
ಬೆರಳಂಚಲ್ಲೇ ಲೋಕವನ್ನು ಹಿಡಿದಿಡುವ ಸಾಮಾಜಿಕ ಜಾಲತಾಣಗಳ ಈ ಯುಗದಲ್ಲಿ ಯಾರು ಬೇಕಾದರೂ ದಿಢೀರನೆ ಪ್ರಖ್ಯಾತಿ, ಕುಖ್ಯಾತಿಯನ್ನು ಗಳಿಸಿಬಿಡಬಹುದು. ಎಲ್ಲರ ಕಣ್ಸೆಳೆಯುವ ಬಟ್ಟಲುಗಣ್ಣಿನ ಚಂದದ ಹುಡುಗಿ, ವಕ್ರ ಕಂಠದಿಂದ ಹಾಡುವವರು, ಒಂದೊಳ್ಳೆ ಪ್ರತಿಭೆ, ಯಾರದ್ದೋ ಒಳ್ಳೆಯ ಕೆಲಸ, ಇನ್ಯಾರದ್ದೋ ಕೆಟ್ಟ ಕೆಲಸ... ಹೀಗೆ ನಮ್ಮೆಲ್ಲ ಅಭಿವ್ಯಕ್ತಿಗೂ ವೇದಿಕೆ ಕಲ್ಪಿಸುವ ಸಾಮಾಜಿಕ ಜಾಲತಾಣ, ಅದರಲ್ಲೂ ಈ ರೀಲ್ಸ್ ಲೋಕ ನಮಗರಿವಿಲ್ಲದೇ ನಮ್ಮ ಮೇಲೆ ಬೀರುತ್ತಿರುವ ಪ್ರಭಾವ ದೊಡ್ಡದು. ಹಾಗೇ 2025ರಲ್ಲಿ ವೈರಲ್ ಆದ ನಮ್ಮ ನಡುವಿನ ಆಯ್ದ ಕೆಲವು ಹೆಣ್ಣುಮಕ್ಕಳ ಚಿತ್ರಣ ಇಲ್ಲಿದೆ.

ಮೈಸೂರಿನ ಯುವ ದಸರಾದಲ್ಲಿ ‘ಏಳು ಮಲೆ ಮೇಲೇರಿ ನಿಂತಾನವ್ವ ಮಾದೇವಾ’ ಹಾಡಿಗೆ ಯುವತಿಯೊಬ್ಬಳು ಹುಡುಗನೊಬ್ಬನೊಂದಿಗೆ ನೃತ್ಯ ಮಾಡಿದ ವಿಡಿಯೊ ಸಖತ್ ವೈರಲ್ ಆಯಿತು. ತನ್ನ ಪಾಡಿಗೆ ತಾನು ನರ್ತಿಸುತ್ತಿದ್ದಾಗ, ಪಾಪ್‌ಕಾರ್ನ್ ಮಾರುತ್ತಾ ಬಂದ ಹುಡುಗನೂ ಅವಳೊಟ್ಟಿಗೆ ಹೆಜ್ಜೆ ಹಾಕಲು ಆರಂಭಿಸಿದ. ಅವನು ತನ್ನ ಸ್ನೇಹಿತನೋ ಸಹೋದರನೋ ಎಂಬಂತೆ ಆ ಯುವತಿ ಅದೇ ಹುಮ್ಮಸ್ಸಿನಿಂದ ತಾನೂ ಅವನೊಂದಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದಳು. ಇದು ಅನಿರೀಕ್ಷಿತವಾಗಿದ್ದರೂ ಆ ಹಾಡಿಗೂ ಅವರಿಬ್ಬರ ನೃತ್ಯದ ಜುಗಲ್‌ಬಂದಿಗೂ ಚಂದದ ಹೊಂದಾಣಿಕೆ ಇತ್ತು. ಇದನ್ನು ಸೆರೆಹಿಡಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾಗುತ್ತಿದ್ದಂತೆಯೇ ನೋಡುಗರ ಮೆಚ್ಚುಗೆಗೆ ಪಾತ್ರವಾಗಿ ಬಹುಬೇಗ ವೈರಲ್ ಆಗಿಬಿಟ್ಟಿತು. ಪಾಪ್‌ಕಾರ್ನ್ ಪೊಟ್ಟಣಗಳಿದ್ದ ಪ್ಲಾಸ್ಟಿಕ್ ಕೈಚೀಲಗಳನ್ನು ಹಿಡಿದೇ ಆತ ತನ್ನೊಟ್ಟಿಗೆ ನರ್ತಿಸಲು ಮುಂದಾದಾಗ, ಒಂದು ಕ್ಷಣವೂ ಯೋಚಿಸದೆ ಅವನೊಂದಿಗೆ ಹೆಜ್ಜೆ ಹಾಕಿದ್ದು ಅವಳ ನಿಶ್ಕಲ್ಮಷ ಮನಸ್ಸಿಗೆ ಸಾಕ್ಷಿ ಎಂದು ಬಹುತೇಕ ನೋಡುಗರು ಕಮೆಂಟಿಸಿದರು.
ಆ ವಿಡಿಯೊ ವೈರಲ್ ಆಗಿದ್ದು ಅನಿರೀಕ್ಷಿತ. ಮಧ್ಯಮ ವರ್ಗದ ಕುಟುಂಬದವಳಾದ ನಾನು, ಯಾವ ಭೇದವೂ ಇಲ್ಲದೆ ಎಲ್ಲರನ್ನೂ ಗೌರವಿಸುವ ವಾತಾವರಣದಲ್ಲಿ ಬೆಳೆದವಳು. ಈಗ ಕೆಲಸದ ನಡುವೆ ಬಿಡುವಿದ್ದಾಗ ರೀಲ್ಸ್ ಮಾಡುತ್ತಾ ಖುಷಿಯಾಗಿದ್ದೇನೆ.ಪುಣ್ಯಾ
ಮೈಸೂರಿನ ಆಸ್ಪತ್ರೆಯೊಂದರಲ್ಲಿ ಲ್ಯಾಬ್ ಟೆಕ್ನೀಷಿಯನ್ ಆಗಿ ಕೆಲಸ ಮಾಡುತ್ತಿರುವ ಪುಣ್ಯಾ, ಚಿತ್ರನಟ ಸುದೀಪ್ ಅವರ ಕಟ್ಟಾ ಅಭಿಮಾನಿ. ಸುದೀಪ್ ಅವರನ್ನು ಖುದ್ದಾಗಿ ತೋರಿಸುವ ಆಮಿಷ ಒಡ್ಡಿ, ಆಕೆ ಪಿಯುಸಿಯಲ್ಲಿ ಚೆನ್ನಾಗಿ ಓದುವಂತೆ ನೋಡಿಕೊಂಡಿದ್ದರು ಅವರ ತಾಯಿ. ಆದರೆ ಆ ಆಸೆಯನ್ನು ಈಡೇರಿಸಲು ಮಾತ್ರ ಅವರಿಗೆ ಸಾಧ್ಯವಾಗಿರಲಿಲ್ಲ. ವೈರಲ್ ಆದ ಬಳಿಕ ನೀಡಿದ ಸಂದರ್ಶನವೊಂದರಿಂದ ವಿಷಯ ತಿಳಿದ ಸುದೀಪ್, ಸ್ವತಃ ಪುಣ್ಯಾ ಅವರನ್ನು ಕರೆಸಿಕೊಂಡು ಭೇಟಿಯಾಗಿದ್ದು ವಿಶೇಷ.
