ADVERTISEMENT

ಸಂಚಾರ ಸುಗಮ ನಿರ್ವಹಣೆಯ ಹೊಸ ಭರವಸೆ ‘ಅನ್ವೇಷಕ್’

ಐಐಎಸ್‌ಸಿಯ ಯೋಗೇಶ್‌ ಸಿಮ್ಹನ್‌ ನೇತೃತ್ವದಲ್ಲಿ ತಂತ್ರಾಂಶ ಅಭಿವೃದ್ಧಿ

​ಪ್ರಜಾವಾಣಿ ವಾರ್ತೆ
Published 23 ಜನವರಿ 2021, 19:31 IST
Last Updated 23 ಜನವರಿ 2021, 19:31 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ನಗರದಲ್ಲಿ ವಿವಿಧೆಡೆ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ಆಧರಿಸಿ ವಾಹನ, ವಸ್ತು ಅಥವಾ ವ್ಯಕ್ತಿಯನ್ನು ಜಾಡು ಪತ್ತೆ ಹಚ್ಚುವ ಮತ್ತು ನಗರಕ್ಕೆ ತಲೆನೋವಾಗಿರುವ ಸಂಚಾರ ದಟ್ಟಣೆ ಸಮಸ್ಯೆಯನ್ನು ಸ್ವಯಂಚಾಲಿತವಾಗಿ ಬಗೆಹರಿಸುವ ‘ಅನ್ವೇಷಕ್‌’ ಎಂಬ ತಂತ್ರಾಂಶವನ್ನು ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಸಂಶೋಧಕರು ಅಭಿವೃದ್ಧಿ ಪಡಿಸಿದ್ದಾರೆ.

ಐಐಎಸ್‌ಸಿಯ ಕಂಪ್ಯೂಟರೀಕರಣ ಮತ್ತು ದತ್ತಾಂಶ ವಿಜ್ಞಾನಗಳ (ಸಿಡಿಎಸ್‌) ವಿಭಾಗದ ಸಹಾಯಕ ಪ್ರಾಧ್ಯಾಪಕ ಯೋಗೇಶ್‌ ಸಿಮ್ಹನ್‌ ಮತ್ತು ತಂಡ ಅಭಿವೃದ್ಧಿ ಪಡಿಸಿರುವ ‘ಅನ್ವೇಷಕ್‌’ ತಂತ್ರಾಂಶ ಇಂತಹ ಅನೇಖ ಸಮಸ್ಯೆಗಳಿಗೆ ಪರಿಹಾರ ಒದಗಿಸಲಿದೆ.

ಕಾರ್ಯನಿರ್ವಹಣೆ ಹೇಗೆ ?

ADVERTISEMENT

ಆ್ಯಪ್‌ ಮತ್ತು ಕಂಪ್ಯೂಟರ್‌ ಆಧಾರಿತವಾಗಿ ರೂಪಿಸಲಾಗಿರುವ ಈ ‘ಅನ್ವೇಷಕ್‌’ ತಂತ್ರಾಂಶವು, ಕ್ಯಾಮೆರಾದಲ್ಲಿ ಸೆರೆಯಾಗುವ ವಿಡಿಯೊಗಳ ಆಧಾರ ಮೇಲೆ ತುಂಬಾ ಬುದ್ಧಿವಂತಿಕೆಯಿಂದ ನಿರ್ದಿಷ್ಟ ವ್ಯಕ್ತಿ ಅಥವಾ ವಾಹನದ ಜಾಡನ್ನು ಪತ್ತೆ ಹಚ್ಚುತ್ತದೆ. ಅವುಗಳ ಚಲನವಲನವನ್ನು ವಿಶ್ಲೇಷಿಸುತ್ತದೆ. ಅಂದರೆ, ವಿಡಿಯೊಗಳ ‘ಸ್ಮಾರ್ಟ್‌’ ಟ್ರ್ಯಾಕರ್‌ನಂತೆ ಈ ತಂತ್ರಾಂಶ ಕಾರ್ಯನಿರ್ವಹಿಸುತ್ತದೆ.

ಸದ್ಯ ಚಾಲ್ತಿಯಲ್ಲಿರುವ ತಂತ್ರಜ್ಞಾನದಲ್ಲಿ, ಕ್ಯಾಮೆರಾದಲ್ಲಿ ಸೆರೆಯಾಗುವ ದೃಶ್ಯಗಳನ್ನು ಕಂಪ್ಯೂಟರ್‌ನಲ್ಲಿ ನೋಡಿ, ನಂತರ ವಿಶ್ಲೇಷಿಸಲಾಗುತ್ತದೆ. ಆದರೆ, ಈ ತಂತ್ರಾಂಶದಲ್ಲಿ ದೃಶ್ಯ ಸೆರೆಯಾಗುವ ಸಂದರ್ಭದಲ್ಲಿಯೇ ಹಲವು ಬದಲಾವಣೆಗಳನ್ನು ಮಾಡಿಕೊಳ್ಳಬಹುದಾಗಿದೆ. ಯಾವುದೇ ವಿಭಿನ್ನ ಆಯಾಮಗಳಿಗೂ ಹೊಂದಿಕೊಂಡು ಇದು ಕೆಲಸ ಮಾಡುತ್ತದೆ. ಯಾವ ಸಮಯದಲ್ಲಿ ವಾಹನ ಅಥವಾ ವ್ಯಕ್ತಿ ಎಲ್ಲಿದ್ದರು, ಯಾವ ಮಾರ್ಗದಲ್ಲಿ ಸಾಗಿದರು ಎಂಬುದನ್ನು ಹಲವು ಕ್ಯಾಮೆರಾಗಳಲ್ಲಿ ಸೆರೆಯಾಗಿರುವ ದೃಶ್ಯಗಳನ್ನು ವಿಶ್ಲೇಷಿಸಿ ಪತ್ತೆ ಹಚ್ಚುತ್ತದೆ.

