ADVERTISEMENT

ಖಾಸಗೀತನದ ನೀತಿ: ಗಡುವು ಕೈಬಿಟ್ಟ ವಾಟ್ಸ್ಆ್ಯಪ್‌

ಪಿಟಿಐ
Published 7 ಮೇ 2021, 14:42 IST
Last Updated 7 ಮೇ 2021, 14:42 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಖಾಸಗೀತನ ಕುರಿತ ಪರಿಷ್ಕೃತ ನೀತಿಗೆ ಬಳಕೆದಾರರು ಸಮ್ಮತಿ ಸೂಚಿಸಲು ನಿಗದಿಪಡಿಸಿದ್ದ ಮೇ 15ರ ಗಡುವನ್ನು ವಾಟ್ಸ್‌ಆ್ಯಪ್‌ ಕೈಬಿಟ್ಟಿದೆ. ಸಮ್ಮತಿ ಸೂಚಿಸದಿದ್ದರೂ ಬಳಕೆದಾರರ ಖಾತೆ ರದ್ದು ಆಗುವುದಿಲ್ಲ ಎಂದು ತಿಳಿಸಿದೆ.

ಖಾಸಗೀತನ ಕುರಿತ ನೂತನ ನೀತಿಗೆ ಬಳಕೆದಾರರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ವಾಟ್ಸ್ಆ್ಯಪ್‌ ತನ್ನ ಮಾತೃ ಸಂಸ್ಥೆ ಫೇಸ್‌ಬುಕ್‌ ಜೊತೆಗೆ ಬಳಕೆದಾರರ ಮಾಹಿತಿಗಳನ್ನು ಹಂಚಿಕೆ ಮಾಡಿಕೊಳ್ಳಬಹುದು ಎಂಬ ಆತಂಕವು ವ್ಯಕ್ತವಾಗಿತ್ತು.

ಸುದ್ದಿಸಂಸ್ಥೆಯ ಜೊತೆಗೆ ಮಾತನಾಡಿದ ವಾಟ್ಸ್‌ಆ್ಯಪ್‌ ಜಾಲತಾಣದ ವಕ್ತಾರರು, ‘ಪರಿಷ್ಕೃತ ನೀತಿಗೆ ಒಪ್ಪಿಗೆ ಸೂಚಿಸದೇ ಇದ್ದರೂ ಯಾವುದೇ ಬಳಕೆದಾರರ ಖಾತೆಯೂ ಮೇ 15ರಂದು ರದ್ದಾಗುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ADVERTISEMENT

ಆದರೆ, ಪರಿಷ್ಕೃತ ನೀತಿ ಕುರಿತಂತೆ ಮುಂದಿನ ಇನ್ನು ಕೆಲವು ವಾರಗಳು ಬಳಕೆದಾರರಿಗೆ ಆಗಾಗ್ಗೆ ನೆನಪಿನ ಸಂದೇಶಗಳು ರವಾನೆ ಆಗಲಿವೆ ಎಂದೂ ಹೇಳಿದರು.

ಈಗ ಗಡುವು ಕೈಬಿಟ್ಟಿರುವ ತೀರ್ಮಾನಕ್ಕೆ ನಿಖರ ಕಾರಣ ಹಾಗೂ ಪರಿಷ್ಕೃತ ನೀತಿಯನ್ನು ಒಪ್ಪದೇ ಇರುವ ಗ್ರಾಹಕರ ಸಂಖ್ಯೆ ಎಷ್ಟು ಎಂಬುದನ್ನು ಸಂಸ್ಥೆ ಸ್ಪಷ್ಟಪಡಿಸಿಲ್ಲ. ಪರಿಷ್ಕೃತ ನೀತಿ ಕುರಿತು ಸಂಸ್ಥೆ ಕಳೆದ ಜನವರಿಯಲ್ಲಿ ವಿವರ ಪ್ರಕಟಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.