ADVERTISEMENT

ಸೌದಿಯಿಂದ ಅಮೆಜಾನ್ ಮುಖ್ಯಸ್ಥನ ಫೋನ್ ಹ್ಯಾಕ್: ವಿಚ್ಛೇದನಕ್ಕೆ ಕಾರಣವಾಯ್ತೇ ಸಂದೇಶ?

ಏಜೆನ್ಸೀಸ್
Published 22 ಜನವರಿ 2020, 17:39 IST
Last Updated 22 ಜನವರಿ 2020, 17:39 IST
ಅಮೆಜಾನ್‌ ಮುಖ್ಯಸ್ಥ ಜೆಫ್‌ ಬೆಜೊಸ್‌ ಮತ್ತು ಸೌದಿ ದೊರೆ ಮೊಹಮ್ಮದ್‌ ಬಿನ್‌ ಸಲ್ಮಾನ್‌
ಅಮೆಜಾನ್‌ ಮುಖ್ಯಸ್ಥ ಜೆಫ್‌ ಬೆಜೊಸ್‌ ಮತ್ತು ಸೌದಿ ದೊರೆ ಮೊಹಮ್ಮದ್‌ ಬಿನ್‌ ಸಲ್ಮಾನ್‌   
""
""

ವಾಷಿಂಗ್ಟನ್‌:'ಸೌದಿ ದೊರೆ ಖಾತೆಯಿಂದ ಕಳುಹಿಸಲಾದ ವಾಟ್ಸ್‌ಆ್ಯಪ್‌ ಮೆಸೇಜ್‌ ಮೂಲಕ ಅಮೆಜಾನ್ ಸಂಸ್ಥಾಪಕ, ವಾಷಿಂಗ್ಟನ್‌ ಪೋಸ್ಟ್‌ ಮಾಲೀಕ ಜೆಫ್‌ ಬೆಜೊಸ್‌ ಅವರ ಫೋನ್‌ ಹ್ಯಾಕ್‌ ಮಾಡಲಾಗಿತ್ತು' ಎಂದು ಪ್ರಕಟಗೊಂಡಿರುವ ವರದಿಗಳನ್ನು ವಾಷಿಂಗ್ಟನ್‌ನಲ್ಲಿರುವ ಸೌದಿ ರಾಯಭಾರ ಕಚೇರಿ ತಳ್ಳಿ ಹಾಕಿದೆ.

ಸೌದಿ ದೊರೆ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಅವರ ಖಾತೆಯಿಂದ ಬಂದಿದೆ ಎನ್ನಲಾದ ವಾಟ್ಸ್‌ಆ್ಯಪ್‌ ಸಂದೇಶದ ಮೂಲಕ ಸುರಕ್ಷತಾಲೋಪ ಉಂಟಾಗಿ ಜೆಫ್‌ ಬೆಜೊಸ್‌ ಅವರ ಫೋನ್‌ ಹ್ಯಾಕ್‌ ಆಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. 2018ರಲ್ಲಿ ನಡೆದಿರುವ ಹ್ಯಾಕಿಂಗ್‌ನಿಂದ ಬೆಜೊಸ್‌ ಅವರ ಖಾಸಗಿ ಕ್ಷಣದ ಚಿತ್ರಗಳು ಬಿಡುಗಡೆಯಾಗಿದ್ದವು. ಅದೇ ವರ್ಷ 'ವಾಷಿಂಗ್ಟನ್‌ ಪೋಸ್ಟ್‌'ನ ಅಂಕಣಕಾರರಾಗಿದ್ದ 59 ವರ್ಷದ ಪತ್ರಕರ್ತ ಜಮಾಲ್‌ ಖಶೋಗ್ಗಿ ಟರ್ಕಿಯ ಇಸ್ತಾಂಬುಲ್‌ನಲ್ಲಿ ರಿಯಾದ್‌ ರಾಯಭಾರಿ ಕಚೇರಿ ಪ್ರವೇಶಿಸಿದ್ದಾಗ ಹತ್ಯೆಯಾದರು.

