ADVERTISEMENT

ಡಿಜಿಟಲ್ ವಂಚನೆ: ಗೂಗಲ್ ಪ್ಲೆಸ್ಟೋರ್‌ನಿಂದ 17 ಆ್ಯಪ್‌ಗಳು ಡಿಲೀಟ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಡಿಸೆಂಬರ್ 2023, 10:48 IST
Last Updated 8 ಡಿಸೆಂಬರ್ 2023, 10:48 IST
   

ನವದೆಹಲಿ: ಜನರಿಗೆ ಸಾಲದ ಆಮಿಷವೊಡ್ಡಿ ಹಣ ಕದಿಯುವ 17 ಮೊಬೈಲ್‌ ಅಪ್ಲಿಕೇಷನ್‌ಗಳನ್ನು ಗೂಗಲ್‌ ಪ್ಲೇ ಸ್ಟೋರ್‌ನಿಂದ ತೆಗೆದುಹಾಕಲಾಗಿದೆ.

ಕಡಿಮೆ ದಾಖಲೆಗಳನ್ನು ಒದಗಿಸಿ ತ್ವರಿತವಾಗಿ ಸಾಲ ಪಡೆಯಿರಿ ಎನ್ನುವ ಆಮಿಷವೊಡ್ಡಿ ಆ‍್ಯಪ್‌ಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳುವಂತೆ ಸೂಚಿಸುತ್ತಾರೆ. ಜನರು ಆ‍್ಯಪ್‌ ಡೌನ್‌ಲೋಡ್‌ ಮಾಡುತ್ತಿದ್ದಂತೆಯೇ ಅವರಿಗೇ ಅರಿವಿಲ್ಲದಂತೆ ನೀಡಿದ ಒಪ್ಪಿಗೆಗಳಿಂದಾಗಿ ಫೋನ್‌ನಲ್ಲಿನ ಸಂಪರ್ಕಗಳು, ಫೋಟೊ, ಆಲ್ಬಮ್‌ಗಳು ಮತ್ತು ಇತರ ಸೂಕ್ಷ್ಮ ಡೇಟಾವನ್ನು ಕದಿಯಲಾಗುತ್ತದೆ.

ಸಾಲವನ್ನು ನೀಡುವಾಗ ನಮೂದಿಸಲಾದ ನಿಯಮಗಳು ಮತ್ತು ಷರತ್ತುಗಳಿಗೆ ವಿರುದ್ಧವಾಗಿ, ಯಾವುದೇ ಸೂಚನೆಯಿಲ್ಲದೆಯೇ ಆ್ಯಪ್‌ಗಳು ಬಡ್ಡಿದರಗಳನ್ನು ಹೆಚ್ಚಿಸುತ್ತವೆ. ಅಲ್ಲದೆ 90 ದಿನಗಳ ಬದಲಿಗೆ ಒಂದು ವಾರದೊಳಗೆ ಸಾಲದ ಮೊತ್ತವನ್ನು ಪಾವತಿಸುವಂತೆ ಒತ್ತಾಯಿಸುತ್ತವೆ.

ADVERTISEMENT

ಒಂದು ವೇಳೆ ವ್ಯಕ್ತಿಯು ಕಂತುಗಳಲ್ಲಿ ಡೀಫಾಲ್ಟ್ ಮಾಡಿದಾಗ, ಲೋನ್ ಅಪ್ಲಿಕೇಶನ್ ಡೆವಲಪರ್ ಕಾನೂನುಬಾಹಿರವಾಗಿ ಫೋಟೊ ಮತ್ತು ವೀಡಿಯೊಗಳಂತಹ ವೈಯಕ್ತಿಕ ವಿವರಗಳನ್ನು ಕದ್ದು ಅವುಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡು ಬೆದರಿಕೆ ಹಾಕುತ್ತಾರೆ.  ಇದರಿಂದ ಅನೇಕ ಆತ್ಮಹತ್ಯೆ ಪ್ರಕರಣಗಳೂ ವರದಿಯಾಗಿವೆ. 

ಹೀಗಾಗಿ ಗೂಗಲ್‌ನ ಡಿಫೆನ್ಸ್ ಅಲಯನ್ಸ್‌ನ ಭಾಗವಾಗಿರುವ ESET, ಭಾರತ, ಮೆಕ್ಸಿಕೋ, ಇಂಡೋನೇಷ್ಯಾ, ಥೈಲ್ಯಾಂಡ್, ವಿಯೆಟ್ನಾಂ, ಪಾಕಿಸ್ತಾನ, ಕೊಲಂಬಿಯಾ, ಪೆರು, ಫಿಲಿಪಿನ್ಸ್‌, ಈಜಿಪ್ಟ್, ಕೀನ್ಯಾ, ನೈಜೀರಿಯಾ ಮತ್ತು ಸಿಂಗಾಪುರದಲ್ಲಿ ಕಾರ್ಯನಿರ್ವಹಿಸುತ್ತಿರುವ 17 ಬೇಹುಗಾರಿಕೆ ಅಪ್ಲಿಕೇಶನ್‌ಗಳನ್ನು ಗುರುತಿಸಿದೆ. ಅವುಗಳಲ್ಲಿ

