ADVERTISEMENT

ಖಾಲಿ ರೈಲಿನತ್ತ ಕೈ ಬೀಸಿದರೆ ಮೋದಿ? ವೈರಲ್ ವಿಡಿಯೊ ಹಿಂದಿನ ನಿಜ ಸಂಗತಿ ಇಲ್ಲಿದೆ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2018, 10:00 IST
Last Updated 28 ಡಿಸೆಂಬರ್ 2018, 10:00 IST
   

ಬೆಂಗಳೂರು: ಡಿಸೆಂಬರ್ 25ರಂದು ಅಸ್ಸಾಂನ ಬೋಗಿಬೀಲ್ ಸೇತುವೆ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ ಖಾಲಿ ರೈಲಿನತ್ತ ಕೈ ಬೀಸುತ್ತಿದ್ದಾರೆ ಎಂಬ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.ಮೋದಿಯವರು ಅಲ್ಲಿ ನಿಂತಿರುವಖಾಲಿ ರೈಲಿನತ್ತ ಕೈ ಬೀಸುತ್ತಿದ್ದಾರೆ ಎಂದು ಹೇಳುವ ಆ ವಿಡಿಯೊಹಿಂದಿರುವ ನಿಜವಾದ ಸಂಗತಿ ಏನು ಎಂಬುದರ ಬಗ್ಗೆ ಬೂಮ್ ಲೈವ್ ಫ್ಯಾಕ್ಟ್ ಚೆಕ್ ಮಾಡಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್
ಮೋದಿಯವರು ಜನರತ್ತ ಕೈ ಬೀಸುತ್ತಿರುವ ಆ ವಿಡಿಯೊದಲ್ಲಿ ವಿಡಿಯೊಗ್ರಾಫರ್ ನೆರಳು ಕೂಡಾ ಕಾಣಿಸಿಕೊಂಡಿರುವುದರಿಂದ ಇದೊಂದು ಹೇಳಿ ಮಾಡಿಸಿದ ವಿಡಿಯೊ ಎಂದು ಜನ ನಗೆಯಾಡಿದ್ದರು. ಈ ಬಗ್ಗೆ ಹಲವಾರು ಟ್ರೋಲ್, ಮೀಮ್‍ಗಳೂ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದವು.

ಐದು ರಾಜ್ಯಗಳಲ್ಲಿ ಚುನಾವಣೆ ಸೋತ ನಂತರ ಅದ್ಭುತಗಳು ನಡೆಯುತ್ತಿದೆ ಎಂಬ ಶೀರ್ಷಿಕೆಯಡಿಯಲ್ಲಿ ಈ ವಿಡಿಯೊಶೇರ್ ಆಗಿತ್ತು.

ADVERTISEMENT

ನಟಿ ಹಾಗೂ ಕಾಂಗ್ರೆಸ್‍ನ ರಾಷ್ಟ್ರೀಯ ವಕ್ತಾರೆ ಖುಷ್ಬೂ ಸುಂದರ್ ಕೂಡಾ ಈ ವಿಡಿಯೊವನ್ನು ಟ್ವೀಟ್ ಮಾಡಿ, ಕಾಲ್ಪನಿಕ ಜನರ ಗುಂಪಿನತ್ತ ಮೋದಿ ಕೈ ಬೀಸುತ್ತಿದ್ದಾರೆ. ಇದೊಂದು ನಾಟಕ ಎಂದು ಗೇಲಿ ಮಾಡಿದ್ದರು.

ಮಹಾರಾಷ್ಟ್ರದ ಕಾಂಗ್ರೆಸ್ ವಕ್ತಾರ ಸಚಿನ್ ಸಾವಂತ್ ಈ ವಿಡಿಯೊವನ್ನು ಶೇರ್ ಮಾಡಿದ್ದು, ಬೋಗಿಬೀಲ್ ಸೇತುವೆಯ ಇನ್ನೊಂದು ಬದಿಯಲ್ಲಿ ಯಾರೂ ಇರಲಿಲ್ಲ ಎಂದು ಟ್ವೀಟಿಸಿದ್ದರು.

ನಿಜ ಸಂಗತಿ ಏನು?
ಬೋಗಿಬೀಲ್ ಸೇತುವೆ ಉದ್ಘಾಟನೆ ಕಾರ್ಯಕ್ರಮದ ಲೈವ್ ವಿಡಿಯೊ ನೋಡಿದರೆ ಅದರಲ್ಲಿ ಮೋದಿ ಜನರತ್ತ ಕೈ ಬೀಸುತ್ತಿರುವ ದೃಶ್ಯಗಳು ಇವೆ. ಕೆಳಗೆ ನೀಡಿರುವ ವಿಡಿಯೊದಲ್ಲಿ 15 ನಿಮಿಷದ ನಂತರ ನೋಡಿದರೆ ಅತ್ತ ಬದಿಯಲ್ಲಿರುವ ಜನರು ಕಾಣಿಸುತ್ತಾರೆ. 15:40 ನಿಮಿಷದಲ್ಲಿ ನೋಡಿದರೆ ರೈಲಿನಲ್ಲಿರುವ ಜನರೂ ಕಾಣಿಸುತ್ತಿದ್ದಾರೆ.


ಬೋಗಿಬೀಲ್ ಸೇತುವೆ ಉದ್ಘಾಟನೆಯ ಚಿತ್ರವನ್ನು ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ (ಪಿಐಬಿ) ಕೂಡಾ ಟ್ವೀಟ್ ಮಾಡಿದೆ. ಲೈವ್ ವಿಡಿಯೊದಲ್ಲಿರುವ ರೈಲು ನಂಬರ್ ಪಿಐಬಿ ಶೇರ್ ಮಾಡಿದ ಚಿತ್ರದಲ್ಲಿ ಸ್ಪಷ್ಟವಾಗಿ ಕಾಣುತ್ತಿದ್ದು, ರೈಲಿನೊಳಗೆ ಜನರು ಇರುವುದೂ ಕಾಣುತ್ತಿದೆ.

ಪ್ರಧಾನಿ ಕಚೇರಿಯ ಯೂಟ್ಯೂಬ್ ಚಾನೆಲ್‍ನಲ್ಲಿ ಪೋಸ್ಟ್ ಮಾಡಿರುವ ವಿಡಿಯೊದಲ್ಲಿಯೂ ಮೋದಿ ಜನರತ್ತ ಕೈ ಬೀಸುತ್ತಿರುವ ದೃಶ್ಯ ಇದೆ.

ಪ್ರಧಾನಿ ಜನರತ್ತ ಕೈ ಬೀಸುತ್ತಿರುವಾಗ ಬೇರೊಂದು ಕೋನದಿಂದ ವಿಡಿಯೊ ಚಿತ್ರೀಕರಣ ಮಾಡಿರುವುದರಿಂದ ಅತ್ತ ಕಡೆಯಿರುವ ಜನರು ಕಾಣಿಸುತ್ತಿಲ್ಲ ಎಂಬುದು ಇಲ್ಲಿ ಸ್ಪಷ್ಟವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.