮಾತನಾಡಿದವರ ಪಟ್ಟಿ ಸಿದ್ಧಪಡಿಸಿಕೊಳ್ಳಲಾಗಿದೆ’ ಎಂದು ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.