ADVERTISEMENT

ತಂತ್ರಜ್ಞಾನ: ಈ ರಸ್ತೆಯ ಮೇಲೆ ಚಲಿಸುವಾಗ ಕಾರುಗಳು ಚಾರ್ಜ್ ಆಗಬಲ್ಲವು

ಕೃಷ್ಣ ಭಟ್ಟ
Published 16 ಡಿಸೆಂಬರ್ 2025, 23:34 IST
Last Updated 16 ಡಿಸೆಂಬರ್ 2025, 23:34 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

90ರ ದಶಕದಲ್ಲಿ ಫ್ಲಾಪಿ ಡಿಸ್ಕ್‌ನಲ್ಲಿ ಕೆಲವೇ ಕೆಲವು ಕಿಲೋಬೈಟ್ಸ್‌ ಡೇಟಾವನ್ನು ತುಂಬಿಕೊಂಡು ನಾವು ಓಡಾಡುತ್ತಿದ್ದಾಗ ಇನ್ನು ಸ್ವಲ್ಪೇ ದಿನದಲ್ಲಿ ಯಾವುದೇ ವೈರ್ ಕನೆಕ್ಟ್ ಮಾಡದೇ, ವೈರ್‌ಲೆಸ್‌ ಆಗಿ ಬ್ಲ್ಯೂಟೂತ್‌ ಬಳಸಿ ಡೇಟಾವನ್ನು ಸಾಗಿಸಬಹುದು ಎಂದು ಊಹಿಸಿರಲೇ ಇಲ್ಲ. ತೀರಾ ಮೊನ್ನೆ ಮನೆಯಲ್ಲಿದ್ದ ಡಯಲ್ ಮಾಡುವ ಟೆಲಿಫೋನ್‌ ಇದ್ದಾಗ, ಇನ್ನು ಕೆಲವೇ ವರ್ಷಗಳಲ್ಲಿ ನಾವು ವೈರ್‌ ಇಲ್ಲದ ಫೋನಲ್ಲಿ ಮಾತನಾಡುತ್ತೇವೆ ಎಂದು ಊಹಿಸಿರಲೂ ಇಲ್ಲ. ಅವೆಲ್ಲವೂ ಜಾರಿಗೆ ಬಂದು, ನಾವು ಈಗ ಹಿಂದೆ ಇವನ್ನೆಲ್ಲ ವೈರ್‌ ಕನೆಕ್ಟ್ ಮಾಡಿಕೊಂಡೇ ಬಳಸುತ್ತಿದ್ದೆವು ಎಂಬುದನ್ನೇ ಮರೆಯುವಷ್ಟು ಮುಂದೆ ಬಂದಿದ್ದೇವೆ.

ಆದರೆ, ಈ ಫ್ಲಾಪಿ ಡಿಸ್ಕ್ ಕಾಲದಿಂದ ಜಿಬಿಗಟ್ಟಲೆ ಡೇಟಾವನ್ನು ವೈರ್‌ಲೆಸ್ ಆಗಿ ಎಲ್ಲಿಂದ ಎಲ್ಲಿಗೋ ಸಾಗಿಸುವ ವರೆಗೆ ತಂತ್ರಜ್ಞಾನ ಮುಂದುವರಿದರೂ, ಒಂದು ವಿಷಯದಲ್ಲಿ ನಾವು ಇಂದಿಗೂ ಕೇಬಲ್‌ಗೇ ಜೋತು ಬಿದ್ದಿದ್ದೇವೆ! ಕ್ಷಮಿಸಿ, ಕೇಬಲ್‌ಗೆ ಜೋತು ಬಿದ್ದರೆ ನಾವು ಸುಟ್ಟೇ ಹೋಗಬಹುದು; ಅದು ವಿದ್ಯುತ್.

ADVERTISEMENT

ನಮ್ಮಲ್ಲಿ ಈಗ ಯಾರ ಬಳಿಯಾದರೂ ಇಲ್ಲಿಂದ ಇನ್ನೆಲ್ಲಿಗೋ ಕರೆಂಟನ್ನು ವೈರ್‌ಲೆಸ್ ಆಗಿ ಸಾಗಿಸುತ್ತಾರೆ ಎಂದು ನಾವು ಹೇಳಿದರೆ ನಕ್ಕು ಸುಮ್ಮನಾಗಬಹುದು. ನಾವು ಈಗ ವೈರ್‌ಲೆಸ್ ಚಾರ್ಜಿಂಗ್ ಬಳಕೆ ಮಾಡುತ್ತಿದ್ದೇವಲ್ಲ. ಅದು ಬಹುಶಃ ಈ ವೈರ್‌ಲೆಸ್‌ ವಿದ್ಯುತ್ ಸಾಗಣೆಯ ಅಂಬೆಗಾಲು ಆಗಿರಬಹುದು.

