ADVERTISEMENT

ಆನ್‌ಲೈನ್ ವಂಚನೆ: 'ಗೋಲ್ಡನ್ ಅವರ್' ರೂಲ್ಸ್‌ ಪಾಲಿಸಿ, ಹಣ ಮರಳಿ ಪಡೆಯಿರಿ

ಆನ್‌ಲೈನ್ ವಂಚನೆಗೆ ಸಿಲುಕಿ ಹಣ ಕಳೆದುಕೊಂಡರೆ ತಕ್ಷಣ ದೂರು ದಾಖಲಿಸಿ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2022, 5:16 IST
Last Updated 16 ಸೆಪ್ಟೆಂಬರ್ 2022, 5:16 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಉಡುಪಿ: ಆನ್‌ಲೈನ್‌ ವಂಚನೆಗಳಿಗೆ ಸಿಲುಕಿ ಹಣ ಕಳೆದುಕೊಂಡಾಗ ಗ್ರಾಹಕರು ದೃತಿಗೆಡಬೇಕಾದ ಅಗತ್ಯವಿಲ್ಲ. ವಂಚನೆಗೆ ಒಳಗಾದ ತಕ್ಷಣವೇ ನ್ಯಾಷನಲ್‌ ಸೈಬರ್‌ ಕ್ರೈಂ ರಿಪೋರ್ಟಿಂಗ್ ಪೋರ್ಟಲ್ ವೆಬ್‌ಸೈಟ್‌ಗೆ ಮಾಹಿತಿ ನೀಡಿದರೆ ಹಣ ಕಳೆದುಕೊಂಡ ಗ್ರಾಹಕರ ಖಾತೆ ಹಾಗೂ ಹಣ ವರ್ಗಾವಣೆಯಾದ ವಂಚಕರ ಖಾತೆಗಳನ್ನು ನಿರ್ಬಂಧಿಸಬಹುದು.

ಏನಿದು ಗೋಲ್ಡನ್ ಅವರ್:

ಆನ್‌ಲೈನ್ ವಂಚನೆಗೊಳಗಾದ ನಂತರದ ನಿರ್ಧಿಷ್ಟ ಸಮಯವನ್ನು ಗೋಲ್ಡನ್ ಅವರ್ ಎನ್ನಲಾಗುತ್ತದೆ. ಈ ಅವಧಿಯಲ್ಲಿ ಹಣ ಕಳೆದುಕೊಂಡವರು ಗೋಲ್ಡನ್ ಅವರ್ ನಿಯಮಗಳನ್ನು ಪಾಲಿಸಿದರೆ ಕಳೆದುಕೊಂಡ ಹಣವನ್ನು ಮರಳಿ ಪಡೆಯಬಹುದು ಎನ್ನುತ್ತಾರೆ ಎಸ್‌ಪಿ ಹಾಕೆ ಅಕ್ಷಯ್ ಮಚ್ಚಿಂದ್ರ.

ADVERTISEMENT

ಆನ್‌ಲೈನ್ ವಂಚನೆಗೆ ಸಿಲುಕಿದವರು ಯಾರ ಬಳಿ ದೂರು ನೀಡಬೇಕು ಎಂಬ ಗೊಂದಲದಲ್ಲಿರುತ್ತಾರೆ. ಹಣ ಕಳೆದುಕೊಂಡವರು ತಕ್ಷಣ ಮೇಲಿನ ಪೋರ್ಟಲ್‌ಗೆ ಭೇಟಿ ನೀಡಿ ಮಾಹಿತಿ ನೀಡಬೇಕು. ಅಗತ್ಯವಿದ್ದರೆ 0820–25350021 ಹಾಗೂ 9480805410 ನಂಬರ್‌ಗೆ ಕರೆ ಮಾಡಿಯೂ ಗೋಲ್ಡನ್ ಅವರ್‌ ಬಗ್ಗೆ ತಿಳಿದುಕೊಳ್ಳಬಹುದು.

