ADVERTISEMENT

ನೆರೆ ಸಂತ್ರಸ್ತರ ಬಗ್ಗೆ ಅವಹೇಳನ, 'ಪೋ ಮೋನೆ ಸುರೇಶ' ಎಂದು ಗುಡುಗಿದರು ಕೇರಳದ ಜನ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2018, 13:31 IST
Last Updated 20 ಆಗಸ್ಟ್ 2018, 13:31 IST
   

ಕೊಚ್ಚಿ: ಕೇರಳದಪ್ರವಾಹದಲ್ಲಿ ಸಂಕಷ್ಟಕ್ಕೀಡಾಗಿದ್ದು ಶ್ರೀಮಂತ ಮತ್ತು ಮಧ್ಯಮ ವರ್ಗದ ಕುಟುಂಬಗಳು. ಪ್ರವಾಹ ಪೀಡಿತರಿಗೆ ನೆರವಾಗಲು ಆರ್‌ಎಸ್‌ಎಸ್‌ನವರಸೇವಾ ಭಾರತಿಗೆ ದೇಣಿಗೆ ನೀಡಿ ಎಂದು ಸುರೇಶ್ ಕೊಚಾಟಿಲ್ ಎಂಬವರು ಮನವಿ ಮಾಡಿರುವ ಆಡಿಯೊ ಕ್ಲಿಪ್ ಭಾನುವಾರವೈರಲ್ ಆಗಿತ್ತು. ಸುರೇಶ್ ಬಿಜೆಪಿ ಕಾರ್ಯಕರ್ತರಾಗಿದ್ದಾರೆ.

ಸುರೇಶ್ ಅವರ ಈ ಆಡಿಯೊ ಕ್ಲಿಪ್‍ಗೆ ಕೇರಳದ ಜನರು ಆಕ್ರೋಶ ವ್ಯಕ್ತ ಪಡಿಸಿದ್ದು, ಸಾಮಾಜಿಕ ತಾಣಗಳಲ್ಲಿ ಟೀಕಾ ಪ್ರಹಾರ ನಡೆಯುತ್ತಿದೆ.

ಸುರೇಶ್ ಅವರ ಆಡಿಯೊ ಕ್ಲಿಪ್ ಬಗ್ಗೆ ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಪ್ರತೀಕ್ ಸಿನ್ಹಾ ಫೇಸ್‍ಬುಕ್ ನಲ್ಲಿ ಈ ರೀತಿ ಬರೆದಿದ್ದಾರೆ.

ADVERTISEMENT

ನಾನು ಈಗಷ್ಟೇ ಸುರೇಶ್ ಅವರೊಂದಿಗೆ ಫೋನ್‍ನಲ್ಲಿ ಮಾತನಾಡಿದೆ.ಆಗ ನನ್ನ ಅರಿವಿಗೆ ಬಂದ ವಿಷಯ ಏನೆಂದರೆ ಪ್ರವಾಹ ಪರಿಸ್ಥಿತಿ ಬಗ್ಗೆ ಅವರಿಗೆ ಸಮೀಪ ದೃಷ್ಟಿದೋಷವಿದೆ. ಪ್ರವಾಹ ಪರಿಸ್ಥಿತಿಯ ಅಪ್‍ಡೇಟ್‍ಗಳಿಗಾಗಿ ಧನ್ಯಾ ರಾಜೇಂದ್ರನ್ ಅವರನ್ನು ಫಾಲೋ ಮಾಡಿ ಎಂದು ಸುರೇಶ್ ಅವರ ಪ್ರೊಫೈಲ್ ಲಿಂಕ್ ಉಲ್ಲೇಖಿಸಿದ್ದಾರೆ.

ಸುರೇಶ್ ಅವರ ಆಡಿಯೊ ಕ್ಲಿಪ್ ಬಗ್ಗೆ ದಿ ನ್ಯೂಸ್ ಮಿನಿಟ್ ಸುದ್ದಿತಾಣದ ಪ್ರಧಾನ ಸಂಪಾದಕಿ ಧನ್ಯಾ ರಾಜೇಂದ್ರನ್ ಬರೆದ ಫೇಸ್‍ಬುಕ್ ಪೋಸ್ಟ್ ಹೀಗಿದೆ.

