ADVERTISEMENT

Social Media: ಇನ್‌ಸ್ಟಾಗ್ರಾಂನಲ್ಲಿ ಅತಿಹೆಚ್ಚು ಲೈಕ್ ಪಡೆದ ಪೋಸ್ಟ್‌ಗಳಿವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಡಿಸೆಂಬರ್ 2025, 10:27 IST
Last Updated 8 ಡಿಸೆಂಬರ್ 2025, 10:27 IST
   

ಸಾಮಾಜಿಕ ಮಾಧ್ಯಮವು ಜನರನ್ನು ಆನ್‌ಲೈನ್‌ ಮೂಲಕ ಬೆಸೆಯುವ ಜಾಲವಾಗಿದೆ. ವಾಟ್ಸ್‌ಆ್ಯಪ್‌, ಇನ್‌ಸ್ಟಾಗ್ರಾಂ, ಫೇಸ್‌ಬುಕ್‌, ಎಕ್ಸ್‌ ಸೇರಿದಂತೆ ಇತರ ವೇದಿಕೆಗಳನ್ನು ಜನರು, ಯಾವುದೇ ವಿಚಾರ ಕುರಿತ ತಮ್ಮ ಅಭಿಪ್ರಾಯಗಳನ್ನು, ಸಂತಸ ಇಲ್ಲವೇ ನೋವಿನ ಸಂಗತಿಗಳನ್ನು ವ್ಯಕ್ತಪಡಿಸಲು, ಫೋಟೊ ಅಥವಾ ವಿಡಿಯೊಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ಪ್ರೀತಿಪಾತ್ರರನ್ನು ಸಂಪರ್ಕಿಸಲು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿದ್ದಾರೆ.

ಇದಷ್ಟೇ ಅಲ್ಲ. ಪ್ರಪಂಚದ ಯಾವುದೋ ಮೂಲೆಯಲ್ಲಿರುವ ಅಪರಿಚಿತರೊಂದಿಗೂ ಸ್ನೇಹ ಸಾಧಿಸಲೂ ಇವು ನೆರವಾಗುತ್ತಿವೆ.

'ಮೆಟಾ' ಒಡೆತನದ ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಂ ಅನ್ನು ಪ್ರತಿತಿಂಗಳು ಸರಾಸರಿ ಮೂರು ಶತಕೋಟಿಯಷ್ಟು ಜನರು ಬಳಸುತ್ತಾರೆ ಎಂದು ಅಂಕಿ–ಅಂಶಗಳು ಹೇಳುತ್ತವೆ. ಉದ್ಯಮಿ ಇಲಾನ್‌ ಮಸ್ಕ್‌ ಮಾಲೀಕತ್ವದ 'ಎಕ್ಸ್‌' ಅನ್ನು ಮಾಸಿಕ 60 ಕೋಟಿಯಷ್ಟು ಜನರು ಬಳಸುತ್ತಾರೆ ಎನ್ನಲಾಗುತ್ತದೆ.

ADVERTISEMENT

ಇನ್‌ಸ್ಟಾಗ್ರಾಂನಲ್ಲಿ ಮೆಸ್ಟಿ, ರೊನಾಲ್ಡೊ ಕ್ರೇಜ್‌
ಫುಟ್‌ಬಾಲ್‌ ಲೋಕದ ಸೂಪರ್‌ಸ್ಟಾರ್‌ಗಳೆನಿಸಿರುವ ಅರ್ಜೆಂಟಿನಾದ ಲಿಯೊನೆಲ್‌ ಮೆಸ್ಸಿ ಮತ್ತು ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಪೋಸ್ಟ್‌ಗಳು ಇನ್‌ಸ್ಟಾಗ್ರಾಂನಲ್ಲಿ ಅತಿಹೆಚ್ಚು ಜನರು ಮೆಚ್ಚಿದ ಪೋಸ್ಟ್‌ಗಳ ಲಿಸ್ಟ್‌ನಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿವೆ.

ಬರೋಬ್ಬರಿ 51 ಕೋಟಿ ಹಿಂಬಾಲಕರನ್ನು ಹೊಂದಿರುವ ಮೆಸ್ಸಿ ಅವರ ಮೂರು ಪೋಟೊಗಳು ಮತ್ತು 66 ಕೋಟಿ ಹಿಂಬಾಲಕರಿರುವ ರೊನಾಲ್ಡೊ ಅವರ ಎರಡು ಪೋಸ್ಟ್‌ಗಳು ಈ ಪಟ್ಟಿಯಲ್ಲಿವೆ.

