ADVERTISEMENT

ಭಾರತದ ಮೊದಲ ಮುಸ್ಲಿಂ ಸಮುದಾಯದ ಶಿಕ್ಷಕಿ ಫಾತಿಮಾ ಶೇಖ್ ಅವರಿಗೆ ಗೂಗಲ್ ಡೂಡಲ್ ಗೌರವ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಜನವರಿ 2022, 8:06 IST
Last Updated 9 ಜನವರಿ 2022, 8:06 IST
ಭಾರತದ ಮೊದಲ ಮುಸ್ಲಿಂ ಸಮುದಾಯದ ಶಿಕ್ಷಕಿಗೆ ಗೂಗಲ್ ಡೂಡಲ್ ವಿಶೇಷ ಗೌರವ
ಭಾರತದ ಮೊದಲ ಮುಸ್ಲಿಂ ಸಮುದಾಯದ ಶಿಕ್ಷಕಿಗೆ ಗೂಗಲ್ ಡೂಡಲ್ ವಿಶೇಷ ಗೌರವ   

ದೆಹಲಿ:ಭಾರತದ ಮೊದಲ ಮುಸ್ಲಿಂ ಶಿಕ್ಷಕಿ ಎಂದು ಪರಿಗಣಿಸಲ್ಪಟ್ಟಿರುವ ಶಿಕ್ಷಣ ತಜ್ಞೆ ಮತ್ತು ಸ್ತ್ರೀವಾದಿ ಫಾತಿಮಾ ಶೇಖ್ ಅವರಿಗೆ ಗೂಗಲ್ ಡೂಡಲ್‌ ಮೂಲಕ ಗೌರವ ಸಲ್ಲಿಸಿದೆ.

ಸಮಾಜ ಸುಧಾರಕರಾದ ಜ್ಯೋತಿರಾವ್ ಮತ್ತು ಸಾವಿತ್ರಿಬಾಯಿ ಫುಲೆ ಅವರ ಸಹವರ್ತಿಯಾಗಿದ್ದ ಫಾತಿಮಾ ಶೇಖ್, 1848ರಲ್ಲಿ ಶಾಲೆಯೊಂದನ್ನು ಸ್ಥಾಪಿಸಿದರು. ಇದು ಭಾರತದಲ್ಲಿ ಬಾಲಕಿಯರಿಗಾಗಿ ಆರಂಭಿಸಿದ ಮೊದಲ ಶಾಲೆಯಾಗಿದೆ.

ಫಾತಿಮಾ ಶೇಖ್ ಅವರು 1831 ಜ. 9ರಂದು ಪುಣೆಯಲ್ಲಿ ಜನಿಸಿದರು. ಫಾತಿಮಾ ತನ್ನ ಸಹೋದರ ಉಸ್ಮಾನ್‌ನೊಂದಿಗೆ ವಾಸಿಸುತ್ತಿದ್ದರು. ಕೆಳಜಾತಿಗಳ ಜನರಿಗೆ ಶಿಕ್ಷಣ ನೀಡಲು ಪ್ರಯತ್ನಿಸಿದ್ದಕ್ಕಾಗಿ ಫುಲೆ ದಂಪತಿಗಳನ್ನು ಮನೆಯಿಂದ ಹೊರಹಾಕಿದ್ದಾಗ ಫಾತಿಮಾ ಕುಟುಂಬ ಫುಲೆ ದಂಪತಿಗೆ ಆಶ್ರಯ ನೀಡಿತ್ತು. ಶೇಖ್‌ ಅವರ ಮನೆಯ ಛಾವಣಿ ಅಡಿಯಲ್ಲಿಯೇ ಫುಲೆ ದಂಪತಿ ಶಾಲೆಯನ್ನು ಆರಂಭಿಸಿದ್ದರು. ಈ ಶಾಲೆಯಲ್ಲಿ ಸಾವಿತ್ರಿಬಾಯಿ ಫುಲೆ ಮತ್ತು ಫಾತಿಮಾ ಶೇಖ್ ಅವರು, ಜಾತಿ, ಧರ್ಮ ಅಥವಾ ಲಿಂಗದ ಆಧಾರದ ಮೇಲೆ ಶಿಕ್ಷಣವನ್ನು ನಿರಾಕರಿಸಿದ ದಲಿತ ಮತ್ತು ಮುಸ್ಲಿಂ ಮಹಿಳೆಯರು ಮತ್ತು ಮಕ್ಕಳಿಗೆ ಶಿಕ್ಷಣ ನೀಡಿದರು.

ADVERTISEMENT

ಸಮಾನತೆಗಾಗಿ ತಮ್ಮ ಜೀವಮಾನವಿಡಿ ಹೋರಾಟ ಮಾಡಿದ ಶೇಖ್, ಸ್ಥಳೀಯ ಗ್ರಂಥಾಲಯದಲ್ಲಿ ಕಲಿಯಲು ಮತ್ತು ಭಾರತೀಯ ಜಾತಿ ವ್ಯವಸ್ಥೆಯ ಬಿಗಿ ಹಿಡಿತದಿಂದ ಪಾರಾಗಲು ತನ್ನ ಸಮುದಾಯದ ದೀನದಲಿತರ ಮನೆ-ಮನೆಗೆ ತೆರಳಿ ಅವರನ್ನು ಆಹ್ವಾನಿಸಿದರು. ಸತ್ಯಶೋಧಕ್ ಆಂದೋಲನದಲ್ಲಿ ಭಾಗಿಯಾಗಿದ್ದವರನ್ನು ಅವಮಾನಿಸಲು ಪ್ರಯತ್ನಿಸಿದ ಪ್ರಬಲ ವರ್ಗಗಳಿಂದ ಅವರು ದೊಡ್ಡ ಪ್ರತಿರೋಧವನ್ನು ಎದುರಿಸಿದರು. ಹೀಗಿದ್ದರೂ ಶೇಖ್ ಮತ್ತು ಆಕೆಯ ಮಿತ್ರರು ಹೋರಾಟವನ್ನು ಮುಂದುವರಿಸಿದರು.

ಭಾರತ ಸರ್ಕಾರವು 2014ರಲ್ಲಿ ಉರ್ದು ಪಠ್ಯಪುಸ್ತಕಗಳಲ್ಲಿ ಇತರ ಶಿಕ್ಷಣ ತಜ್ಞರೊಂದಿಗೆ ಫಾತಿಮಾ ಶೇಖ್ ಅವರ ಸಾಧನೆಗಳನ್ನು ಸೇರಿಸುವ ಮೂಲಕ ಫಾತಿಮಾ ಅವರ ಸಾಧನೆಗಳ ಮೇಲೆ ಬೆಳಕು ಚೆಲ್ಲಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.