ವಂಚನೆ ಹೇಗೆ ನಡೆಯುತ್ತದೆ:

ಸೆ.4ರಂದು ಉಡುಪಿಯ ವ್ಯಕ್ತಿಯೊಬ್ಬರಿಗೆ ಯುರೋ ಬಾಂಡ್ ಕಂಪೆನಿಯ ಮಾಲೀಕನ ಸೋಗಿನಲ್ಲಿ ಕರೆ ಮಾಡಿದ ವಂಚಕನೊಬ್ಬ ‘ಮಗನಿಗೆ ಕಾರವಾರ–ಗೋವಾ ರಸ್ತೆಯಲ್ಲಿ ಅಪಘಾತವಾಗಿದ್ದು, ಏರ್ ಲಿಫ್ಟ್‌ ಮಾಡಬೇಕಿದ್ದು ತಕ್ಷಣ ₹ 3 ಲಕ್ಷವನ್ನು ಖಾತೆಗೆ ಹಾಕುವಂತೆ ಮನವಿ ಮಾಡಿದ್ದ.

ವಂಚಕನ ಮಾತು ನಂಬಿದ ಉಡುಪಿ ವ್ಯಕ್ತಿ ತನ್ನ ಖಾತೆಯಿಂದ ₹ 50,000, ಗೆಳೆಯರ ಖಾತೆಯಿಂದ ₹ 2.5 ಲಕ್ಷ ಹಣ ವರ್ಗಾವಣೆ ಮಾಡಿ ಆಸ್ಪತ್ರೆಗೆ ಅಪಘಾತವಾದ ವ್ಯಕ್ತಿಯನ್ನು ಸಾಗಿಸಲು ಕಾರನ್ನೂ ಬುಕ್ ಮಾಡಿದ್ದರು. ಸ್ನೇಹಿತರೊಟ್ಟಿಗೆ ಮಂಗಳೂರಿನ ಎಜೆ ಆಸ್ಪತ್ರೆಗೆ ರಕ್ತದಾನ ಮಾಡಲೂ ಹೋಗಿದ್ದರು. ಬಳಿಕ ಅದೊಂದು ವಂಚನೆಯ ಜಾಲ ಎಂಬುದು ಅವರ ಅರಿವಿಗೆ ಬಂತು.

ಏರ್‌ಲಿಫ್ಟ್ ನಿಯಮಗಳು ಏನು:

ಸಾಮಾನ್ಯವಾಗಿ ಹೆದ್ದಾರಿಯಲ್ಲಿ ಅಪಘಾತವಾದರೆ ಸರ್ಕಾರಿ ಹಾಗೂ ಖಾಸಗಿ ಆಂಬುಲೆನ್ಸ್‌ಗಳು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುತ್ತವೆ. ಗಾಯಾಳುವನ್ನು ಏರ್‌ಲಿಫ್ಟ್‌ ಮಾಡಬೇಕಾದರೆ ಕಡ್ಡಾಯವಾಗಿ ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ.

ಏರ್‌ ಲಿಫ್ಟ್‌ ಸ್ಥಳದ ಲ್ಯಾಟಿಟ್ಯೂಡ್ ಹಾಗೂ ಲಾಂಜಿಟ್ಯೂಡ್ ವಿವರವನ್ನು ಪೈಲಟ್‌ಗೆ ಮೊದಲು ರವಾನಿಸಬೇಕಾಗುತ್ತದೆ. ಹೆಲಿಕಾಪ್ಟರ್ ಲ್ಯಾಂಡ್ ಆಗಲು ಸ್ಥಳದ ಮಾಲೀಕರ ಅನುಮತಿ ಅಗತ್ಯ, ಪೊಲೀಸ್ ಹಾಗೂ ಇತರ ಇಲಾಖೆಗಳ ಅನುಮತಿ ಅಗತ್ಯ, ಅಗ್ನಿಶಾಮಕ ವಾಹನ, ಸ್ಮೋಕ್ ಕ್ಯಾಂಡಲ್, ಭದ್ರತಾ ಸಿಬ್ಬಂದಿ ಸ್ಥಳದಲ್ಲಿ ಇರಬೇಕು. ಇಷ್ಟೆಲ್ಲ ವ್ಯವಸ್ಥೆಯಾದರೆ ಮಾತ್ರ ಏರ್‌ಲಿಫ್ಟ್‌ ಸಾಧ್ಯ. ವಂಚಕರು ಏರ್ ಲಿಫ್ಟ್‌ ಮಾಡುವ ನೆಪದಲ್ಲಿ ಕರೆ ಮಾಡಿದರೆ ನಂಬಿ ಮೋಸ ಹೋಗಬೇಡಿ ಎಂದು ಎಸ್‌ಪಿ ಹಾಕೆ ಅಕ್ಷಯ್ ಮಚ್ಚಿಂದ್ರ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.