ಪ್ರವಾಹದಲ್ಲಿ ಶ್ರೀಮಂತ ಮತ್ತು ಮಧ್ಯಮ ವರ್ಗದ ಜನರಿಗಷ್ಟೇ ತೊಂದರೆಯುಂಟಾಗಿದೆ ಎಂದು ಸುರೇಶ್ ಎಂಬ ವ್ಯಕ್ತಿ ಹೇಳಿರುವ ವೈರಲ್ ಆಡಿಯೊ ಕ್ಲಿಪ್ ಕೇಳಿದೆ. ಸುರೇಶ್ ಅವರು ಮನೆಯಿಂದ ಹೊರ ಬಂದು ಸಾವಿರಾರು ಮಂದಿ ನಾಳೆ ಬದುಕುವುದು ಹೇಗೆ ಎಂದು ಗೊತ್ತುಗುರಿಯಿಲ್ಲದೆ ಆಲೋಚಿಸುತ್ತಿರುವ ಪ್ರವಾಹ ಪರಿಹಾರ ಶಿಬಿರಗಳಿಗೆ ಭೇಟಿ ನೀಡಿದರೆ ಒಳ್ಳೆಯದು.
ನಾನು ಈ ಪೋಸ್ಟನ್ನು ಒಂಚೂರು ದೀರ್ಘ ಮಾಡುತ್ತಿದ್ದೇನೆ. ಮಿಸ್ಟರ್ ಸುರೇಶ್ ಅವರು ಕೊಚ್ಚಿಯಲ್ಲಿರುವ ಮನೆಯಲ್ಲಿ ಕುಳಿತಿದ್ದಾರೆ.ಮಳೆಯಿಂದಾಗಿ ಅವರ ಮನೆಯ ಕೆಲವು ಬಾಗಿಲುಗಳು ಹಾನಿಯಾಗಿವೆ ಎಂದು ಊಹಿಸೋಣ. ಅವರು ಕೊಚ್ಚಿಯಲ್ಲಿರುವ ಪರಿಹಾರ ಶಿಬಿರಕ್ಕೂ ಹೋಗಿದ್ದಾರೆ.ಅವರು ಎರ್ನಾಕುಳಂ ಜಿಲ್ಲೆಯಲ್ಲಿದ್ದಾರೆ ಎಂದೂ ಹೇಳಲಿಲ್ಲ.

ಮಿಸ್ಟರ್ ಸುರೇಶ್, ನೀವು ಮನೆಯಿಂದ ಹೊರಗೆ ಇಳಿದು ಮೆಟ್ರೊ ಹತ್ತಿ ಆಲುವಾ ಯುಸಿ ಕಾಲೇಜಿಗೆ ಭೇಟಿ ನೀಡಿದ್ದರೆ ಒಳ್ಳೆಯದಿತ್ತು . ಸಾವಿರಾರು ಮಂದಿ ಅಲ್ಲಿ ಪರಿಹಾರ ಶಿಬಿರದಲ್ಲಿದ್ದಾರೆ. ಬಡವರು ತಮ್ಮ ಮನೆಯನ್ನು ಕಳೆದುಕೊಂಡು ಇನ್ನೆಲ್ಲಿ ಹೋಗಲಿ ಎಂದು ಚಿಂತಿತರಾಗಿದ್ದಾರೆ.ಸಾವಿರಾರು ಮಂದಿಯ ನೋವನ್ನು ನೀವು ಒಮ್ಮೆಲೆ ಅರ್ಥೈಸಿಕೊಳ್ಳಲು ಸಾಧ್ಯವಾಗದೇ ಇದ್ದರೆ ನೀವು ನೇರ ಅಥಣಿಗೆ ಹೋಗಿ. ಅಥಣಿ ಜಂಕ್ಷನ್ ನಲ್ಲಿರುವ ಶಿಬಿರದಲ್ಲಿ ಬಡವರಾದ ದಿನಕೂಲಿ ನೌಕರರು ಇದ್ದಾರೆ.ಕೊಚ್ಚಿ ವಿಮಾನ ನಿಲ್ದಾಣದ ಸಮೀಪದ ಕಿನುಸ್ಸೇರಿ ನಿವಾಸಿಗಳಾಗಿದ್ದಾರೆ ಅವರು.ಅವರಲ್ಲಿಗೆ ಯಾವುದೇ ದೋಣಿ ಹೋಗಿಲ್ಲ.ಅವರು ದೊಡ್ಡ ಪಾತ್ರೆಗಳನ್ನು ಬಳಿಸಿ ಅದರಲ್ಲಿ ಮಕ್ಕಳು, ಮಹಿಳೆಯರನ್ನು ಕೂರಿಸಿ ಸುರಕ್ಷಿತ ಪ್ರದೇಶಕ್ಕೆ ಕರೆದೊಯ್ದಿದ್ದರು.ಅವರ ಬಳಿ ಎಕ್ಸ್ ಟ್ರಾ ಒಂದು ಜೋಡಿ ಬಟ್ಟೆಯಿಲ್ಲ.ಕೇರಳದವರಿಗೆ ಬಡಗಿ, ಅಕ್ಕಸಾಲಿಗ ಮಾತ್ರ ಸಾಕು ಎಂದು ನೀವು ಹೇಳುತ್ತಿದ್ದೀರಿ, ಇಂಥವರು ಏನು ಮಾಡಲಿ?

ಓಹ್, ಇನ್ನೂ ನಿಮಗೆ ಸಾಕಾಗದೇ ಇದ್ದರೆ ನೀವು ಆಲಪ್ಪುಳಕ್ಕೆ ಹೋಗಿ. ಪ್ರತಿ ಶಾಲೆ, ಪ್ರತಿ ಕಾಲೇಜು ಅಲ್ಲಿ ಪರಿಹಾರ ಶಿಬಿರಗಳಾಗಿವೆ, ಇಲ್ಲಿನ ಶಿಬಿರಗಳಲ್ಲಿ ಸಾವಿರಾರು ಮಂದಿ ಇದ್ದಾರೆ, ಅವರು ವಾಪಲ್ ಹೋಗುವಾಗ ಅವರ ಮನೆಗಳು ಉಳಿದಿರುತ್ತವೆಯೇ ಎಂಬುದು ಅವರಿಗೆ ಗೊತ್ತಿಲ್ಲ, ಅವರಲ್ಲಿ ಬಟ್ಟೆಯಿಲ್ಲ, ಹಾಸಿಗೆ ಇಲ್ಲ, ಅವರಲ್ಲಿ ಏನೇನೂ ಇಲ್ಲ. ಅವರ ಮಕ್ಕಳಲ್ಲಿ ಪುಸ್ತಕಗಳಿಲ್ಲ, ಬ್ಯಾಗ್ ಇಲ್ಲ.

ನೀವೀಗ ಕೊಚ್ಚಿಯಲ್ಲಿರುವ ನಿಮ್ಮ ಮನೆಯಲ್ಲಿ ಕೂತು ಅನಗತ್ಯ ಆಡಿಯೊ ಹರಿಯಬಿಡುತ್ತಿದ್ದೀರಿ.ಹಾಗಾಗಿ ನೀವು ಅದೆಲ್ಲಿಂದ ಬಂದಿದ್ದೀರೋ, ಅಲ್ಲಿಗೆ ಹೋಗಿ ನಿಮ್ಮನ್ನು ಬಿಟ್ಟು ಬರುವಂತೆ ದಕ್ಷಿಣ ರೈಲ್ವೆ ಒಂದು ರೈಲು ಕಳುಹಿಸಿಕೊಡಲಿ (ತಿದ್ದುಪಡಿ: ಇವರು ಬ್ಯಾಂಕಾಂಕ್‍ ನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಕೇಳಲ್ಪಟ್ಟೆ. ಹಾಗಾಗಿ ಕೊಚ್ಚಿ ವಿಮಾನ ನಿಲ್ದಾಣ ಇವರಿಗಾಗಿ ವಿಶೇಷ ವಿಮಾನ ಏರ್ಪಡಿಸಲಿ)

ಜನರುಈ ಆಡಿಯೊ ಕ್ಲಿಪ್ ನ್ನು ಫಾರ್ವಡ್ ಮಾಡುವುದನ್ನು ನಿಲ್ಲಿಸಿ.ಸ್ವಲ್ಪ ಹೊತ್ತಿನ ನಂತರ ನೆಟ್ವರ್ಕ್ ಸಿಕ್ಕಾಗಿ ಹಲವಾರು ಗ್ರೂಪ್‍ಗಳಲ್ಲಿ ಇದೇ ಸಂದೇಶ ಶೇರ್ ಆಗಿರುವುದನ್ನು ಕಂಡೆ ಎಂದು ಬರೆದಿದ್ದಾರೆ.

ಸುರೇಶ್ ಏನಂತಾರೆ?
ಆಡಿಯೊ ಮೂಲಕ ನಿನ್ನೆ ನಾನು ಮಾಡಿಕೊಂಡ ಮನವಿಗೆ ರೆಕ್ಕೆ ಪುಕ್ಕ ಬಂದಿದೆ. ನಾನು ನಗ್ನ ಸತ್ಯ ಹೇಳಿದ್ದಕ್ಕೆ ಕೆಲವು ಎನ್‌‍ಜಿಒಗಳು ನನ್ನನ್ನು ಬಂಧಿಸಿ ಎಂದು ಒತ್ತಾಯಿಸಿವೆ.ಸತ್ಯಕ್ಕಾಗಿ ನಾನು ಎದ್ದು ನಿಲ್ಲಲು ನಾನು ತಯಾರಿದ್ದೇನೆ.

