ADVERTISEMENT

ತಾಯಿಗೆ ವೈದ್ಯರ ತಪ್ಪು ಸಲಹೆಯಿಂದ ತನ್ನ ಜನನ: ಕೋರ್ಟ್‌ ಮೆಟ್ಟಿಲೇರಿದ ಯುವತಿಗೆ ಜಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಡಿಸೆಂಬರ್ 2021, 11:16 IST
Last Updated 2 ಡಿಸೆಂಬರ್ 2021, 11:16 IST
ಶೋಜಂಪರ್‌ ಇವೀ ಟೂಂಬೆಸ್‌ ಅವರ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಫೋಟೊ ಸ್ಕ್ರೀನ್‌ಶಾಟ್‌.
ಶೋಜಂಪರ್‌ ಇವೀ ಟೂಂಬೆಸ್‌ ಅವರ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಫೋಟೊ ಸ್ಕ್ರೀನ್‌ಶಾಟ್‌.   

ಲಂಡನ್‌: ತಾಯಿ ಗರ್ಭಿಣಿಯಾಗಿದ್ದಾಗ ವೈದ್ಯರು ಸರಿಯಾದ ಮಾರ್ಗದರ್ಶನ ನೀಡದೆ ಇದ್ದುದರಿಂದ ತನ್ನ ಜನನಕ್ಕೆ ಕಾರಣವಾಯಿತೆಂದು ಯುವತಿಯೊಬ್ಬರು ಕೋರ್ಟ್‌ ಮೆಟ್ಟಿಲೇರಿದ ಅಪರೂಪದ ಘಟನೆ ಇಂಗ್ಲೆಂಡ್‌ನಲ್ಲಿ ನಡೆದಿದೆ.

20 ವರ್ಷದ ಶೋಜಂಪರ್‌ ಇವೀ ಟೂಂಬೆಸ್‌ ತನ್ನ ತಾಯಿಗೆ ಚಿಕಿತ್ಸೆ ನೀಡಿದ ವೈದ್ಯರ ವಿರುದ್ಧ ದಾವೆ ಹೂಡಿ ಗೆದ್ದಿದ್ದಾರೆ. ಇವೀ ಅವರು ಹುಟ್ಟಿನಿಂದಲೇ ಬೆನ್ನೆಲುಬಿನ ಸಮಸ್ಯೆ(ಸ್ಪೈನಾ ಬೈಫಿಡಾ)ಯಿಂದ ಬಳಲುತ್ತಿದ್ದಾರೆ. ಇದರಿಂದಾಗಿ ಕೆಲವು ಸಂದರ್ಭ ದಿನದ 24 ಗಂಟೆ ನಳಿಕೆಯನ್ನು ಸಿಕ್ಕಿಸಿಕೊಂಡೇ ಕಳೆಯಬೇಕಾದ ಪರಿಸ್ಥಿತಿ ಇದೆ ಎಂದು 'ದಿ ಸನ್‌' ವರದಿ ಮಾಡಿದೆ.

ವೈದ್ಯ ಡಾ. ಫಿಲಿಪ್‌ ಮಿಷೆಲ್‌ ಅವರು ತನ್ನ ತಾಯಿಗೆ ಅಗತ್ಯ ಸಲಹೆಗಳನ್ನು ನೀಡದೆ ಇದ್ದುದರಿಂದ ತಾನು ಜೀವನ ಪರ್ಯಂತ ಬೆನ್ನೆಲುಬಿನ ಸಮಸ್ಯೆಯಿಂದ ಬಳಲಬೇಕಾದ ಪರಿಸ್ಥಿತಿ ಬಂದಿದೆ ಎಂಬುದು ಇವೀ ಅವರ ಅಳಲು.