ಮಾಧ್ಯಮಗಳ ವರದಿಗಳ ಕುರಿತು ಪ್ರತಿಕ್ರಿಯಿಸಿರುವ ಸೌದಿ ಅರೇಬಿಯಾ ರಾಯಭಾರ ಕಚೇರಿ 'ಜೆಫ್‌ ಬೆಜೊಸ್ ಅವರ ಫೋನ್‌ ಹ್ಯಾಕಿಂಗ್‌ ಹಿಂದೆ ರಾಷ್ಟ್ರದ ಕೈವಾಡವಿದೆ ಎಂಬುದು ಅಸಂಬದ್ಧವಾದುದು. ಈ ಆರೋಪಗಳ ಬಗ್ಗೆ ನಾವು ತನಿಖೆಗೆ ಆಗ್ರಹಿಸುತ್ತಿದ್ದೇವೆ, ಈ ಮೂಲಕ ಸತ್ಯ ಹೊರತರಬಹುದಾಗಿದೆ' ಎಂದು ಟ್ವೀಟ್‌ ಮಾಡಿದೆ.

ADVERTISEMENT
ತಾಜ್‌ಮಹಲ್‌ ಎದುರು ಗೆಳತಿ ಲಾರೆನ್‌ ಸ್ಯಾಂಚೆಜ್‌ ಜತೆ ಜೆಫ್‌ ಬೆಜೊಸ್‌

'ದೊರೆ ಮೊಹಮ್ಮದ್‌ ಅವರದ್ದು ಎನ್ನಲಾದ ವಾಟ್ಸ್‌ಆ್ಯಪ್‌ ಖಾತೆಯಿಂದ ಸಂದೇಶ ಬಂದ ನಂತರದಲ್ಲಿ ಬೆಜೊಸ್‌ ಅವರ ಫೋನ್‌ ಹ್ಯಾಕ್‌ ಆಗಿದೆ ಎಂದು ವಿಶ್ವ ಸಂಸ್ಥೆಯ ತನಿಖಾ ಸಮಿತಿಯು ಬುಧವಾರ ವರದಿ ನೀಡಲಿದೆ' ಎಂದು ವಾಷಿಂಗ್ಟನ್‌ ಪೋಸ್ಟ್‌ ಮಂಗಳವಾರ ರಾತ್ರಿ ವರದಿ ಮಾಡಿದೆ.

ಮೆಸೇಜ್‌ ತಲುಪುತ್ತಿದ್ದಂತೆ ಫೋನ್‌ನಲ್ಲಿದ್ದ ಸಾಕಷ್ಟು ದತ್ತಾಂಶ ಸೆಳೆದುಕೊಳ್ಳಲಾಗಿದೆ ಎಂದು ವಾಷಿಂಗ್ಟನ್‌ ಪೋಸ್ಟ್‌ ವರದಿ ಹೇಳಿದೆ.

ವಾಟ್ಸ್‌ಆ್ಯಪ್‌ ಸಂದೇಶವು ದೋಷಪೂರಿತ ಫೈಲ್‌ ಒಳಗೊಂಡಿತ್ತು ಎಂಬುದು ಡಿಜಿಟಲ್‌ ವಿಧಿವಿಜ್ಞಾನ ಪರಿಶೀಲನೆಗಳ ಮೂಲಕ ಕಂಡು ಬಂದಿದೆ. ದೋಷಪೂರಿತ ಫೈಲ್‌ ಕಳುಹಿಸುವುದಕ್ಕೂ ಮುನ್ನ ಇಬ್ಬರ ನಡುವೆ ಸ್ನೇಹಪೂರ್ಣ ವಾಟ್ಸ್‌ಆ್ಯಪ್‌ ಸಂಭಾಷಣೆ ನಡೆದಿತ್ತು ಎಂದು 'ದಿ ಗಾರ್ಡಿನ್‌' ವರದಿ ಮಾಡಿದೆ.