ನನ್ನ ಸ್ಪಷ್ಟನೆ ಕೇಳಿ:
1. ಮನೆಯನ್ನು ಶುಚಿಗೊಳಿಸುವ ಕಾರ್ಯ ಮೊದಲಾದವುಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಅಂದರೆ ಹಾನಿಯಾದ ಮನೆಗಳನ್ನು ಸರಿ ಮಾಡಲು ಇಲೆಕ್ಟ್ರಿಶನ್, ಪ್ಲಂಬರ್, ಬಡಗಿ ಬೇಕು.ಇವತ್ತು ಬೆಳಗ್ಗೆ ಕೆಲವು ಉದ್ಯಮಿಗಳಿಂದ ನನಗೆ ಕರೆ ಬಂದಿದ್ದು. ಅವರು ಈ ಕೆಲಸಗಾರರನ್ನು ಕಳುಹಿಸುವುದಾಗಿ ಹೇಳಿದ್ದಾರೆ.ಕೇರಳದ ವಿವಿಧ ಪ್ರದೇಶಗಳಲ್ಲಿ ಅಗತ್ಯವಿರುವ ಜನರನ್ನು ಕಳಿಸಬೇಕಿದೆ.

2.ಎನ್‍ಜಿಒ ಮತ್ತು ಇತರ ಸಂಸ್ಥೆಗಳು ಸೇರಿದಂತೆ ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ಹಣ ನೀಡಬೇಕೇ ಹೊರತು ಪರಿಚಯವಿಲ್ಲದ ಸಂಸ್ಥೆಗಳಿಗಲ್ಲ. ಆ ಹಣ ಎಲ್ಲಿ ಹೋಗುತ್ತದೆ ಎಂದು ಯಾರಿಗೂ ಗೊತ್ತಾಗುವುದಿಲ್ಲ. ಉತ್ತಮ ಕೆಲಸ ಮಾಡುವ ಸಂಸ್ಥೆಗೇ ಈ ಹಣ ಸೇರಬೇಕು.ಮುಖ್ಯಮಂತ್ರಿಯವರ ಪರಿಹಾರ ನಿಧಿ ಸೇರಿದಂತೆ ಯಾವುದೇ ಸಂಸ್ಥೆಗೆ ದೇಣಿಗೆ ನೀಡಲು ನೀವು ಸರ್ವ ಸ್ವತಂತ್ರರು.


3. ನಾನು ಸೇವಾ ಭಾರತಿಯನ್ನು ಉಲ್ಲೇಖಿಸಿದ್ದು ಹೆಚ್ಚಿನವರಿಗೆ ಸಿಟ್ಟು ಬಂದಿದೆ.ನಾನು ಬಿಜೆಪಿ ಮತ್ತು ಸಂಘದ ಸದಸ್ಯನಾಗಿರುವುದರಿಂದ ನಾನು ಸೇವಾ ಭಾರತಿಯತ್ತ ಒಲವು ತೋರಿದ್ದು ಸಹಜ.ಕೇರಳದಲ್ಲಿ ಅವರು ಕೆಲಸ ಮಾಡುತ್ತಿರುವುದನ್ನು ನಾನು ನೋಡಿದ್ದೇನೆ. ಹಾಗಾಗಿ ನಾನು ಅವರನ್ನು ಶಿಫಾರಸು ಮಾಡಿದೆ.

ಪೋ ಮೋನೆ ಸುರೇಶ
ಸುರೇಶ್ ಅವರ ಆಡಿಯೊ ಕ್ಲಿಪ್‍ಗೆ ಆಕ್ರೋಶ ವ್ಯಕ್ತ ಪಡಿಸಿರುವ ನೆಟಿಜನ್‍ಗಳು ಫೇಸ್‍ಬುಕ್ ನಲ್ಲಿ ಪೋ ಮೋನೆ ಸುರೇಶ ಎಂದು ಗುಡುಗಿದ್ದಾರೆ. ಎಲ್ಲಿಯೋ ಕುಳಿತು ಈ ರಾಜ್ಯದ ಬಗ್ಗೆ ಕಾಮೆಂಟ್ ಮಾಡುವ ಅಗತ್ಯವೇನಿದೆ? ಪ್ರವಾಹದ ನೀರು ಹರಿದು ಬರುವಾಗ ಶ್ರೀಮಂತನ ಮನೆ ಯಾವುದು? ಬಡವರ ಮನೆಯಾವುದು ಎಂದು ಹುಡುಕಿಕೊಂಡು ಬರುವುದಿಲ್ಲ. ಮನೆಯಿಂದ ಹೊರಗೆ ಬಂದರೆ ಈ ರಾಜ್ಯದ ಪರಿಸ್ಥಿತಿ ತಿಳಿಯುತ್ತದೆ. ಅದು ಬಿಟ್ಟು ಆಡಿಯೊ ಕ್ಲಿಪ್ ಮೂಲಕ ಪ್ರವಾಹದ ಬಗ್ಗೆ ಕಾಮೆಂಟ್ ಮಾಡಲು ನಿಮ್ಮ ಯೋಗ್ಯತೆ ಏನು ಎಂದು ವ್ಯಕ್ತಿಯೊಬ್ಬರು ಪ್ರತಿಕ್ರಿಯಿಸಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.