ಹೆಚ್ಚು ಜನ ಮೆಚ್ಚಿದ ಟಾಪ್‌ 10 ಪೋಸ್ಟ್‌ಗಳಿವು

ಲಿಯೊನೆಲ್‌ ಮೆಸ್ಸಿ ವಿಶ್ವಕಪ್ ಪೋಸ್ಟ್
2022ರ ಫುಟ್‌ಬಾಲ್‌ ವಿಶ್ವಕಪ್‌ನಲ್ಲಿ ಅರ್ಜೆಂಟಿನಾ ತಂಡ ಚಾಂಪಿಯನ್‌ ಪಟ್ಟಕ್ಕೇರಿತ್ತು. ಅದಾದ ನಂತರ ಮೆಸ್ಸಿ ಅವರು ಟ್ರೋಫಿ ಜೊತೆಗಿನ ಚಿತ್ರವನ್ನು ಹಂಚಿಕೊಂಡಿದ್ದರು. ಆ ಪೋಸ್ಟ್‌ ಅನ್ನು ಇದುವರೆಗೆ 7.46 ಕೋಟಿ ಜನರು ಮೆಚ್ಚಿಕೊಂಡಿದ್ದಾರೆ.

ವರ್ಲ್ಡ್‌ ರೆಕಾರ್ಡ್‌ ಎಗ್‌
world_record_egg ಎಂಬ ಖಾತೆಯಿಂದ 2019ರಲ್ಲಿ ಪೋಸ್ಟ್‌ ಆಗಿರುವ ಮೊಟ್ಟೆಯ ಚಿತ್ರವನ್ನು ಬರೋಬ್ಬರಿ 6.04 ಕೋಟಿ ಜನರು ಮೆಚ್ಚಿಕೊಂಡಿದ್ದಾರೆ. ಈ ಖಾತೆಯನ್ನು 46 ಲಕ್ಷ ಜನರು ಹಿಂಬಾಲಿಸುತ್ತಿದ್ದಾರೆ.

ಮತ್ತೊಮ್ಮೆ ಮೆಸ್ಸಿ
2022ರ ವಿಶ್ವಕಪ್‌ ಟ್ರೋಫಿಯೊಂದಿಗೆ ಮಲಗಿರುವ ಚಿತ್ರವನ್ನು ಮೆಸ್ಸಿ 2022ರ ಡಿಸೆಂಬರ್‌ 20ರಂದು ಹಂಚಿಕೊಂಡಿದ್ದರು. ಅದನ್ನು ಈವರೆಗೆ 536 ಕೋಟಿ ಜನರು ಇಷ್ಟಪಡಿಸಿದ್ದಾರೆ.

ಕಿಶೋರ್‌ ಮಂಡಲ್‌
ಇನ್‌ಫ್ಲುಯೆನ್ಸರ್‌ ಕಿಶೋರ್‌ ಮಂಡಲ್‌ ಹಾಗೂ ಅವರ ಸಹೋದರ ಹಾಡಿರುವ 'ಜೀನೆ ಲಹಾ ಹೂ' ಹಾಡಿನ ತುಣುಕನ್ನು 5.1 ಕೋಟಿ ಜನರು ಇಷ್ಟಪಟ್ಟಿದ್ದಾರೆ. ಇದೇ ವರ್ಷ ಏಪ್ರಿಲ್‌ನಲ್ಲಿ ಹಂಚಿಕೆಯಾಗಿರುವ ಈ ಪೋಸ್ಟ್‌ ಭಾರತೀಯರು ಹಂಚಿಕೊಂಡ ಪೋಸ್ಟ್‌ಗಳ ಪೈಕಿ ಅಗ್ರಸ್ಥಾನದಲ್ಲಿದೆ.

ಮಂಡಲ್‌ ಅವರಿಗೆ 1.49 ಕೋಟಿ ಫಾಲೋವರ್ಸ್‌ ಇದ್ದಾರೆ.

