ADVERTISEMENT

ಬಿಐಎಸ್ ಮಾನದಂಡ ನಿಗದಿ: ಎಲ್ಲ ಉಪಕರಣಗಳಿಗೆ ಟೈಪ್‌–ಸಿ ಚಾರ್ಜರ್‌

ಪಿಟಿಐ
Published 9 ಜನವರಿ 2023, 19:45 IST
Last Updated 9 ಜನವರಿ 2023, 19:45 IST
ಟೈಪ್‌–ಸಿ ಚಾರ್ಜಿಂಗ್ ಕೇಬಲ್
ಟೈಪ್‌–ಸಿ ಚಾರ್ಜಿಂಗ್ ಕೇಬಲ್   

ನವದೆಹಲಿ: ಭಾರತೀಯ ಮಾನಕ ಸಂಸ್ಥೆಯು (ಬಿಐಎಸ್) ಮೂರು ರೀತಿಯ ಎಲೆಕ್ಟ್ರಾನಿಕ್ ಉಪಕರಣಗಳಿಗೆ ಗುಣಮಟ್ಟ ಮಾನದಂಡಗಳನ್ನು ನಿಗದಿಪಡಿಸಿದೆ. ಡಿಜಿಟಲ್ ಟಿ.ವಿ ರಿಸೀವರ್‌ಗಳು, ಟೈಪ್‌–ಸಿ ಯುಎಸ್‌ಬಿ ಕೇಬಲ್ ಹಾಗೂ ವಿಡಿಯೊ ಕಣ್ಗಾವಲು ವ್ಯವಸ್ಥೆಗಳಿಗೆ (ವಿಎಸ್‌ಎಸ್) ಮಾನದಂಡಗಳನ್ನು ಗೊತ್ತುಪಡಿಸಿದೆ.

ಲ್ಯಾಪ್‌ಟಾಪ್, ಮೊಬೈಲ್ ಸೇರಿದಂತೆ ಎಲ್ಲ ರೀತಿಯ ಎಲೆಕ್ಟ್ರಾನಿಕ್ ಉಪಕರಣಗಳಲ್ಲೂ ಏಕರೂಪ ಬಳಕೆಗೆ ಹೊಂದುವ ರೀತಿಯಲ್ಲಿ ಟೈಪ್‌–ಸಿ ವಿಧದ ಪೋರ್ಟ್, ಪ್ಲಗ್, ಕೇಬಲ್‌ಗಳನ್ನು ತಯಾರಿಸಬೇಕು ಎಂಬ ಮಾನದಂಡ ರೂಪಿಸಲಾಗಿದೆ. ದೇಶದಲ್ಲಿ ಮಾರಾಟವಾಗುವ ಎಲ್ಲ ರೀತಿಯ ಸ್ಮಾರ್ಟ್‌ಫೋನ್‌ಗಳು ಹಾಗೂ ಇತರೆ ಎಲೆಕ್ಟ್ರಾನಿಕ್ ಉಪಕರಣಗಳಿಗೆ ಏಕರೂಪದ ಚಾರ್ಜಿಂಗ್ ಸವಲತ್ತು ಒದಗಿಸುವುದಕ್ಕಾಗಿ ಈ ಮಾನದಂಡ ಗೊತ್ತುಪಡಿಸಲಾಗಿದೆ.

ಈ ಮಾನದಂಡದಿಂದಾಗಿ, ಪ್ರತಿಯೊಬ್ಬ ಗ್ರಾಹಕರಿಗೂ ಪ್ರತ್ಯೇಕ ಚಾರ್ಜರ್‌ ಅನ್ನು ಒದಗಿಸುವ ಅಗತ್ಯ ಇರುವುದಿಲ್ಲ. ಪ್ರತಿ ಬಾರಿ ಉಪಕರಣ ಖರೀದಿಸಿದಾಗ ಗ್ರಾಹಕರು ತಮ್ಮ ಮೊಬೈಲ್‌ಗೆ ಹೊಂದಿಕೆಯಾಗಬಲ್ಲ ಪ್ರತ್ಯೇಕ ಚಾರ್ಜರ್ ಅನ್ನು ಖರೀದಿಸುವ ಅಗತ್ಯವಿರುವುದಿಲ್ಲ. ಈ ಕ್ರಮದಿಂದ ಇ–ತ್ಯಾಜ್ಯ ಉತ್ಪಾದನೆಯೂ ತಗ್ಗಲಿದ್ದು, ಚಾರ್ಜರ್‌ ಖರೀದಿಗೆ ಮಾಡುವ ವೆಚ್ಚವೂ ಉಳಿತಾಯವಾಗಲಿದೆ. ಹಲವು ದೇಶಗಳು ಈ ಮಾನದಂಡವನ್ನು ಅನುಸರಿಸುವತ್ತ ಹೆಜ್ಜೆ ಇರಿಸಿವೆ.