ಎಎ ಕ್ರೆಡಿಟ್‌ (AA Kredit), ಅಮೊರ್‌ ಕ್ಯಾಶ್‌ (Amor Cash), ಈಸಿ ಕ್ರೆಡಿಟ್‌ (EasyCredit), ಕ್ಯಾಶ್‌ ವಾವ್‌ (Cashwow), ಕ್ರೆಡಿ ಬಸ್‌(CrediBus), ಟ್ರ್ಯೂ ನೈರಾ (TrueNaira), 4ಎಸ್‌ ಕ್ಯಾಶ್‌(4S Cash) ಅಪ್ಲಿಕೇಷನ್‌ಗಳು ಸೇರಿದಂತೆ 17 ಆ‍್ಯಪ್‌ಗಳಿವೆ.

ಅಚ್ಚರಿಯೆಂದರೆ 1.2 ಕೋಟಿಗೂ ಅಧಿಕ ಜನರು ಈ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿಕೊಡಿದ್ದು, ಕಿರುಕುಳ ಅನುಭವಿಸಿದ್ದಾರೆ ಎಂದು ವರದಿಯಾಗಿದೆ.‌

ಸಾಲ ನೀಡುವ ನಕಲಿ ಆ‍್ಯಪ್‌ಗಳಿಂದ ಬಚಾವಾಗುವುದು ಹೇಗೆ? 

-ಪರಿಚಯವಿಲ್ಲದ ಕಂಪನಿಗಳು ಅಭಿವೃದ್ಧಿಪಡಿಸಿದ ಈ ವಂಚನೆ ಸಾಲದ ಅಪ್ಲಿಕೇಶನ್‌ಗಳನ್ನು ಎಸ್‌ಎಂಎಸ್‌ ಮೂಲಕ ಜನರನ್ನು ತಲುಪುತ್ತವೆ. ಕಡಿಮೆ ಬಡ್ಡಿದರದ ಸಾಲ, ಆಕರ್ಷಕ ಕೊಡುಗೆಗಳ ಬಗ್ಗೆ ಎಸ್‌ಎಂಎಸ್‌ ನೀಡಲಾಗುತ್ತದೆ. ಗೂಗಲ್ ಪ್ಲೇ ಸ್ಟೋರ್‌ನಿಂದ ಅಂತಹ ಅಪ್ಲಿಕೇಶನ್‌ಗಳನ್ನು ಎಂದಿಗೂ ಡೌನ್ಲೋಡ್‌ ಮಾಡಬೇಡಿ

-ಆ‍್ಯಪ್‌ಗಳನ್ನು ಇನ್‌ಸ್ಟಾಲ್‌ ಮಾಡುವಾಗ ಫೋಟೊ ಗ್ಯಾಲರಿ, ಇ–ಮೇಲ್‌, ಸಂಪರ್ಕ ಸಂಖ್ಯೆಗಳಿಗೆ ಮತ್ತು ಎಸ್‌ಎಂಎಸ್‌ಗಳಿಗೆ ಅನುಮತಿ ನೀಡಬೇಡಿ

-ಬ್ಯಾಂಕ್‌ಗಳ ಆ‍್ಯಪ್‌ ಮತ್ತು ಡಿಜಿಟಲ್‌ ವಾಲೆಟ್‌ ಅಥವಾ ಭಾರತದಲ್ಲಿ ನಂಬಿಕೆಗೆ ಅರ್ಹವಾದ ಕಂಪನಿಗಳಿಂದ ಅಭಿವೃದ್ಧಿಯಾದ ಅಪ್ಲಿಕೇಷನ್‌ಗಳನ್ನು ಮಾತ್ರ ಡೌನ್ಲೋಡ್‌ ಮಾಡಿಕೊಳ್ಳಿ.

-ಆ‍್ಯಂಟಿ ವೈರಸ್‌ ಆ‍್ಯಪ್‌ಗಳನ್ನು ಇನ್‌ಸ್ಟಾಲ್‌ ಮಾಡಿಕೊಳ್ಳಿ. ಇದರಿಂದ ಬೇರೆ ಯಾವುದೇ ಅಪ್ಲಿಕೇಷನ್‌ಗಳಿಂದ ಮೊಬೈಲ್‌ಗೆ ಉಂಟಾಗುವ ಹಾನಿಯನ್ನು ತಪ್ಪಿಸಬಹುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.