ADVERTISEMENT

ವಿಡಿಯೊ ನೋಡಿ ವ್ಯಕ್ತಿಯ ವಯಸ್ಸು ಹೇಳುತ್ತೆ ಕೃತಕ ಬುದ್ಧಿಮತ್ತೆ

ಏಜೆನ್ಸೀಸ್
Published 25 ಡಿಸೆಂಬರ್ 2018, 11:56 IST
Last Updated 25 ಡಿಸೆಂಬರ್ 2018, 11:56 IST
   

ಮಾಸ್ಕೊ: ವಿಡಿಯೊ ನೋಡಿ ವ್ಯಕ್ತಿಯ ಗುರುತು ಪತ್ತೆ ಮಾಡುವ ಕೃತಕ ಬುದ್ಧಿಮತ್ತೆ(ಎಐ) ವ್ಯವಸ್ಥೆಯನ್ನು ವಿಜ್ಞಾನಿಗಳು ಅಭಿವೃದ್ಧಿ ಪಡಿಸಿದ್ದಾರೆ. ವ್ಯಕ್ತಿಯ ವಯಸ್ಸು ಮತ್ತು ಲಿಂಗ ಪತ್ತೆಯನ್ನು ಅತ್ಯಂತ ಚುರುಕಾಗಿ ಮತ್ತು ಸ್ಪಷ್ಟವಾಗಿ ಮಾಡಬಲ್ಲದಾಗಿದೆ.

ಆಂಡ್ರಾಯ್ಡ್ ಮೊಬೈಲ್‌ ಆ್ಯಪ್‌ಗಳಲ್ಲಿ ಆಫ್‌ಲೈನ್‌ನಲ್ಲೇ ವ್ಯಕ್ತಿಯನ್ನು ಪತ್ತೆ ಮಾಡಲು ಸಹಕಾರಿಯಾಗುವಂಥ ವ್ಯವಸ್ಥೆಕಲ್ಪಿಸಲು ಸದ್ಯದ ಅಭಿವೃದ್ಧಿ ಸಹಕಾರಿಯಾಗಲಿದೆ ಎಂದು ರಷ್ಯಾದ ಹೈಯರ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ನ ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ.

ವಿಡಿಯೊದಲ್ಲಿ ವ್ಯಕ್ತಿಯ ಚಿತ್ರವನ್ನು ಕಂಡು ಹೆಣ್ಣು, ಗಂಡು ಎಂಬುದನ್ನು ಶೇ 90ರಷ್ಟು ನಿಖರವಾಗಿ ಈ ವ್ಯವಸ್ಥೆ ಗುರುತಿಸುತ್ತಿದೆ. ಆದರೆ, ವಯಸ್ಸನ್ನು ಪತ್ತೆ ಮಾಡುವುದು ಜಟಿಲವಾದುದಾಗಿದೆ. ಕೃತಕ ಬುದ್ಧಿಮತ್ತೆಯ ನರವ್ಯೂಹ ಸಂಪರ್ಕ ಜಾಲವು ವಿಡಿಯೊ ಫ್ರೇಮ್‌ ಗಮನಿಸಿ ವಯಸ್ಸಿನ ಅಂದಾಜು ಲೆಕ್ಕ ಹೇಳುತ್ತದೆ.

ADVERTISEMENT

ಉದಾಹರಣೆಗೆ; ಎಐ ಶೇ 30ರಷ್ಟು ವಿಡಿಯೊ ಫ್ರೇಮ್‌ಗಳಲ್ಲಿ ವ್ಯಕ್ತಿಯ ವಯಸ್ಸನ್ನು 21 ಹಾಗೂ ಶೇ 10 ರಷ್ಟು ಫ್ರೇಮ್‌ಗಳಲ್ಲಿ ವಯಸ್ಸು 60 ಎಂದು ತೋರಿದರೆ, ವ್ಯಕ್ತಿಯ ವಯಸ್ಸು 21 ಎಂಬುದರ ಅಂದಾಜು ಪ್ರಮಾಣ ಶೇ 30 ಮತ್ತು ವಯಸ್ಸು 60 ಎಂಬುದರ ಅಂದಾಜು ಪ್ರಮಾಣ ಶೇ 10 ಆಗಿರುತ್ತದೆ.

ಒಂದೇ ವ್ಯಕ್ತಿಯನ್ನು ಬೇರೆ ಬೇರೆ ವಿಡಿಯೊಗಳಲ್ಲಿ ಗಮನಿಸಿದಾಗ ಅಥವಾ ವ್ಯಕ್ತಿಯ ಚಲನೆಯಲ್ಲಿ ವ್ಯತ್ಯಾಸವಾದಾಗಲೂ ವಯಸ್ಸಿನ ಅಂದಾಜು ಲೆಕ್ಕಚಾರದಲ್ಲಿ 5 ವರ್ಷ ಏರಿಳಿತವಾಗುತ್ತದೆ. ಎಐ ನರವ್ಯೂಹದಲ್ಲಿ ಒಂದೇ ಸಮಯಕ್ಕೆ ಹಲವು ಕಾರ್ಯಗಳನ್ನು ಯಶಸ್ವಿಯಾಗಿ ಪೂರೈಸುವಷ್ಟು ಸಮರ್ಥವಾಗಿದೆ. ವ್ಯಕ್ತಿ ಮುಖವನ್ನು ಗಮನಿಸಿ ಸುಮಾರು 1000 ಸಂಖ್ಯೆಗಳನ್ನು ಸೃಷ್ಟಿಸುತ್ತದೆ. ವ್ಯಕ್ತಿಯಿಂದ ವ್ಯಕ್ತಿಗೆ ಸಂಖ್ಯೆಗಳು ಭಿನ್ನವಾಗಿರುತ್ತವೆಹಾಗೂ ಈ ಮೂಲಕ ಗುರುತು ಪತ್ತೆ ಕಾರ್ಯ ನಡೆಯುತ್ತದೆ.

ಯಾವುದೇ ಸಾಮಾನ್ಯ ಸ್ಮಾರ್ಟ್‌ಫೋನ್‌ಗಳಲ್ಲಿಯೂ ಈ ವ್ಯವಸ್ಥೆ ಕಾರ್ಯಾಚರಿಸಲಿದೆ ಎಂದು ಸಂಶೋಧಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.