ಇನ್‌ಸ್ಟಾ 360
28 ಲಕ್ಷ ಹಿಂಬಾಲಕರನ್ನು ಹೊಂದಿರುವ 'insta360' ಎಂಬ ಖಾತೆಯಿಂದ ಇದೇ ವರ್ಷ ಮೇ ತಿಂಗಳಲ್ಲಿ ಹಂಚಿಕೆಯಾಗಿರುವ ಪೋಸ್ಟ್‌ಗೆ 4.8 ಕೋಟಿ ಜನರು ಲೈಕ್‌ ಒತ್ತಿದ್ದಾರೆ. 360 ಕ್ಯಾಮೆರಾ ಮೂಲಕ ಸೆರೆ ಹಿಡಿದಿರುವ ಮಗುವಿನ ವಿಡಿಯೊ ಇದಾಗಿದೆ.

ಕ್ರಿಸ್ಟಿಯಾನೊ ರೊನಾಲ್ಡೊ
ರೊನಾಲ್ಡೊ ಅವರು ಮೆಸ್ಸಿ ಜೊತೆ ಚೆಸ್‌ ಆಡುತ್ತಿರುವಂತೆ ಚಿತ್ರಿಸಲಾಗಿರುವ ಫೋಟೊವನ್ನು 4.1 ಕೋಟಿ ಜನರು ಮೆಚ್ಚಿದ್ದಾರೆ. ಇದು, ಲೂಯಿಸ್‌ ವ್ಯೂಟನ್‌ನ ಫ್ಯಾಷನ್‌ ಪ್ರಾಯೋಜಕ ಚಿತ್ರವಾಗಿದ್ದು, ರೊನಾಲ್ಡೊ ಅವರು 2022ರ ನವೆಂಬರ್‌ನಲ್ಲಿ ಹಂಚಿಕೊಂಡಿದ್ದರು.

ಪುನಃ ಮೆಸ್ಸಿ
ಮೆಸ್ಸಿ ಅವರ ಮತ್ತೊಂದು ವಿಶ್ವಕಪ್‌ ಚಿತ್ರವೇ ಟಾಪ್‌ 10 ಲಿಸ್ಟ್‌ನಲ್ಲಿ ಕಾಣಿಸಿಕೊಂಡಿದೆ. ಟ್ರೋಫಿಯೊಂದಿಗೆ ತಂಡದ ವಾಹನದಲ್ಲಿ ಕುಳಿತಿರುವ ಚಿತ್ರ ಇದಾಗಿದ್ದು , 4.1 ಕೋಟಿ ಜನರು ಮೆಚ್ಚಿದ್ದಾರೆ.

ಎಮಿಲೊ ಪಿಯಾನೊ
'ಟೈಟಾನಿಕ್‌' ಸಿನಿಮಾದ ಗೀತೆಯನ್ನು ಪುಟ್ಟ ಬಾಲಕಿ ಹಾಡಿರುವ ವಿಡಿಯೊದ ತುಣಕು ಕಳೆದ ವರ್ಷ ಸಕತ್‌ ವೈರಲ್‌ ಆಗಿತ್ತು. ಎಮಿಲೊ ಪಿಯಾನೊ ಖಾತೆಯಿಂದ ಹಂಚಿಕೆಯಾಗಿರುವ ಈ ತುಣುಕಿಗೆ 3.7 ಕೋಟಿ ಜನರು ಮೆಚ್ಚುಗೆಯ ಮುದ್ರೆಯೊತ್ತಿದ್ದಾರೆ.

ಟೇಲರ್‌ ಸ್ವಿಫ್ಟ್‌, ಟ್ರಾವಿಸ್‌ ಕೆಲ್ಸೆ
ಟೇಲರ್‌ ಸ್ವಿಫ್ಟ್‌, ಟ್ರಾವಿಸ್‌ ಕೆಲ್ಸೆ ಅವರು ಜೊತೆಯಾಗಿರುವ ಚಿತ್ರವನ್ನು 3.76 ಕೋಟಿ ಜನರು ಮೆಚ್ಚಿದ್ದಾರೆ.

ರೊನಾಲ್ಡೊ
ರೊನಾಲ್ಡೊ ಅವರು ಫಿನ್‌ಲ್ಯಾಂಡ್‌ ಹಿಮಪ್ರದೇಶದಲ್ಲಿ ಮೈಕೊರೆಯುವ ನೀರಿನಲ್ಲಿ ಬರಿ ಮೈಯಲ್ಲಿ ಮುಳುಗಿ ಏಳುವ ವಿಡಿಯೊ 10ನೇ ಸ್ಥಾನದಲ್ಲಿದೆ. ಇದನ್ನು 3.5 ಕೋಟಿ ಜನರು ಇಷ್ಟಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.