ನವೆಂಬರ್ 1ರಂದು ಚಂದ್ರಪ್ರಭಾ ಗೌಡ ಅವರಿಗೆ ಒಂದು ಕರೆ ಬಂತು. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಕುಂಬ್ರದ ಬಳಿ ಕಾರು ಮತ್ತು ರಿಕ್ಷಾ ನಡುವೆ ಅಪಘಾತ ನಡೆದಿದ್ದು, ಗಾಯಗೊಂಡವರನ್ನು ರಕ್ಷಿಸಲು ಸಹಾಯಹಸ್ತ ನೀಡಿ ಎಂದು ಕೇಳಿದ್ದ ಆ ಕರೆಗೆ ಚಂದ್ರಪ್ರಭಾ ತಕ್ಷಣವೇ ಸ್ಪಂದಿಸಿದರು, ಆಸ್ಪತ್ರೆಯತ್ತ ಧಾವಿಸಿದರು. ಐಸಿಯುನಿಂದ ಮಗುವೊಂದರ ಆಕ್ರಂದನ ಕೇಳಿಬರುತ್ತಿತ್ತು. ಅಲ್ಲಿದ್ದ ಮೂರು ತಿಂಗಳ ಮಗು ತೀವ್ರವಾಗಿ ಗಾಯಗೊಂಡಿತ್ತು. ಮೂಗಿನಿಂದ ರಕ್ತ ಒಸರುತ್ತಿದ್ದ, ಕಣ್ಣಿಗೆ ಗಾಯವಾಗಿದ್ದ ಮಗುವನ್ನು ಎತ್ತಿಕೊಂಡ ಚಂದ್ರಪ್ರಭಾ ಅವರಿಗೆ, ವೈದ್ಯರು ಸ್ಕ್ಯಾನ್ ಮಾಡಿಸಿಕೊಂಡು ಬರಲು ತಿಳಿಸಿದರು. ತಕ್ಷಣವೇ ಆಂಬುಲೆನ್ಸ್ ಏರಿ, ಮಗುವನ್ನು ಮಡಿಲಿಗೆ ಹಾಕಿಕೊಂಡು ಸ್ಕ್ಯಾನಿಂಗ್ ಸೆಂಟರ್‌ಗೆ ಕರೆದೊಯ್ದರು. ‘ಕಷ್ಟಕಾಲಕ್ಕೆ ಹಗ್ಗವೂ ಹಾವಿನಂತೆ’ ಎನ್ನುವ ಹಾಗೆ, ಆ ದಿನ ಅಷ್ಟು ಸುಲಭದಲ್ಲಿ ಸ್ಕ್ಯಾನಿಂಗ್ ಮಾಡಿಸಲು ಆಗಲಿಲ್ಲ. ಎರಡು, ಮೂರು ಸೆಂಟರ್‌ಗಳಿಗೆ ತಿರುಗಿ, ಕೊನೆಗೂ ಸ್ಕ್ಯಾನಿಂಗ್ ಮಾಡಿಸಿ, ಮಗುವಿಗೆ ಅಪಾಯವಿಲ್ಲ ಎಂಬುದನ್ನು ತಿಳಿದುಕೊಂಡರು. ಈ ಎಲ್ಲದರ ನಡುವೆ, ಅದೇ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದ ಇನ್ನೊಂದು ಮಗುವಿಗೆ ಮುಂದಿನ ವ್ಯವಸ್ಥೆಯನ್ನೂ ಅವರು ಕಲ್ಪಿಸಿದ್ದರು.