ಬಹುಶಃ ಇನ್ನೊಂದು 10-15 ವರ್ಷಗಳಲ್ಲಿ ನಾವು ಈಗ ಬಳಸುತ್ತಿರುವ ವಿದ್ಯುತ್‌ನ ರೀತಿಯೇ ಬದಲಾಗಬಹುದು. ಇದರ ಕೆಲವು ಉದಾಹರಣೆಗಳು ಈಗಾಗಲೇ ನಮಗೆ ಸಿಗುತ್ತಿವೆ. ಇತ್ತೀಚೆಗೆ ಪ್ಯಾರಿಸ್‌ನಲ್ಲಿ 1.5 ಕಿ.ಮೀ. ದೂರದ ರಸ್ತೆಯನ್ನೇ ವೈರ್‌ಲೆಸ್ ಚಾರ್ಜಿಂಗ್‌ಗೆ ಸೂಕ್ತವಾಗಿ ವಿನ್ಯಾಸ ಮಾಡಿ, ರೂಪಿಸಿದ್ದಾರೆ. ಅಂದರೆ, ರಸ್ತೆಯ ಮೇಲ್ಭಾಗದಲ್ಲಿ ಡಾಂಬರು ಇದ್ದರೆ, ಅದರ ಕೆಳಗಡೆ ತಾಮ್ರದ ಕಾಯಿಲ್‌ಗಳನ್ನು ಇಟ್ಟಿದ್ದಾರೆ. ಇದರಿಂದ ಈ ರಸ್ತೆಯ ಮೇಲೆ ಚಲಿಸುವ ಕಾರುಗಳು ಚಲಿಸುತ್ತಿರುವಾಗಲೇ ಚಾರ್ಜ್ ಆಗಬಲ್ಲವು! 2035ರ ಹೊತ್ತಿಗೆ ಇಲ್ಲಿನ 10 ಸಾವಿರ ಕಿ.ಮೀ. ರಸ್ತೆಯಲ್ಲಿ ಈ ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯ ಒದಗಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ.

ಇನ್ನೊಂದು ಕಡೆ, ಈಗ ನಾವು ಬಳಸುತ್ತಿರುವ ಎಲ್ಲ ಬ್ಯಾಟರಿ ಚಾಲಿತ ಕಾರುಗಳೂ ವೈರ್‌ಲೆಸ್‌ ಚಾರ್ಜಿಂಗ್ ಸೌಲಭ್ಯವನ್ನು ಸಪೋರ್ಟ್ ಮಾಡುವುದಿಲ್ಲ. ಆದರೆ, ಪೋರ್ಷೆ ಕಾರು ಕಂಪನಿ 2026ರಲ್ಲಿ ಬಿಡುಗಡೆಯಾಗಲಿರುವ ಹೊಸ ಮಾಡೆಲ್‌ನ ಸಯೆನ್ನೆ ಕಾರಿನಲ್ಲಿ ಈ ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯವನ್ನೂ ಒದಗಿಸುತ್ತಿದೆ!

ಈ ಚಾರ್ಜಿಂಗ್‌ಗೆ ಒಂದು ವೈರ್‌ಲೆಸ್‌ ಸೌಲಭ್ಯ ಇಲ್ಲದ್ದರಿಂದ ನಾವು ಎಷ್ಟೆಲ್ಲ ತಾಪತ್ರಯ ಅನುಭವಿಸುತ್ತಿದ್ದೇವೆ ಎಂದು ಊಹಿಸಿಕೊಳ್ಳಿ. ನಾವು ಆರಾಮವಾಗಿ, ಮನೆಯಲ್ಲಿ ಮೊಬೈಲ್ ನೋಡುತ್ತ ಕುಳಿತಿರುತ್ತೇವೆ ಅಥವಾ ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುತ್ತ ಕೂತಿರುತ್ತೇವೆ. ಆದರೆ, ನಾವು ಕೂತಿರುವ ಸ್ಥಳದಲ್ಲಿ ಚಾರ್ಜಿಂಗ್ ಸಾಕೆಟ್ ಇಲ್ಲ. ಅದಕ್ಕೆಂದು ನಾವು ಸಾಕೆಟ್ ಇರುವ ಬಳಿ ಹೋಗಿ ಕುಳಿತುಕೊಳ್ಳಲೇ ಬೇಕು. ಒಂದು ವೇಳೆ ಚಾರ್ಜಿಂಗ್‌ಗೆ ವೈರ್ ಬೇಕೆಂದಿಲ್ಲ ಎಂದಾದರೆ, ನಾವು ಆರಾಮವಾಗಿ ಕುಳಿತಿರುವ ಜಾಗದಲ್ಲೇ ನಮ್ಮ ಲ್ಯಾಪ್‌ಟಾಪ್‌ ಅಥವಾ ಮೊಬೈಲ್ ಚಾರ್ಜ್‌ ಮಾಡಿಕೊಳ್ಳಬಹುದಲ್ಲ!