ADVERTISEMENT

ಇತ್ತೀಚಿನ ದಿನಗಳಲ್ಲಿ ವಿಡಿಯೊ ನಿಗಾ ವ್ಯವಸ್ಥೆಗೆ ಹೆಚ್ಚಿನ ಬೇಡಿಕೆಯಿದ್ದು, ಗ್ರಾಹಕರಿಗೆ ಯಾವ ರೀತಿಯ ಉಪಕರಣಗಳನ್ನು ಖರೀದಿಸುವುದು ಸೂಕ್ತ ಎಂಬ ಗೊಂದಲವಿದೆ. ಇದನ್ನು ನಿವಾರಣೆ ಮಾಡುವುದಕ್ಕಾಗಿ ಮಾನಕ ಸಂಸ್ಥೆಯು ವಿಡಿಯೊ ನಿಗಾ ವ್ಯವಸ್ಥೆಗೆ ಮಾನದಂಡ ರೂಪಿಸಿದೆ. ಕ್ಯಾಮರಾ, ಇಂಟರ್‌ಫೇಸ್, ಇನ್‌ಸ್ಟಾಲೇಷನ್‌ ಮೊದಲಾದವುಗಳಿಗೆ ನಿಯಮಗಳನ್ನು ಗೊತ್ತುಪಡಿಸಿದೆ. ಭದ್ರತಾ ವ್ಯವಸ್ಥೆಯನ್ನು ಹೆಚ್ಚು ನಿಖರವಾಗಿ ಹಾಗೂ ಕಡಿಮೆ ವೆಚ್ಚದಲ್ಲಿ ಪಡೆಯಲು ಈ ಮಾನದಂಡಗಳು ನೆರವಾಗುತ್ತವೆ.

‘ಸೆಟ್‌ಟಾಪ್‌ ಬಾಕ್ಸ್‌ ಬೇಡ’
ಜನರು ಶುಲ್ಕ ಸಹಿತ ಹಾಗೂ ಉಚಿತ ಟಿ.ವಿ ವಾಹಿನಿಗಳನ್ನು ವೀಕ್ಷಿಸಬೇಕಾದರೆ, ಸೆಟ್‌ಟಾಪ್‌ ಬಾಕ್ಸ್‌ಗಳನ್ನು ಖರೀದಿಸಬೇಕಿದೆ. ದೂರದರ್ಶನದ ಉಚಿತ ಚಾನಲ್‌ಗಳನ್ನು ವೀಕ್ಷಿಸಬೇಕಿದ್ದರೂ, ಸೆಟ್‌ಟಾಪ್ ಬಾಕ್ಸ್ ಖರೀದಿಸಲೇಬೇಕಿದೆ. ಆದರೆ, ಉಚಿತ ಚಾನಲ್‌ಗಳನ್ನು ಸೆಟ್‌ಟಾಪ್ ಬಾಕ್ಸ್ ಇಲ್ಲದೆಯೇ ವೀಕ್ಷಿಸುವುದು ಇನ್ನುಮುಂದೆ ಸಾಧ್ಯವಾಗಲಿದೆ.

ಸ್ಯಾಟಲೈಟ್ ಟ್ಯೂನರ್‌ಗಳನ್ನು ಅಳವಡಿಸಿದ ರಿಸೀವರ್‌ಗಳನ್ನು ಟಿ.ವಿ ತಯಾರಿಸುವಾಗಲೇ ಅಳವಡಿಸಲಾಗುತ್ತದೆ. ತಂತ್ರಜ್ಞಾನದ ಈ ಸೌಲಭ್ಯದಿಂದ ಸರ್ಕಾರದ ಹಲವು ಕಾರ್ಯಕ್ರಮಗಳು, ಶೈಕ್ಷಣಿಕ ಮಾಹಿತಿ ವೀಕ್ಷಕರಿಗೆ ಸುಲಭವಾಗಿ ಸಿಗಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.