ಖಾಸಗಿ ಕ್ಷಣಗಳ ಫೋಟೊ ಬಹಿರಂಗ

ಜೆಫ್‌ ಬೆಜೊಸ್‌ ಅವರ ಖಾಸಗಿ ಕ್ಷಣಗಳ ಫೋಟೊಗಳು ಹಾಗೂ ಸಂದೇಶಗಳು ಅಮೆರಿಕದ 'ನ್ಯಾಷನಲ್‌ ಎನ್‌ಕ್ವೈರರ್‌' ಟ್ಯಾಬ್ಲಾಯ್ಡ್‌ ಪತ್ರಿಕೆಗೆ ದೊರೆತಿತ್ತು. ಬೆಜೊಸ್‌ ಅವರ ವಿವಾಹೇತರ ಸಂಬಂಧದ ಬಗ್ಗೆ ನ್ಯಾಷನಲ್‌ ಎನ್‌ಕ್ವೈರರ್ ವರದಿ ಮಾಡಿತ್ತು. ಅದರ ಪರಿಣಾಮ, ಬೆಜೊಸ್‌ ಮತ್ತು ಮ್ಯಾಕೆನ್ಜಿ ಬೆಜೊಸ್‌ ವಿಚ್ಛೇದನ ಪಡೆದುಕೊಂಡರು. ಟಿವಿ ನಿರೂಪಕಿಯಾಗಿದ್ದ ಲಾರೆನ್‌ ಸ್ಯಾಂಚೆಜ್‌ ಮತ್ತು ಬೆಜೊಸ್‌ ಖಾಸಗಿ ಕ್ಷಣಗಳ ಫೋಟೊಗಳ ಕುರಿತು ವರದಿ ಪ್ರಕಟಗೊಂಡಿತ್ತು.

ಮಾಜಿ ಪತ್ನಿ ಮ್ಯಾಕೆನ್ಜಿ ಬೆಜೊಸ್‌ ಜತೆ ಜೆಫ್‌ ಬೆಜೊಸ್

ಫೋನ್‌ನಲ್ಲಿದ್ದ ಫೋಟೊ ಮತ್ತು ಸಂದೇಶಗಳು ನ್ಯಾಷನಲ್‌ ಎನ್‌ಕ್ವೈರರ್ ತಲುಪಿದ್ದರ ಬಗ್ಗೆ ತನಿಖೆ ನಡೆಸಲು ಬೆಜೊಸ್‌ ಅವರು 'ಗೆವಿನ್‌ ಡಿ ಬೆಕರ್‌ ಆ್ಯಂಡ್‌ ಅಸೊಸಿಯೆಟ್ಸ್‌'ಗೆ ಹೊಣೆ ನೀಡಿದರು. ಕಳೆದ ವರ್ಷ ಮಾರ್ಚ್‌ನಲ್ಲೇ ತನಿಖೆ ಪೂರ್ಣಗೊಳಿಸಿದ ಗೆವಿನ್‌ ಡಿ ಬೆಕರ್‌ ತಂಡ, ಸೌದಿ ಅರೇಬಿಯಾ ಆಡಳಿತ ವಲಯದಿಂದ ಅಮೆಜಾನ್‌ ಮುಖ್ಯಸ್ಥ ಬೆಜೊಸ್‌ ಫೋನ್‌ ಹ್ಯಾಕ್‌ ಮಾಡಲಾಗಿದೆ ಹಾಗೂ ಅವರ ವೈಯಕ್ತಿಕ ದತ್ತಾಂಶಗಳನ್ನು ಸಂಗ್ರಹಿಸಿಕೊಂಡಿದ್ದಾರೆ ಎಂದು ವರದಿ ಮಾಡಿತ್ತು.