ಇನ್ನು, ಲೈಟ್‌ಗಳದ್ದಂತೂ ಇನ್ನೂ ಸಮಸ್ಯೆ. ಮನೆ ಕಟ್ಟುವಾಗಲೇ ಎಲ್ಲೆಲ್ಲಿ ಲೈಟ್‌ಗಳು ಬೇಕು ಎಂದು ನಿರ್ಧಾರ ಮಾಡಿಕೊಳ್ಳಬೇಕು. ಒಂದು ವೇಳೆ ಆಮೇಲೆ ಎಲ್ಲೋ ಒಂದು ಕಡೆ ಲೈಟ್ ಬೇಕು ಎಂದರೆ, ಅದಕ್ಕೆ ಪ್ರತ್ಯೇಕ ಕೇಬಲ್ ಹಾಕಿಕೊಂಡು ಹೋಗಲು ಗೋಡೆಗೆ ತೂತು ಮಾಡಿ, ಅಂದಕೆಡಿಸಬೇಕು. ಒಂದು ವೇಳೆ ವೈರ್‌ ಇಲ್ಲದೇ ಕರೆಂಟ್ ಹರಿಸಬಹುದು ಎಂದಾದಾಗ, ನಮಗೆ ಬೇಕಾದಲ್ಲಿ ಒಂದು ಬಲ್ಬ್ ನೇತುಹಾಕಿದರೆ ಅದು ಸೀದಾ ಬೆಳಗುವಂತಿದ್ದರೆ!

ಇಂಥ ತಂತ್ರಜ್ಞಾನಗಳ ಪ್ರಯೋಗ ನಡೆಯುತ್ತಲೇ ಇದೆ; ಯಶಸ್ವಿಯೂ ಆಗಿವೆ. ಆದರೆ, ಇದರಲ್ಲಿ ಸಮಸ್ಯೆ ಇರುವುದು ಮಾನವನ ದೇಹಕ್ಕೆ ಎಲೆಕ್ಟ್ರೋಮ್ಯಾಗ್ನೆಟಿಕ್‌ನಿಂದ ಹಾನಿ ಆಗದೇ ಸುರಕ್ಷಿತ ಮಿತಿಯಲ್ಲಿ ದೊಡ್ಡ ದೊಡ್ಡ ಸಲಕರಣೆಗಳಿಗೆ, ಎಂದರೆ, ಹೆಚ್ಚು ವಿದ್ಯುತ್ ಬೇಡುವ ಸಲಕರಣೆಗಳಿಗೆ ಪವರ್ ಅನ್ನು ಒದಗಿಸುವ ಬಗ್ಗೆ ಸಂಶೋಧನೆ ನಡೆಯುತ್ತಿವೆ. ಮೊಬೈಲ್ ಚಾರ್ಜಿಂಗ್‌ನಲ್ಲಿ ಈಗಾಗಲೇ ಈ ತಂತ್ರಜ್ಞಾನ ಯಶಸ್ವಿಯಾಗಿ ಜಾರಿಯಲ್ಲಿದೆ. ಅದಕ್ಕೂ ಮುಂದಿನ ಹೆಜ್ಜೆಯಾಗಿ, ಮನೆಯಲ್ಲಿರುವ ಲೈಟ್, ಫ್ಯಾನ್‌ಗಳು ಮತ್ತು ಇತರ ಸಾಧನಗಳಿಗೆ ವಿದ್ಯುತ್ ಒದಗಿಸುವುದಕ್ಕೆ ಒಂದು ಕೋಣೆಯನ್ನೇ ವೈರ್‌ಲೆಸ್‌ ಪವರ್ ಟ್ರಾನ್ಸ್‌ಮಿಷನ್ ಆಗಿ ಪರಿವರ್ತಿಸುವ ಪ್ರಯೋಗಗಳೂ ಯಶಸ್ವಿಯಾಗಿವೆ. ಆದರೆ, ಅದು ಕೈಗೆಟಕುವ ಮಟ್ಟದಲ್ಲಿ ಕಾರ್ಯರೂಪಕ್ಕೆ ತರುವ ಕುರಿತ ಸಂಶೋಧನೆಗಳು ನಡೆಯುತ್ತಲೇ ಇವೆ.

