ADVERTISEMENT

ರಷ್ಯಾದಲ್ಲಿ ಬಳಕೆಗೆ ಸಿಗುತ್ತಿಲ್ಲ ಇನ್‌ಸ್ಟಾಗ್ರಾಮ್‌; ಉಕ್ರೇನ್‌ ಮಾಹಿತಿಗೆ ತಡೆ!

ಏಜೆನ್ಸೀಸ್
Published 14 ಮಾರ್ಚ್ 2022, 12:39 IST
Last Updated 14 ಮಾರ್ಚ್ 2022, 12:39 IST
ಇನ್‌ಸ್ಟಾಗ್ರಾಮ್‌ ಲೋಗೊ
ಇನ್‌ಸ್ಟಾಗ್ರಾಮ್‌ ಲೋಗೊ   

ಮಾಸ್ಕೊ: ರಷ್ಯಾದಲ್ಲಿ ಸಾಮಾಜಿಕ ಮಾಧ್ಯಮ ವೇದಿಕೆ ಇನ್‌ಸ್ಟಾಗ್ರಾಮ್‌ ಬಳಕೆಗೆ ಸಿಗುತ್ತಿಲ್ಲ. ರಷ್ಯನ್ನರ ವಿರುದ್ಧ ಹಿಂಸಾಚಾರಕ್ಕೆ ಪ್ರೇರೇಪಣೆ ನೀಡುವಂತಹ ಪೋಸ್ಟ್‌ಗಳಿಗೆ ಸಾಮಾಜಿಕ ಮಾಧ್ಯಮ ವೇದಿಕೆಯು ಅವಕಾಶ ನೀಡುತ್ತಿರುವುದಾಗಿ 'ಮೆಟಾ' ವಿರುದ್ಧ ರಷ್ಯಾ ಸರ್ಕಾರ ಆರೋಪಿಸಿತ್ತು. ಅದರ ಬೆನ್ನಲ್ಲೇ ಈ ಬೆಳವಣಿಗೆ ವರದಿಯಾಗಿದೆ.

ರಷ್ಯಾ ಮಾರ್ಚ್‌ ಆರಂಭದಲ್ಲೇ ಫೇಸ್‌ಬುಕ್‌ ಮತ್ತು ಟ್ವಿಟರ್‌ ಸಾಮಾಜಿಕ ಮಾಧ್ಯಮಗಳನ್ನು ನಿರ್ಬಂಧಿಸಿದೆ. ಉಕ್ರೇನ್‌ನಲ್ಲಿ ರಷ್ಯಾ ಸೇನಾಪಡೆಯ ಕಾರ್ಯಾಚರಣೆಯ ಬಗ್ಗೆ ರಷ್ಯನ್ನರಿಗೆ ಮಾಹಿತಿ ಲಭ್ಯತೆಯನ್ನು ತಡೆಯುವ ನಿಟ್ಟಿನಲ್ಲಿ ನಿರ್ಬಂಧ ತಂತ್ರವನ್ನು ರಷ್ಯಾ ಅನುಸರಿಸುತ್ತಿರುವುದಾಗಿ ಎಎಫ್‌ಪಿ ವರದಿ ಮಾಡಿದೆ.

ರಷ್ಯಾದ ಮಾಧ್ಯಮ ನಿಯಂತ್ರಣ ಸಂಸ್ಥೆ ರಾಸ್ಕೊಮ್ನಾಡ್ಜರ್‌ ಸೋಮವಾರ ಪ್ರಕಟಿಸಿರುವ ನಿರ್ಬಂಧಿತ ಆನ್‌ಲೈನ್‌ ವೇದಿಕೆಗಳ ಪಟ್ಟಿಯಲ್ಲಿ ಇನ್‌ಸ್ಟಾಗ್ರಾಮ್‌ ಕಾಣಿಸಿಕೊಂಡಿದೆ.

ADVERTISEMENT

ವಿಪಿಎನ್‌ (ವರ್ಚುವಲ್‌ ಪ್ರೈವೇಟ್‌ ನೆಟ್‌ವರ್ಕ್‌) ಸಂಪರ್ಕ ಇಲ್ಲದೆ ಇನ್‌ಸ್ಟಾಗ್ರಾಮ್‌ ಆ್ಯಪ್‌ ರಿಫ್ರೆಶ್‌ ಆಗುತ್ತಿಲ್ಲ. ಮೆಟಾದ ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಮ್‌ ವೇದಿಕೆಗಳು ರಷ್ಯಾದಲ್ಲಿ ಅತಿ ಹೆಚ್ಚು ಬಳಕೆಯಲ್ಲಿರುವ ಸಾಮಾಜಿಕ ಮಾಧ್ಯಮಗಳಾಗಿವೆ.

ರಷ್ಯಾದ ಯುವ ಜನತೆ ಹಾಗೂ ಸಣ್ಣ ಉದ್ಯಮಿಗಳು ತಮ್ಮ ವ್ಯಾಪಾರ ವೃದ್ಧಿಗಾಗಿ ಇನ್‌ಸ್ಟಾಗ್ರಾಮ್‌ ಅನ್ನು ಪ್ರಮುಖ ಪ್ರಚಾರ ವೇದಿಕೆಯಾಗಿ ಬಳಸಿಕೊಳ್ಳುತ್ತಿದ್ದಾರೆ. ಉತ್ಪನ್ನಗಳ ಮಾರಾಟ ಮತ್ತು ಗ್ರಾಹಕರೊಂದಿಗೆ ಸಂಪರ್ಕಕ್ಕೂ ಈ ವೇದಿಕೆ ಬಳಕೆಯಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.