ADVERTISEMENT

WhatsApp Update: ಫೇಸ್‌ಬುಕ್ ಜತೆ ಮಾಹಿತಿ ಹಂಚುವುದಿಲ್ಲ ಎಂದ ವಾಟ್ಸ್ ಆ್ಯಪ್

ಪಿಟಿಐ
Published 11 ಜನವರಿ 2021, 6:35 IST
Last Updated 11 ಜನವರಿ 2021, 6:35 IST
ವಾಟ್ಸ್ ಆ್ಯಪ್ ಮುಖ್ಯಸ್ಥ ಸ್ಪಷ್ಟನೆ
ವಾಟ್ಸ್ ಆ್ಯಪ್ ಮುಖ್ಯಸ್ಥ ಸ್ಪಷ್ಟನೆ   

ನವದೆಹಲಿ: ಫೇಸ್‌ಬುಕ್ ಒಡೆತನದ ವಾಟ್ಸ್ ಆ್ಯಪ್ ಹೊಸ ಖಾಸಗಿತನ ಪಾಲಿಸಿಯ ನೂತನ ಅಪ್‌ಡೇಟ್ ಅನ್ನು ಬಿಡುಗಡೆ ಮಾಡುತ್ತಿದ್ದಂತೆ ವಿವಾದಕ್ಕೆ ಕಾರಣವಾಗಿದೆ. ವಾಟ್ಸ್ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಬಳಸಬೇಕಾದರೆ ಅದರಲ್ಲಿನ ಡೇಟಾ ಶೇರಿಂಗ್ ನೀತಿಯನ್ನು ಬಳಕೆದಾರರು ಒಪ್ಪಲೇಬೇಕು ಎಂದು ಕಂಪನಿ ಹೇಳಿತ್ತು. ಆದರೆ ಫೇಸ್‌ಬುಕ್ ಜತೆ ಮಾಹಿತಿ ಹಂಚಿಕೊಳ್ಳುವ ವಾಟ್ಸ್ ಆ್ಯಪ್ ಕ್ರಮಕ್ಕೆ ಜನರು ವಿರೋಧ ವ್ಯಕ್ತಪಡಿಸುತ್ತಿದ್ದಂತೆ, ಕಂಪನಿ ಹೊಸ ನೀತಿಯ ಬಗ್ಗೆ ಸ್ಪಷ್ಟನೆ ನೀಡಿದೆ.

ಚಾಟ್ ಓದಲಾಗದು..

ಹೊಸ ಅಪ್‌ಡೇಟ್‌ನಿಂದಾಗಿ ಖಾಸಗಿ ಮಾಹಿತಿಯ ಶೇರಿಂಗ್ ಕುರಿತಾಗಿ ಯಾವುದೇ ಬದಲಾವಣೆ ಮಾಡಿಲ್ಲ. ಖಾಸಗಿ ಚಾಟ್‌ಗಳ ಎಂಡ್ ಟು ಎಂಡ್ ಎನ್‌ಕ್ರಿಪ್ಷನ್ ಮುಂದುವರಿಯುತ್ತದೆ ಮತ್ತು ಅದನ್ನು ಫೇಸ್‌ಬುಕ್ ಓದಲಾಗದು.

ADVERTISEMENT

ಮಾಹಿತಿ ಹಂಚಿಕೆಯಿಂದ ತೊಂದರೆ ಇಲ್ಲ!

ಫೇಸ್‌ಬುಕ್ ಜತೆ ವಾಟ್ಸ್ ಆ್ಯಪ್ ಬ್ಯುಸಿನೆಸ್ ಸಂವಹನವನ್ನು ಮಾತ್ರ ಹಂಚಿಕೊಳ್ಳುವುದಾಗಿದ್ದು, ಅದರಿಂದ ಬಳಕೆದಾರರ ಖಾಸಗಿತನ ಮತ್ತು ವೈಯಕ್ತಿಕ ಮಾಹಿತಿಗೆ ಯಾವುದೇ ಧಕ್ಕೆಯಾಗುವುದಿಲ್ಲ ಎಂದು ಹೇಳಿದೆ.

ವಾಟ್ಸ್ ಆ್ಯಪ್ ಮುಖ್ಯಸ್ಥ ಸ್ಪಷ್ಟನೆ

ಪ್ರಸ್ತುತ ಫೇಸ್‌ಬುಕ್ ಕಂಪನಿ ಒಡೆತನ ಹೊಂದಿರುವ ವಾಟ್ಸ್ ಆ್ಯಪ್, ಹೊಸ ಅಪ್‌ಡೇಟ್ ಪಾಲಿಸಿ ವಿವಾದಕ್ಕೆ ಗುರಿಯಾಗುತ್ತಿದ್ದಂತೆ ಅದರ ಮುಖ್ಯಸ್ಥ ವಿಲ್ ಕ್ಯಾತರ್ಟ್ ಟ್ವಿಟರ್ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಹೊಸ ಅಪ್‌ಡೇಟ್, ಬ್ಯುಸಿನೆಸ್ ಸಂವಹನಕ್ಕೆ ಮಾತ್ರ ಅನ್ವಯವಾಗುತ್ತದೆ. ಇದು ವಾಟ್ಸ್ ಆ್ಯಪ್ ಬಳಕೆದಾರರು ಅವರ ಗೆಳೆಯರು ಮತ್ತು ಕುಟುಂಬದವರ ಜತೆ ನಡೆಸುವ ಖಾಸಗಿ ಸಂವಹನಕ್ಕೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಖಾಸಗಿತನ ಕುರಿತು ನಾವು ಅತ್ಯುತ್ತಮ ನೀತಿಯನ್ನೇ ಹೊಂದಿದ್ದೇವೆ, ಜನರ ಖಾಸಗಿ ಚಾಟ್ ಯಾರಿಂದಲೂ ನೋಡಲು ಸಾಧ್ಯವಿಲ್ಲ. ಖಾಸಗಿತನ ರಕ್ಷಣೆ ಬಗ್ಗೆ ನಾವು ಇತರರ ಜತೆ ಸ್ಪರ್ಧೆ ಹೊಂದಿದ್ದೇವೆ, ಇದರಿಂದ ಜಗತ್ತಿಗೂ ಒಳ್ಳೆಯದು ಎಂದು ವಿಲ್ ಹೇಳಿದ್ದಾರೆ.

ಈ ಮಧ್ಯೆ ಟೆಲಿಗ್ರಾಂ ಆ್ಯಪ್ ಮತ್ತು ಸಿಗ್ನಲ್ ಆ್ಯಪ್ ಡೌನ್‌ಲೋಡ್ ಏರಿಕೆಯಾಗಿದ್ದು, ಬಳಕೆದಾರರ ಸಂಖ್ಯೆ ಕೂಡ ಹೆಚ್ಚಳವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.