ವಿದ್ಯುತ್‌ ಅನ್ನು ಹಲವು ವಿಧದಲ್ಲಿ ಹರಿಸಲಾಗುತ್ತದೆ. ನಮಗೆ ಈಗಾಗಲೇ ತಿಳಿದಿರುವಂತೆ ಇಂಡಕ್ಷನ್ ವಿಧಾನ. ಇದು ನಮ್ಮ ಮೈಕ್ರೋವೇವ್ ಓವನ್ ಇದ್ದ ಹಾಗೆ. ಇದು ವಿದ್ಯುತ್ತನ್ನು ಎಲೆಕ್ಟ್ರೋಮ್ಯಾಗ್ನೆಟಿಕ್ ಅಲೆಯನ್ನಾಗಿ ಪರಿವರ್ತಿಸುತ್ತದೆ. ಪ್ರಸರಣ ಸಾಧನ ಇದನ್ನು ಎಲೆಕ್ಟ್ರೋಮ್ಯಾಗ್ನೆಟಿಕ್ ಅಲೆಯನ್ನಾಗಿ ಪರಿವರ್ತಿಸಿದರೆ, ರಿಸೀವರ್‌ನಲ್ಲಿ ಇದನ್ನು ಪುನಃ ವಿದ್ಯುತ್ ಆಗಿ ಪರಿವರ್ತಿಸಲಾಗುತ್ತದೆ. ಇದು ಹೆಚ್ಚು ವಿದ್ಯುತ್ ಬೇಡುವ ಸಲಕರಣೆಗಳಿಗೆ ಸೂಕ್ತ. ಇನ್ನೊಂದು ವಿಧಾನ, ರೇಡಿಯೋ ಫ್ರೀಕ್ವೆನ್ಸಿಯದ್ದು. ಇದರಲ್ಲಿ ಅತಿ ಕಡಿಮೆ ವಿದ್ಯುತ್ ಹರಿಸಲು ಸಾಧ್ಯವಿರುವುದರಿಂದ, ಕಡಿಮೆ ವಿದ್ಯುತ್ ಬೇಡುವ ಸಾಧನಗಳಿಗೆ ಇದು ಸೂಕ್ತ. ನಮ್ಮ ಸ್ಮಾರ್ಟ್‌ ವಾಚ್‌ಗಳು, ಸೆನ್ಸರ್‌ಗಳು, ಸ್ಮಾರ್ಟ್ ಲೈಟ್‌ಗಳು ಇತ್ಯಾದಿ ಸಲಕರಣೆಗಳಿಗೆ ಸೂಕ್ತ. ಇನ್ನು ಎಂಆರ್‌ಐ ಮಶಿನ್‌ಗಳಲ್ಲಿ ಬಳಸುವಂಥ ಮ್ಯಾಗ್ನೆಟಿಕ್ ರೆಸೊನೆನ್ಸ್‌ ಟೆಕ್ನಾಲಜಿಯನ್ನೂ ವೈರ್‌ಲೆಸ್ ವಿದ್ಯುತ್ ಪ್ರಸರಣಕ್ಕೆ ಬಳಸಬಹುದು. ಇದರಲ್ಲಿ ಎರಡೂ ಸಾಧನಗಳು ಒಂದೇ ಫ್ರೀಕ್ವೆನ್ಸಿಯಲ್ಲಿ ಇರಬೇಕಾಗುತ್ತದೆ. ಇದು ಕಾರನ್ನು ವೈರ್‌ಲೆಸ್ ಆಗಿ ಚಾರ್ಜ್‌ ಮಾಡುವುದಕ್ಕೆ ಸೂಕ್ತ.

ಬಹುಶಃ, ಈ ತಂತ್ರಜ್ಞಾನಗಳೆಲ್ಲ ಒಂದು ಹಂತಕ್ಕೆ ಸ್ಟಾಂಡರ್ಡೈಸ್‌ ಆದರೆ, ಇನ್ನು ಕೆಲವೇ ವರ್ಷಗಳಲ್ಲಿ ಎಲೆಕ್ಟ್ರಿಕ್ ಕಾರು ಖರೀದಿ ಮಾಡುವವರಿಗೆ ರೇಂಜ್ ಎಷ್ಟು ಎಂಬ ಚಿಂತೆ ದೂರವಾಗಬಹುದು. ಕಾರಿನ ಸೌಕರ್ಯವೇ ಮುಖ್ಯವಾಗಿ, ಬ್ಯಾಟರಿ ಎನ್ನುವುದು ತುರ್ತು ಪರಿಸ್ಥಿತಿಯಲ್ಲಿ ಬಳಕೆಗೆ ಮಾತ್ರ ಉಪಯೋಗವಾಗಬಹುದು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.