ಈಗ ಕೊಂಚ ಕೆಲಸದ ಒತ್ತಡದಲ್ಲಿದ್ದೇನೆ. ಸದ್ಯದಲ್ಲೇ ಮತ್ತೆ ಆ ಮಗುವನ್ನು ಭೇಟಿಯಾಗಲು ಹೊರಟಿರುವೆ.ಚಂದ್ರಪ್ರಭಾ ಗೌಡ
ಆಂಬುಲೆನ್ಸ್‌ನಲ್ಲಿ ಅಳವಡಿಸಿರುವ ಸಿ.ಸಿ. ಟಿ.ವಿ.ಕ್ಯಾಮೆರಾದಲ್ಲಿ ಸೆರೆಯಾಗಿದ್ದ ಈ ದೃಶ್ಯ ಬಹುಬೇಗ ಎಲ್ಲೆಡೆ ವೈರಲ್ ಆಗಿತ್ತು. ಆಂಬುಲೆನ್ಸ್ ಡ್ರೈವರ್ ಸಹ ಇದನ್ನು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈ ಮಾತೃಹೃದಯಿಯ ಕೆಲಸ ನಾಡಿನಾದ್ಯಂತ ಮೆಚ್ಚುಗೆ ಪಡೆಯಿತು.
ಅಪಘಾತವಾದಾಗ ನೋಡಿ ಮರುಗುವುದು, ಹೀಗಾಗಬಾರದಿತ್ತು ಎನ್ನುವುದು, ಏನೂ ಆಗದಿರಲಿ ಎಂದು ಪ್ರಾರ್ಥಿಸುವುದು ಸಹಜ. ಆದರೆ ರಕ್ತ ಒಸರುತ್ತಿರುವ ಯಾರದ್ದೋ ಮಗುವನ್ನು ತನ್ನೆದೆಗೆ ಆನಿಸಿಕೊಂಡು, ಅದರ ಚಿಕಿತ್ಸೆಗಾಗಿ ಅಲೆದಾಡಿದ್ದು ಜನರ ಮನಸ್ಸನ್ನು ತಟ್ಟಿತು. ಯಾವ ಧರ್ಮ, ಯಾರ ಮಗು, ಯಾವ ಊರು ಏನನ್ನೂ ಅರಿಯದೆ ಸಹಾಯಕ್ಕೆ ಮುಂದಾದ ಆ ಮಾನವೀಯ ಹೃದಯಕ್ಕೆ ಸಾಮಾಜಿಕ ಜಾಲತಾಣ ಶರಣೆಂದಿತು.
ಇಬ್ಬರು ಮಕ್ಕಳ ತಾಯಿಯಾದ ಚಂದ್ರಪ್ರಭಾ ಅವರು ಶಾಲಾ ಶಿಕ್ಷಕಿ. ರಾಜಕೀಯದಲ್ಲೂ ಸಕ್ರಿಯರಾಗಿದ್ದಾರೆ. ತಾವು ಕಾಪಾಡಿದ ಆ ಮಗುವಿನೊಂದಿಗೆ ಬಾಂಧವ್ಯ ಬೆಳೆಸಿಕೊಂಡಿರುವ ಅವರು ಈಗಲೂ ಸಂಪರ್ಕದಲ್ಲಿದ್ದಾರೆ.
‘ಹೂವಿನ ಬಾಣದಂತೆ’ ಎಂಬ ಸುಶ್ರಾವ್ಯವಾದ ಹಾಡನ್ನು ತನ್ನದೇ ವಿಭಿನ್ನ ಧಾಟಿಯಲ್ಲಿ ಹಾಡಿ, ಮೂಲ ಹಾಡಿನ ಧಾಟಿಯನ್ನೇ ಮರೆಸಿದ ಹುಡುಗಿ ನಿತ್ಯಶ್ರೀ ಈಗ ಕನ್ನಡಿಗರಿಗೆಲ್ಲ ಪರಿಚಿತ. ಸ್ನೇಹಿತರನ್ನು ರಂಜಿಸಲು ಹಾಡಿದ ಹಾಡು ಕರ್ನಾಟಕವನ್ನೇ ರಂಜಿಸಿದ್ದು ಈ ರೀಲ್ಸ್ ಯುಗದ ಅಚ್ಚರಿ. ತನ್ನ ಸುತ್ತ ಇದ್ದ ಸ್ನೇಹಿತರೆಲ್ಲ ತಮ್ಮ ಹಾಡಿಗೆ ನಗುತ್ತಿದ್ದರೂ ತಾನು ಮಾತ್ರ ಹಾಡುತ್ತಲೇ ಇದ್ದ ಆ ಹುಡುಗಿಯ ಮೊಗದಲ್ಲಿನ ಮುಗ್ಧತೆ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿತು. ಒಂದು ಹಾಡು ಆಕೆಗೆ ರಾತ್ರೋರಾತ್ರಿ ಹೆಸರು ತಂದುಕೊಟ್ಟಿತು. ಬೀದಿಗಳಲ್ಲಿ ಬ್ಯಾನರ್, ಸಮಾರಂಭಗಳ ಉದ್ಘಾಟನೆಗೆ ಆಹ್ವಾನ, ಮೀಡಿಯಾದಲ್ಲಿ ಸಂದರ್ಶನ, ಮೂರಂಕಿಯಲ್ಲಿದ್ದ ಇನ್‌ಸ್ಟಾ ಫಾಲೋವರ್ಸ್ ಸಂಖ್ಯೆ ಐದಂಕಿಗೆ ಏರಿಕೆ... ಹೀಗೆ ಅನಿರೀಕ್ಷಿತ ಸಂತಸ ಆ ಹೆಣ್ಣುಮಗಳನ್ನು ಹುಡುಕಿ ಬಂದರೆ, ಸೋಷಿಯಲ್ ಮೀಡಿಯಾದ ವೈರಲ್ ಗೀಳಿಗೆ ಇರುವ ಶಕ್ತಿ ನೋಡಿ ಅಚ್ಚರಿ ಪಡುವ ಸರದಿ ಜನರದ್ದಾಗಿತ್ತು.
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಮೊಸಳೆಕೊಪ್ಪ ಗ್ರಾಮದ ನಿತ್ಯಶ್ರೀ, ಪದವಿ ಶಿಕ್ಷಣ ಪಡೆಯಲು ಮೈಸೂರಿನಲ್ಲಿ ನೆಲಸಿದ್ದಾರೆ. ತಮಗೆ ನಟಿಯಾಗುವ ಆಸೆ ಇದೆ ಎಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದು, ತಮ್ಮ ವೈರಲ್ ವಿಡಿಯೊಗೆ ಸಂತಸ ವ್ಯಕ್ತಪಡಿಸಿದ್ದಾರೆ.
ಹಾಗಂತ ಈ ರೀಲ್ಸ್ ಲೋಕ ಎಲ್ಲವನ್ನೂ ವೈರಲ್ ಮಾಡಿಬಿಡಲಾರದು, ಅದಕ್ಕೂ ತನ್ನದೇ ಇಷ್ಟಾನಿಷ್ಟಗಳಿವೆ ಎಂಬುದೂ ಇಲ್ಲಿ ಸ್ಪಷ್ಟವಾಯಿತು. ನಿತ್ಯಶ್ರೀ ತಮ್ಮದೇ ಧಾಟಿಯಲ್ಲಿ ಇನ್ನೊಂದು ಹಾಡು ಹೇಳಿದಾಗ ಜನ ಅದನ್ನು ಮೆಚ್ಚಲಿಲ್ಲ, ಅದು ವೈರಲ್ ಆಗಲಿಲ್ಲ ಅನ್ನುವುದೂ ಗಮನಾರ್ಹ.
‘ಲೋಕದ ಡೊಂಕ ನೀವೇಕೆ ತಿದ್ದುವಿರಿ...’ ಎನ್ನುತ್ತಾ ಕಾರ್ಯಕ್ರಮದ ವೇದಿಕೆಯ ಮೇಲೆ, ಶರಣರ ಸನ್ನಿಧಿಯಲ್ಲಿ ತನ್ನ ತೊದಲು ನುಡಿಯಲ್ಲೇ ಬಸವಣ್ಣನವರ ವಚನವನ್ನು ಹೇಳುತ್ತಾ, ಅದಕ್ಕೆ ತಕ್ಕಂತೆ ಅಭಿನಯಿಸಿದ ನಾಲ್ಕು ವರ್ಷದ ಪೋರಿಯ ವಿಡಿಯೊವೊಂದು ಸದ್ದು ಮಾಡಿತು. ವಿಜಯಪುರದ ಸಿಂದಗಿ ತಾಲ್ಲೂಕಿನ ಈ ಮುದ್ದು ಗೊಂಬೆ, ಎಲ್‌ಕೆಜಿ ಓದುತ್ತಿರುವ ದಿತಿ ಶಿರಶ್ಯಾಡ.
