ADVERTISEMENT

ಗೂಗಲ್ ಪ್ಲೇಸ್ಟೋರ್‌ನಲ್ಲಿ ಮತ್ತೆ ಬಂತು 'ಮಿತ್ರೊನ್' ಆ್ಯಪ್

ಪಾಕಿಸ್ತಾನ ಮೂಲದ್ದಲ್ಲ: ಮಾಲೀಕರಿಂದ ಸ್ಪಷ್ಟನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಜೂನ್ 2020, 4:13 IST
Last Updated 9 ಜೂನ್ 2020, 4:13 IST
ಮಿತ್ರೊನ್ ಆ್ಯಪ್
ಮಿತ್ರೊನ್ ಆ್ಯಪ್   

ಬೆಂಗಳೂರು: ಟಿಕ್‌ಟಾಕ್‌ಗೆ ಭಾರತೀಯರ ಉತ್ತರ ಎಂದು ಬಿಂಬಿಸಲಾಗಿದ್ದ ಮಿತ್ರೊನ್ (Mitron) ಆ್ಯಪ್ ಗೂಗಲ್ ಪ್ಲೇಸ್ಟೋರ್‌ನಲ್ಲಿ ಮರಳಿ ಬಂದಿದೆ.

ಚೀನಾ ವಿರೋಧಿ ಅಲೆಯ ನಡುವೆ ದೇಶದಲ್ಲಿ ಜನಪ್ರಿಯಗೊಂಡಿದ್ದ ಮೊಬೈಲ್‌ ವಿಡಿಯೊ ಮೇಕಿಂಗ್‌ ಆ್ಯಪ್‌ 'ಮಿತ್ರೊನ್' ಕಳೆದ ವಾರ ಪ್ಲೇಸ್ಟೋರ್‌ನಿಂದ ಮಾಯವಾಗಿತ್ತು. ಆ ಕುರಿತು ಗೂಗಲ್ ಆಗಲಿ, ಮಿತ್ರೊನ್ ಮಾಲೀಕರಾಗಲಿ ಸ್ಪಷ್ಟನೆ ನೀಡಿರಲಿಲ್ಲ. ಇದೀಗ ಆ್ಯಪ್ ಅಭಿವೃದ್ಧಿಪಡಿಸಿದ, ಐಐಟಿ ರೂರ್ಕಿ ವಿದ್ಯಾರ್ಥಿ ಶಿವಾಂಕ್‌ ಅಗರ್ವಾಲ್ ಮತ್ತು ಅನೀಷ್ ಖಂಡೇಲ್‌ವಾಲ್ ಆ್ಯಪ್ ಕುರಿತು ಸ್ಪಷ್ಟನೆ ನೀಡಿದ್ದಾರೆ.

ಅಗತ್ಯ ದಾಖಲಾತಿಗಳನ್ನು ಒದಗಿಸಿದ ನಂತರ ಆ್ಯಪ್ ಪ್ಲೇಸ್ಟೋರ್‌ನಲ್ಲಿ ಮರಳಿದೆ. ಈ ಆ್ಯಪ್ ಪಾಕಿಸ್ತಾನ ಮೂಲದ್ದಲ್ಲ ಎಂದು ಶಿವಾಂಕ್‌ ಹಾಗೂ ಅನೀಷ್ ತಿಳಿಸಿದ್ದಾರೆ.

ADVERTISEMENT

ಕ್ಯುಬಾಕ್ಸಸ್‌ನಿಂದ ಖರೀದಿಸಿದ್ದಲ್ಲ: ಪಾಕಿಸ್ತಾನ ಮೂಲದ ಸೋರ್ಸ್‌ ಕೋಡ್‌ನಿಂದ ಮಿತ್ರೊನ್ ಅಭಿವೃದ್ಧಿಪಡಿಸಲಾಗಿದೆ ಎಂಬ ಆರೋಪವನ್ನೂ ಶಿವಾಂಕ್‌ ಅಲ್ಲಗಳೆದಿದ್ದಾರೆ. ಆಸ್ಟ್ರೇಲಿಯಾದ ‘ಎನ್ವಾಟೋ’ ಕಂಪನಿಯಿಂದ ಕೋಡ್ ಖರೀದಿಸಿ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

‘ಪರವಾನಗಿ ಪಡೆದ ಕೋಡ್‌ ಖರೀದಿಸಬಹುದಾದ ವೇದಿಕೆಯಾಗಿದೆ ‘ಎನ್ವಾಟೋ’. ನಾವೂ ಸಹ ಅಲ್ಲಿಂದಲೇ ಕೋಡ್ ಖರೀದಿಸಿದ್ದೇವೆ. ಹೀಗಾಗಿ ಮಿತ್ರೊನ್‌ನ ಕಾನೂನುಬದ್ಧ ಮಾಲೀಕರು ನಾವೇ ಆಗಿದ್ದೇವೆ. ಖರೀದಿಸುವಾಗ ಇದ್ದ ಆರಂಭಿಕ ಟೆಂಪ್ಲೆಟ್‌ಗೇ ನಾವು ಒತ್ತು ನೀಡಿದ್ದೆವು. ಡೆವಲಪರ್‌ನ ಮೂಲವನ್ನು ಪ್ರದರ್ಶಿಸಿಲ್ಲ ಹಾಗೂ ಅದರ ಅಗತ್ಯವೂ ಅಲ್ಲ’ ಎಂದು ಶಿವಾಂಕ್‌ ಮತ್ತು ಅನೀಷ್ ಸ್ಪಷ್ಟನೆ ನೀಡಿರುವುದನ್ನು ದಿ ಇಂಡಿಯನ್ ಎಕ್ಸ್‌ಪ್ರೆಸ್ ಸುದ್ದಿತಾಣ ವರದಿ ಮಾಡಿದೆ.

ಪಾಕಿಸ್ತಾನದ ಕ್ಯುಬಾಕ್ಸಸ್ (QBoxus) ಡೆವಲಪರ್‌ಗಳ ತಂಡ ಕೋಡ್‌ಕ್ಯಾನ್ಯಾನ್‌ನಲ್ಲಿ ಮಾರಾಟಕ್ಕೆ ಇಟ್ಟಿದ್ದ ಸೋರ್ಸ್‌ ಸೋರ್ಸ್ ಕೋಡ್‌ನ್ನು ₹2,500ಕ್ಕೆ (34 ಡಾಲರ್‌) ಖರೀದಿಸಿ ಮಿತ್ರೊನ್ ಅಭಿವೃದ್ಧಿಪಡಿಸಲಾಗಿದೆ. ಅದರಲ್ಲಿ ಯಾವುದೇ ಬದಲಾವಣೆ ಮಾಡದೆ, ಮಿತ್ರೊನ್ ಎಂದು ಹೆಸರು ಬದಲಿಸಿಕೊಂಡು ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಸೇರಿಸಲಾಗಿದೆ. ಟಿಕ್‌ಟಾಕ್‌ ಆ್ಯಪ್‌ನ ತದ್ರೂಪ ಆಗಿರುವ ಟಿಕ್‌ಟಿಕ್‌ನ ಹೆಸರು ಬದಲಿಸಿಕೊಂಡ ಅಪ್ಲಿಕೇಷನ್ ಮಿತ್ರೋನ್ ಎಂಬ ಆರೋಪಗಳು ವ್ಯಕ್ತವಾಗಿರುವ ಬಗ್ಗೆ ಈಚೆಗೆ ವರದಿಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.