ADVERTISEMENT

ಮುಂದೆ ಹುಟ್ಟಲಿರುವ ಮಗುವಿಗೆ ಬೆನ್ನೆಲುಬಿನ ಸಮಸ್ಯೆ ಎದುರಾಗುವ ಅಪಾಯವನ್ನು ಕಡಿಮೆಗೊಳಿಸಲು ಫೋಲಿಕ್‌ ಆಮ್ಲದ ಮಾತ್ರೆಗಳನ್ನು ತೆಗೆದುಕೊಳ್ಳಲು ಸಲಹೆ ನೀಡಿದ್ದಾಗಿ ಡಾ. ಮಿಷೆಲ್‌ ಮೊದಲೇ ಹೇಳಿದ್ದರೆ ತನ್ನ ತಾಯಿ ಗರ್ಭ ಧರಿಸಲು ಹಿಂದೇಟು ಹಾಕುವ ಸಾಧ್ಯತೆ ಇತ್ತು. ಹಾಗಾಗಿ ತಾನು ಜನಿಸುತ್ತಲೇ ಇರಲಿಲ್ಲ ಎಂದು ಇವೀ ದೂರಿದ್ದರು.

ಲಂಡನ್‌ ಹೈಕೋರ್ಟ್‌ನ ನ್ಯಾಯಮೂರ್ತಿ ರೋಸಲಿಂಡ್‌ ಕೋ ಕ್ಯೂಸಿ ಅವರು ಇವೀ ಅವರ ವಾದವನ್ನು ಎತ್ತಿಹಿಡಿದಿದ್ದಾರೆ. ಇದು ವೈದ್ಯರ ವೈಫಲ್ಯ. ಇವೀ ಅವರ ತಾಯಿಗೆ ಅಗತ್ಯ ಸಲಹೆಗಳನ್ನು ಕೊಡಬೇಕಿತ್ತು. ಅದರಿಂದ ಅವರು ಗರ್ಭ ಧರಿಸುವುದನ್ನು ತಡೆಯುವ ಪ್ರಯತ್ನ ಮಾಡುತ್ತಿದ್ದರು ಎಂದು ನ್ಯಾಯಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿರುವುದಾಗಿ 'ಡೈಲಿ ಮೇಲ್‌' ವರದಿ ಮಾಡಿದೆ. ಇವೀ ಅವರಿಗೆ ದೊಡ್ಡ ಮೊತ್ತ ಪರಿಹಾರವನ್ನು ಕೊಡುವಂತೆ ವೈದ್ಯರಿಗೆ ಆದೇಶ ನೀಡಿರುವ ಬಗ್ಗೆ ವರದಿಯಾಗಿದೆ.

ವೈದ್ಯರಿಗೆ ಎಷ್ಟು ದಂಡ ವಿಧಿಸಲಾಗಿದೆ ಎಂಬುದು ನಿಖರವಾಗಿ ಲೆಕ್ಕ ಹಾಕಿಲ್ಲ. ಇವೀ ಅವರ ಜೀವಿತಾವಧಿಯ ಸಂಪೂರ್ಣ ಚಿಕಿತ್ಸೆಗೆ ಅಗತ್ಯವಿರುವಷ್ಟು ಮೊತ್ತವನ್ನು ಪರಿಹಾರವಾಗಿ ನೀಡಲು ಕೋರ್ಟ್‌ ಸೂಚಿಸಿರುವುದಾಗಿ ಇವೀ ಪರ ವಕೀಲರು ತಿಳಿಸಿದ್ದಾರೆ.

'ಡಾ. ಮಿಷೆಲ್‌ ಅವರು ಸರಿಯಾಗಿ ಸಲಹೆ ನೀಡಿದಿದ್ದರೆ ಗರ್ಭ ಧರಿಸುವುದನ್ನು ತಡೆಯುತ್ತಿದ್ದೆ.' ಎಂದು ಇವೀ ಅವರ ತಾಯಿ ಕೋರ್ಟ್‌ನಲ್ಲಿ ಹೇಳಿಕೆ ದಾಖಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.