ತನಿಖೆ ಕುರಿತು ಗೆವಿನ್‌ ಡಿ ಬೆಕರ್‌ 'ದಿ ಡೈಲಿ ಬೀಸ್ಟ್‌' ವೆಬ್‌ಸೈಟ್‌ನಲ್ಲೂ ಬರೆದಿದ್ದರು.‌

ಪತ್ರಕರ್ತ ಜಮಾಲ್‌ ಖಶೋಗ್ಗಿ ಹತ್ಯೆಯಲ್ಲಿ ದೊರೆ ಮೊಹಮ್ಮದ್‌ ಅವರ ಆಪ್ತರ ಕೈವಾಡ ಇರುವ ಬಗ್ಗೆ ವಿಚಾರಣೆ ನಡೆದಿತ್ತಾದರೂ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಕಳೆದ ವರ್ಷ ಡಿಸೆಂಬರ್‌ನಲ್ಲಿ ಕೋರ್ಟ್‌ ಆರೋಪ ಮುಕ್ತಗೊಳಿಸಿತ್ತು. ಖಶೋಗ್ಗಿ ಹತ್ಯೆಗೂ ದೊರೆ ಮೊಹಮ್ಮದ್‌ ಅವರಿಗೂ ನೇರ ಸಂಬಂಧವಿದೆ ಎಂದುಅಮೆರಿಕದ ತನಿಖಾ ಸಂಸ್ಥೆಗಳು ಆರೋಪಿಸಿದ್ದವು.

‘ಬೆಜೊಸ್‌ ದೂರವಾಣಿ ಕದ್ದಾಲಿಕೆ ಮಾಡಿಲ್ಲ’
ವಾಷಿಂಗ್ಟನ್ (ಎಎಫ್‌ಪಿ):
‘ಸೌದಿ ದೊರೆ ಖಾತೆಯಿಂದ ಕಳುಹಿಸಲಾದ ವಾಟ್ಸ್‌ಆ್ಯಪ್‌ ಸಂದೇಶ ಮೂಲಕ ಅಮೆಜಾನ್ ಸಂಸ್ಥಾಪಕ, ಜೆಫ್‌ ಬೆಜೊಸ್‌ ಅವರ ಫೋನ್‌ ಕದ್ದಾಲಿಕೆ ಮಾಡಲಾಗಿತ್ತು’ ಎಂದು ಪ್ರಕಟಗೊಂಡಿರುವ ವರದಿಗಳನ್ನು ವಾಷಿಂಗ್ಟನ್‌ನಲ್ಲಿರುವ ಸೌದಿ ರಾಯಭಾರ ಕಚೇರಿ ತಳ್ಳಿ ಹಾಕಿದೆ.

ಸೌದಿ ದೊರೆ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಅವರ ಖಾತೆಯಿಂದ ಬಂದಿದೆ ಎನ್ನಲಾದ ವಾಟ್ಸ್‌ಆ್ಯಪ್‌ ಸಂದೇಶದ ಮೂಲಕ ಭದ್ರತಾ ಲೋಪ ಉಂಟಾಗಿ ಜೆಫ್‌ ಬೆಜೊಸ್‌ ಅವರ ಫೋನ್‌ ಕದ್ದಾಲಿಕೆ ಮಾಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು.

2018ರಲ್ಲಿ ನಡೆದಿರುವ ಈ ಕದ್ದಾಲಿಕೆಯಿಂದ ಬೆಜೊಸ್‌ ಅವರ ಖಾಸಗಿ ಚಿತ್ರಗಳು ಬಿಡುಗಡೆಯಾಗಿದ್ದವು. ಅದೇ ವರ್ಷ ‘ವಾಷಿಂಗ್ಟನ್‌ ಪೋಸ್ಟ್‌’ನ ಅಂಕಣಕಾರರಾಗಿದ್ದ 59 ವರ್ಷದ ಪತ್ರಕರ್ತ ಜಮಾಲ್‌ ಖಶೋಗ್ಗಿ ಟರ್ಕಿಯ ಇಸ್ತಾಂಬುಲ್‌ನಲ್ಲಿ ರಿಯಾದ್‌ ರಾಯಭಾರಿ ಕಚೇರಿ ಪ್ರವೇಶಿಸಿದ್ದಾಗ ಹತ್ಯೆಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.