ಸಾಮರ್ಥ್ಯ:

1000 ಕ್ಯಾಮೆರಾಗಳ ಜಾಲದಲ್ಲಿರುವ ವಸ್ತು ಅಥವಾ ವ್ಯಕ್ತಿಗಳ ಮೇಲೂ ನಿಗಾ ಇಡುವ, ಸೆರೆಯಾಗುವ ದೃಶ್ಯಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ‘ಅನ್ವೇಷಕ್‌’ ಹೊಂದಿದೆ. ಕ್ಯಾಮೆರಾ ಸೆರೆ ಹಿಡಿಯುವ ಜಾಗದ ವಿಸ್ತೀರ್ಣವನ್ನು ಹೆಚ್ಚು–ಕಡಿಮೆ ಮಾಡಿಕೊಳ್ಳಬಹುದಾಗಿದೆ. ಅಂದರೆ, ‘ಹುಡುಕುವ’ ಸ್ಥಳದ ವ್ಯಾಪ್ತಿಯನ್ನು ಬೇಕಾದಂತೆ ಹೆಚ್ಚು–ಕಡಿಮೆ ಮಾಡಿಕೊಳ್ಳಬಹುದು.

ಸ್ವಯಂನಿರ್ವಹಣೆ:

ತಂತ್ರಾಂಶದ ಸಂಪರ್ಕ ಹೊಂದಿರುವ ಕಂಪ್ಯೂಟರ್‌ಗಳಲ್ಲಿ ಸಂಗ್ರಹ ಸಾಮರ್ಥ್ಯಕ್ಕಿಂತ ಮೀರಿ ವಿಡಿಯೊಗಳ ದಾಖಲಾದರೆ, ಬೇರೆ ತಂತ್ರಜ್ಞಾನದಲ್ಲಾದರೆ ಅವುಗಳ ಕಾರ್ಯನಿರ್ವಹಣೆ ಸಾಮರ್ಥ್ಯ ಸ್ಥಗಿತಗೊಳ್ಳುತ್ತದೆ. ಅಂದರೆ, ವ್ಯಕ್ತಿಯೊಬ್ಬರು ಇದನ್ನು ಸತತವಾಗಿ ನಿರ್ವಹಿಸುತ್ತಿರಬೇಕಾಗುತ್ತದೆ. ಆದರೆ, ಈ ನೂತನ ತಂತ್ರಾಂಶದಲ್ಲಿ, ಸೆರೆಯಾಗುವ ದೃಶ್ಯಗಳ ಅಥವಾ ವಿಡಿಯೊದ ಗುಣಮಟ್ಟವನ್ನು ಸ್ವಯಂಚಾಲಿತವಾಗಿ ಕಡಿಮೆ ಮಾಡಿಕೊಂಡು ಎಲ್ಲ ದೃಶ್ಯಗಳನ್ನೂ ಕಂಪ್ಯೂಟರ್‌ ಸಂಗ್ರಹಿಸಿಟ್ಟುಕೊಳ್ಳುತ್ತದೆ ಎಂದು ಐಐಎಸ್‌ಸಿ ಪ್ರಕಟಣೆಯಲ್ಲಿ ತಿಳಿಸಿದೆ.

ಹಸಿರು ನಿಶಾನೆ ಮಾರ್ಗ:

ನಗರದಲ್ಲಿನ ‘ಟ್ರಾಫಿಕ್‌ ಸಿಗ್ನಲ್‌’ಗಳನ್ನು ನಿಯಂತ್ರಣಕ್ಕೆ ತೆಗೆದುಕೊಂಡು, ಆಂಬುಲೆನ್ಸ್ ಸಾಗುವ ಮಾರ್ಗದಲ್ಲಿ ಸಂಪೂರ್ಣ ‘ಹಸಿರು ದೀಪ’ ಉರಿಯುವಂತೆ ಮಾಡಿ, ಆಂಬುಲೆನ್ಸ್‌ಗಳು ವೇಗವಾಗಿ ಸಾಗಲೂ ಈ ತಂತ್ರಾಂಶವು ಅನುವು ಮಾಡಿಕೊಡುತ್ತದೆ ಎಂದು ಯೋಗೇಶ್‌ ಸಿಮ್ಹನ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.