ಈ ವಿಡಿಯೊ ವೈರಲ್ ಆದ ಮೇಲೆ ದಿತಿಯ ಬಹುಮುಖ ಪ್ರತಿಭೆಯೂ ಅನಾವರಣಗೊಂಡಿತು. ಈ ಮಗು 100ಕ್ಕೂ ಅಧಿಕ ವಚನಗಳನ್ನು ನಿರರ್ಗಳವಾಗಿ ಹೇಳುತ್ತದೆ. ಶ್ರೀರಾಮನ ವಂಶಸ್ಥರ ಹೆಸರು, 40 ಶ್ಲೋಕಗಳು, 60 ಸಂವತ್ಸರಗಳ ಹೆಸರು, ಶಬರಿಮಲೆ ದೇಗುಲದ 18 ಮೆಟ್ಟಿಲುಗಳ ಹೆಸರು ಮತ್ತು ವೈಶಿಷ್ಟ್ಯ, 200ಕ್ಕೂ ಅಧಿಕ ಗಾದೆಗಳು, 30ಕ್ಕೂ ಹೆಚ್ಚು ಒಡಪುಗಳು, ಅಶೋಕ ಚಕ್ರದೊಳಗಿನ 24 ಗೆರೆಗಳ ಅರ್ಥ, ಕರ್ನಾಟಕದ ಜಿಲ್ಲೆಗಳು, ದೇವಸ್ಥಾನಗಳ ವಿಶೇಷ, ಸಿದ್ಧೇಶ್ವರ ಶ್ರೀಗಳ ಹಿತನುಡಿ ಮಾತ್ರವಲ್ಲದೆ ಭಾರತದ ಸಂವಿಧಾನದ ಪೀಠಿಕೆಯನ್ನೂ ಸರಾಗವಾಗಿ ಹೇಳುತ್ತಾಳೆ. ಆಕೆಯ ಈ ಪ್ರತಿಭೆ ‘ಇಂಡಿಯಾ ವರ್ಲ್ಡ್ ರೆಕಾರ್ಡ್ಸ್’ನಲ್ಲೂ ದಾಖಲಾಗಿದೆ.
ದಿತಿ ಒಂದೂವರೆ ವರ್ಷದವಳಿದ್ದಾಗಲೇ ಒಳ್ಳೆಯ ಜ್ಞಾಪಕ ಶಕ್ತಿ ಹೊಂದಿದ್ದಳು. ಅದನ್ನು ಗಮನಿಸಿ ಅವಳಿಗೆ ಮಾರ್ಗದರ್ಶನ ನೀಡಿದೆವು. ಈಗ ಎಲ್ಲೆಡೆ ಜನ ಅವಳನ್ನು ಗುರುತಿಸುತ್ತಾರೆ.ಸರಸ್ವತಿ, ದಿತಿ ತಾಯಿ
ದಿತಿಯ ತಂದೆ ಹನುಮಂತ ಶಿಕ್ಷಕರು. ತಾಯಿ ಸರಸ್ವತಿಯೂ ಶಿಕ್ಷಕಿಯಾಗಿದ್ದರು. ಆದರೆ, ಮಗಳ ಪಾಲನೆಗಾಗಿ ಆಕೆ ತಮ್ಮ ವೃತ್ತಿ ಬದುಕಿಗೆ ವಿರಾಮ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.