ADVERTISEMENT

ಟ್ವಿಟರ್‌ನಲ್ಲಿ ಟ್ರೆಂಡ್‌ ಆದ ‘ಉತ್ತರ ಕೊಡಿ ಬಿಜೆಪಿ’: ಪ್ರಶ್ನೆಗಳ ಸುರಿಮಳೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2020, 14:55 IST
Last Updated 23 ಜುಲೈ 2020, 14:55 IST
   

ಬೆಂಗಳೂರು: ಕೋವಿಡ್‌–19 ಉಪಕರಣಗಳ ಖರೀದಿಯಲ್ಲಿ ಅಕ್ರಮವಾಗಿದೆ ಎಂದು ಆರೋಪಿಸಿರುವ ಕಾಂಗ್ರೆಸ್‌ ಪಕ್ಷವು ಟ್ವಿಟರ್‌ನಲ್ಲಿ ಬಿಜೆಪಿಗೆ ಹಲವು ಪ್ರಶ್ನೆಗಳನ್ನು ಕೇಳಿದೆ. ಹೀಗಾಗಿ #ಉತ್ತರಕೊಡಿಬಿಜೆಪಿ ಹ್ಯಾಶ್‌ಟ್ಯಾಗ್‌ ಗುರುವಾರ ಟ್ರೆಂಡ್‌ ಆಗಿದೆ.

ಗುರುವಾರ ಸಂಜೆ 8 ಗಂಟೆ ಹೊತ್ತಿಗೆ #ಉತ್ತರಕೊಡಿಬಿಜೆಪಿ ಟಾಪ್‌ ಟ್ರೆಂಡಿಂಗ್‌ನಲ್ಲಿ ಕಾಣಿಸಿಕೊಂಡಿತು. ಸುಮಾರು 8 ಸಾವಿರಕ್ಕೂ ಅಧಿಕ ಮಂದಿ ಈ ಹ್ಯಾಶ್‌ಟ್ಯಾಗ್‌ ಅಡಿಯಲ್ಲಿ ಟ್ವೀಟ್‌ ಮಾಡಿದ್ದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌, ಕಾಂಗ್ರೆಸ್‌ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್‌, ಶಾಸಕ ಅಜಯ್‌ ಧರ್ಮಸಿಂಗ್‌. ಎನ್‌ಎಸ್‌ಯುಐ ಅಧ್ಯಕ್ಷ ಮಂಜುನಾಥ್‌ ಸೇರಿದಂತೆ ಹಲವರು ಈ ಹ್ಯಾಶ್‌ ಟ್ಯಾಗ್‌ ಬಳಸಿ ಬಿಜೆಪಿಗೆ ಪ್ರಶ್ನೆ ಕೇಳಿದ್ದಾರೆ.

ADVERTISEMENT

ಮಹಾಭಾರತ ಯುದ್ಧ ಪೂರ್ಣಗೊಳ್ಳಲು 18 ದಿನಗಳನ್ನು ಬೇಕಾಯಿತು. ಅದರಂತೆ ಕರೋನಾ ವಿರುದ್ಧದ ಯುದ್ಧವನ್ನು ಗೆಲ್ಲಲು 21 ದಿನಗಳು ಬೇಕು ಎಂದು ಬಿಜೆಪಿ ಹೇಳಿತ್ತು. ಈಗ 121 ದಿನಗಳು ಕಳೆದಿವೆ. ಇದು ಕೇವಲ ಭ್ರಷ್ಟಾಚಾರ ನಡೆಸುತ್ತಿರುವ, ದೂರದೃಷ್ಟಿಯಿಲ್ಲದ 'ಕಲಿಯುಗದ ಕೌರವರ' ಸರ್ಕಾರವಾಗಿದೆ. ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರೊಂದಿಗೆ ಕಾಂಗ್ರೆಸ್‌ ಇಂದು ಬಿಜೆಪಿಯ ₹ 2,000 ಕೋಟಿಗೂ ಹೆಚ್ಚಿನ ಮೊತ್ತದ ಹಗರಣಗಳನ್ನು ಬಹಿರಂಗಪಡಿಸಿದೆ ಎಂದು ಡಿ.ಕೆ ಶಿವಕುಮಾರ್‌ ಟ್ವೀಟ್‌ ಮಾಡಿದ್ದಾರೆ.

ಬಿಜೆಪಿ ಯಾವುದೇ ಫಲಿತಾಂಶಗಳಿಲ್ಲದ, ಸುಳ್ಳು ಭರವಸೆಗಳಿಂದ ಕೂಡಿದೆ. ವೈಯಕ್ತಿಕ ಲಾಭಕ್ಕೆ ಮಾತ್ರ ಆ ಪಕ್ಷ ಸರಿಹೊಂದುತ್ತದೆ ಎಂದು ಶಾಸಕ ಅಜಯ್‌ ಧರ್ಮಸಿಂಗ್‌ ಟ್ವಿಟರ್‌ನಲ್ಲಿ ಹೇಳಿದ್ದಾರೆ.

ಡಿ.ಕೆ ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ಬಿಜೆಪಿಯ ₹2 ಸಾವಿರ ಕೋಟಿಗೂ ಮಿಗಿಲಾದ ಭ್ರಷ್ಟಾಚಾರವನ್ನು ಬಹಿರಂಗ ಮಾಡಿದ್ದಾರೆ. ಕೊರೊನಾ ವೈರಸ್‌ ಕಾಲದಲ್ಲೂ ಬಿಜೆಪಿ ಲೂಟಿ ಮಾಡಿದೆ. ಯಡಿಯೂರಪ್ಪ ಅವರ 2.0 ಭ್ರಷ್ಟಾಚಾರ ಚಾಲ್ತಿಯಲ್ಲಿದೆ ಎಂದು ಕಾಂಗ್ರೆಸ್‌ ಮುಖಂಡ ಶ್ರೀವತ್ಸ ಟ್ವೀಟ್‌ ಮೂಲಕ ಹೇಳಿದ್ದಾರೆ.

ಮತ್ತಷ್ಟು ಟ್ವೀಟ್‌ಗಳನ್ನು ನೋಡಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.